ದಾವಣಗೆರೆ: ಜಮೀನನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿದ್ದ ಆರ್ ಟಿ ಐ ಕಾರ್ಯಕರ್ತರೊಬ್ಬರು ಪೊಲೀಸರ ವಶದಲ್ಲಿದ್ದಾಗ ಸೇತುವೆ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಹರೀಶ್ ಎಚ್. ಆರ್. (40) ಮೃತರು. ನಕಲಿ ದಾಖಲೆ ಸೃಷ್ಟಿಸಿರುವ ಆರೋಪದ ಮೇರೆಗೆ ಗಾಂಧಿನಗರ ಠಾಣೆಯ ಪೊಲೀಸರು ಹರೀಶ್ ಅವರನ್ನು ತಾಲ್ಲೂಕಿನ ಕಾಕನೂರಿನಿಂದ ಗಾಂಧೀನಗರ ಠಾಣೆಗೆ ಕರೆತರುವ ವೇಳೆ ದಾವಣಗೆರೆ ಹೊರವಲಯದ ತೋಳಹುಣಸೆಯ ಸಮೀಪ ಮೇಲ್ಸೇತುವೆಯ ಬಳಿ ಬರುತ್ತಿದ್ದಾಗ ಹರೀಶ್ ಕಾರಿನಿಂದ ಜಿಗಿದು ಸರ್ವೀಸ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಗಾಯಗೊಂಡ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಕೊಲೆ ಎಂದು ಹರೀಶ್ ಅವರ ಪತ್ನಿ ಆರೋಪಿಸಿದ್ದಾರೆ.
ಗಾಂಧಿನಗರ ಎಸ್ಐ ಕೃಷ್ಣಪ್ಪ, ಕಾನ್ಸ್ ಸ್ಟೆಬಲ್ ದೇವರಾಜ್, ಕಾರು ಚಾಲಕ ಇರ್ಷಾದ್ ಅವರು ನನ್ನ ಪತಿಯನ್ನು ದೌರ್ಜನ್ಯದಿಂದ ಎಳೆದುಕೊಂಡು ಕೊಲೆ ಮಾಡಿದ್ದಾರೆ. ಈ ಕೊಲೆಯ ಹಿಂದೆ ಕಣಿವೆ ಬಿಳಚಿಯ ಕೆ.ಬಾಬುರಾವ್ ಅವರ ಕೈವಾಡವಿದೆ ಎಂದು ಹರೀಶ್ ಅವರ ಪತ್ನಿ ಲತಾ ಅವರು ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.