ADVERTISEMENT

ಬಸವಾಪಟ್ಟಣ | ಕಲ್ಲಂಗಡಿಗೆ ಹೆಚ್ಚಿದ ಬೇಡಿಕೆ: ವ್ಯಾಪಾರಿಗಳ ಹರ್ಷ

ಮಳೆ ಇಲ್ಲದ ಕಾರಣ ಹಣ್ಣುಗಳಿಗೆ ಕೊರತೆ, ತಮಿಳುನಾಡಿನಿಂದ ಪೂರೈಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 6:38 IST
Last Updated 7 ಮಾರ್ಚ್ 2024, 6:38 IST
<div class="paragraphs"><p>ಬಸವಾಪಟ್ಟಣದಲ್ಲಿ ಶಿವರಾತ್ರಿ ಹಬ್ಬಕ್ಕಾಗಿ ತಮಿಳುನಾಡಿನಿಂದ ತರಿಸಿರುವ ಕಲ್ಲಂಗಡಿ ಹಣ್ಣು</p></div>

ಬಸವಾಪಟ್ಟಣದಲ್ಲಿ ಶಿವರಾತ್ರಿ ಹಬ್ಬಕ್ಕಾಗಿ ತಮಿಳುನಾಡಿನಿಂದ ತರಿಸಿರುವ ಕಲ್ಲಂಗಡಿ ಹಣ್ಣು

   

ಬಸವಾಪಟ್ಟಣ: ಮಾಘ ಮಾಸದ ಕೊನೆಯಿಂದ ಆರಂಭವಾಗುವ ಬಿಸಿಲಿನ ತಾಪವನ್ನು ತಣಿಸಲು ಕಲ್ಲಂಗಡಿ ಹಣ್ಣಿನ ಸೇವನೆ ಶಿವರಾತ್ರಿ ಹಬ್ಬದೊಂದಿಗೆ ಥಳುಕು ಹಾಕಿಕೊಂಡಿದೆ. ಶಿವರಾತ್ರಿಯಂದು ಉಪವಾಸ ಮಾಡುವುದರೊಂದಿಗೆ ನೀರಿನ ಅಂಶ ಹೆಚ್ಚಾಗಿರುವ ಕಲ್ಲಂಗಡಿ ಹಣ್ಣನ್ನು ಸೇವಿಸಿ ವ್ರತಾಚರಣೆ ಮಾಡಿ ಸ್ವಲ್ಪಮಟ್ಟಿನ ಹಸಿವನ್ನು ನೀಗಿಸಿಕೊಳ್ಳುವುದು ಬಹುದಿನಗಳಿಂದ ನಡೆದುಬಂದಿದೆ.

‘ಈ ವರ್ಷ ‌ಮಳೆ ಇಲ್ಲದ ಕಾರಣ ಕಲ್ಲಂಗಡಿ ಹಣ್ಣುಗಳ ಕೊರತೆ ಇದ್ದು, ತಮಿಳುನಾಡಿನಿಂದ ತರಿಸುತ್ತಿದ್ದೇವೆ. ನಾಮಧಾರಿ ತಳಿಯ ಹಸಿರು ಬಣ್ಣದ ಕಲ್ಲಂಗಡಿ ದೊಡ್ಡ ಗಾತ್ರದ್ದಾಗಿದ್ದು, 2ರಿಂದ 20 ಕೆ.ಜಿ ತೂಗುತ್ತದೆ. ಕಿರಣ್‌ ತಳಿಯ ಸಣ್ಣ ಗಾತ್ರ ಕಪ್ಪು ಬಣ್ಣದ ಹಣ್ಣು 1 ಕೆ.ಜಿಯಿಂದ 3 ಕೆ.ಜಿ ಇರುತ್ತದೆ. ಈಗ ಈ ಎರಡೂ ತಳಿಯ ಹಣ್ಣುಗಳಿಗೆ ಬೇಡಿಕೆ ಇದೆ. ಶಿವರಾತ್ರಿ ಹಬ್ಬಕ್ಕಾಗಿ 10 ಟನ್‌ ಕಲ್ಲಂಗಡಿಯನ್ನು ತಮಿಳುನಾಡಿನಿಂದ ತರಿಸಿದ್ದೇನೆ’ ಎಂದು ಹಣ್ಣಿನ ವ್ಯಾಪಾರಿ ಮಹಮದ್‌ ಫರೂಕ್‌ ಹೇಳಿದರು.

ADVERTISEMENT

‘ಪ್ರತಿ ವರ್ಷ ಸ್ಥಳೀಯ ರೈತರು ಬೆಳೆಯುವ ಕಲ್ಲಂಗಡಿ ಹಣ್ಣನ್ನು ಖರೀದಿಸುತ್ತಿದ್ದೆವು. ಆದರೆ ಮಳೆಯ ಅಭಾವದಿಂದ ಇಲ್ಲಿನ ಯಾವ ರೈತರೂ ಕಲ್ಲಂಗಡಿ ಬೆಳೆದಿಲ್ಲ. ಕಲ್ಲಂಗಡಿ ಬೆಳೆಯಲು ಹೆಚ್ಚಿನ ಉಷ್ಣಾಂಶ ಮತ್ತು ಒಣಹವೆ ಅಗತ್ಯ. ತಮಿಳುನಾಡಿನ ದಿಂಡಿಗಲ್‌ ಸೇರಿದಂತೆ ಇತರ ನಗರಗಳಿಗೆ ಲಾರಿಗಳನ್ನು ತೆಗೆದುಕೊಂಡು ಹೋಗಿ ತರಬೇಕಿದೆ. ಇದರಿಂದ ಬೆಲೆ ಹೆಚ್ಚಾಗಿದೆ. ಬಿಸಿಲಿನ ಕಾರಣ ಕಲ್ಲಂಗಡಿಗೆ ಬೇಡಿಕೆ ಹೆಚ್ಚಿದೆ’ ಎಂದು ಹಣ್ಣಿನ ಸಗಟು ವ್ಯಾಪಾರಿ ಸೈಯದ್‌ ಅಫನ್‌ ಹೇಳಿದರು.

‘ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ದೇಹಕ್ಕೆ ಉತ್ತಮ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಕಲ್ಲಂಗಡಿ ಸೇವನೆ ಅತ್ಯುತ್ತಮ’ ಎನ್ನುತ್ತಾರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎನ್‌. ಲತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.