ADVERTISEMENT

ಹರಿಹರ: ತುಂಗಭದ್ರಾ ಸೇತುವೆ ದಾಟುವ ಸಂಕಷ್ಟ

ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ಸಂಘರ್ಷ

ಟಿ.ಇನಾಯತ್‌ ಉಲ್ಲಾ
Published 15 ಮೇ 2024, 8:02 IST
Last Updated 15 ಮೇ 2024, 8:02 IST
ಹರಿಹರ ಹೊರವಲಯದ ಹಲಸಬಾಳು-ಕೋಡಿಯಾಲ ಹೊಸಪೇಟೆ ಸೇತುವೆ ಮೇಲೆ ಮಣ್ಣು ಸಂಗ್ರಹಗೊಂಡಿದ್ದು, ಮಳೆ ನೀರು ನಿಂತಿರುವುದು
ಹರಿಹರ ಹೊರವಲಯದ ಹಲಸಬಾಳು-ಕೋಡಿಯಾಲ ಹೊಸಪೇಟೆ ಸೇತುವೆ ಮೇಲೆ ಮಣ್ಣು ಸಂಗ್ರಹಗೊಂಡಿದ್ದು, ಮಳೆ ನೀರು ನಿಂತಿರುವುದು   

ಹರಿಹರ: ಸರ್ಕಾರದ ಎರಡು ಇಲಾಖೆಗಳ ನಡುವಿನ ಸಂಘರ್ಷದಿಂದಾಗಿ ತಾಲ್ಲೂಕಿನ ಹಲಸಬಾಳು ಗ್ರಾಮ ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ಮಧ್ಯೆ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ನಿರ್ವಹಣೆ ಇಲ್ಲದೇ ಸೊರಗುತ್ತಿದೆ.

ಸೇತುವೆ ಮೇಲೆ ಗುಂಡಿ ಬಿದ್ದಿದ್ದು, ಮಣ್ಣು ಸಂಗ್ರಹಗೊಂಡಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿ, ಎಳೆಹೊಳೆ, ಧೂಳೆಹೊಳೆ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ಜನರು ತಾಲ್ಲೂಕು ಕೇಂದ್ರ ಹರಿಹರಕ್ಕೆ ಬರಲು ಈ ಸೇತುವೆಯೇ ಆಸರೆ. ರಾಜನಹಳ್ಳಿ ವಾಲ್ಮೀಕಿ ಗುರುಪೀಠ ಹಾಗೂ ಹೊಸಳ್ಳಿ ವೇಮನ ಗುರುಪೀಠಕ್ಕೆ ಇದೇ ಸೇತುವೆಯ ಮಾರ್ಗದಲ್ಲಿ ಹೋಗಬೇಕು. ಹೀಗಾಗಿ ಈ ಸೇತುವೆಯಲ್ಲಿ ವಾಹನಗಳ ಓಡಾಟ ಹೆಚ್ಚು.

ADVERTISEMENT

ಆದರೂ ಎರಡು ಇಲಾಖೆಗಳ ಸಂಘರ್ಷದಿಂದ ಸೇತುವೆಗೆ ಸಮರ್ಪಕ ನಿರ್ವಹಣೆ ಇಲ್ಲ.

ಸೇತುವೆ ಹಿಂದಿನ ರಾಷ್ಟ್ರೀಯ ಹೆದ್ದಾರಿ (ಪೂನಾ-ಬೆಂಗಳೂರು ಹೆದ್ದಾರಿ) ವ್ಯಾಪ್ತಿಯಲ್ಲಿತ್ತು. ನಗರದ ಹೊರ ವಲಯದಲ್ಲಿರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಈ ಹಿಂದೆ ಈ ಭಾಗದಲ್ಲಿ ಕೇವಲ ಒಮ್ಮುಖ ಹೆದ್ದಾರಿಯಾಗಿದ್ದಾಗ ಈ ಸೇತುವೆ ಒಳಗೊಂಡ ಹರಗನಹಳ್ಳಿ-ಮಾಕನೂರು (ರಾಣೆಬೆನ್ನೂರು ತಾಲ್ಲೂಕು) ನಡುವಿನ 5 ಕಿ.ಮೀ. ಹಳೆ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಗೆ ಬಳಸಲಾಗುತ್ತಿತ್ತು.

ಚತುಷ್ಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ನಂತರ ಹರಗನಹಳ್ಳಿ- ಮಾಕನೂರು ನಡುವಿನ ಹಳೆ ಹೆದ್ದಾರಿಯನ್ನು ಎನ್‌ಎಚ್‌ಎಐ ಸ್ಥಗಿತಗೊಳಿಸಿತು. 

ಲೋಕೋಪಯೋಗಿ ಇಲಾಖೆಗೆ ರಾಷ‌್ಟ್ರೀಯ ಹೆದ್ದಾರಿ ಪ್ರಾಧಿಕಾರದವರು 4 ವರ್ಷಗಳ ಹಿಂದೆ ಪತ್ರ ಬರೆದು, ‘5 ಕಿ.ಮೀ. ಹೆದ್ದಾರಿಯನ್ನು ನಿಮ್ಮ ಇಲಾಖೆ ವ್ಯಾಪ್ತಿಗೆ ಬಿಟ್ಟು ಕೊಡುತ್ತೇವೆ’ ಎಂದಿದ್ದರು. ಆಗ ಲೋಕೋಪಯೋಗಿ ಇಲಾಖೆಯವರು, ‘ಸೇತುವೆಯಲ್ಲಿ ಆಗಬೇಕಿರುವ ದುರಸ್ತಿ ಕಾಮಗಾರಿಯನ್ನು ನೀವೇ ಪೂರ್ಣಗೊಳಿಸಬೇಕು. ಹಾಗೂ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಬೇಕು. ಆ ಬಳಿಕವೇ ಹೆದ್ದಾರಿಯನ್ನು ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ’ ಎಂದು ಮರು ಪತ್ರ ಹಾಕಿದ್ದರು. ಈ ಪತ್ರ ವ್ಯವಹಾರದ ಬಳಿಕ ಎರಡೂ ಇಲಾಖೆಯವರು ಸುಮ್ಮನಾಗಿದ್ದಾರೆ.

