ADVERTISEMENT

ದಾವಣಗೆರೆ | ‘ಸ್ಮಾರ್ಟ್‌’ ಆಗದ ಯೋಜನೆಗಳು: ಆರಂಭದಲ್ಲೇ ವಿಫಲ

ಸ್ಮಾರ್ಟ್‌ ಸಿಟಿ ಯೋಜನೆಯ ಇ–ಶೌಚಾಲಯ, ಎಲೆಕ್ಟ್ರಿಕ್‌ ಆಟೊಗೆ ಸಿಗದ ಯಶಸ್ಸು..

ಚಂದ್ರಶೇಖರ ಆರ್‌.
Published 28 ಜುಲೈ 2024, 6:49 IST
Last Updated 28 ಜುಲೈ 2024, 6:49 IST
<div class="paragraphs"><p>ಸ್ಮಾರ್ಟ್‌ ಸಿಟಿ ಯೋಜನೆಯಡಿ ನೀಡಲಾದ ಇ–ಆಟೊಗಳು ಮೂಲೆ ಸೇರಿರುವುದು </p></div>

ಸ್ಮಾರ್ಟ್‌ ಸಿಟಿ ಯೋಜನೆಯಡಿ ನೀಡಲಾದ ಇ–ಆಟೊಗಳು ಮೂಲೆ ಸೇರಿರುವುದು

   

–ಪ್ರಜಾವಾಣಿ ಚಿತ್ರಗಳು/ಸತೀಶ್‌ ಬಡಿಗೇರ 

ದಾವಣಗೆರೆ: ನಗರವನ್ನು ‘ಸ್ಮಾರ್ಟ್‌’ ಆಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಹಲವು ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿದ್ದರೂ, ಮಹತ್ವದ ಕೆಲ ಯೋಜನೆಗಳು ವೈಫಲ್ಯ ಕಂಡಿವೆ.

ADVERTISEMENT

ದೂರದೃಷ್ಟಿ ಇಲ್ಲದೇ, ಸಾರ್ವಜನಿಕ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಯೋಜನೆಗಳನ್ನು ರೂಪಿಸಿದ ಪರಿಣಾಮ ಕೆಲ ಯೋಜನೆಗಳು ಆರಂಭದಲ್ಲೇ ವಿಫಲವಾಗಿವೆ.

‘ಸ್ಮಾರ್ಟ್‌ ಸಿಟಿ’ ಯೋಜನೆ ಅನುಷ್ಠಾನದಲ್ಲಿ ದಾವಣಗೆರೆ ಉತ್ತಮ ಸ್ಥಾನ ಪಡೆದಿತ್ತು. ಇಷ್ಟಾದರೂ ಯೋಜನೆಗಳು ಹಳ್ಳ ಹಿಡಿದಿದ್ದು ಮಾತ್ರ ವಿಪರ್ಯಾಸ. ಕೆಲವೊಂದು ಪ್ರಾಯೋಗಿಕ (ಪೈಲಟ್) ಯೋಜನೆಗಳು ವಿಫಲವಾಗಿದ್ದು, ಈ ಯೋಜನೆಗಳಿಗೆ ಕೋಟ್ಯಂತರ ವೆಚ್ಚವಾಗಿದ್ದು, ನಿರ್ವಹಣೆ ಇಲ್ಲದೇ ಸೊರಗುತ್ತಿವೆ.

ಕೆಲ ಯೋಜನೆಗಳನ್ನು ಪ್ರಾಯೋಗಿಕವಾಗಿ ಕೈಗೊಂಡ ಪರಿಣಾಮ ಯೋಜನೆಗೆ ಮೀಸಲಿಡಬೇಕಾದ ಹೆಚ್ಚುವರಿ ಅನುದಾನ ಉಳಿದಿವೆ. ಈ ವಿಚಾರಕ್ಕಾದರೂ ಕೊಂಚ ಸಮಾಧಾನಪಡಬಹುದಾದರೂ ದೂರದೃಷ್ಟಿಯ ಕೊರತೆ ಎದ್ದುಕಾಣುತ್ತದೆ.

