ADVERTISEMENT

ಮಾತೃಭಾಷೆಯಿಂದ ಅಭಿವೃದ್ಧಿ: ರಾಜ್ಯಪಾಲ ಥಾವರಚಂದ್ ಗೆಹಲೋತ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:31 IST
Last Updated 1 ಮಾರ್ಚ್ 2023, 4:31 IST
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 10ನೇ ಘಟಿಕೋತ್ಸವದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಎಂ.ಎಸ್.ಶಿವಣ್ಣ (ಮರಣೋತ್ತರ) ಅವರ ಪರವಾಗಿ ಪತ್ನಿ ಜಸ್ಟಿನ್ ‘ಡಿ’ಸೌಜ, ಉದ್ಯಮ ಕ್ಷೇತ್ರದಲ್ಲಿ ಅಥಣಿ ವೀರಣ್ಣ ಹಾಗೂ ಸಮಾಜ ಸೇವೆಗಾಗಿ ಹರಪನಹಳ್ಳಿಯ ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 10ನೇ ಘಟಿಕೋತ್ಸವದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಎಂ.ಎಸ್.ಶಿವಣ್ಣ (ಮರಣೋತ್ತರ) ಅವರ ಪರವಾಗಿ ಪತ್ನಿ ಜಸ್ಟಿನ್ ‘ಡಿ’ಸೌಜ, ಉದ್ಯಮ ಕ್ಷೇತ್ರದಲ್ಲಿ ಅಥಣಿ ವೀರಣ್ಣ ಹಾಗೂ ಸಮಾಜ ಸೇವೆಗಾಗಿ ಹರಪನಹಳ್ಳಿಯ ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.   

ದಾವಣಗೆರೆ: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಮಹತ್ವ ನೀಡಲಾಗಿದೆ. ಈ ನೀತಿಯಿಂದಾಗಿ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಲಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಜ್ಞಾನಸೌಧದಲ್ಲಿ ಮಂಗಳವಾರ ನಡೆದ 10ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಾತೃಭಾಷೆಯ ಕಲಿಕೆಯಿಂದ ಹೆಚ್ಚಿನ ಲಾಭವಾಗಲಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್
ಕ್ಷೇತ್ರಗಳಲ್ಲೂ ಮಾತೃಭಾಷೆ ಬಳಕೆ ಸೂಕ್ತ. ರಷ್ಯಾ, ಚೀನಾ, ಅಮೆರಿಕ, ಜರ್ಮನಿ, ಜಪಾನ್, ಫ್ರಾನ್ಸ್ ಮೊದಲಾದ ರಾಷ್ಟ್ರಗಳು ಮಾತೃಭಾಷೆಗೆ ಒತ್ತು ನೀಡಿದ್ದರಿಂದಲೇ ಅಭಿವೃದ್ಧಿ ಹೊಂದಿವೆ’ ಎಂದು ಹೇಳಿದರು.

ADVERTISEMENT

‘ಮಾತೃಭಾಷೆಯಲ್ಲೇ ಅಧ್ಯಯನದ ಜೊತೆಗೆ ನೆಚ್ಚಿನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಉನ್ನತ ಶಿಕ್ಷಣ ನೀಡಿದೆ. ಭಾರತದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸಲು, ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡುವ ಈ ಶಿಕ್ಷಣ ನೀತಿಯನ್ನು ಯಶಸ್ವಿಗೊಳಿಸಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಣ ವಂಚಿತರಿಗೆ ನೆರವು ನೀಡಿ: ‘ಬಡತನದಿಂದಾಗಿ ಕೆಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅದನ್ನು ತಡೆಗಟ್ಟುವುದು ಎಲ್ಲರ ಕರ್ತವ್ಯವಾಗಬೇಕು. ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಫಂಡ್ ಮೂಲಕ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಬಹುದು. ಆಸಕ್ತರು ನಾಲ್ಕೈದು ಮಕ್ಕಳನ್ನು ‘ಶೈಕ್ಷಣಿಕ ದತ್ತು’ ಪಡೆದು ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಥಾವರ್‌ಚಂದ್ ಗೆಹಲೋತ್ ಹೇಳಿದರು.

‘ಪರಿಸರ ಅಸಮತೋಲನ ವಿಶ್ವದ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರೂ ನೀರು, ಅರಣ್ಯ ಮತ್ತು ಗಾಳಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.

‘ದಾವಣಗೆರೆ ವಿಶ್ವವಿದ್ಯಾಲಯವು ಕೇವಲ 12 ವರ್ಷಗಳಲ್ಲಿ ಹಲವು ಶೈಕ್ಷಣಿಕ ಸಾಧನೆಗಳಿಗೆ ಸಾಕ್ಷಿಯಾಗಿದೆ. ಉನ್ನತ ಶಿಕ್ಷಣದ ಆಶಯಕ್ಕೆ ಬದ್ಧವಾಗಿ, ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣದ ಮೂಲಕ ಸಾಮಾಜಿಕ ಜವಾಬ್ದಾರಿ, ನೈತಿಕ ಪ್ರಜ್ಞೆಯನ್ನು ಬೆಳೆಸುತ್ತಿದೆ. ಬೋಧನೆ, ಸಂಶೋಧನೆ, ಉನ್ನತ ಮೌಲ್ಯಗಳಿಗೆ ಆದ್ಯತೆ ನೀಡುತ್ತಿದೆ ಎಂದು ಕುಲಪತಿ ಪ್ರೊ.ಬಿ.ಡಿ. ಕುಂಬಾರ
ಹೇಳಿದರು.

