ADVERTISEMENT

ದಾವಣಗೆರೆ: ಇಂಗ್ಲಿಷ್‌ ಪಠ್ಯಪುಸ್ತಕ ದೊರೆಯದೇ ಪರದಾಟ

ದಾವಣಗೆರೆ ವಿಶ್ವವಿದ್ಯಾಲಯದ ಪದವಿ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ತೊಂದರೆ

ಜಿ.ಬಿ.ನಾಗರಾಜ್
Published 7 ನವೆಂಬರ್ 2024, 8:24 IST
Last Updated 7 ನವೆಂಬರ್ 2024, 8:24 IST
ದಾವಣಗೆರೆ ವಿಶ್ವವಿದ್ಯಾಲಯ
ದಾವಣಗೆರೆ ವಿಶ್ವವಿದ್ಯಾಲಯ   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕ ಪದವಿ ತರಗತಿ ಆರಂಭವಾಗಿ ಎರಡು ತಿಂಗಳು ಕಳೆದರೂ ಮೊದಲ ಸೆಮಿಸ್ಟರ್‌ನ ಇಂಗ್ಲಿಷ್‌ ಭಾಷಾ ಪಠ್ಯಪುಸ್ತಕ ಲಭ್ಯವಾಗದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಪಠ್ಯದ ಜೆರಾಕ್ಸ್‌ ಪ್ರತಿ ಹಿಡಿದು ಬೋಧನೆ ಮಾಡುವ ಸಂಕಷ್ಟಕ್ಕೆ ಪ್ರಾಧ್ಯಾಪಕರು ಸಿಲುಕಿದ್ದಾರೆ.

2024–25ನೇ ಶೈಕ್ಷಣಿಕ ವರ್ಷದಿಂದ ದಾವಣಗೆರೆ ವಿಶ್ವವಿದ್ಯಾಲಯ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅಳವಡಿಸಿಕೊಂಡಿದೆ. ಮೊದಲ ಸೆಮಿಸ್ಟರ್‌ನ ಎಲ್ಲ ವಿಷಯಗಳ ಪಠ್ಯ ಮರು ರಚನೆಗೆ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಚಾಲನೆ ಸಿಕ್ಕಿತ್ತು. ಬಹುತೇಕ ಎಲ್ಲ ವಿಷಯಗಳ ಪಠ್ಯ ಪುಸ್ತಕ ಮುದ್ರಣಗೊಂಡು ವಿದ್ಯಾರ್ಥಿಗಳನ್ನು ತಲುಪಿವೆ. ಇಂಗ್ಲಿಷ್‌ ಭಾಷಾ ಪಠ್ಯ ರಚನೆ ಹಾಗೂ ಮುದ್ರಣ ಕಾರ್ಯ ವಿಳಂಬವಾಗಿದ್ದು, ಕಲೆ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಸ್ನಾತಕ ಪದವಿಯ ಶೈಕ್ಷಣಿಕ ವರ್ಷ ಸೆ.9ರಿಂದ ಆರಂಭವಾಗಿದೆ. 2025ರ ಜನವರಿ ಮೊದಲ ವಾರಕ್ಕೆ ಸೆಮಿಸ್ಟರ್‌ ಅವಧಿ ಪೂರ್ಣಗೊಳ್ಳಲಿದೆ. 65 ದಿನಗಳಲ್ಲಿ ಸೆಮಿಸ್ಟರ್‌ ಪರೀಕ್ಷೆ ಎದುರಾಗುವ ಸಾಧ್ಯತೆ ಇದೆ. ಆದರೆ, ಈವರೆಗೆ ಪಠ್ಯ ಪುಸ್ತಕ ಪೂರೈಕೆಯಾಗದಿರುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ. ‘ವಿಷಯ ಅಧ್ಯಯನ ಮಂಡಳಿ’ (ಬಿಒಎಸ್‌) ರೂಪಿಸಿದ ಪಠ್ಯದಲ್ಲಿರುವ ಪಾಠ, ಕವನಗಳ ಪಿಡಿಎಫ್‌ ಪ್ರತಿಯನ್ನು ಪ್ರಾಧ್ಯಾಪಕರ ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ ವಿಶ್ವವಿದ್ಯಾಲಯ ಹಂಚಿಕೊಂಡಿದೆ. ಇದನ್ನೇ ಜೆರಾಕ್ಸ್‌ ಮಾಡಿಕೊಂಡು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ADVERTISEMENT