‘ಸ್ಮಾರ್ಟ್‌ ಸಿಟಿ’ ಯೋಜನೆಯಡಿ ಪರಿಚಯಿಸಲಾದ ಎಲೆಕ್ಟ್ರಿಕ್‌ ಆಟೊ, ಇ–ಶೌಚಾಲಯದಂತಹ ಯೋಜನೆ ನಿರೀಕ್ಷಿತ ಮಟ್ಟದ ಯಶಸ್ಸು ಕಂಡಿಲ್ಲ. ಬೈಸಿಕಲ್‌ ಶೇರಿಂಗ್‌ ಯೋಜನೆಯನ್ನೇ ಸ್ಥಗಿತಗೊಳಿಸಲು ಚಿಂತನೆ ನಡೆದಿದೆ.

ದಾವಣಗೆರೆಯ ಕೆಲ ಉದ್ಯಾನಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ‌ಇ–ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನಿರ್ವಹಣೆ ಕೊರೆತೆಯಿಂದ ಅವು ಹಾಳಾಗಿವೆ. ಕೆಲವೆಡೆ ಶೌಚಾಲಯಗಳು ಇರುವ ಬಗ್ಗೆ ಸಾರ್ವಜನಿಕರಿಗೇ ತಿಳಿದಿಲ್ಲ. ಹೀಗಾಗಿ ಅವುಗಳತ್ತ ಜನರೂ ಸುಳಿಯುತ್ತಿಲ್ಲ.

ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಉದ್ಯೋಗದ ದೃಷ್ಟಿಯಿಂದ ಫಲಾನುಭವಿಗಳಿಗೆ ನೀಡಿದ ಇ–ಆಟೊಗಳು ಮೂಲೆ ಸೇರಿವೆ. ಆಟೊಗಳ ಬ್ಯಾಟರಿಗಳಲ್ಲಿ ದೂಳು ತುಂಬಿವೆ. 

ಇ–ಶೌಚಾಲಯಗಳಿಗೆ ನಿರ್ವಹಣೆ ಕೊರತೆ:

ಸ್ವಚ್ಛ ನಗರಿಯ ಕನಸಿನೊಂದಿಗೆ ನಗರದಲ್ಲಿ ನಿರ್ಮಿಸಿರುವ ಇ–ಶೌಚಾಲಯಗಳು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ.

ನಗರದ ಪ್ರಮುಖ ಸ್ಥಳಗಳಲ್ಲಿ ₹ 6.40 ಕೋಟಿ ವೆಚ್ಚದಲ್ಲಿ ಇ–ಶೌಚಾಲಯ (ಭಾರತೀಯ–ವಿದೇಶಿ ಶೈಲಿ) ಹಾಗೂ 9 ಉದ್ಯಾನಗಳಲ್ಲಿ ₹ 1.54 ಕೋಟಿ ವೆಚ್ಚದಲ್ಲಿ 18 ಇ–ಶೌಚಾಲಯಗಳನ್ನು ನಿರ್ಮಿಸಲಾಗಿದೆ.  

ನಿರ್ವಹಣೆ ಸಮಸ್ಯೆಯ ಜೊತೆಗೆ ನೀರು ಪೂರೈಕೆಯಾಗದ ಕಾರಣ ಅವು ಹದಗೆಟ್ಟಿವೆ. ಜನರು ಇವುಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ಕೆಲ ಶೌಚಾಲಯಗಳಲ್ಲಿ ನಾಣ್ಯ ಹಾಕಿದರೂ ಬಾಗಿಲು ತೆರೆಯುತ್ತಿಲ್ಲ. ಇದರಿಂದ ಬೇಸತ್ತಿರುವ ಜನ, ಅವುಗಳತ್ತ ಮುಖ ಮಾಡುತ್ತಿಲ್ಲ. 

ಇನ್ನು ಕೆಲವೆಡೆ ಜನರೇ ಅವುಗಳನ್ನು ಹಾಳು ಮಾಡುತ್ತಿದ್ದಾರೆ. ನಾಣ್ಯ ಬಳಸಿ ಉಪಯೋಗಿಸಬೇಕಾದ ಶೌಚಾಲಯಗಳಿಗೆ ಕೆಲವರು ರಬ್ಬರ್‌ ಬುಷ್‌ ಹಾಕುತ್ತಿದ್ದಾರೆ. ಇನ್ನು ಕೆಲ ಖದೀಮರು ಶೌಚಾಲಯಕ್ಕೆ ಅಳವಡಿಸಿರುವ ನಾಣ್ಯದ ಪೆಟ್ಟಿಗೆಗಳನ್ನು ಬಿಚ್ಚಿ ಹಣ ದೋಚುತ್ತಿದ್ದಾರೆ. ಇದೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. 

