ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 6:32 IST
Last Updated 19 ಅಕ್ಟೋಬರ್ 2021, 6:32 IST
ಜಗಳೂರಿನಲ್ಲಿ ಸೋಮವಾರ ಮೆಕ್ಕೆಜೋಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಗಳೂರಿನಲ್ಲಿ ಸೋಮವಾರ ಮೆಕ್ಕೆಜೋಳ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.   

ಜಗಳೂರು: ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ ಸರ್ಕಾರ ಕನಿಷ್ಠ ₹ 3500 ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಕಾರರು ಮಹಾತ್ಮ ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದ ಮೂಲಕ ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಮಾತನಾಡಿ, ‘ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹ 1,860 ಬೆಂಬಲ ಬೆಲೆ ಘೋಷಿಸಿದೆ. ಆದರೆ, ಖರೀದಿ ಕೇಂದ್ರದಲ್ಲಿ ಖರೀದಿದಾರರು ಕೇವಲ ₹ 1,200ರಿಂದ ₹ 1,400ರ ವರೆಗೆ ಮಾತ್ರ ಖರೀದಿಸುತ್ತಿದ್ದಾರೆ. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 660 ನಷ್ಟವಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಕೂಲಿ ವೆಚ್ಚ, ಗೊಬ್ಬರ, ಬಿತ್ತನೆ ಬೀಜ, ಔಷಧ ಬೆಲೆಗಳು ಗಗನಕ್ಕೇರಿದ್ದು ರೈತರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ದೇಶದಾದ್ಯಂತ ರೈತರ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದ್ದು, 600ಕ್ಕೂ ಹೆಚ್ಚು ಹೋರಾಟನಿರತ ರೈತರು ಹುತಾತ್ಮರಾಗಿದ್ದಾರೆ. ಆದರೂ ಸರ್ಕಾರ ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗೊಳಿಸಿಲ್ಲ ಎಂದು ಆರೋಪಿಸಿದರು.

ಗೌರವಾಧ್ಯಕ್ಷ ಗಂಗಾಧರಪ್ಪ, ಪದಾಧಿಕಾರಿಗಳಾದ ರಾಜನಹಟ್ಟಿ ರಾಜು, ಲೊಕೇಶ್, ಗೌಡಗೊಂಡನಹಳ್ಳಿ ಸತೀಶ್, ಶರಣಪ್ಪ, ಪ್ರಹ್ಲಾದಪ್ಪ, ರಂಗಪ್ಪ, ಅಂಜಿನಪ್ಪ, ಸಿ. ಬಸವರಾಜ್ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.