‘ನಮಗೆ ನೀಡಿದ್ದೇವೆ ಎಂದು ಹೆದ್ದಾರಿ ಪ್ರಾಧಿಕಾರದವರು ಮೌನವಹಿಸಿದ್ದಾರೆ. ಆದರೆ ನಮಗೆ ಹಸ್ತಾಂತರಿಸಿಲ್ಲ. ಹೀಗಿರುವಾಗ ಹೆದ್ದಾರಿಯ ನಿರ್ವಹಣೆಗೆ ನಮಗೆ ಅನುದಾನ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನಿಸುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ಶಿವಮೂರ್ತಿ.

ಅನಾಥವಾದ ಸೇತುವೆ:

‘ಗಂಡ, ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆ ಮಾತಿನಂತೆ, ಈ ಎರಡೂ ಇಲಾಖೆಗಳ ನಡುವಿನ ಸಂಘರ್ಷದಲ್ಲಿ ಈ 5 ಕಿ.ಮೀ. ಉದ್ದದ ಹೆದ್ದಾರಿ ಹಾಗೂ ಸೇತುವೆ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.

ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವವರಿಲ್ಲ. ಸೇತುವೆ ಮೇಲೆ ಶೇಖರಗೊಂಡಿರುವ ಮಣ್ಣನ್ನು ಸಾಗಿಸುವವರಿಲ್ಲ. 300 ಮೀ. ಉದ್ದದ ಈ ಸೇತುವೆ ಮೇಲಿನ ಮಣ್ಣು ತೆಗೆಯದೇ ಇರುವುದು ಹಾಗೂ ಗುಂಡಿಗಳನ್ನು ಮುಚ್ಚದೆ ಇರುವುದರಿಂದ ಈ ಸೇತುವೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ.

‘ದೊಡ್ಡ ವಾಹನಗಳು ಹೇಗೋ ಸಾಗುತ್ತವೆ. ಆದರೆ ಬೈಕ್, ಸೈಕಲ್ ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದೆ ಸಾಗುವ ಸ್ಥಿತಿ ಎದುರಾಗಿದೆ. ಎರಡೂ ಇಲಾಖೆಯ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಹುಡುಕಿ ಸೇತುವೆ ದುರಸ್ತಿ ಮತ್ತು ನಿರ್ವಹಣೆ ಮಾಡಬೇಕು’ ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಹರಿಹರ ಹೊರವಲಯದ ಹಲಸಬಾಳು-ಕೋಡಿಯಾಲ ಹೊಸಪೇಟೆ ಸೇತುವೆ ಮೇಲೆ ಮಣ್ಣು ಸಂಗ್ರಹಗೊಂಡಿದ್ದು ಮಳೆ ನೀರು ನಿಂತಿರುವುದು

Quote - ಈ ಸೇತುವೆ ದುರಸ್ತಿಗೆ ಆಗ್ರಹಿಸಿ ಒಂದು ವರ್ಷದ ಹಿಂದೆ ಪ್ರತಿಭಟನೆ ನಡೆಸಲಾಗಿದೆ. ಆದರೂ ಸಂಬಂಧಿತರು ಸಮಸ್ಯೆಗೆ ಪರಿಹಾರ ಸೂಚಿಸಿಲ್ಲ. ಅಧಿಕಾರಿಗಲು ಕ್ರಮ ಕೈಗೊಳ್ಳಬೇಕು. ಹಲಸಬಾಳು ಬಸವರಾಜ್ ಆಮ್ ಆದ್ಮಿ ಪಾರ್ಟಿ ಮುಖಂಡ

Cut-off box - ಮಣ್ಣು ತೆಗೆಯಲು ಕ್ರಮ ‘ಈ ಹಿಂದೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದು ನಿಯಮಾವಳಿ ಪ್ರಕಾರ ಹೆದ್ದಾರಿ ಹಾಗೂ ಸೇತುವೆ ನಮಗೆ ಹಸ್ತಾಂತರಿಸಲು ಕೋರಿದ್ದೇವೆ. ಆದರೂ ಅವರು ಪ್ರತಿಕ್ರಿಯಿಸುತ್ತಿಲ್ಲ. ಆ ಪ್ರಕ್ರಿಯೆ ನಡೆಯದೆ ಅನುದಾನ ಬರುತ್ತಿಲ್ಲ. ಆದರೂ ಮಾನವೀಯ ದೃಷ್ಟಿಯಿಂದ ಸೇತುವೆ ಮೇಲಿನ ಮಣ್ಣು ತೆಗೆಸಿ ಮಳೆ ನೀರು ಕಿಂಡಿಯಲ್ಲಿ ಸಾಗುವಂತೆ ವ್ಯವಸ್ಥೆ ಮಾಡುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಎಇಇ ಶಿವಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.