ದಾವಣಗೆರೆ: ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಳಿಸಿದ ಹತ್ತೇ ನಿಮಿಷದಲ್ಲಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿರುವ ಹೆಗ್ಗಳಿಕೆಗೆ ದಾವಣಗೆರೆ ವಿಶ್ವವಿದ್ಯಾಲಯ ಪಾತ್ರವಾಗಿದೆ.
ಪದವಿಯ 6ನೇ ಸೆಮಿಸ್ಟರ್ ಮತ್ತು ಸ್ನಾತಕೋತ್ತರದ 4ನೇ ಸೆಮಿಸ್ಟರ್ ಪರೀಕ್ಷೆಯ ಎಲ್ಲ ವಿಭಾಗಗಳ ಪರೀಕ್ಷೆಯ ಫಲಿತಾಂಶವನ್ನು ತ್ವರಿತವಾಗಿ ಪ್ರಕಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಹಿಂದೆ ಇದೇ ವಿಶ್ವವಿದ್ಯಾಲಯದಲ್ಲಿ 2 ಗಂಟೆಯೊಳಗೆ ಫಲಿತಾಂಶ ನೀಡಿದ ಹೆಗ್ಗಳಿಕೆ ಇತ್ತು. ಇದೀಗ 10 ನಿಮಿಷದಲ್ಲಿ ಫಲಿತಾಂಶ ನೀಡಿರುವುದು ನೂತನ ದಾಖಲೆಯಾಗಿದೆ. ಅದರಲ್ಲೂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪರೀಕ್ಷೆ ಮುಗಿದ ಎರಡೇ ಗಂಟೆಗಳಲ್ಲಿ ಮೌಲ್ಯಮಾಪನ ಪೂರ್ಣಗೊಳಿಸಿ, 10 ನಿಮಿಷದಲ್ಲಿ ಸಹಿ ಸಹಿತ ಉಳಿದ ಕಾರ್ಯ ಮುಗಿಸಿ ಫಲಿತಾಂಶ ಪ್ರಕಟಿಸಲಾಗಿದೆ.
ಸ್ನಾತಕೋತ್ತರ ವಿಭಾಗದಲ್ಲಿ 4,000 ವಿದ್ಯಾರ್ಥಿಗಳು, ಪದವಿ ವಿಭಾಗದಲ್ಲಿ 41,000 ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಅಕ್ಟೋಬರ್‌ನಲ್ಲಿ ಬರೆದಿದ್ದರು. ಈಗಾಗಲೇ ಫಲಿತಾಂಶವನ್ನು ನೀಡಿದ್ದೇವೆ. ಶೇ 90ರಷ್ಟು ಜನ ಉತ್ತೀರ್ಣರಾಗಿದ್ದಾರೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿರುವವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಕೆ. ಶಿವಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪದವಿ ಮುಗಿಸಿ ಸ್ನಾತಕೋತ್ತರ ಪ್ರವೇಶ ಪಡೆಯಲು, ಉದ್ಯೋಗಕ್ಕೆ ಅರ್ಜಿ ಹಾಕಲು ವಿಶ್ವವಿದ್ಯಾಲಯದ ಕಡೆಯಿಂದ ವಿಳಂಬ ಆಗಬಾರದು ಎಂಬ ಉದ್ದೇಶದಿಂದ ತ್ವರಿತ ಮೌಲ್ಯಮಾಪನ ವ್ಯವಸ್ಥೆ ಕೈಗೊಳ್ಳಲಾಗಿದೆ. ದಸರಾ, ದೀಪಾವಳಿ ಸಹಿತ ಬಹುತೇಕ ರಜಾ ದಿನಗಳಲ್ಲೂ ಉಪನ್ಯಾಸಕರು ಮೌಲ್ಯಮಾಪನ ಕಾರ್ಯ ಮಾಡಿದ್ದಾರೆ. ಹಬ್ಬಕ್ಕೆ ರಜೆ ಕೋರಿದವರ ಮನವೊಲಿಸಿದ್ದರಿಂದ ತ್ವರಿತ ಫಲಿತಾಂಶ ಪ್ರಕಟಿಸುವುದು ಸಾಧ್ಯವಾಗಿದೆ ಎಂದು ವರು ವಿವರಿಸಿದರು.
ಸಂಬಂಧಿಸಿದ ವಿಶ್ವವಿದ್ಯಾಲಯ ನಿಯೋಜಿಸುವ ಸಿಬ್ಬಂದಿ ಮೌಲ್ಯಮಾಪನ ಮಾಡಿದ ಮೇಲೆ ಅನ್ಯ ವಿಶ್ವವಿದ್ಯಾಲಯದ ಸಿಬ್ಬಂದಿಯೂ ಮತ್ತೆ ಮೌಲ್ಯಮಾಪನ ಮಾಡಬೇಕು. ಈ ಎಲ್ಲ ಕಾರ್ಯವನ್ನೂ ಏಕಕಾಲಕ್ಕೇ, ತ್ವರಿತವಾಗಿ ಪೂರ್ಣಗೊಳಿಸಲಾಗಿದೆ ಎಂದರು.
