ದಾವಣಗೆರೆ: ‘2047ರ ವೇಳೆಗೆ ವಿಕಸಿತ ಭಾರತದ ಕನಸು ನನಸಾಗಬೇಕು. ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಲು ಎಲ್ಲರ ಸಹಭಾಗಿತ್ವ ಅಗತ್ಯ’ ಎಂದು ವಿಶ್ವವಿದ್ಯಾನಿಲಯ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಸಿಂಗ್ ಗೆಹಲೋತ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 11ನೇ ಘಟಿಕೋತ್ಸವದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ, ಸ್ನಾತಕ, ಸ್ನಾತಕೋತ್ತರ ಪದವಿಯ ರ‍್ಯಾಂಕ್ ವಿಜೇತರಿಗೆ ಪದಕ ಮತ್ತು ಪದವಿ ಪ್ರಮಾಣ ಪತ್ರ ಪ್ರದಾನ ಮಾಡಿ ಮಾತನಾಡಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಜಾಗತಿಕ ಮಟ್ಟದಲ್ಲಿ ಭಾರತ ಇಂದು ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ. 2047ರ ವೇಳೆಗೆ ಸ್ವಾತಂತ್ರ್ಯ ಬಂದು 100 ವರ್ಷಗಳು ಸಲ್ಲುತ್ತವೆ. ಆ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕು. ಪ್ರಸ್ತುತ ಭಾರತ ಅಭಿವೃದ್ಧಿಯಲ್ಲಿ ವಿಶ್ವದಲ್ಲಿ 5ನೇ ಸ್ಥಾನದಲ್ಲಿದ್ದು, 3ನೇ ಸ್ಥಾನಕ್ಕೆ ಬರಬೇಕು. ಇದಕ್ಕೆ ಯುವ ಜನತೆ ಸನ್ನದ್ಧರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದು, ಅವುಗಳು ಅನುಷ್ಠಾನಕ್ಕೆ ಬರುವಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ’ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿದ್ದು, ಪ್ರತಿ ಕ್ಷೇತ್ರದಲ್ಲೂ ವೇಗವಾದ ಪ್ರಗತಿಯಾಗಿದೆ. 25 ವರ್ಷದ ಹಿಂದಿನ ಚಿತ್ರಣ ನೋಡಿದರೆ ತಿಳಿಯುತ್ತದೆ. ಒಂದು ಕಾಲದಲ್ಲಿ ಭಾರತದ ಸಂಪತ್ತು ಚಿನ್ನದ ಅಕ್ಕಿಯಂತೆ ಇತ್ತು ಎಂದು ಹೇಳಲಾಗುತ್ತಿತ್ತು. ಅದೇ ಪರಿಸ್ಥಿತಿ ಮುಂದೊಂದು ದಿವಸ ಬರಬಹುದು. ಭಾರತ ವಿಶ್ವದಲ್ಲಿ ಮೊದಲ ಸಾಲಿನಲ್ಲಿ ನಿಲ್ಲಲು ವಿಶೇಷವಾಗಿ ಯುವ ಜನಾಂಗ ಭಾಗಿತ್ವದ ಅಗತ್ಯವಿದೆ. ಆಗಮಾತ್ರ ದೇಶ ಇನ್ನಷ್ಟು ಪ್ರಗತಿ ಹೊಂದಲು ಸಾಧ್ಯ. ಹಿಂದೆ ಹೇಗೆ ಇದ್ದೆವು. ಈಗ ಹೇಗೆ ಇದ್ದೇವೆ. ಮುಂದೆ ಹೇಗೆ ಇರಬೇಕು ಎಂಬ ಚಿಂತನೆ ಯುವ ಜನಾಂಗದಲ್ಲಿ ಬರಬೇಕಿದೆ’ ಎಂದು ಹೇಳಿದರು.
‘ಇತ್ತೀಚಿಗೆ ಪರಿಸರದಲ್ಲಿ ಏರುಪೇರು ಆಗುತ್ತಿದೆ. ಇದು ಎಲ್ಲಾ ದೃಷ್ಟಿಯಿಂದಲೂ ಹಾನಿಕಾರಕವಾಗಿದೆ. ಇದಕ್ಕಾಗಿ ನೀರಿನ ಸಂರಕ್ಷಣೆ, ಜಲಮರುಪೂರಣ, ಭೂಮಿ, ಅರಣ್ಯ ರಕ್ಷಣೆಯನ್ನು ನಮ್ಮ ನಮ್ಮ ಮನೆಯಿಂದಲೇ ಮಾಡಬೇಕಾಗಿದೆ’ ಎಂದರು.
ದಾವಣಗೆರೆ ವಿ.ವಿ. ಕುಲಪತಿ ಪ್ರೊ.ಬಿ.ಡಿ. ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ. ಸಿದ್ದಪ್ಪ ಹಾಗೂ ವ್ಯಂಗ್ಯಚಿತ್ರಕಾರ, ದಾವಣಗೆರೆಯ ಎಚ್.ಬಿ. ಮಂಜುನಾಥ ಅವರಿಗೆ ಪ‍್ರಸಕ್ತ ಸಾಲಿನ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಕುಲಸಚಿವ ಪ್ರೊ.ವೆಂಕಟರಾವ್ ಎಂ.ಪಲಾಟೆ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ಇತರರು ಇದ್ದರು.
