ADVERTISEMENT

ಜಗಳೂರು | ಹೊಸ ಬಿಪಿಎಲ್ ಕಾರ್ಡ್‌ ಸ್ಥಗಿತ; ಸೌಲಭ್ಯದಿಂದ ಬಡವರು ವಂಚಿತ

ಸವಲತ್ತುಗಳಿಂದ ಬಡ ಕುಟುಂಬಗಳು ವಂಚಿತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 6:45 IST
Last Updated 3 ಜುಲೈ 2024, 6:45 IST
ದಾವಣಗೆರೆ ಜಿಲ್ಲೆಯ ಜಗಳೂರಿನ ಮಿನಿವಿಧಾನಸೌಧ ಕಟ್ಟಡ
ದಾವಣಗೆರೆ ಜಿಲ್ಲೆಯ ಜಗಳೂರಿನ ಮಿನಿವಿಧಾನಸೌಧ ಕಟ್ಟಡ   

ಜಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 2 ವರ್ಷಗಳಿಂದ ಹೊಸ ಪಡಿತರ ಚೀಟಿ ವಿತರಣಾ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸಿದ್ದು, ಹೊಸದಾಗಿ ಕಾರ್ಡ್‌ ಅಗತ್ಯ ಹೊಂದಿರುವ ಬಡ ಕುಟುಂಬಗಳು ಸರ್ಕಾರದ ಸವಲತ್ತುಗಳಿಂದ ವಂಚಿತವಾಗಿವೆ.

ಅನ್ನಭಾಗ್ಯ ಯೋಜನೆಯಡಿ ಉಚಿತ ಆಹಾರ ಧಾನ್ಯ, ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ₹ 2,000 ನೆರವು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಅಗತ್ಯವಾಗಿದೆ. ರಾಜ್ಯದಲ್ಲಿ ಸಾವಿರಾರು ಬಡ ಕುಟುಂಬಗಳ ಸದಸ್ಯರು ಬಿ.ಪಿ.ಎಲ್ ಪಡಿತರ ಚೀಟಿಗಾಗಿ 2 ವರ್ಷಗಳಿಂದ ನಿತ್ಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ಸೆಪ್ಟೆಂಬರ್ 2022ರಿಂದ ಇಲ್ಲಿಯವರೆಗೆ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳ ವಿತರಣೆಯನ್ನು ತಡೆ ಹಿಡಿಯಲಾಗಿದೆ. ರಾಜ್ಯದಲ್ಲೇ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ತಾಲ್ಲೂಕು ಎಂದೇ ಕರೆಸಿಕೊಳ್ಳುವ ಜಗಳೂರು ತಾಲ್ಲೂಕಿನಲ್ಲಿ 800ಕ್ಕೂ ಹೆಚ್ಚು ಬಡ ಕುಟುಂಬದವರು ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, 2 ವರ್ಷದಿಂದ ಇಲ್ಲಿನ ಮಿನಿ ವಿಧಾನಸೌಧದಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಗೆ ನಿತ್ಯ ಎಡತಾಕುತ್ತಿದ್ದಾರೆ.

ADVERTISEMENT

‘ಹಲವು ಕಾರಣಗಳಿಂದಾಗಿ ನಮ್ಮ ಕುಟುಂಬ ಪಡಿತರ ಚೀಟಿಯನ್ನು ಹೊಂದಿಲ್ಲ. ನಾನು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ. ಬಿಪಿಎಲ್ ಚೀಟಿಗಾಗಿ ವರ್ಷಕ್ಕೂ ಹೆಚ್ಚು ಕಾಲ ಕಾದು 2 ವರ್ಷದ ಹಿಂದೆ ಅರ್ಜಿ ಸಲ್ಲಿಸಿದ್ದೇನೆ. ಆದರೆ,  ಇಲಾಖೆಯು ಹೊಸ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಯನ್ನು ಲಾಕ್ ಮಾಡಿದೆ. ಇದರಿಂದಾಗಿ ನಮ್ಮ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೊಡುವ ಆಹಾರಧಾನ್ಯ, ಆರೋಗ್ಯ ಸೌಲಭ್ಯ, ಸರ್ಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲದಂತಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ಪರಶುರಾಮ ನೋವು ತೋಡಿಕೊಂಡರು.

‘ಹೊಸ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳ ವಿತರಣಾ ಪ್ರಕ್ರಿಯೆ ಸುಮಾರು 2 ವರ್ಷದಿಂದ ಸ್ಥಗಿತವಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಹೊಸ ಬಿಪಿಎಲ್ ಚೀಟಿ ಪಡೆಯಲು 3,600 ಅರ್ಜಿಗಳು ಸಲ್ಲಿಕೆಯಾಗಿವೆ. ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಹೊಸ ಪಡಿತರ ಚೀಟಿ ವಿತರಣೆ ಸ್ಥಗಿತಗೊಳಿಸಲಾಗಿದೆ. ಎಪಿಎಲ್ ಪಡಿತರ ಚೀಟಿಯನ್ನೂ 1 ವರ್ಷದಿಂದ ನಿಲ್ಲಿಸಲಾಗಿದೆ. ಇದು ಸರ್ಕಾರದ ನಿರ್ಧಾರವಾಗಿದೆ. ಯಾವಾಗ ಅನ್‌ಲಾಕ್ ಆಗುತ್ತದೆ ಎಂಬುದು ತಿಳಿದಿಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಸಿದ್ದರಾಮ ಮಾರಿಹಾಳ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.