ದಾವಣಗೆರೆ: ಇಲ್ಲಿನ ಮಂಡಕ್ಕಿ ಬಟ್ಟಿಗಳನ್ನು ಬೇರೆಡೆ ಸ್ಥಳಾಂತರಿಸಿ ಆಧುನಿಕ ತಂತ್ರಜ್ಞಾನದಡಿ ಮಂಡಕ್ಕಿ ತಯಾರಿಸಿ ಬಟ್ಟಿ ಕಾರ್ಮಿಕರ ಬದುಕು ಹಸನಾಗಿಸುವ ಮಹಾತ್ವಾಕಾಂಕ್ಷಿ ಯೋಜನೆ ವಿಫಲವಾಗಿದೆ.
ಹಳೆ ದಾವಣಗೆರೆಯ ಮಧ್ಯದಲ್ಲಿರುವ ಮಂಡಕ್ಕಿ ಬಟ್ಟಿಗಳನ್ನು ಸ್ಥಳಾಂತರಿಸಿ, ದೂಳು, ವಾಯುಮಾಲಿನ್ಯ ತಗ್ಗಿಸುವ ದಶಕಗಳ ಬೇಡಿಕೆಗೆ ಸಿಕ್ಕ ಮನ್ನಣೆಯ ಪರಿಣಾಮ ಮಂಡಕ್ಕಿ ಬಟ್ಟಿಗಳನ್ನು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಅಭಿವೃದ್ಧಿ ಪಡಿಸುವ ‘ಪೈಲಟ್’ ಯೋಜನೆ (ಪ್ರಾಯೋಗಿಕ) ಕೈಗೆತ್ತಿಕೊಳ್ಳಲಾಗಿತ್ತು.
ಆದರೆ, ಇದಕ್ಕೆ ಮಂಡಕ್ಕಿ ಬಟ್ಟಿ ಮಾಲೀಕರಿಂದಲೇ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಬಟ್ಟಿ ಮಾಲೀಕರು, ಕಾರ್ಮಿಕರು, ಆ ಭಾಗದ ನಿವಾಸಿಗಳ ಅಭಿಪ್ರಾಯ ಆಧರಿಸಿ ಯೋಜನೆ ರೂಪುಗೊಳ್ಳದ ಕಾರಣ ಯೋಜನೆಯೇ ವಿಫಲವಾಗಿದೆ.
ತಂತ್ರಜ್ಞಾನದ ಮೂಲಕ ಅಭಿವೃದ್ಧಿ, ಆಧುನಿಕತೆಗೆ ಬಟ್ಟಿಗಳೂ ತೆರೆದುಕೊಳ್ಳಲಿಲ್ಲ. ಅಲ್ಲಿನ ನಿವಾಸಿಗಳು, ಬಟ್ಟಿ ಕಾರ್ಮಿಕರು, ಮಾಲೀಕರೂ ಮನಸ್ಸು ಮಾಡಲಿಲ್ಲ. ಹೀಗಾಗಿ ಮಹತ್ವಾಕಾಂಕ್ಷಿ ಯೋಜನೆಯೊಂದು ವೈಫಲ್ಯ ಕಂಡಿದೆ.
ಆ ಯೋಜನೆ ವಿಫಲವಾದ ಕಾರಣ ಮಂಡಕ್ಕಿ ಬಟ್ಟಿಗಳ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಕಾಮಗಾರಿ ಕೈಗೊಂಡು, ಸದ್ಯ ಕಾಂಕ್ರೀಟ್ ರಸ್ತೆ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಕೊಂಚ ಸಮಾಧಾನದ ವಿಷಯ.
‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಆಧುನಿಕ ಯಂತ್ರೋಪಕರಣ, ಗ್ಯಾಸಿಫೈರ್, ಆಧುನಿಕ ಒಲೆ, ಮಂಡಕ್ಕಿ ಬಟ್ಟಿ ತಯಾರಿಕಾ ಘಟಕ (ಶೆಡ್‌ಗಳ ನಿರ್ಮಾಣ), 2 ಸುಸಜ್ಜಿತ ಶೌಚಾಲಯ ಸೇರಿ ಒಟ್ಟು ₹ 1.37 ಕೋಟಿ ವೆಚ್ಚದಲ್ಲಿ ‘ಪೈಲಟ್’ ಯೋಜನೆಯ ಭಾಗವಾಗಿ ಕಾಮಗಾರಿ ಕೈಗೊಳ್ಳಲಾಗಿತ್ತು.
