ದಾವಣಗೆರೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ಹೋಟೆಲ್‌ಗಳು ಮುಚ್ಚಿದ್ದು, ಬಡ ಹಾಗೂ ಕೂಲಿಕಾರ್ಮಿಕರು ಇಂದಿರಾ ಕ್ಯಾಂಟೀನ್ ಮೊರೆಹೋಗಿದ್ದಾರೆ.
ನಗರದಲ್ಲಿ ಸಿ.ಜಿ.ಆಸ್ಪತ್ರೆ, ಹೆರಿಗೆ ಆಸ್ಪತ್ರೆ ಹಾಗೂ ಎಪಿಎಂಸಿ ಎದುರಿನ ಕ್ಯಾಂಟೀನ್‌ಗಳು ಮಾತ್ರ ತೆರೆದಿದ್ದು, ಉಳಿದ ಕ್ಯಾಂಟೀನ್‌ಗಳು ಮುಚ್ಚಿವೆ. ಹೆಚ್ಚಿನ ಜನರು ಬರುತ್ತಿರುವುದರಿಂದ ಈ ಮೂರೂ ಕ್ಯಾಂಟೀನ್‌ಗಳಲ್ಲಿ ಊಟ, ತಿಂಡಿಗೆ ಬೇಡಿಕೆ ಹೆಚ್ಚುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಬಡವರ ಪಾಲಿಗೆ ಅನ್ನದಾತರಾಗಿವೆ.
ನಗರದ ಚಾಮರಾಜಪೇಟೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಭಾನುವಾರ ತಿಂಡಿಗಾಗಿ ಬೆಳಿಗ್ಗೆ 6 ಗಂಟೆಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಸಂಬಂಧಿಕರು ತಿಂಡಿಗಾಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂತು. ತಿಂಡಿ ಪಡೆಯಲು ಸಾಮಾಜಿಕ ಅಂತರ ಕಾಯ್ದುಕೊಂಡವರು ತಿಂಡಿ ತಿಂದ ವೇಳೆ ಎಲ್ಲರೂ ಒಂದೇ ಕಡೆ ಊಟ ಮಾಡುತ್ತಿರುವುದು ಕಂಡುಬಂತು.
‘ನಗರಪಾಲಿಕೆ ಆಯುಕ್ತರ ಸೂಚನೆಯ ಮೇರೆಗೆ ಈ ಮೂರು ಕ್ಯಾಂಟೀನ್‌ಗಳು ತೆರೆದಿದ್ದು, ಎಲ್ಲಾ ಕಡೆಗಳಲ್ಲೂ ಹೋಟೆಲ್‌ಗಳು ಮುಚ್ಚಿದ್ದರಿಂದ ಸಹಜವಾಗಿ ಹೆಚ್ಚಿನ ಜನರು ಬರುತ್ತಿದ್ದಾರೆ. ಕ್ಯಾಂಟೀನ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದ್ದೇವೆ. ಅಲ್ಲದೇ ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶವಿದೆ’ ಎನ್ನುತ್ತಾರೆ ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕ ನವೀನ್.
‘ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಇರುವುದರಿಂದ ಕಾಯಂ ಗ್ರಾಹಕರಲ್ಲದೇ ಇಂದಿರಾ ಕ್ಯಾಂಟೀನ್ ಅನ್ನು ಹುಡುಕಿಕೊಂಡು ಬರುತ್ತಿದ್ದಾರೆ. ಹೆರಿಗೆ ಆಸ್ಪತ್ರೆಯ ಬಳಿ ಇರುವ ಕ್ಯಾಂಟೀನ್‌ನಲ್ಲಿ ಸೋಮವಾರ 600 ತಿಂಡಿ, ಮಧ್ಯಾಹ್ನ 500 ಹಾಗೂ ರಾತ್ರಿ 250 ಊಟಗಳು ಖಾಲಿಯಾಗಿವೆ’ ಎಂದು ಹೇಳುತ್ತಾರೆ.
‘ಕೋವಿಡ್–19 ಭೀತಿಯ ಮೊದಲು 10ರಿಂದ 20 ತಿಂಡಿಗಳು ಉಳಿಯುತ್ತಿದ್ದವು. ಅದನ್ನು ಮತ್ತೊಂದು ಕ್ಯಾಂಟೀನ್‌ಗೆ ಸಾಗಿಸುತ್ತಿದ್ದೆವು. ಆದರೆ ಈಗ ಎಲ್ಲವೂ ಖಾಲಿಯಾಗುತ್ತವೆ. ಈ ಮೊದಲು ಬೇಗ ತಿಂಡಿ ಖಾಲಿಯಾಗುತ್ತಿತ್ತು. ಆದರೆ ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ವಿಳಂಬವಾಗುತ್ತದೆ. ಆದರೆ ಎಲ್ಲವೂ ಖಾಲಿಯಾಗುತ್ತವೆ’ ಎನ್ನುತ್ತಾರೆ.
‘ಜನರು ಹೊರಗಡೆ ಬರುತ್ತಿಲ್ಲ. ಆದರೆ ಊಟ ಸಿಗದೇ ಇರುವ ಕೂಲಿ ಕಾರ್ಮಿಕರು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಬಂಧಿಕರು ಇಂದಿರಾ ಕ್ಯಾಂಟೀನ್‌ಗಳಿಗೆ ಬರುತ್ತಿದ್ದಾರೆ. ಕೋವಿಡ್–19 ಭೀತಿಗೂ ಮುನ್ನ ಎರಡು ಗಂಟೆಯಲ್ಲಿ ಒಂದು ಸಾವಿರ ಜನರು ಊಟ ಮಾಡುತ್ತಿದ್ದರು. ಆದರೆ ಭಾನುವಾರ ಮುಕ್ಕಾಲು ಗಂಟೆಗೆ ಎಲ್ಲವೂ ಖಾಲಿಯಾಗಿವೆ’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.