ಮಾಯಕೊಂಡ: ‘ನಮ್ಮೂರು ಕುಗ್ರಾಮ. ಇಲ್ಲಿ ಸೇವೆ ನೀಡುತ್ತಿದ್ದ ಸಂಚಾರಿ ಚಿಕಿತ್ಸಾ ವಾಹನವನ್ನು ನಿಲ್ಲಿಸಲಾಗಿದ್ದು, ಪುನರಾರಂಭಿಸಬೇಕು’ ಎಂದು ಮುಖಂಡರಾದ ಶಂಕರ್ನಳ್ಳಿ ಪ್ರಭು, ರಾಜಪ್ಪ ಒತ್ತಾಯಿಸಿದರು.
ಸಮೀಪದ ಶಂಕರನಹಳ್ಳಿಯಲ್ಲಿ ಬುಧವಾರ ದಾವಣಗೆರೆ ತಾಲ್ಲೂಕು ಆಡಳಿತದಿಂದ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮದ ಹಲವು ಸಮಸ್ಯೆಗಳು ಅನಾವರಣಗೊಂಡವು.
ಅಂಗನವಾಡಿಗೆ ಸೂಕ್ತ ಕಟ್ಟಡ ಒದಗಿಸಲು ಗ್ರಾಮಸ್ಥರು ಒತ್ತಾಯಿಸಿದರು. ಶಾಲೆಯ ಹಿಂಬದಿಯಲ್ಲಿರುವ ತೆರೆದ ಬಾವಿಯಿಂದ ನಾಗರಿಕರಿಗೆ, ಮಕ್ಕಳಿಗೆ ಅಪಾಯವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮದ ಹೊಸ ಬಡಾವಣೆಯಲ್ಲಿರುವ ನಿವಾಸಿಗಳಿಗೆ ‘ಇ’ ಸ್ವತ್ತು ಪಡೆಯಲು ತಾಂತ್ರಿಕ ತೊಂದರೆಯಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಕುಮಾರ್ ತಹಶೀಲ್ದಾರರ ಗಮನ ಸೆಳೆದರು.
ತಹಶಿಲ್ದಾರ್ ಅಶ್ವತ್ಥ್ ಪ್ರತಿಕ್ರಿಯಿಸಿ, ‘ಸ್ಮಶಾನದ ಜಾಗ ಅಳತೆ ಮಾಡಿ ಕೊಡಲಾಗುತ್ತದೆ. ಬಸ್ ಅವ್ಯವಸ್ಥೆ ಶೀಘ್ರ ಸರಿಪಡಿಸಲಾಗುತ್ತದೆ. ಹೊಸ ಬಡಾವಣೆಯಾಗಿರುವ ಊರಿಗೆ ‘ಇ’ ಸ್ವತ್ತು ಬರುತ್ತಿಲ್ಲವಾದ್ದರಿಂದ ಅದಕ್ಕೆ ಸೂಕ್ತ ಪರಿಹಾರ ಸೂಚಿಸಲಾಗಿದೆ. ಸ್ವಾಮಿತ್ವ ಯೋಜನೆಯ ಅಡಿ ಡ್ರೋಣ್ ಕ್ಯಾಮೆರಾ ಸರ್ವೆ ಮಾಡಿ ‘ಪ್ರಾಪರ್ಟಿ ಐ ಡಿ ಕಾರ್ಡ್’ ವಿತರಿಸಲಾಗುತ್ತದೆ. ಗೋಕಟ್ಟೆ ಸರ್ವೆಗೆ ಸೂಚಿಸಿದೆ’ ಎಂದರು.
‘ಸಿರಿಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹ 10,000 ನೀಡಲಾಗುತ್ತಿದೆ. ಎಕರೆಗೆ ₹ 250 ಡೀಸೆಲ್ ಸಬ್ಸಿಡಿ ನೀಡಲಾಗುತ್ತದೆ. ಶೇ 50ರ ಸಹಾಯಧನದಲ್ಲಿ ಸಂಸ್ಕರಣ ಮತ್ತು ಗಾಣದೆಣ್ಣೆ ಯಂತ್ರ ಪಡೆಯಬಹುದು’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರಮೂರ್ತಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರತ್ನಮ್ಮ ಚಂದ್ರಪ್ಪ ಅದ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಆನಂದ್, ತೋಟಗಾರಿಕೆ ಇಲಾಖೆಯ ರೇಷ್ಮಾ ಪರ್ವೀನ್, ಸಿಡಿಪಿಒ ಪ್ರಿಯದರ್ಶಿನಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಹಾಲಸ್ವಾಮಿ, ಅರಣ್ಯಾಧಿಕಾರಿ ಉಮೇಶ್, ಆಹಾರ ಶಿರಸ್ತೇದಾರ್ ಬುಡೇನ್ ಸಾಬ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಸುನಿತಾ, ಹಿಂದುಳಿದ ವರ್ಗಗಳ ಇಲಾಖೆಯ ಗಾಯತ್ರಿ ದೇವಿ, ಪಂಚಾಯತ್ ರಾಜ್, ಎಂಜಿನಿಯರ್ ಪುಟ್ಟಸ್ವಾಮಿ, ಅಣಬೇರು ಗ್ರಾಮ ಪಂಚಾಯಿತಿಯ ಸದಸ್ಯರಾದ ಬುಡೇನಸಾಬ್, ರುದ್ರಪ್ಪ, ಮಹಾದೇವಪ್ಪ, ಪಿಡಿಒ ಮಹೇಶ್, ಉಪ ತಹಶೀಲ್ದಾರ್ ಹಾಲೇಶಪ್ಪ, ಪಿಎಸ್ಐ ಮಂಜಣ್ಣ, ಶಂಕರನಹಳ್ಳಿ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.