ಆದರೆ, ಆ ಯೋಜನೆ ಸಾಕಾರಗೊಳ್ಳದ ಕಾರಣ ಅದೇ ಪ್ರದೇಶದ ಅಭಿವೃದ್ಧಿಗಾಗಿ ಮತ್ತೆ ಅಂದಾಜು ₹ 18 ಕೋಟಿ ವೆಚ್ಚದಲ್ಲಿ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ, ಇ–ಶೌಚಾಲಯ, ಉದ್ಯಾನದಲ್ಲಿ ಜಿಮ್ ಸಲಕರಣೆ ಅಳವಡಿಕೆಯಂತಹ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
ಪ್ರಾಯೋಗಿಕ ಯೋಜನೆ ವಿಫಲವಾದರೂ ಸದ್ಯ ಹಳೆ ದಾವಣಗೆರೆಯ ಮಂಡಕ್ಕಿ ಬಟ್ಟಿ ಪ್ರದೇಶಗಳು ಈ ನೆಪದಲ್ಲಾದರೂ ಕಾಂಕ್ರೀಟ್ ರಸ್ತೆ, ಶೌಚಾಲಯಗಳನ್ನು ಕಂಡಿವೆ ಎಂದು ಮಂಡಕ್ಕಿ ಬಟ್ಟಿ ಕಾರ್ಮಿಕರು ಕೊಂಚ ಸಮಾಧಾನ ಪಡುತ್ತಾರೆ.
ಅತಿ ಹೆಚ್ಚು ಬಟ್ಟಿಗಳು:
ಮಂಡಕ್ಕಿ ಬಟ್ಟಿ ಹೆಸರು ಬಂದಾಗಲೆಲ್ಲಾ ಜಿಲ್ಲೆಯ ಹೆಸರು ಪ್ರಸ್ತಾಪವಾಗುವುದು ಸಾಮಾನ್ಯ. ಇಲ್ಲಿ ಅಂದಾಜು 40 ಎಕರೆ ಪ್ರದೇಶದಲ್ಲಿ ಮಂಡಕ್ಕಿ ಬಟ್ಟಿಗಳಿವೆ. ನಗರದಲ್ಲಿ ತಯಾರಾದ ಮಂಡಕ್ಕಿ ವಿದೇಶಗಳಿಗೂ ರಫ್ತಾಗುತ್ತದೆ. ನಗರದಲ್ಲೇ 1,500ಕ್ಕೂ ಹೆಚ್ಚು ಮಂಡಕ್ಕಿ ಬಟ್ಟಿಗಳಿದ್ದು, 6,000ಕ್ಕೂ ಹೆಚ್ಚು ಕಾರ್ಮಿಕರು ಇದ್ದಾರೆ. ಈಗಿನ ಜಾಗ ಕಿಷ್ಕಿಂಧೆಯಂತಾಗಿದ್ದರೂ ಅಧುನಿಕತೆಗೆ ಒಗ್ಗಿಕೊಳ್ಳದಿರುವುದು ಮಾತ್ರ ವಿಪರ್ಯಾಸ.
ಬೆಂಕಿ ಹಾಕಿ ಮಂಡಕ್ಕಿ ತಯಾರಿಸುವುದರಿಂದ ಹೆಚ್ಚಿನ ಸಮಸ್ಯೆಗಳು ಉದ್ಭವಿಸುವ ಕಾರಣ ವಿದ್ಯುತ್ ಚಾಲಿತ ಯಂತ್ರಗಳಿಂದ ಮಂಡಕ್ಕಿ ಬಟ್ಟಿ ಸುಡುವ ಪ್ರಾಯೋಗಿಕ ಪರೀಕ್ಷೆ ಕೂಡ ನಡೆದಿತ್ತು. ಆದರೆ ಅದೂ ಕಾರ್ಯರೂಪಕ್ಕೆ ಬರಲಿಲ್ಲ.
ಹಸನಾಗದ ಬದುಕು:
ದಶಕ ಕಳೆದರೂ ಮಂಡಕ್ಕಿ ಬಟ್ಟಿ ಕಾರ್ಮಿಕರ ಬದುಕು ಹಸನಾಗಿಲ್ಲ. ಕಾರ್ಮಿಕರಿಗೆ ಭದ್ರತೆ ಇಲ್ಲ. ಸುರಕ್ಷತಾ ಸಾಧನಗಳಿಲ್ಲ. ಈ ಬಗ್ಗೆ ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬುದು ಕಾರ್ಮಿಕರ ಅಳಲು.
