ADVERTISEMENT

ದಾವಣಗೆರೆ: ಎರಡು ತಿಂಗಳಲ್ಲಿ 26 ಡೆಂಗಿ, 11 ಚಿಕೂನ್‌ಗುನ್ಯ ಪತ್ತೆ

ಬಹುದಿನ ನೀರು ಶೇಖರಿಸಿಡದಂತೆ ಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 2:31 IST
Last Updated 10 ಮಾರ್ಚ್ 2022, 2:31 IST
ಸೊಳ್ಳೆ
ಸೊಳ್ಳೆ   

ದಾವಣಗೆರೆ: ಜಿಲ್ಲೆಯಲ್ಲಿ ಈ ವರ್ಷ ಎರಡು ತಿಂಗಳುಗಳಲ್ಲಿ 26 ಡೆಂಗಿ, 11 ಚಿಕೂನ್‌ಗುನ್ಯ ಪ್ರಕರಣಗಳು ದಾಖಲಾಗಿವೆ. ನೀರು ಸಂಗ್ರಹಿಸಿ ಹೆಚ್ಚು ದಿನ ಇಟ್ಟರೆ ಮುಂಬರುವ ಬೇಸಿಗೆಯಲ್ಲಿ ಮತ್ತು ಮಳೆಗಾಲದ ಆರಂಭದಲ್ಲಿ ಈ ಪ್ರಕರಣಗಳ ಸಂಖ್ಯೆ ಹೆಚ್ಚುವ ಅಪಾಯ ಎದುರಾಗಿದೆ.

ಜನವರಿ ಮತ್ತು ಫೆಬ್ರುವರಿಯಲ್ಲಿ ಡೆಂಗಿ ಪ್ರಕರಣಗಳು ದಾವಣಗೆರೆ ನಗರದಲ್ಲಿ 5, ಗ್ರಾಮೀಣ ಭಾಗಗಳಲ್ಲಿ 4, ಹರಿಹರ ನಗರದಲ್ಲಿ 2, ಗ್ರಾಮೀಣ ಪ್ರದೇಶದಲ್ಲಿ 2, ಚನ್ನಗಿರಿ ನಗರದಲ್ಲಿ 1, ಗ್ರಾಮೀಣ ಪ್ರದೇಶದಲ್ಲಿ 5, ಹೊನ್ನಾಳಿ ಪಟ್ಟಣದಲ್ಲಿ 1, ಗ್ರಾಮೀಣ ಪ್ರದೇಶದಲ್ಲಿ 2, ಜಗಳೂರು ಗ್ರಾಮಾಂತರ ಪ್ರದೇಶದಲ್ಲಿ 4 ಪತ್ತೆಯಾಗಿವೆ. ಜಗಳೂರು ನಗರದಲ್ಲಿ ಮಾತ್ರ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಚಿಕೂನ್‌ಗುನ್ಯ ಪ್ರಕರಣಗಳು ದಾವಣಗೆರೆ ನಗರದಲ್ಲಿ 2, ಗ್ರಾಮೀಣ ಭಾಗಗಳಲ್ಲಿ 2, ಹರಿಹರ ನಗರದಲ್ಲಿ 1, ಚನ್ನಗಿರಿ ಗ್ರಾಮೀಣ ಪ್ರದೇಶದಲ್ಲಿ 1, ಹೊನ್ನಾಳಿ ಗ್ರಾಮೀಣ ಪ್ರದೇಶದಲ್ಲಿ 1, ಜಗಳೂರು ಗ್ರಾಮಾಂತರ ಪ್ರದೇಶದಲ್ಲಿ 4 ಪತ್ತೆಯಾಗಿವೆ. ಹರಿಹರ ಗ್ರಾಮಾಂತರ, ಚನ್ನಗಿರಿ ಪಟ್ಟಣ, ಹೊನ್ನಾಳಿ ಪಟ್ಟಣ, ಜಗಳೂರು ನಗರದಲ್ಲಿ ಯಾವುದೇ ಪ್ರಕರಣ ಕಂಡು ಬಂದಿಲ್ಲ.

ADVERTISEMENT

‘ಜಿಲ್ಲೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ 310 ಮಂದಿಯನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 26 ಮಂದಿಗೆ ಡೆಂಗಿ ಇರುವುದು ದೃಢ‍‍ಪಟ್ಟಿದೆ. 162 ಮಂದಿಗೆ ಚಿಕೂನ್‌ಗುನ್ಯ ಪರೀಕ್ಷೆ ಮಾಡಿದಾಗ 11 ಮಂದಿಗೆ ಕಂಡುಬಂದಿದೆ. ಯಾರಿಗೂ ಅಪಾಯ ಉಂಟಾಗಿಲ್ಲ’ ಎಂದು ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ ಡಾ. ನಟರಾಜ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

15 ದಿನಗಳಿಗೊಮ್ಮೆ ಆಶಾ ಕಾರ್ಯರ್ತೆಯರು ತಮ್ಮ ವ್ಯಾಪ್ತಿಗೆ ಬರುವ ಮನೆಗಳಿಗೆ ಭೇಟಿ ನೀಡಿ ಜ್ವರ ಸಮೀಕ್ಷೆ ಮಾಡುತ್ತಿದ್ದಾರೆ. ನೀರಲ್ಲಿ
ಈಡಿಸ್‌ ಲಾರ್ವಾ ಕಂಡರೆ ನೀರಿನ ಸಂಗ್ರಹಗಳನ್ನು ಖಾಲಿ ಮಾಡಿಸುತ್ತಿದ್ದಾರೆ. ನೀರು ಖಾಲಿ ಮಾಡಲಾಗದ ಕಡೆಗಳಲ್ಲಿ ದುರ್ಬಲಗೊಳಿಸಿದ ಟೆಮಿಪಾಸ್ ದ್ರಾವಣ ಹಾಕಿ ಲಾರ್ವ ನಿಯಂತ್ರಿಸಲಾಗುತ್ತಿದೆ. ಶಂಕಿತ ಪ್ರಕರಣಗಳು ಕಂಡರೆ ಡಿಪಿಎಚ್‌ಎಲ್‌ ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದರು.

ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳಲ್ಲಿ ಧ್ವನಿಮುದ್ರಿಕೆ, ಹಾಡುಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲ ಶಾಲಾ ವಿಜ್ಞಾನ ಶಿಕ್ಷಕರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅವರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಿದ್ದಾರೆ. ನರ್ಸಿಂಗ್‌ ಕಲಿಯುತ್ತಿರುವವರ ಮೂಲಕವೂ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ ಡೆಂಗಿ,ಚಿಕೂನ್‌ಗುನ್ಯ ಹೆಚ್ಚಾಗದಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

*
ಮಲೇರಿಯಾ ನಮ್ಮಲ್ಲಿ ಇಲ್ಲ. ಉಡುಪಿ, ಮಂಗಳೂರು ಮುಂತಾದ ಕರಾವಳಿ ಭಾಗಕ್ಕೆ ಹೋದವರ ಮೂಲಕ ಬರುವ ಸಾಧ್ಯತೆ ಇದೆ. ಕಳೆದ ವರ್ಷ 3 ಪ್ರಕರಣ ಕಂಡುಬಂದಿದ್ದವು.
–ಡಾ. ನಟರಾಜ್‌, ಜಿಲ್ಲಾ ಕೀಟಜನ್ಯ ರೋಗ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.