ಇ–ಆಟೊಗಳಿಗೆ ಹತ್ತುವವರೇ ಇಲ್ಲ:

ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಉದ್ಯೋಗದ ದೃಷ್ಟಿಯಿಂದ ಫಲಾನುಭವಿಗಳಿಗೆ ನೀಡಿದ ಇ–ಆಟೊಗಳು ಉದ್ಘಾಟನೆಯಾದ ದಿನದಿಂದಲೇ ಮೂಲೆ ಸೇರಿವೆ.

ಕಳಪೆ ಗುಣಮಟ್ಟದಿಂದಾಗಿ ಆಟೊಗಳು ಸರಿಯಾಗಿ ಓಡುವುದಿಲ್ಲ. ಸಣ್ಣ ಗುಂಡಿ ಬಂದರೂ ವಾಲುತ್ತವೆ. ಹಿಂಬದಿ ಕುಳಿತವರನ್ನು ಮೇಲಕ್ಕೆ ಎತ್ತಿ ಹಾಕುತ್ತವೆ ಎಂಬುದು ಆಟೊ ಚಾಲಕರ ದೂರು. 

ಈ ಕಾರಣ ಜನರು ಇ–ಆಟೊ ಹತ್ತುತ್ತಲೇ ಇಲ್ಲ. ಇದರಿಂದ ಚಾಲಕರು ಹೈರಾಣಾಗಿದ್ದು, ವಾಪಸ್‌ ಪಡೆಯುವಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ದುಂಬಾಲು ಬೀಳುತ್ತಿದ್ದಾರೆ.  

ಸ್ಮಾರ್ಟ್‌ ಸಿಟಿಯಿಂದ ಎರಡು ಹಂತಗಳಲ್ಲಿ ಇ–ಆಟೊಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಮೊದಲ ಹಂತದಲ್ಲಿ 20 ಹಾಗೂ ಎರಡನೇ ಹಂತದಲ್ಲಿ 70 ಆಟೊಗಳಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಶೇ 40ರಷ್ಟು ಹಣ ಪಾವತಿಸಿ ಆಟೊಗಳನ್ನು ತಂದಿದ್ದು, 9 ಆಟೊಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಉಳಿದ 11 ಆಟೊಗಳು ಶೋರೂಂನಲ್ಲೇ ಉಳಿದಿವೆ. 

ಇಂತಹ ಇ–ಆಟೊಗಳಿಗೆ ರೂಪಿಸಲಾದ ಕ್ರಿಯಾಯೋಜನೆಯ ಮೊತ್ತ ₹ 42 ಲಕ್ಷ. 

‘₹ 1.81 ಲಕ್ಷದ ಆಟೊವನ್ನು ಸಬ್ಸಿಡಿಯಲ್ಲಿ ₹ 72,400ಕ್ಕೆ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಕೊಡಿಸಿದರು. ಆಟೊ ಟ್ರಯಲ್‌ ಓಡಿಸಲು ಕೇಳಿದರೂ ಕಂಪನಿಯಾಗಲಿ, ಸ್ಮಾರ್ಟ್‌ಸಿಟಿಯಾಗಲಿ ನೀಡಲಿಲ್ಲ. 3 ಗಂಟೆ ಚಾರ್ಜ್‌ ಆದರೆ 80 ಕಿ.ಮೀ. ಬರುತ್ತದೆ ಎಂದು 35 ಕಿ.ಮೀ. ಮೈಲೇಜ್‌ ಸಿಗದ ಆಟೊ ನೀಡಿದ್ದಾರೆ. ಕಳಪೆಯಾದ ಕಾರಣ ಜನರೂ ಆಟೊ ಹತ್ತುತ್ತಿಲ್ಲ’ ಎಂದು ಆಟೊ ಚಾಲಕ ಕೊಟ್ರೇಶ್‌ ಅಳಲು ತೋಡಿಕೊಂಡರು.