ಮೂವರಿಗೆ ಗೌರವ ಡಾಕ್ಟರೇಟ್: ಉದ್ಯಮಿ ಮತ್ತು ಶಿಕ್ಷಣ ತಜ್ಙ ಅಥಣಿ ವೀರಣ್ಣ, ಸಮಾಜ ಸೇವಕ ಹರಪನಹಳ್ಳಿಯ ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಅವರಿಗೆ ಗೌರವ ಡಾಕ್ಟರೇಟ್ ಗೌರವ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಸ್ಥಳೀಯ ಸಿದ್ಧಗಂಗಾ ಸಂಸ್ಥೆಯ ಎಂ.ಎಸ್. ಶಿವಣ್ಣ ಅವರಿಗೆ ನೀಡಲಾದ ಮರಣೋತ್ತರ ಗೌರವ ಡಾಕ್ಟರೇಟ್‌ ಅನ್ನು ಅವರ ಪತ್ನಿ ಜಸ್ಟಿನ್ ಡಿಸೋಜ ಸ್ವೀಕರಿಸಿದರು.

==

‘ಉನ್ನತ ಶಿಕ್ಷಣ: ಶೇ 50 ದಾಖಲಾತಿ’

ದಾವಣಗೆರೆ: ಭಾರತೀಯ ವಿದ್ಯಾರ್ಥಿಗಳಲ್ಲಿ ನಾಯಕತ್ವ ರೂಪಿಸಲು ಹಾಗೂ ನವೋದ್ಯಮ ಸ್ಥಾಪಿಸುವ ಉದ್ದೇಶದಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿ)ಯು ಹಲವು ಬದಲಾವಣೆ ತಂದಿದೆ ಎಂದು ಮಂಡಳಿ ಅಧ್ಯಕ್ಷ ಪ್ರೊ.ಟಿ.ಎಂ.ಸೀತಾರಾಮ್ ಹೇಳಿದರು.

ಘಟಿಕೋತ್ಸವ ಭಾಷಣ ಮಾಡಿದ ಅವರು, ‘ಮಂಡಳಿಯು ಸುಸ್ಥಿರ ಸಮಾಜಕ್ಕಾಗಿ ಹೊಸ ಜ್ಞಾನವನ್ನು ಸೃಷ್ಟಿಸುತ್ತಿದೆ. 2035ರ ವೇಳೆಗೆ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತವನ್ನು ಶೇ 50ಕ್ಕೆ ಹೆಚ್ಚಿಸುವ ಮೂಲಕ ಭಾರತವನ್ನು ಜಾಗತಿಕ ಶೈಕ್ಷಣಿಕ ಜ್ಞಾನದ ಸೂಪರ್ ಪವರ್ ಮಾಡುವುದು ನಮ್ಮ ಗುರಿಯಾಗಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹೊಸ ಆಲೋಚನಾ ವಿಧಾನ ಅಳವಡಿಸಿಕೊಳ್ಳಬೇಕು. ಸವಾಲುಗಳು, ಅಡ್ಡಿ ಆತಂಕಗಳು ಅನುಭವದ ಪರಿಧಿಯನ್ನು ವಿಸ್ತರಿಸುತ್ತವೆ. ವ್ಯಕ್ತಿತ್ವವನ್ನು ರೂಪಿಸಲು ಸಹಾಯ ಮಾಡುತ್ತವೆ’ ಎಂದರು.

‘ಮಾಹಿತಿ, ಸಂವಹನ, ಮೊಬೈಲ್ ತಂತ್ರಜ್ಞಾನಗಳಲ್ಲದೆ ಕೃತಕ ಬುದ್ಧಿಮತ್ತೆಯ ಚಾಟ್ ಜಿಪಿಟಿಯಂತಹ ವಿಚ್ಛಿದ್ರಕಾರಕ ಆವಿಷ್ಕಾರಗಳು ಉದ್ಯೋಗಗಳಲ್ಲಿ ಅನಿರೀಕ್ಷಿತ ಬದಲಾವಣೆ ತರಬಹುದು. ಅನೇಕ ಉದ್ಯೋಗಗಳು ಮಾಯವಾಗಿ, ಹೊಸ ಉದ್ಯೋಗ ಸೃಷ್ಟಿಯಾಗಬಹುದು. ವಿದ್ಯಾರ್ಥಿಗಳು ನಿರಂತರ ಕಲಿಕೆಯೊಂದಿಗೆ ಹೊಸತನ ರೂಢಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.