‘ನಿರಂತರ ಕಲಿಕೆ ಅಗತ್ಯ’
ದಾವಣಗೆರೆ: ‘ಕೃತಕ ಬುದ್ಧಿಮತ್ತೆ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದ್ದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಮೂಲಕ ಹೊಸ ಜ್ಞಾನ ಸಂಪಾದಿಸಬೇಕು’ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ 11ನೇ ಘಟಿಕೋತ್ಸವ ಭಾಷಣ ಮಾಡಿದ ಅವರು ‘ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಹೆಚ್ಚು ಬಳಕೆಯಾದಂತೆಲ್ಲಾ ನೀವು ಕಲಿತ ವಿದ್ಯೆ ಹಳತಾಗುತ್ತದೆ. ಜ್ಞಾನ ಕೌಶಲಗಳು ಸೀಮಿತ ಅವಧಿಗಷ್ಟೇ ಅನುಕೂಲವಾಗುತ್ತವೆ. ಈ ನಿಟ್ಟಿನಲ್ಲಿ ಜ್ಞಾನ ಕೌಶಲ ಬೆಳೆಸಿಕೊಳ್ಳುವುದು ಅಗತ್ಯ’ ಎಂದು ಹೇಳಿದರು.
‘ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕಲಿತ ಜ್ಞಾನ ಹಾಗೂ ಕೌಶಲ ಸಮಾಜಕ್ಕೆ ಧಾರೆ ಎರೆಯಬೇಕು. ನೀವು ಕಲಿತ ಜ್ಞಾನ ನಿಮಗಷ್ಟೇ ಅಲ್ಲದೇ ಇಡೀ ಸಮಾಜಕ್ಕೆ ಉಪಯೋಗವಾದಾಗ ಭಾರತ ಅಭಿವೃದ್ಧಿ ಹೊಂದಲು ಸಾಧ್ಯ. ಅಲ್ಲದೇ ವಿಶ್ವ ಮಟ್ಟದಲ್ಲಿ ಕೌಶಲ ಪ್ರದರ್ಶನಕ್ಕೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.
‘ದಾವಣಗೆರೆ ವಿಶ್ವವಿದ್ಯಾಲಯ ಮೌಲ್ಯಯುತ ಶಿಕ್ಷಣ ನೀಡುತ್ತಿದ್ದು ನೀವು ಪಡೆದ ಜ್ಞಾನ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು. ವಿಶ್ವವೇ ಭಾರತದತ್ತ ಎದುರು ನೋಡುತ್ತಿದ್ದು ಭಾರತವು ತಂತ್ರಜ್ಞಾನದ ಹಬ್ ಆಗಿದೆ. ಭಾರತದ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಡಿಜಿಟಲ್ ಗುಚ್ಛವನ್ನೇ ಸೃಷ್ಟಿಸಿದ್ದು ಭಾರತಕ್ಕಷ್ಟೇ ಅಲ್ಲದೇ ವಿಶ್ವದ ಹಲವು ದೇಶಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿವೆ’ ಎಂದು ಹೇಳಿದರು.
2040ಕ್ಕೆ ಚಂದ್ರನ ಮೇಲೆ ಭಾರತೀಯರ ಪದಾರ್ಪಣೆ: ಕಿರಣಕುಮಾರ್ ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಈಗಾಗಲೇ ಪ್ರಸ್ತುತ ಸ್ವಾವಲಂಬಿಯಾಗಿ ಸಿದ್ಧಗೊಳ್ಳುತ್ತಿದೆ. ಚಂದ್ರನ ಅಂಗಳದಲ್ಲಿ ‘ವಿಕ್ರಮ್ ಲ್ಯಾಂಡರ್’ ಮತ್ತು ‘ರೋವರ್’ ಬಂಡಿಯನ್ನು ಇಳಿಸುವ ಕಾರ್ಯಾಚರಣೆ ಯಶಸ್ಸು ಸಾಧಿಸಿ ಬಾಹ್ಯಾಕಾಶ ಜಗತ್ತಿನಲ್ಲಿ ಇಸ್ರೊ ಮಹತ್ವದ ಮೈಲುಗಲ್ಲು ಸೃಷ್ಟಿಸಿದೆ. 2035ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಮತ್ತು 2040ರ ವೇಳೆಗೆ ಚಂದ್ರನ ಮೇಲೆ ಇಳಿಯುವ ಭೂಕಕ್ಷೆಗೆ ಭಾರತೀಯರನ್ನು ಕರೆದೊಯ್ಯುವ ಗುರಿಯನ್ನು ಹೊಂದಿದೆ’ ಎಂದು ಕಿರಣ್‌ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ನಡೆಗೆ ಬೇಸರ
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಹಾಗೂ ಚಿನ್ನದ ಪದಕ ವಿದ್ಯಾರ್ಥಿಗಳು ಪದಕ ಪಡೆದ ಬಳಿಕ ಕಾರ್ಯಕ್ರಮದಿಂದ ಹೊರ ಹೋಗಿದ್ದಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ಪದವಿ ಪಡೆದ ಬಳಿಕ ವಿದ್ಯಾರ್ಥಿಗಳು ಹೊರಹೋಗುವುದು ಸರಿಯಲ್ಲ. ಕಾರ್ಯಕ್ರಮದಲ್ಲಿ ಕುಳಿತು ಭಾಷಣ ಆಲಿಸಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿರುವ ಮುಖ್ಯ ಅತಿಥಿಗಳು ದೇಶಹಿತ ಜನಹಿತ ಕಾರ್ಯಗಳನ್ನು ಮಾಡಿದ್ದಾರೆ. ನಿಮ್ಮ ಉಜ್ವಲ ಭವಿಷ್ಯಕ್ಕೆ ಇವರ ಕಾರ್ಯಗಳು ಅಗತ್ಯ’ ಎಂದು ಥಾವರ್‌ಚಂದ್ ಗೆಹಲೋತ್ ಹೇಳಿದರು.