‘ಮಂಗಳೂರಿನಲ್ಲಿ ಸ್ಮಾರ್ಟ್‌ ಸಿಟಿಯವರು ಗುಣಮಟ್ಟದ ಆಟೊ ನೀಡಿದ್ದಾರೆ. ಆದರೆ ನಮಗೆ ಮಾತ್ರ ಕಳಪೆ ಆಟೊ ಕೊಟ್ಟಿದ್ದಾರೆ. ರಸ್ತೆಯಲ್ಲಿನ ಹಂಪ್ಸ್‌ಗಳ ಮೇಲೆ ಸಂಚರಿಸುವಾಗಲೂ ಅವು ಅಲುಗಾಡುತ್ತವೆ. ಒಮ್ಮೆ ಹತ್ತಿದ ಜನರು ಮತ್ತೊಮ್ಮೆ ಈ ಆಟೊದತ್ತ ಸುಳಿಯುತ್ತಿಲ್ಲ’ ಎಂದು ಚಾಲಕ ಸಿದ್ದರಾಮ ಆರೋಪಿಸಿದರು.

ದಾವಣಗೆರೆಯ ಎಸ್.ಎಸ್ ಬಡಾವಣೆಯ ಗಂಗೂಬಾಯಿ ಹಾನಗಲ್ ಉದ್ಯಾನದಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಇ–ಶೌಚಾಲಯಗಳ ದುಃಸ್ಥಿತಿ 
ದಾವಣಗೆರೆಯ ವಿದ್ಯಾನಗರದ ಉದ್ಯಾನದಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಇ–ಶೌಚಾಲಯಗಳು
ದಾವಣಗೆರೆಯ ಕಾಸಲ್‌ ಶ್ರೀನಿವಾಸ ಶೇಷ್ಠಿ ಉದ್ಯಾನದಲ್ಲಿ ಸ್ಮಾರ್ಟ್ ಸಿಟಿ ಅಡಿ ನಿರ್ಮಿಸಿರುವ ಇ–ಶೌಚಾಲಯಗಳು
ಸ್ಮಾರ್ಟ್‌ ಸಿಟಿ ಯೋಜನೆಯಡಿ ನೀಡಲಾದ ಇ–ಆಟೊ ಮೂಲೆ ಸೇರಿರುವುದು 

Highlights -

Cut-off box - ಇ–ಆಟೊ ವಿವಾದ ನ್ಯಾಯಾಲಯದಲ್ಲಿ ‘ಇ–ಶೌಚಾಲಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಟೆಂಡರ್‌ ಪಡೆದ ಏಜೆನ್ಸಿಗೆ ಸೂಚಿಸಲಾಗಿದೆ. ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸುವಂತೆ ನಿರ್ದೇಶಿಸಲಾಗಿದೆ’ ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ತಿಳಿಸಿದರು. ಎಲೆಕ್ಟ್ರಿಕ್‌ ಆಟೊ (ಇ–ಆಟೊ)ಗಳ ವಿವಾದ ನ್ಯಾಯಾಲಯದಲ್ಲಿದೆ. ಆಟೊಗಳ ಗುಣಮಟ್ಟ ಸರಿಯಿಲ್ಲ ಎಂದು ಚಾಲಕರು ದೂರಿದ್ದಾರೆ. ಹೀಗಾಗಿ ಆಟೊ ಪೂರೈಸಿದ ಏಜೆನ್ಸಿ ಹಾಗೂ ಕಂಪನಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.  ‘9 ಮಂದಿ ಫಲಾನುಭವಿಗಳು ಗುಣಮಟ್ಟ ಸರಿ ಇಲ್ಲ ಹಾಗೂ ಮೈಲೇಜ್ ಜಾಸ್ತಿ ಕೊಡುವುದಿಲ್ಲ ಎಂಬ ಕಾರಣ ನೀಡಿ ಆಟೊಗಳನ್ನು ವಾಪಸ್‌ ಕೊಡಲು ಮುಂದಾಗಿದ್ದಾರೆ. ಕಂಪನಿಯವರಿಗೂ ಈ ಕುರಿತ ಮಾಹಿತಿ ನೀಡಿದ್ದೇವೆ. ನ್ಯಾಯಾಲಯದ ಹಂತದಲ್ಲಿ ಇರುವುದರಿಂದ ಏನು ಹೇಳಲು ಆಗುವುದಿಲ್ಲ. ಕೋರ್ಟ್ ಆದೇಶದ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.