‘ತಿಂಗಳುಗಟ್ಟಲೆ ನಡೆಯುತ್ತಿದ್ದ ಮೌಲ್ಯಮಾಪನ ಪ್ರಕ್ರಿಯೆಯನ್ನು ಪರೀಕ್ಷೆ ನಡೆದ ದಿನವೇ ಮುಗಿಸಿದ್ದೇವೆ. ನಮ್ಮ ವಿಭಾಗದ ಎಲ್ಲ ಏಳು ಜನರು ವ್ಯವಸ್ಥಿತವಾಗಿ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ. ಪರೀಕ್ಷೆ ಆಗಿ ಬಂಡಲ್ ಹೋಗಿ ಕೋಡಿಂಗ್, ಡಿಕೋಡಿಂಗ್ ಮಾಡಿಸಿ ಬೇರೆ ವಿಶ್ವ ವಿದ್ಯಾಲಯದವರಿಂದಲೂ ಮೌಲ್ಯಮಾಪನ ಮುಗಿಸಲು ನಮ್ಮ ಕುಲಪತಿ, ಪರೀಕ್ಷಾಂಗ ಕುಲಸಚಿವರ ಪ್ರೋತ್ಸಾಹ ಕಾರಣ’ ಎಂದು ಕಂಪ್ಯೂಟರ್ ಸೈನ್ ವಿಭಾಗದ ಮುಖ್ಯಸ್ಥ ಡಾ.ಚಂದ್ರಕಾಂತ್ ನಾಯ್ಕೋಡಿ ಮಾಹಿತಿ ನೀಡಿದರು.
‘ಎಂ.ಎಸ್‌ಸಿ ಗಣಿತ ವಿಭಾಗದಲ್ಲಿ ನಾವು ಕೂಡಲೇ ಫಲಿತಾಂಶ ನೀಡಿದ್ದರಿಂದ ಕೆಲವು ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಸಾಧ್ಯವಾಗಿದೆ. ಪರೀಕ್ಷಾ ಮಂಡಳಿ ಅಧ್ಯಕ್ಷ ಪ್ರಸನ್ನಕುಮಾರ್, ಕುಲಪತಿ, ಕುಲಸಚಿವರು ಬೆಂಬಲ ನೀಡಿದರು’ ಎಂದು ಗಣಿತ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ತಿಳಿಸಿದರು.
ನಮ್ಮ ಸಹೋದ್ಯೋಗಿಗಳು ಪರಿಶ್ರಮ, ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಇದರಿಂದ ತ್ವರಿತವಾಗಿ ಫಲಿತಾಂಶ ನೀಡಲು ಸಾಧ್ಯವಾಗಿದೆ ಎಂದು ಕುಲಪತಿ ಪ್ರೊ. ಬಿ.ಡಿ. ಕುಂಬಾರ ತಿಳಿಸಿದರು.
ಯುಯುಸಿಎಂಎಸ್‌ನಲ್ಲೂ ಮುಂದು
ಪರೀಕ್ಷಾ ವಿಧಾನ, ಮೌಲ್ಯಮಾಪನ, ಫಲಿತಾಂಶ ಸಹಿತ ಎಲ್ಲವನ್ನೂ ಯುನಿಫೈಡ್ ಯುನಿವರ್ಸಿಟಿ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಯುಯುಸಿಎಂಎಸ್)ನ ಸಾಫ್ಟ್‌ವೇರ್‌ನಲ್ಲಿ ದಾಖಲಿಸುವ ಪದ್ಧತಿ ಜಾರಿಗೆ ಬಂದಿದೆ. ಪರಿಣಾಮಕಾರಿ ಮತ್ತು ಪಾರದರ್ಶಕವಾಗಿ ಇರಬೇಕು ಎಂಬ ಕಾರಣಕ್ಕೆ ಈ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಈ ಬಾರಿಯ ಮೊದಲ ಸೆಮಿಸ್ಟರ್‌ನ ಫಲಿತಾಂಶವನ್ನು ಬೆರಳೆಣಿಕೆಯ ವಿಶ್ವವಿದ್ಯಾಲಯಗಳು ಈ ಸಿಸ್ಟಂ ಮೂಲಕ ಶೀಘ್ರ ಪ್ರಕಟಿಸಿವೆ. ಅವುಗಳಲ್ಲಿ ದಾವಣಗೆರೆ ವಿಶ್ವವಿದ್ಯಾಲಯವೂ ಒಂದು ಎಂದು ಮೌಲ್ಯಮಾಪನ ಕುಲಸಚಿವ ಡಾ. ಕೆ. ಶಿವಶಂಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.