ADVERTISEMENT

ಕೋವಿಡ್‌ ಭ್ರಷ್ಟಾಚಾರ: ಬಿಜೆಪಿ ಬೆಲೆ ತೆರಲೇಬೇಕು; ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 21:53 IST
Last Updated 20 ನವೆಂಬರ್ 2024, 21:53 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ದಾವಣಗೆರೆ: ಕೋವಿಡ್‌ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ಬಿಜೆಪಿ ಮುಖಂಡರು ರಾಜ್ಯದ ಬೊಕ್ಕಸವನ್ನು ಲೂಟಿ ಮಾಡಿರುವುದು ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಡಿ.ಕುನ್ಹ ಆಯೋಗದ ವರದಿಯಲ್ಲಿ ಖಚಿತವಾಗಿದೆ. ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಖಚಿತವಾಗಿದ್ದು, ಭಾಗಿಯಾದವರು ಬೆಲೆ ತೆರಲೇಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

‘ಇದೊಂದು ದ್ವೇಷದ ರಾಜಕಾರಣವಲ್ಲ. ಆರ್ಥಿಕ ಅಕ್ರಮಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ  ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಡಾ.ಸುಧಾಕರ್ ಮತ್ತು ಬಿ.ಶ್ರೀರಾಮುಲು ವಿರುದ್ಧದ ಹಗೆತನವಿಲ್ಲ. ತಪ್ಪು ಮಾಡಿರುವವರು ಕಾನೂನು ಪ್ರಕಾರ ಶಿಕ್ಷೆಗೆ ಒಳಗಾಗಬೇಕು’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

‘ನಬಾರ್ಡ್‌’ ಸಾಲ ಸೌಲಭ್ಯವನ್ನು ಶೇ 58ರಷ್ಟು ಕಡಿಮೆ ಮಾಡಲಾಗಿದೆ. ಏಕಾಏಕಿ ಈ ಬದಲಾವಣೆ ಮಾಡಿದ್ದರಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ರೈತರಿಗೆ ಸಾಲ ವಿತರಿಸುವುದೂ ಕಷ್ಟವಾಗುತ್ತಿದೆ. ಪಡಿತರ ಚೀಟಿಯ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ರೈತರಿಗೆ ಅನುಕೂಲವಾಗುವ ಅನುದಾನವನ್ನು ಕೇಂದ್ರದಿಂದ ತರಲು ಪ್ರಯತ್ನಿಸಲಿ’ ಎಂದು ಸವಾಲು ಎಸೆದರು.

ADVERTISEMENT

‘ರಾಜ್ಯದಲ್ಲಿ ಶೇ 85ರಷ್ಟು ಬಡತನ ಇದೆ ಎಂದು ಹೇಳಲಾಗದು. ಅನರ್ಹ ಪಡಿತರ ಚೀಟಿಯನ್ನು ರದ್ದುಪಡಿಸಬೇಕಾಗುತ್ತದೆ. ಇಂತಹ ಚೀಟಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಅರ್ಹರು ಮತ್ತೆ ಅರ್ಜಿ ಸಲ್ಲಿಸಿದರೆ ಪಡಿತರ ಚೀಟಿಯನ್ನು ಖಂಡಿತ ಮರಳಿ ನೀಡಲಾಗುವುದು. ನಾನು ಆಹಾರ ಸಚಿವನಾಗಿದ್ದ ಅವಧಿಯಲ್ಲಿ 20 ಲಕ್ಷ ಚೀಟಿಗಳನ್ನು ರದ್ದುಪಡಿಸಿದ್ದೆ. 15 ಲಕ್ಷ ಹೊಸ ಪಡಿತರ ಚೀಟಿ ನೀಡಿದ್ದೆ’ ಎಂದು ಹೇಳಿದರು.

‘ಗುತ್ತಿಗೆ ನೌಕರರಿಗೆ ನೇರ ಪಾವತಿ’

ಆರೋಗ್ಯ ಇಲಾಖೆಯ ‘ಡಿ’ ಗ್ರೂಪ್‌ ನೌಕರರ ನೇಮಕಾತಿ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದೆ. ಹೊರಗುತ್ತಿಗೆ ಬದಲು ನೇರ ವೇತನ ಪಾವತಿ ವ್ಯವಸ್ಥೆ ಅಳವಡಿಸುವ ಬಗ್ಗೆ ಕಾನೂನು ಇಲಾಖೆಯ ಸಲಹೆ ಕೇಳಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ‘ಹೊರಗುತ್ತಿಗೆ ವ್ಯವಸ್ಥೆಯನ್ನು ಕೈಬಿಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪ್ರಯತ್ನಿಸುತ್ತಿದೆ. ಗುತ್ತಿಗೆ ನೌಕರರಿಗೆ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಿದರೆ ಅನುಕೂಲವಾಗಲಿದೆ. ಕಾನೂನು ಇಲಾಖೆ ಒಪ್ಪಿಗೆ ನೀಡಿದರೆ ಇಡೀ ರಾಜ್ಯದಲ್ಲಿ ಶೀಘ್ರ ಅನುಷ್ಠಾನಕ್ಕೆ ಬರಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.