ತರೀಕೆರೆ: ತಾಲ್ಲೂಕಿನೆಲ್ಲೆಡೆ ನೆಲೆಸಿರುವ ಬಂಜಾರ ಸಮುದಾಯದವರು ಬೆಳಕಿನ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.
ಮಹಿಳೆಯರು ಮನೆಯಂಗಳ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದರು. ಮನೆಯನ್ನು ಬಾಳೇ ಕಂದು, ವಿವಿಧ ಹೂವು, ತಳಿರು ತೋರಣಗಳಿಂದ ಸಿಂಗಾರಿಸಿದರು. ಬಂಜಾರ ಯುವಕರು, ಬಾಲಕರು ಹೊಸ ಬಟ್ಟೆ ಧರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಬಾಲಕಿಯರು ಹೊಲ ಗದ್ದೆಗಳಿಗೆ ತೆರಳಿ ಹುಚ್ಚಳ್ಳು, ಹೂವು, ಹುರುಳಿ ಸೊಪ್ಪು, ತಡಸಲು ಮರದ ಹೂವು, ಹಣ್ಣೇ ಸೊಪ್ಪಿನ ಹೂವು, ರಾಗಿ ತೆನೆ, ಭತ್ತದ ತೆನೆ, ವಿವಿಧ ಜಾತಿಯ ಹೂವು, ಸೊಪ್ಪುಗಳನ್ನು ಕಿತ್ತು ಬಿದಿರಿನ ತಟ್ಟಿಯಲ್ಲಿ ತಂದು ಬಂಜಾರರ ಆರಾಧ್ಯ ದೈವ ಶ್ರೀಸಂತ ಸೇವಾಲಾಲ್ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಬಳಿಕ ಗೋವುಗಳ ಸಗಣಿ ಮತ್ತು ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ ಕೆರಕವನ್ನು (ಗೋದ್ನೋ) ಅಡುಗೆ ಕೋಣೆ, ದೇವರ ಕೋಣೆ, ಬಾಗಿಲ ಹೊಸ್ತಿಲ ಮೇಲಿಟ್ಟು, ಹಬ್ಬದೂಟದ ತಯಾರಿಕೆಗೆ ಚಾಲನೆ ನೀಡಿದರು.
ಮಹಿಳೆಯರು ಸಾಂಪ್ರಾದಾಯಿಕವಾಗಿ ತಯಾರಿಸಿದ ಬಗೆ ಬಗೆಯ ತಿನಿಸುಗಳನ್ನು ಎಡೆ ಇಟ್ಟು (ಧಪ್ಕಾರ್) ಅದಕ್ಕೆ ತುಪ್ಪ ಸುರಿದು ಅಂತಿಮ ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.