ಹೊಗೆಯಲ್ಲಿ, ದೂಳಿನಲ್ಲಿ ಕೆಲಸ ಮಾಡುವ ಕಾರಣ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗುವುದು ಹೆಚ್ಚು. ಆದರೆ, ಅವರಿಗೆ ಯಾವುದೇ ಆರೋಗ್ಯ ಭದ್ರತೆಗಳಿಲ್ಲ ಎಂದು ದೂರುತ್ತಾರೆ ಕಾರ್ಮಿಕ ಸಂಘಟನೆಯ ರೆಹಮಾನ್.
ಹೊಂದಿಕೊಳ್ಳದ ಜನರು:
‘ಸಮಸ್ಯೆ ಆಗಬಹುದು ಎಂಬ ಕಾರಣಕ್ಕೆ ಮಂಡಕ್ಕಿ ಬಟ್ಟಿಗಳ ಆಧುನೀಕರಣವನ್ನು ಒಮ್ಮೆಲೇ ಹೆಚ್ಚು ವೆಚ್ಚದಲ್ಲಿ ಮಾಡುವ ಬದಲು ಕಡಿಮೆ ಅನುದಾನದಲ್ಲಿ ಪ್ರಾಯೋಗಿಕವಾಗಿ ಮಾಡಿದ್ದೆವು. ಆದರೂ ಅದು ಯಶಸ್ಸು ಕಾಣಲಿಲ್ಲ. ವಿದ್ಯುತ್ ಬಳಸಿ ಆಧುನಿಕವಾಗಿ ಮಂಡಕ್ಕಿ ತಯಾರಿಕೆ ಕೈಗೊಂಡಿದ್ದೆವು. ಆದರೆ ಮಂಡಕ್ಕಿ ಬೆಂದ ನಂತರದ ಗುಣಮಟ್ಟ, ರುಚಿ ಗ್ರಾಹಕರಿಗೆ ಒಪ್ಪಿಗೆ ಆಗಲಿಲ್ಲ. ಮಾಲೀಕರು, ಕಾರ್ಮಿಕರು, ಜನರು ಇದಕ್ಕೆ ತೆರೆದುಕೊಳ್ಳಲಿಲ್ಲ’ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು ಬೇಸರಿಸಿದರು.
‘ಪೈಲಟ್ ಯೋಜನೆ ವಿಫಲವಾದ ಕಾರಣ ಮಂಡಕ್ಕಿ ಬಟ್ಟಿ ಪ್ರದೇಶದಲ್ಲಿ ಚರಂಡಿ, ಕಾಂಕ್ರೀಟ್ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನದಲ್ಲಿ ಜಿಮ್ ಸಲಕರಣೆ ಅಳವಡಿಕೆಯಂತಹ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಸ್ವಲ್ಪ ಸುಧಾರಣೆ ಕಂಡಿದೆ’ ಎಂದು ಅವರು ಯೋಜನೆಯಿಂದಾದ ಇತರೆ ಯಶಸ್ಸಿನ ಬಗ್ಗೆ ಸಂತಸ ಹಂಚಿಕೊಂಡರು.
ಸ್ಥಳಾಂತರ ವಿವಾದ; ಪ್ರಸ್ತಾವ ನನೆಗುದಿಗೆ
ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಡಕ್ಕಿ ಬಟ್ಟಿಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಕೆಲ ಮಾಲೀಕರು ಒಪ್ಪಿದರೆ ಇನ್ನು ಕೆಲವರು ಇದಕ್ಕೆ ಒಪ್ಪಲಿಲ್ಲ. ಈ ಕಾರಣವೂ ಮಂಡಕ್ಕಿ ಬಟ್ಟಿಗಳ ಆಧುನೀಕರಣ ಸಾಧ್ಯವಾಗಲಿಲ್ಲ. ನಗರದ ಮಧ್ಯಭಾಗದ ಮಂಡಕ್ಕಿ ಬಟ್ಟಿಗಳನ್ನು ಬಾತಿ ಬಳಿಯ ಕೌಡಿ ಕ್ಯಾಂಪ್ ಹಾಗೂ ಶಾಮನೂರು ಬೈಪಾಸ್ ರಸ್ತೆಯ ಆನಗೋಡು ಮಾರ್ಗದಲ್ಲಿ ಸ್ಥಳಾಂತರಿಸುವ ಸಂಬಂಧ ಸ್ಥಳ ಪರಿಶೀಲನೆ ಆಗಿತ್ತು. ಆದರೆ ಇವು ನಗರದಿಂದ ದೂರ ಎನ್ನುವ ಕಾರಣ ಆ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ‘ಮಂಡಕ್ಕಿ ಬಟ್ಟಿಗಳನ್ನು ಸ್ಥಳಾಂತರಿಸುವ ಗೊಂದಲದ ಕಾರಣಕ್ಕೆ ಯೋಜನೆ ಸಾಕಾರಗೊಳ್ಳಲಿಲ್ಲ. ಸ್ಥಳಾಂತರಕ್ಕೆ ನಮ್ಮ ಒಪ್ಪಿಗೆ ಇತ್ತು. ಇದರಿಂದ ಕೆಲವರ ಜೀವನವಾದರೂ ಹಸನಾಗುತ್ತಿತ್ತು. ನಗರದ ಹೊರವಲಯಕ್ಕೆ ಸ್ಥಳಾಂತರಿಸಿದರೆ ದೂರ ಆಗಲಿದೆ ಅಲ್ಲಿ ಘಟಕ ನಡೆಸುವುದು ಕಷ್ಟವೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು’ ಎಂದು ಮಂಡಕ್ಕಿ ಬಟ್ಟಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಅರ್ಷದ್ ಅಹಮ್ಮದ್ ಬೇಸರ ವ್ಯಕ್ತಪಡಿಸಿದರು. ‘ಸ್ಮಾರ್ಟ್ ಸಿಟಿ ಯೋಜನೆಯಡಿ ಆಧುನೀಕರಣಕ್ಕೂ ವಿರೋಧ ಕೇಳಿಬಂತು. ಆಧುನೀಕರಣಗೊಳಿಸಿದರೆ ನಮಗೆ ಒಗ್ಗಿಕೊಳ್ಳಲು ಆಗುವುದಿಲ್ಲ. ವಿದ್ಯುತ್ ಸೇರಿದಂತೆ ಹಲವು ಯಂತ್ರೋಪಕರಣಗಳನ್ನು ನಡೆಸುವುದು ವೆಚ್ಚದಾಯಕ ಎಂದು ಕೆಲ ಮಾಲೀಕರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಕಾರಣ ಯೋಜನೆ ವಿಫಲವಾಗಿದೆ’ ಎಂದು ಅವರು ವಾಸ್ತವ ತೆರೆದಿಟ್ಟರು.
‘ರಸ್ತೆ ಕಾಮಗಾರಿ ಸಮಾಧಾನದ ಸಂಗತಿ’
‘ಹಲವು ಕಾರಣಗಳಿಂದ ಮಂಡಕ್ಕಿ ಬಟ್ಟಿಗಳ ಅಭಿವೃದ್ಧಿ ಕಾಮಗಾರಿ ವಿಫಲವಾಗಿದೆ. ಆದರೆ ಸದ್ಯ ಅಲ್ಲಿ ಕಾಂಕ್ರೀಟ್ ರಸ್ತೆಗಳು ಆಗಿದ್ದು ಸಮಧಾನದ ಸಂಗತಿ’ ಎಂದು ಆಮ್ ಆದ್ಮಿ ಪಾರ್ಟಿಯ ಮುಖಂಡ ಆದಿಲ್‌ಖಾನ್ ಹೇಳಿದರು. ‘ಆಧುನೀಕರಿಸಿದರೆ ಅದು ಲಾಭದಾಯಕ ಅಲ್ಲ. ನಗರದಿಂದ ಆಚೆ ಸ್ಥಳಾಂತರಕ್ಕೆ ಕಾರ್ಮಿಕರು ಹಿಂದೇಟು ಹಾಕುತ್ತಾರೆ ಎಂಬ ಕಾರಣಕ್ಕೆ ಯೋಜನೆ ಸಾಕಾರಗೊಳ್ಳಲಿಲ್ಲ. ಮಂಡಕ್ಕಿ ಬಟ್ಟಿ ಮಾಲೀಕರೇ ಒಪ್ಪದಿದ್ದಾಗ ಕಾರ್ಮಿಕರೂ ಅಸಹಾಯಕರು. ಕಾರ್ಮಿಕರ ಪರ ದನಿ ಎತ್ತುವವರೂ ಇಲ್ಲ. ಇಂತಹ ಹಲವು ಕಾರಣಗಳಿಂದ ಮಂಡಕ್ಕಿ ಬಟ್ಟಿಗಳ ಅಭಿವೃದ್ಧಿ ಸಾಧ್ಯವಾಗಿಲ್ಲ’ ಎಂದು ಅವರು ಮಾತು ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.