ADVERTISEMENT

ದಾವಣಗೆರೆ | ಸಿಗದ ಮೂಲಸೌಲಭ್ಯ; ಮತದಾನ ಬಹಿಷ್ಕಾರಕ್ಕೆ ನಿರ್ಧಾರ

44ನೇ ವಾರ್ಡ್‌ ವ್ಯಾಪ್ತಿಯ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಗಳ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 5:21 IST
Last Updated 15 ಏಪ್ರಿಲ್ 2024, 5:21 IST
ದಾವಣಗೆರೆಯ 44ನೇ ವಾರ್ಡ್‌ ವ್ಯಾಪ್ತಿಯ ಮಹಾಲಕ್ಷ್ಮಿ ಬಡಾವಣೆಯ ನಾಗರಿಕರು ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡರು
ದಾವಣಗೆರೆಯ 44ನೇ ವಾರ್ಡ್‌ ವ್ಯಾಪ್ತಿಯ ಮಹಾಲಕ್ಷ್ಮಿ ಬಡಾವಣೆಯ ನಾಗರಿಕರು ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡರು   

ದಾವಣಗೆರೆ: ‘ಸಮರ್ಪಕ ಕುಡಿಯುವ ನೀರು ಪೂರೈಕೆ, ಚರಂಡಿ ವ್ಯವಸ್ಥೆ, ಮುಖ್ಯರಸ್ತೆಗೆ ಡಾಂಬರು, ಬೀದಿದೀಪ ಅಳವಡಿಕೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ, ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡುತ್ತಿದ್ದೇವೆ’ ಎಂದು ನಗರದ 44ನೇ ವಾರ್ಡ್‌ ವ್ಯಾಪ್ತಿಯ ಮಹಾಲಕ್ಷ್ಮಿ ಬಡಾವಣೆಯ ನಿವಾಸಿಗಳು ತಿಳಿಸಿದರು.

‘ಮಹಾಲಕ್ಷ್ಮಿ ಬಡಾವಣೆ ನಾಗರಿಕರ ಹಿತರಕ್ಷಣಾ ಸಮಿತಿ’ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಬಡಾವಣೆಯ ನಿವಾಸಿಗಳು ಈ ಬಗ್ಗೆ ಒಮ್ಮತದ ನಿರ್ಧಾರ ಕೈಗೊಂಡರು.

‘ಮಕ್ಕಳನ್ನು ಶಾಲೆಗೆ ಕಳಿಸಲು ಸರಿಯಾದ ರಸ್ತೆ ಇಲ್ಲ. ಕುಡುಕರ ಹಾವಳಿ ಮಿತಿಮೀರಿದ್ದು, ಮಹಿಳೆಯರು ಸಂಜೆ ಮನೆ ಬಿಟ್ಟು ಹೊರಗೆ ಹೋಗದಂತಹ ಸ್ಥಿತಿ‌ ಇದೆ. ಸರ್ಕಾರಕ್ಕೆ ವಿವಿಧ ತೆರಿಗೆಗಳನ್ನು ಕಟ್ಟುತ್ತಿದ್ದರೂ, ನಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ’ ಎಂದು ನಿವಾಸಿಗಳು ದೂರಿದರು.

ADVERTISEMENT

‘ಬಡಾವಣೆ ನಿರ್ಮಾಣವಾಗಿ 25 ವರ್ಷಗಳಾಗಿದ್ದರೂ, ಯಾವುದೇ ಅಭಿವೃದ್ಧಿ ಕಂಡಿಲ್ಲ. ಇಲ್ಲಿ ನೆಲೆಸಿರುವ ಹಲವು ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಪಾಲಿಕೆ, ಜಿಲ್ಲಾಧಿಕಾರಿ ಕಚೇರಿ, ಸ್ಮಾರ್ಟ್ ಸಿಟಿಗೆ ಮನವಿ ಕೊಟ್ಟಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಮತದಾನ ಬಹಿಷ್ಕರಿಸುವ ನಿರ್ಧಾರವನ್ನು ಒಮ್ಮತದಿಂದ ಕೈಗೊಳ್ಳಲಾಗಿದೆ’ ಎಂದು ಸಮಿತಿಯ ಅಧ್ಯಕ್ಷ ಪ್ರಕಾಶ್ ಕುಮಾರ್ ಎಸ್‌.ಪಿ. ತಿಳಿಸಿದರು.

ಮತದಾನ ಬಹಿಷ್ಕರಿಸುವ ಬಗ್ಗೆ ಬಡಾವಣೆಯ ವಿವಿಧೆಡೆ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.