ಮಲೇಬೆನ್ನೂರು: ಸಮೀಪದ ಕೊಕ್ಕನೂರಿನ ಆಂಜನೇಯ ಸ್ವಾಮಿ ‘ಕಾರ್ತಿಕೋತ್ಸವ ಹಾಗೂ ಅಶ್ವೋತ್ಸವ’ ಶನಿವಾರ ಜಡಿಮಳೆ ನಡುವೆ ವೈಭವದಿಂದ ನಡೆಯಿತು.
ಗ್ರಾಮದ ಮುಖ್ಯಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿ ಗ್ರಾಮ ದರ್ಶನ ಮೆರವಣಿಗೆ ನಡೆಯಿತು. ದೇವಾಲಯದ ಆವರಣದಲ್ಲಿ ದೀಪ ಬೆಳಗಿಸಿದ ಭಕ್ತರು ಭಕ್ತಿ ಸಮರ್ಪಣೆ ಮಾಡಿದರು.
ದೇವಾಲಯ ಹಾಗೂ ರಾಜಬೀದಿಯನ್ನು ವಿದ್ಯುತ್ ದೀಪಗಳಿಂದ ಹಾಗೂ ಮೂಲ ಆಂಜನೇಯ ವಿಗ್ರಹಕ್ಕೆ ಹೂವುಗಳಿಂದ ಅಲಂಕರಿಸಲಾಗಿತ್ತು. ಚುಮುಚುಮು ಚಳಿ, ಜಡಿ ಮಳೆ ನಡುವೆ ಜಾತ್ರೆಯಲ್ಲಿ ಆಟಿಕೆ ಸಾಮಾನು, ಬೆಂಡು ಬತ್ತಾಸು, ಬಳೆ, ಐಸ್ ಕ್ರೀಂ, ಅಂಗಡಿ ಹಾಕಿದ್ದರು.
ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಮೂಡಿತ್ತು. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.
ಕಾರು, ಆಟೊ, ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳ ಭರಾಟೆ, ತೆಂಗಿನ ಕಾಯಿ, ಹೂ ಹಣ್ಣಿನ ವ್ಯಾಪಾರ ಹೆಚ್ಚಾಗಿತ್ತು. ದೇವಾಲಯ ಸಮಿತಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಾಡು ಮಾಡಿತ್ತು. ಪೊಲೀಸರು ಭದ್ರತೆ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.