2021–22ನೇ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಬಂದಿತ್ತು. ಇದಕ್ಕೆ ಅನುಗುಣವಾಗಿ ಪಠ್ಯವನ್ನು ವಿಶ್ವವಿದ್ಯಾಲಯ ರೂಪಿಸಿದೆ. 2023ರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾದ ಬಳಿಕ ಎನ್‌ಇಪಿಗೆ ಪರ್ಯಾಯವಾಗಿ ಎಸ್‌ಇಪಿ ರೂಪುಗೊಂಡಿತು. ಇದಕ್ಕೆ ಅನುಗುಣವಾಗಿ ಪಠ್ಯ ಮರುರಚನೆಯ ಅನಿವಾರ್ಯತೆ ಮತ್ತೆ ಸೃಷ್ಟಿಯಾಗಿದೆ. ಇಂಗ್ಲಿಷ್‌ ವಿಷಯ ಅಧ್ಯಯನ ಮಂಡಳಿ ಕೂಡ ಅಸ್ತಿತ್ವಕ್ಕೆ ಬಂದಿದೆ. ಐದು ಪಾಠ, ಐದು ಪದ್ಯ ಹಾಗೂ ವ್ಯಾಕರಣ ಒಳಗೊಂಡ ಪಠ್ಯವನ್ನು ರಚಿಸಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಇಂಗ್ಲಿಷ್‌ ಪಠ್ಯಕ್ಕೆ ಅಗತ್ಯ ಇರುವ ಸಾಹಿತ್ಯ ಬಳಸಿಕೊಳ್ಳಲು ಲೇಖಕರು, ಕವಿಗಳ ಅನುಮತಿ ಅತ್ಯಗತ್ಯ. ಇಲ್ಲವಾದರೆ ಕೃತಿಸ್ವಾಮ್ಯ ಉಲ್ಲಂಘನೆಯ ಸಮಸ್ಯೆ ಸೃಷ್ಟಿಯಾಗುತ್ತದೆ. ದೇಶ, ವಿದೇಶದಲ್ಲಿರುವ ಸಂಸ್ಥೆ, ವ್ಯಕ್ತಿಗಳನ್ನು ಸಂಪರ್ಕಿಸಿ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಡಕು ಕಾಣಿಸಿಕೊಂಡಿತ್ತು. ಪ್ರಥಮ ಮತ್ತು ದ್ವಿತೀಯ ಸೆಮಿಸ್ಟರ್‌ ಪಠ್ಯವನ್ನು ಒಟ್ಟಿಗೆ ರಚನೆ ಮಾಡಿದರೂ ಪುಸ್ತಕ ರೂಪದಲ್ಲಿ ಹೊರತರುವುದು ವಿಳಂಬವಾಗಿದೆ. ಮುದ್ರಣ ಆರಂಭಗೊಂಡಿದ್ದು, ಕೆಲವೇ ದಿನಗಳಲ್ಲಿ ಪೂರೈಕೆ ಆಗಲಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಫಕಿರೇಶ್‌ ಹಳ್ಳಿಳ್ಳಿ ತಿಳಿಸಿದರು.

ಸೆಮಿಸ್ಟರ್‌ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಲಭ್ಯವಾಗಬೇಕು ಎಂಬುದು ಆಶಯ. ಪಠ್ಯ ಪುಸ್ತಕ ರಚನೆಯಲ್ಲಿ ವಿಳಂಬವಾಗಿದ್ದು ಮುಂದಿನ ವಾರ ವಿದ್ಯಾರ್ಥಿಗಳ ಕೈಸೇರಲಿದೆ.
–ಪ್ರೊ.ಬಿ.ಡಿ.ಕುಂಬಾರ ಕುಲಪತಿ ದಾವಣಗೆರೆ ವಿಶ್ವವಿದ್ಯಾಲಯ

ಬೋಧನೆಗೆ ತೊಡಕು

‘ಭಾಷಾ ವಿಷಯಗಳ ಬೋಧನೆಗೆ ಪಠ್ಯ ಪುಸ್ತಕ ಅತ್ಯಗತ್ಯ. ಬೋಧನೆ ಮಾಡುತ್ತಿರುವಾಗ ವಿದ್ಯಾರ್ಥಿಗಳ ಬಳಿಯೂ ಪಠ್ಯ ಪುಸ್ತಕ ಇದ್ದರೆ ಮಾತ್ರ ಸರಿಯಾದ ಸಂವಹನ ಸಾಧ್ಯ. ಪಾಠವನ್ನು ಅರ್ಥಪಡಿಸಲು ಇದರಿಂದ ಸುಲಭವಾಗುತ್ತದೆ. ತರಗತಿ ಆರಂಭವಾಗಿ ಎರಡು ತಿಂಗಳು ಕಳೆದರೂ ಪಠ್ಯ ಪುಸ್ತಕ ಲಭ್ಯವಾಗದಿರುವುದು ಬೋಧನೆಗೆ ತೊಡಕುಂಟು ಮಾಡಿದೆ’ ಎಂದು ದಾವಣಗೆರೆಯ ಪದವಿ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಪದವಿ ಕಾಲೇಜು ವಿದ್ಯಾರ್ಥಿಗಳು ಜೆರಾಕ್ಸ್‌ ಪ್ರತಿ ಪಡೆದು ತರಗತಿಗೆ ಹಾಜರಾಗುತ್ತಿದ್ದಾರೆ. ಬೋಧನೆ ಮಾಡುವ ಪಠವನ್ನು ಮಾತ್ರ ಜೆರಾಕ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಜೆರಾಕ್ಸ್ ಮತ್ತು ಪಠ್ಯ ಪುಸ್ತಕಕ್ಕೆ ಹಣ ವ್ಯಯ ಮಾಡುವುದು ವಿದ್ಯಾರ್ಥಿಗಳಿಗೂ ಹೊರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.