ADVERTISEMENT

ಆದಾಯ ಕೊರತೆಯಿಂದ ಅಂಗವಿಕಲರಿಗೆ ಹೆಚ್ಚಿನ ಸೌಲಭ್ಯ ಕೊಡಲಾಗುತ್ತಿಲ್ಲ: ರತ್ನಾ ಡಿ.

ಹರಿಹರ ನಗರಸಭೆ ಅಧ್ಯಕ್ಷೆ ರತ್ನಾ ಡಿ. ಅಸಹಾಯಕತೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2021, 14:49 IST
Last Updated 25 ಡಿಸೆಂಬರ್ 2021, 14:49 IST
ಹರಿಹರ ನಗರಸಭೆಯ ಸಭಾಂಗಣದಲ್ಲಿ ಈಚೆಗೆ ನಡೆದ ಅಂಗವಿಕಲರ ಸೌಲಭ್ಯಗಳ ಕುರಿತ ಕಾರ್ಯಾಗಾರದಲ್ಲಿ ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿದರು. ನಗರಸಭಾಧ್ಯಕ್ಷೆ ರತ್ನಾ ಡಿ., ಎಇಇ ಎಸ್.ಎಸ್.ಬಿರಾದರ್ ಇದ್ದರು.
ಹರಿಹರ ನಗರಸಭೆಯ ಸಭಾಂಗಣದಲ್ಲಿ ಈಚೆಗೆ ನಡೆದ ಅಂಗವಿಕಲರ ಸೌಲಭ್ಯಗಳ ಕುರಿತ ಕಾರ್ಯಾಗಾರದಲ್ಲಿ ಕಂದಾಯ ಅಧಿಕಾರಿ ಮಂಜುನಾಥ್ ಮಾತನಾಡಿದರು. ನಗರಸಭಾಧ್ಯಕ್ಷೆ ರತ್ನಾ ಡಿ., ಎಇಇ ಎಸ್.ಎಸ್.ಬಿರಾದರ್ ಇದ್ದರು.   

ಹರಿಹರ: ನಗರಸಭೆಗೆ ಆದಾಯ ಕೊರತೆ ಇರುವುದರಿಂದ ಅಂಗವಿಕಲರಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಸೌಲಭ್ಯ ಕೊಡಲು ಆಗುತ್ತಿಲ್ಲ ಎಂದು ನಗರಸಭಾಧ್ಯಕ್ಷೆ ರತ್ನಾ ಡಿ. ಅಸಹಾಯಕತೆ ವ್ಯಕ್ತಪಡಿಸಿದರು.

ಸ್ವಾತಂತ್ರ‍್ಯದ ಅಮೃತ ಮಹೋತ್ಸವ ನಿಮಿತ್ತ ನಗರಸಭೆಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂಗವಿಕಲರಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಬರುವ ದಿನಗಳಲ್ಲಿ ಅಂಗವಿಕಲರಿಗೆ ಅನುದಾನ ಹೆಚ್ಚಿಸಲಾಗುವುದು. ಸರ್ಕಾರ ಅಂಗವಿಕಲರಿಗೆ ರೂಪಿಸಿರುವ ಯೋಜನೆ, ಸೌಲಭ್ಯಗಳನ್ನು ಅರ್ಹರಿಗೆ ದೊರೆಯುವಂತೆ ಮತ್ತು ಯಾವುದೇ ದುರುಪಯೋಗವಾಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ADVERTISEMENT

ಅಂಗವಿಕಲರಾದ ಬಸಮ್ಮ ಮಾತನಾಡಿ, ‘ಮೂರು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದೇನೆ. ಇಲ್ಲಿಯವರೆಗೂ ನನಗೆ ದ್ವಿಚಕ್ರ ವಾಹನ ಮಂಜೂರಾಗಿಲ್ಲ. ನಗರಸಭೆಗೆ ಅಲೆದಾಡಿ ಸಾಕಾಗಿದೆ. ಅಧಿಕಾರಿಗಳು ಸ್ಪಂದಿಸುವುದೇ ಇಲ್ಲ. ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದೇ ಇಲ್ಲ’ ಎಂದು ಅಳಲು ತೋಡಿಕೊಂಡರು.

‘ನಗರಸಭೆ ಮಾಜಿ ಅಧ್ಯಕ್ಷರ ಸಂಬಂಧಿ ಹಾಗೂ ಗುತ್ತಿಗೆದಾರರೊಬ್ಬರು ಐದು ವರ್ಷ ಹಿಂದೆ ವಾಹನ ಕೊಡಿಸುವುದಾಗಿ ಹೇಳಿ ನನ್ನಿಂದ ಹಣ ಪಡೆದಿದ್ದಾರೆ. ನನ್ನಂತೆ ಅನೇಕರಿಂದ ಅವರು ಹಣ ಪಡೆದಿದ್ದು, ಈ ಬಗ್ಗೆ ತನಿಖೆಯಾಗಬೇಕು’ ಎಂದು ಅಂಗವಿಕಲರಾದಅಫ್ಜಲ್ ಒತ್ತಾಯಿಸಿದರು.

‘30 ವರ್ಷಗಳಿಂದ ನಗರಸಭೆಯಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ.8 ವರ್ಷಗಳ ಅವಧಿಯಲ್ಲಿ ವಿಕಲಚೇತನರಿಗೆ ನೀಡಿದ ವಾಹನಗಳಿಗೆ ನೋಂದಣಿ ಮಾಡಿಸಿಕೊಟ್ಟಿಲ್ಲ ಎಂದು ದೇವೇಂದ್ರಪ್ಪ ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧಿಕಾರಿ ಜಗದೀಶ್, ‘ಸರ್ಕಾರ ನೀಡಿದ ವಾಹನಗಳ ನೋಂದಣಿ ಮಾಡಿಸುವುದು ನಮ್ಮ ಜವಾಬ್ದಾರಿಯಲ್ಲ.ಒಂದೇ ಮನೆಯಲ್ಲಿ ಹತ್ತು ಜನ ಅಂಗವಿಕಲರಿದ್ದರೆ ಎಲ್ಲರಿಗೂ ಸರ್ಕಾರಿ ಸೌಲಭ್ಯ ಕೊಡಲಾಗಲ್ಲ ಎಂದರು.

ಇದಕ್ಕೆ ಅಂಗವಿಕಲರು ಆಕ್ರೋಶ ವ್ಯಕ್ತಪಡಿಸಿದರು.

ಎಇಇ ಎಸ್.ಎಸ್.ಬಿರಾದರ್, ಕಂದಾಯ ಅಧಿಕಾರಿ ಮಂಜುನಾಥ್, ವಿಶೇಷ ಚೇತನರ ಸಲಹಾ ಸಮಿತಿ ಸದಸ್ಯೆ ಅನಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.