ದಾವಣಗೆರೆ: ದೂರದಲ್ಲೆಲ್ಲೋ ಇರುವ ವಿದ್ಯುತ್ ಕಂಬದಿಂದ ಮನೆಗಳ ಮೇಲೆ ಅಪಾಯಕಾರಿ ರೀತಿಯಲ್ಲಿ ಎಳೆದಿರುವ ವಿದ್ಯುತ್ ತಂತಿಗಳು, ಕಿರಿದಾದ ರಸ್ತೆ ನಡುವೆ ವಾಹನಗಳ ಸವಾರರಿಗೆ ಸವಾಲೊಡ್ಡುವ ರೀತಿಯಲ್ಲಿ ಅಡ್ಡವಾಗಿರುವ ವಿದ್ಯುತ್ ಕಂಬಗಳು, ಮಳೆ ಬಂದಾಗ ‘ಕಿಡಿ’ ಕಾರುತ್ತಾ ಸದ್ದು ಮಾಡುವ ವಿದ್ಯುತ್ ಪರಿವರ್ತಕಗಳು (ಟಿಸಿ)...
ಪಾಲಿಕೆ ವ್ಯಾಪ್ತಿಯ ಬಾಷಾ ನಗರ, ಚೌಡೇಶ್ವರಿ ನಗರ, ಮಂಡಕ್ಕಿ ಬಟ್ಟಿ ಲೇಔಟ್, ಪಾರ್ವತಮ್ಮ ಕಾಲೊನಿ, ಸಿದ್ದರಾಮೇಶ್ವರ ಕಾಲೊನಿ ಸೇರಿದಂತೆ ‘ಕೊಳೆಗೇರಿ’ಗಳೆಂದು ಗುರುತಿಸಿಕೊಂಡಿರುವ ಹಲವು ಬಡಾವಣೆಗಳಲ್ಲಿನ ಚಿತ್ರಣವಿದು.
ಚಿಕ್ಕಚಿಕ್ಕ ಶೆಡ್‌ಗಳಂತಿರುವ ಮನೆಗಳೇ ಹೆಚ್ಚಾಗಿರುವ ಈ ಪ್ರದೇಶಗಳಲ್ಲಿ ಸಮರ್ಪಕವಾದ ವಿದ್ಯುತ್ ವ್ಯವಸ್ಥೆಯಿಲ್ಲ. ಮನೆ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸದ ಕಾರಣಕ್ಕೆ ಹಾಗೂ ವಿದ್ಯುತ್ ಪರಿವರ್ತಕಗಳು ದೂರ ಇರುವ ಕಾರಣಕ್ಕೆ ಇಲ್ಲಿನ ನಿವಾಸಿಗಳು ತಾವೇ ಅಪಾಯಕಾರಿಯಾದಂಥ ಲೈನ್ (ವಿದ್ಯುತ್ ತಂತಿ) ಎಳೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಗೂಡುಗಳಿಗೆ ತಾತ್ಕಾಲಿಕವಾಗಿ ‘ಬೆಳಕು’ ಪಡೆದಿದ್ದಾರೆ.
ಕೊಳೆಗೇರಿಗಳ ಪೈಕಿ ಹಲವೆಡೆ ಕೈ ಎತ್ತಿದರೆ ಸ್ಪರ್ಶಿಸುವ ಅಂತರದಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿವೆ. ಜನವಸತಿ ಪ್ರದೇಶಗಳಲ್ಲಿ ಮನೆಗಳಿಗೆ ಹೊಂದಿಕೊಂಡಂತೆಯೇ ಟಿ.ಸಿ. ಅಳವಡಿಸಲಾಗಿದೆ. ಇದರಿಂದ ಸ್ಥಳೀಯರು ಆತಂಕದಲ್ಲೇ ಕಾಲ ಕಳೆಯುವ ಸ್ಥಿತಿ ಉಂಟಾಗಿದೆ.
‘ಮಳೆ ಬಂದಾಗೆಲ್ಲ ನಮ್ಮಲ್ಲಿ ಕರೆಂಟ್ ತೆಗೀತಾರೆ. ಟಿ.ಸಿ, ಕರೆಂಟ್ ಕಂಬದಲ್ಲಿನ ವೈರ್‌ಗಳು ಕರ್ ಕರ್ ಸೌಂಡ್ ಮಾಡುತ್ತವೆ. ಹೀಗೇ ಕರ್ ಕರ್ ಎನ್ನುತ್ತಿರುವಾಗಲೇ ವಿದ್ಯುತ್ ಲೈನ್‌ನಲ್ಲಿ ಹೆಚ್ಚು ಕಡಿಮೆಯಾಗಿ ಆನ್ ಇದ್ದ ಕೊಳವೆಬಾವಿ ಮೋಟಾರ್ ಕೆಟ್ಟು ಹೋಯ್ತು. ಈಗ ಕುಡಿಯೋಕೆ, ಬಳಸೋಕೆ ನೀರಿಲ್ಲ. ಪಾಲಿಕೆಯಿಂದ ಬರುವ ನೀರು ಭಾಳ ಗಲೀಜಾಗಿರುತ್ತೆ. ಹುಳ ಇರ್ತವೆ. ಬೋರ್ ಸರಿ ಮಾಡಿಸಿಕೊಟ್ರೆ ಸಾಕು ಹೇಗೋ ಕರೆಂಟ್ ಇದ್ದಾಗ ಚಲೊ ನೀರ್ ಆದ್ರೂ ಸಿಗುತ್ತದೆ’ ಎನ್ನುತ್ತಾರೆ ಬಾಷಾ ನಗರದ ನಿವಾಸಿಗಳಾದ ಬಾಲಪ್ಪ, ದುಗ್ಗೇಶ್.
