ದಾವಣಗೆರೆ: ಇಲ್ಲಿನ ಪ್ರಿನ್ಸ್ ಜಯಚಾಮರಾಜೇಂದ್ರ (ಪಿ.ಜೆ) ಬಡಾವಣೆಯ 4 ಎಕರೆ 13 ಗುಂಟೆ ಜಾಗ ‘ಖಬರಸ್ತಾನ್ ಸುನ್ನಿ ವಕ್ಫ್ ಸಂಸ್ಥೆ’ ಹೆಸರಿಗೆ ನೋಂದಣಿಯಾಗಿರುವ ಬಗ್ಗೆ ಆರೋಪ ಕೇಳಿಬಂದಿದೆ. 2015ರಲ್ಲಿ ನಡೆದ ಈ ಖಾತೆ ಬದಲಾವಣೆಯ ಕುರಿತು ಕಟ್ಟಡ ಮಾಲೀಕರು ಆತಂಕಗೊಂಡಿದ್ದಾರೆ.
ನಗರದ ಹೃದಯ ಭಾಗದಲ್ಲಿರುವ ಈ ಬಡಾವಣೆ 1950ಕ್ಕೂ ಮುನ್ನ ನಿರ್ಮಾಣವಾಗಿದೆ. ಮೈಸೂರು ಅರಸರ ಗೌರವಾರ್ಥವಾಗಿ ಈ ಬಡಾವಣೆಯನ್ನು ಅಂದಿನ ನಗರ ಸ್ಥಳೀಯ ಸಂಸ್ಥೆ ಅಭಿವೃದ್ಧಿಪಡಿಸಿದೆ. ನಿವೇಶನ, ಕಟ್ಟಡಗಳು ಮಾಲೀಕರ ಹೆಸರಲ್ಲಿವೆ. ಬಡಾವಣೆಯ ಸರ್ವೆ ನಂಬರ್ 53ರ 4 ಎಕರೆ 13 ಗುಂಟೆ ಭೂಮಿಯ ಪಹಣಿ ಮಾತ್ರ ವಕ್ಫ್ ಸಂಸ್ಥೆಯ ಹೆಸರಿನಲ್ಲಿ ತೋರಿಸುತ್ತಿದೆ. ಈ ದಾಖಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದಾವಣಗೆರೆ ನಗರದಲ್ಲಿ ವ್ಯವಸ್ಥಿತವಾಗಿ ನಿರ್ಮಾಣವಾದ ಹಳೆಯ ಬಡಾವಣೆ ಇದಾಗಿದೆ. ಜನರಿಗೆ ಸೂರು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸ್ಥಳೀಯ ಸಂಸ್ಥೆ ಅಭಿವೃದ್ಧಿಪಡಿಸಿ ಹಂಚಿಕೆ ಮಾಡಿದೆ. 80 ವರ್ಷದಷ್ಟು ಹಳೆಯದಾದ ಈ ಬಡಾವಣೆಯಲ್ಲಿ ನೆಲೆಸಿದ ಜನರು ಮಹಾನಗರ ಪಾಲಿಕೆಗೆ ತೆರಿಗೆ ಪಾವತಿ ಮಾಡುತ್ತಿದ್ದಾರೆ. 9 ವರ್ಷಗಳ ಹಿಂದೆ ಪಹಣಿಯಲ್ಲಿ ಆಗಿರುವ ಈ ಬದಲಾವಣೆಯ ಬಗ್ಗೆ ಈಗಷ್ಟೇ ಜನರಿಗೆ ಗೊತ್ತಾಗಿದೆ.
ಬಡಾವಣೆಯ ಅಕ್ಕಮಹಾದೇವಿ ರಸ್ತೆಯ ಗುಂಡಿ ಮಹಾದೇವಪ್ಪ ಅವರ ಹಳೆಯ ಮನೆ, ಎ.ವಿ.ಕಮಲಮ್ಮ ಕಾಲೇಜು, ಚೇತನಾ ಹೋಟೆಲ್ ರಸ್ತೆ, ಹರಳೆಣ್ಣೆ ಕೊಟ್ರ ಬಸಪ್ಪ ವೃತ್ತ, ಶ್ರೀರಾಮ ಮಂದಿರ ಒಳಗೊಂಡ ಬಡಾವಣೆಯ ದಾಖಲೆಯಲ್ಲಿ ವಕ್ಫ್ ಆಸ್ತಿಯ ಹೆಸರು ಕಾಣಿಸುತ್ತಿದೆ. ಉಪವಿಭಾಗಧಿಕಾರಿ ನ್ಯಾಯಾಲಯದ ಆದೇಶದಂತೆ ದಾವಣಗೆರೆ ತಹಶೀಲ್ದಾರ್ 2015ರ ಮಾರ್ಚ್ 10ರಂದು ಖಾತೆ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಿಜೆಪಿ ನಾಯಕರ ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ದಾಖಲೆಗಳನ್ನು ಪರಿಶೀಲಿಸುವಂತೆ ಕೋರಿದೆ. ಈ ಬದಲಾವಣೆ ಹೇಗೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಸ್ಪಂದಿಸದಿದ್ದರೆ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.