‘ಶಿಷ್ಟಾಚಾರ ಉಲ್ಲಂಘನೆ ತರವಲ್ಲ’ ‘ಘಟಿಕೋತ್ಸವವು ಶೈಕ್ಷಣಿಕ ಜೀವನದ ವಿಶೇಷ ಘಟ್ಟ. ಇದರಲ್ಲಿ ಭಾಗವಹಿಸುವುದು ಅದೃಷ್ಟದ ಸಂಕೇತ. ಅದರಲ್ಲೂ ರಾಜ್ಯಪಾಲರಿಂದ ಪದವಿ ಪಡೆದ ವಿಶೇಷ ಸಂದರ್ಭ. ವಿದ್ಯಾರ್ಥಿಗಳು ಕಾರ್ಯಕ್ರಮ ಪೂರ್ಣವಾಗುವ ತನಕ ಇದ್ದರೆ ಶೋಭೆ ಬರುತ್ತದೆ. ವೃತ್ತಿಯಲ್ಲಿ ಸಾಧನೆ ಮಾಡಿರುವವರು ಇಲ್ಲಿದ್ದು ಅವರ ಭಾಷಣ ಆಲಿಸಿದರೆ ಭವಿಷ್ಯವನ್ನು ರೂಪಿಸಲು ಮಾರ್ಗದರ್ಶನಕ್ಕೆ ಸಹಾಯಕವಾಗುತ್ತದೆ’ ಎಂದರು.
ಪದವಿ ಪ್ರವೇಶಕ್ಕೆ ಏಕ ವೇಳಾಪಟ್ಟಿ
ದಾವಣಗೆರೆ: ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ಚಟುವಟಿಕೆ ಏಕರೂಪದಲ್ಲಿರಲು ಮತ್ತು ಏಕ ಮಾದರಿಯಲ್ಲಿ ಪ್ರವೇಶ ಪ್ರಕ್ರಿಯೆಯನ್ನು ನಡೆಸಲು ಒಂದೇ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 11ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿ ‘ಏಕರೂಪದ ವೇಳಾಪಟ್ಟಿ ಪ್ರಕಟಿಸುವುದರಿಂದ ಶೈಕ್ಷಣಿಕ ಚಟುವಟಿಕೆ ಏಕಕಾಲದಲ್ಲಿ ಮುಕ್ತಾಯವಾಗುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ’ ಎಂದರು.
‘ರಾಜ್ಯ ಸರ್ಕಾರ ಬಂದ 9 ತಿಂಗಳಲ್ಲಿ ಸುಮಾರು 10 ಒಡಂಬಡಿಕೆ ಮಾಡಿಕೊಂಡು ಮಹತ್ವರ ಬದಲಾವಣೆ ತರಲು ಉದ್ದೇಶಿಸಿದ್ದು ಕೌಶಲ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಪ್ರಯತ್ನ ಮಾಡಲಾಗುತ್ತಿದೆ. ಪದವೀಧರರಿಗೆ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ಬದಲಾವಣೆ ತರಲು ಸಾಧ್ಯವಿರುವ ಪ್ರಯತ್ನ ಮಾಡಲಾಗುತ್ತಿದೆ. ಆಯಾ ಉದ್ಯೋಗ ಕ್ಷೇತ್ರದಲ್ಲಿ ಅವಶ್ಯಕವಿರುವ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.
ದಾವಣಗೆರೆ ವಿ.ವಿ.ಗೆ ನ್ಯಾಕ್‍ನಿಂದ ಬಿ+ ಶ್ರೇಣಿ ಪಡೆದಿದ್ದು 11 ವರ್ಷಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ. ಗಣಿತಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಇಂತಹ 7 ವಿಶ್ವವಿದ್ಯಾಲಯಗಳಿಗೆ ತಲಾ ₹50 ಲಕ್ಷಗಳನ್ನು ಪ್ರಶಸ್ತಿಯಾಗಿ ನೀಡಿದ್ದು ದಾವಣಗೆರೆ ವಿಶ್ವವಿದ್ಯಾನಿಲಯವು ಸೇರಿದೆ’ ಎಂದು ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.