ಮಂಡಕ್ಕಿ ಬಟ್ಟಿ ಲೇಔಟ್‌ನಲ್ಲಿ ಟಿ.ಸಿ ಮನೆಗೆ ಹೊಂದಿಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮನೆ ಮೇಲೆ ಹತ್ತಿದರೆ ಕೈಗೆ ತಾಕುವಂತಿದೆ.
‘2 ವರ್ಷದ ಹಿಂದೆ ಇದೇ ಟಿ.ಸಿ.ಗೆ ಬೆಂಕಿ ಬಿದ್ದಿತ್ತು. ಜೀವ ಭಯದಿಂದ ಹೆದರಿ ಮನೆಗಳಿಂದ ಹೊರಗೆ ಓಡಿ ಹೋಗಿದ್ದೆವು. ಕೊನೆಗೆ ಅಗ್ನಿಶಾಮಕದವರು ಬಂದು ಬೆಂಕಿ ನಂದಿಸಿದ್ದರು. ದೇವರ ದಯೆಯಿಂದ ಯಾವುದೇ ಅನಾಹುತ ಆಗಿರಲಿಲ್ಲ. ಅದಾದ ಬಳಿಕವೂ ಬೆಸ್ಕಾಂನವರು ಎಚ್ಚೆತ್ತುಕೊಂಡು ಟಿ.ಸಿ.ಯನ್ನು ಬೇರೆಡೆ ಸ್ಥಳಾಂತರಿಸದಿಲ್ಲ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ’ ಎಂದು ಸ್ಥಳೀಯರಾದ ಶಂಷುದ್ದೀನ್, ಸಲಾಂ ಸಾಬ್ ಪ್ರಶ್ನಿಸಿದರು.
‘ಮಳೆ ಬಂದಾಗ ಮನೆಯ ಗೋಡೆ, ಪಾತ್ರೆಗಳಲ್ಲಿ ಕರೆಂಟ್ ಹರಿದಂತಾಗುತ್ತದೆ. ಗೋಡೆ ಮುಟ್ಟಿದರೂ ಮೈ ಜೂಂ ಅನ್ನುತ್ತದೆ. ಒಮ್ಮೆ ವೈರ್ ಕೆಳಗೆ ಬಿದ್ದು, ಆತಂಕ ಸೃಷ್ಟಿಸಿತ್ತು. ಈ ಅಪಾಯಕಾರಿ ಟಿ.ಸಿ, ವಿದ್ಯುತ್ ತಂತಿಗಳಿಂದ ಮಕ್ಕಳನ್ನು ಕಾಪಾಡಿಕೊಳ್ಳುವುದೇ ಸವಾಲಾಗಿದೆ’ ಎಂದು ಶಾಹೀದಾ ಬಾನು ನೋವು ತೋಡಿಕೊಂಡರು.
ಇನ್ನು ಪಾರ್ವತಮ್ಮ ಕಾಲೊನಿಯಲ್ಲಿ ನಡುರಸ್ತೆಗಳಲ್ಲೇ ವಿದ್ಯುತ್ ಕಂಬಗಳನ್ನು ಹಾಕಿದ್ದು, ಇದರಿಂದ ಸ್ಥಳೀಯರಿಗೆ ಸಾಕಷ್ಟು ಅನನುಕೂಲ ಉಂಟಾಗುತ್ತಿದೆ. ಇಲ್ಲಿ ವಾಹನಗಳ ಸಂಚಾರವೂ ಅಪಾಯಕಾರಿಯಾಗಿದೆ.
ಕೊಳೆಗೇರಿಗಳಲ್ಲಿ ಅಪಾಯ ತಂದೊಡ್ಡುವ ವಿದ್ಯುತ್ ತಂತಿ ಟಿ.ಸಿ.ಗಳಿರುವ ಬಗ್ಗೆ ದೂರು ಬಂದಿಲ್ಲ. ಆದರೂ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸರಿಪಡಿಸಲು ಅಗತ್ಯ ಕ್ರಮ ವಹಿಸಲಾಗುವುದುತಿಪ್ಪೇಸ್ವಾಮಿ ಎ.ಕೆ. ಎಇಇ ಬೆಸ್ಕಾಂ
ಬಟ್ಟಿ ಲೇಔಟ್ ಪಾರ್ವತಮ್ಮ ಕಾಲೊನಿ ಸಿದ್ದರಾಮೇಶ್ವರ ಕಾಲೊನಿ ಸೇರಿದಂತೆ ವಿವಿಧ ಕೊಳೆಗೇರಿ ಪ್ರದೇಶಗಳಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ಅಳವಡಿಸಿರುವ ನಳ ಹಾಗೂ ಮೀಟರ್‌ಗಳನ್ನು ಕಳವು ಮಾಡಲಾಗಿದೆ. ‘ನಾವೆಲ್ಲ ಕೂಲಿ ಮಾಡಿ ಬದುಕು ನಡೆಸುವವರು. ಕೂಲಿಗೆ ಹೋದಾಗ ಹಾಗೂ ರಾತ್ರಿ ವೇಳೆ ಖದೀಮರು ನಲ್ಲಿಯ ಪೈಪ್ ಹಾಗೂ ಮೀಟರ್‌ಗಳನ್ನು ಕದ್ದೊಯ್ದಿದ್ದಾರೆ. ಪಾಲಿಕೆ ಪೂರೈಸುವ ನೀರನ್ನೇ ಅವಲಂಬಿಸಿದ್ದೇವೆ’ ಎಂದು ಸ್ಥಳೀಯರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.