ದಾವಣಗೆರೆ: ಕನಿಷ್ಠ ಬೆಂಬಲ ಯೋಜನೆಯಡಿ ರಾಗಿ ಮಾರಾಟ ಮಾಡಿದ ರೈತರಿಗೆ ಹಣ ಪಾವತಿಸಬೇಕು ಎಂದು ಒತ್ತಾಯಿಸಿ ಜಗಳೂರು ತಾಲ್ಲೂಕಿನ ರೈತರು ಇಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಕಚೇರಿ ಎದುರು ಜಮಾಯಿಸಿದ ನೂರಾರು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ಕಳೆದ ಏಪ್ರಿಲ್ ತಿಂಗಳಿನಲ್ಲಿ ರಾಗಿ ಮಾರಾಟ ಮಾಡಿದ ಜಗಳೂರು ತಾಲ್ಲೂಕಿನ 837 ರೈತರಿಗೆ ಹಣ ಪಾವತಿ ಮಾಡಿಲ್ಲ. ರಾಗಿ ಮಾರಾಟ ಮಾಡಿದ ರೈತರಿಗೆ ₹3.55 ಕೋಟಿಗೂ ಹೆಚ್ಚು ಹಣ ಬಾಕಿ ಬರಬೇಕಾಗಿದ್ದು, ಹಣ ಕೇಳಿದರೆ ‘ನಾಳೆ ಬನ್ನಿ’ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದಾಗಿ ನಾವು ಕಂಗಾಲಾಗಿದ್ದೇವೆ’ ಎಂದು ಆರೋಪಿಸಿದರು.
‘ಹಣ ಪಾವತಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿ ಹಲವು ಬಾರಿ ಒತ್ತಾಯಿಸಿದರೂ ನಮ್ಮ ಮನವಿಗೆ ಸ್ಪಂದಿಸಿಲ್ಲ’ ಎಂದು ಆಪಾದಿಸಿದರು.
‘ರಾಗಿ ಖರೀದಿ ವೇಳೆ ಹಣ ಪಾವತಿಯಾದ ಹಿನ್ನೆಲೆಯಲ್ಲಿ ಈ ಕುರಿತ ತನಿಖೆ ನಡೆಸಲು ಸಮಿತಿ ರಚಿಸಿದ್ದು, ಮೇ 31ರೊಳಗೆ ವರದಿ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಿದೆ. ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಿ ಅರ್ಹ ರೈತರಿಗೆ ಹಣ ಪಾವತಿಸಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.
ರೈತ ಮುಖಂಡರಾದ ಮಹೇಶ್ ಗಡಿಮಾಕುಂಟೆ, ಹಾಕನೂರು ನಿಂಗಪ್ಪ, ಮಾರುತಿ, ಲಕ್ಷ್ಮಣ್, ರವಿ, ಗಿರೀಶ್, ರಾಕೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.