ದಾವಣಗೆರೆ: ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಸವಿತಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಆಗ್ರಹಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಪಿ.ಬಿ.ವೆಂಕಟಾಚಲಪತಿ ‘ಜನಾಂಗದ ವ್ಯಕ್ತಿಗಳಿಗೆ ಮಾನಸಿಕವಾಗಿ ಹಿಂಸೆಯಾಗುವಂತೆ ಜಾತಿಯ ಹೆಸರಿನಿಂದ ನಿಂದಿಸಿದವರಿಗೆ ಜಾತಿ ನಿಂದನೆಯ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಜನಾಂಗದ ಕಸುಬುಗಳಾದ ಕ್ಷೌರಿಕ ವೃತ್ತಿ, ಮಂಗಳ ವಾದ್ಯ, ಆಯುರ್ವೇದ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಉತ್ತಮ ತರಬೇತಿ, ಸಾಲ ಸೌಲಭ್ಯ ಒದಗಿಸಲು ಸವಿತಾ ಸಮಾಜದ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಸಿಬ್ಬಂದಿ, ಕಟ್ಟಡ, ಅನುದಾನ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದ ಸಾಂಪ್ರದಾಯಿಕ ಕುಲಕಸುಬನ್ನು ನಡೆಸಲು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಹೊರ ರಾಜ್ಯಗಳ ಜನರಿಗೆ ಅವಕಾಶ ನೀಡಬಾರದು. ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಕಟ್ಟಡಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹಾಸ್ಟೆಲ್‌ಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಕ್ಷೌರಿಕ ಮಳಿಗೆಗಳನ್ನು ಸ್ಥಾಪಿಸಲು ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಾ ಪುರಸ್ಕಾರ: ಸಮಾಜದ ಪ್ರತಿಭಾವಂತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 6ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭ ಜುಲೈ 13ರಂದು ಬೆಳಿಗ್ಗೆ 10.30ಕ್ಕೆ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದ ಬಳಿ ನಡೆಯಲಿದೆ ಎಂದು ಹೇಳಿದರು.
40ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಿದ್ದು, ಅಂತರರಾಷ್ಟ್ರೀಯ ಯೋಗಪಟು ಎನ್.ವಿ.ಸುನಿಲ್ ಕುಮಾರ್, ದಾವಣಗೆರೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಪಿ.ಎಲ್.ಗುರುರಾಜ್ ಹಾಗೂ ಹಲವು ಸಮಾಜ ಸೇವಕರನ್ನು ಸನ್ಮಾನಿಸಲಾಗುವುದು ಎಂದರು.
ಸವಿತಾ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಡಾ.ಎಂ.ಎನ್.ಶ್ರೀಪತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪಿ.ಜೆ. ನಾಗರಾಜ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಧ್ಯಾಪಕ ಭೀಮಸೇನ. ಸಮಾಜ ಸೇವಕ ನಾಮದೇವ ನಾಗರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.
ಸಂಘದ ಅಧ್ಯಕ್ಷ ಪಿ.ಜೆ.ನಾಗರಾಜ, ಉಪಾಧ್ಯಕ್ಷ ಕರಿಯಪ್ಪ, ನಿರ್ದೇಶಕ ನಾರಾಯಣ ರಾಂಪುರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.