Cut-off box - ‘ನಮ್ಮ ಗೋಳು ಕೇಳುವವರಿಲ್ಲ’ ‘ಸಾಲ ಮಾಡಿ ಇ–ಆಟೊ ಪಡೆದಿದ್ದೇವೆ. ಆಟೊಗಳ ಗುಣಮಟ್ಟ ಸರಿ ಇಲ್ಲದ ಕಾರಣ ಜನರು ಹತ್ತುತ್ತಿಲ್ಲ. ಯಾರೂ ಬರದ ಕಾರಣ ಮನೆ ಮುಂದೆ ನಿಲ್ಲಿಸಿದ್ದೇವೆ. ಅವು ಮಳೆ ಬಿಸಿಲಿಗೆ ಹಾಳಾಗುತ್ತಿವೆ. ಕನಿಷ್ಠ ಆಟೊಗಳನ್ನು ಪಡೆದು ಗೋದಾಮುಗಳಲ್ಲಿ ಇಟ್ಟುಕೊಳ್ಳಿ ಎಂದು ಮನವಿ ಮಾಡಿದರೂ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಾಲ ಕಟ್ಟಲು ಪರದಾಡುವಂತಾಗಿದೆ. ಬ್ಯಾಂಕ್‌ನವರು ಸಾಲ ಕಟ್ಟುವಂತೆ ಪೀಡಿಸುತ್ತಿದ್ದಾರೆ. ಬೇರೆಡೆಯೂ ಸಾಲ ಸಿಗುತ್ತಿಲ್ಲ. ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಆಟೊ ಚಾಲಕ ಕೊಟ್ರೇಶ್‌ ದೂರಿದರು. ‘ಆಟೊಗಳನ್ನು ಟ್ರಯಲ್‌ ಓಡಿಸಲೂ ಕೊಡಲಿಲ್ಲ. ಆಗಲಾದರೂ ಏಜೆನ್ಸಿಯ ಹುಳುಕು ಗೊತ್ತಾಗುತ್ತಿತ್ತು. ಆಟೊಗಳ ಸೀಟುಗಳು ಚಿಕ್ಕದಾಗಿವೆ. ಬಿಡಿ ಭಾಗಗಳು ಗುಣಮಟ್ಟದಿಂದ ಕೂಡಿಲ್ಲ. ದಾವಣಗೆರೆಯಲ್ಲಿ ಈ ಆಟೊಗಳ ಬಿಡಿ ಭಾಗಗಳು ಸಿಗುವುದಿಲ್ಲ. ಕೂಡಲೇ ಆಟೊಗಳನ್ನು ವಾಪಸ್ ಪಡೆದುಕೊಂಡು ಸಾಲ ರದ್ದು ಮಾಡಬೇಕು’ ಎಂದು ಅವರು ಮನವಿ ಮಾಡಿದರು. ‘ಆಟೊ ನೀಡಿದ ಏಜೆನ್ಸಿ ಹಾಗೂ ಸ್ಮಾರ್ಟ್‌ ಸಿಟಿಯ ನಡುವಿನ ವಿವಾದ ನ್ಯಾಯಾಲಯದಲ್ಲಿದೆ. ಇದಕ್ಕೆ ನಾವು ಹೊಣೆಯಲ್ಲ. ನಮ್ಮನ್ನು ಕರೆದು ಆಟೊ ನೀಡಿದವರು ಸ್ಮಾರ್ಟ್‌ ಸಿಟಿಯವರು. ಅವರು ಈಗ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶೀಘ್ರ ನಮ್ಮ ಸಮಸ್ಯೆ ಬಗೆಹರಿಸಬೇಕು’ ಎಂಬುದು ಆಟೊ ಚಾಲಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.