ದಾವಣಗೆರೆ: ತೋಳಹುಣಸೆಯಲ್ಲಿರುವ ದಾವಣಗೆರೆ ವಿಶ್ವವಿದ್ಯಾಲಯದ ಆವರಣದಲ್ಲಿ ಮೇ 23ರಂದು ಬೆಳಿಗ್ಗೆ 8ರಿಂದ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಈ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
‘1949 ಮತಗಟ್ಟೆಗಳ ಇವಿಎಂಗಳಲ್ಲಿ ದಾಖಲಾಗಿರುವ ಮತಗಳನ್ನು ಎಣಿಕೆ ಮಾಡಲು ಎಂಟು ವಿಧಾನಸಭಾ ಕ್ಷೇತ್ರಗಳಿಗೂ ತಲಾ 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿನ ಐದು ವಿ.ವಿ. ಪ್ಯಾಟ್‌ಗಳಲ್ಲಿ ದಾಖಲಾಗಿರುವ ಮತಗಳನ್ನು ಪರಿಶೀಲಿಸಲು ಒಂದು ಟೇಬಲ್ ಹಾಕಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಲೋಕಸಭಾ ಕ್ಷೇತ್ರದಲ್ಲಿ 2,190 ಅಂಚೆ ಮತಪತ್ರಗಳು ಮತ್ತು 382 ಇ.ಟಿ.ಪಿ.ಬಿ.ಎಸ್ ಮತಪತ್ರಗಳು ಸ್ವೀಕೃತವಾಗಿವೆ. ಮೇ 23ರ ಬೆಳಿಗ್ಗೆ 8 ಗಂಟೆಯವರೆಗೆ ಸ್ವೀಕೃತವಾಗುವ ಅಂಚೆ ಹಾಗೂ ಇ.ಟಿ.ಪಿ.ಬಿ.ಎಸ್ ಮತಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗುವುದು’ ಎಂದು ತಿಳಿಸಿದರು.
‘ಸಾಮಾನ್ಯ ವೀಕ್ಷಕರ ಸಮ್ಮುಖದಲ್ಲಿ 23ರಂದು ಬೆಳಿಗ್ಗೆ 7ಕ್ಕೆ ಭದ್ರತಾ ಕೊಠಡಿ ತೆರೆಯುವ ಪ್ರಕ್ರಿಯೆ ಆರಂಭಿಸಲಾಗುವುದು. ಬೆಳಿಗ್ಗೆ 8ಕ್ಕೆ ಚುನಾವಣಾಧಿಕಾರಿ ಟೇಬಲ್‌ನಲ್ಲಿ ಅಂಚೆ ಮತ ಎಣಿಕೆ ಕಾರ್ಯ ನಡೆಯಲಿದೆ. 8.30ಕ್ಕೆ ಆಯಾ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿ ಸಮ್ಮುಖದಲ್ಲಿ ಇವಿಎಂಗಳ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.
‘ನೇರವಾಗಿ ಮತ ಎಣಿಕೆ ಕಾರ್ಯಕ್ಕೆ 376 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಒಟ್ಟು 1,816 ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ಟೇಬಲ್‌ಗೂ ಅಭ್ಯರ್ಥಿಗಳ ಪರವಾಗಿ ಒಬ್ಬ ಏಜೆಂಟರಿಗೆ ಎಣಿಕೆ ಕೊಠಡಿಯೊಳಗೆ ಬರಲು ಅವಕಾಶ ನೀಡಲಾಗುತ್ತಿದೆ. ಚುನಾವಣಾ ಸಿಬ್ಬಂದಿಗಳಿಗೆ ತೋಳಹುಣಸೆ ಕೇಂದ್ರಕ್ಕೆ ತೆರಳಲು ಮಹಾನಗರ ಪಾಲಿಕೆ ಆವರಣದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ ಮಾಡಲಾಗಿದೆ’ ಎಂದರು.
‘ಮತ ಎಣಿಕೆ ಪ್ರಗತಿಯನ್ನು ಪ್ರತಿ ಸುತ್ತು ಮುಗಿದ ಬಳಿಕ ಚುನಾವಣಾಧಿಕಾರಿಗಳ ಹಾಗೂ ವೀಕ್ಷಕರ ಅನುಮೋದನೆ ಪಡೆದ ಬಳಿಕ ‘ಸುವಿಧ’ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರದಲ್ಲಿ ಪ್ರತಿ ಸುತ್ತಿನ ಮತ ಎಣಿಕೆ ಪ್ರಗತಿಯನ್ನು ಘೋಷಿಸಲಾಗುವುದು. ಸಹಾಯಕ ಚುನಾವಣಾಧಿಕಾರಿಗಳ ಎಣಿಕೆ ಕೊಠಡಿಯಲ್ಲಿಯೂ ಫ್ಲೆಕ್ಸ್ ಬೋರ್ಡ್‌ನಲ್ಲಿ ಈ ಮಾಹಿತಿ ನೀಡಲಾಗುವುದು’ ಎಂದು ತಿಳಿಸಿದರು.
ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ
ಮತ ಎಣಿಕೆ ದಿನವಾದ 23ರಂದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಸಿ.ಆರ್.ಪಿ.ಸಿ 144 ಕಲಂ ಅಡಿ ಜಿಲ್ಲೆಯಲ್ಲಿ ಅಂದು ನಿಷೇಧಾಜ್ಞೆ ಹೊರಡಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ಬಳಕೆ, ಸಿಗರೇಟು, ಬೆಂಕಿಪೊಟ್ಟಣ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರದ ಬಳಿ ಗುಂಪು ಸೇರುವುದು, ವಿಜಯೋತ್ಸವ ಆಚರಿಸುವುದನ್ನೂ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆ ಏಜೆಂಟರು ಸಹ ಮೊಬೈಲ್‌ಗಳನ್ನು ಮತ ಎಣಿಕೆ ಕೇಂದ್ರದ ಒಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮೊಬೈಲ್ ತಂದವರು ಕೇಂದ್ರದ ಪ್ರವೇಶ ದ್ವಾರದಲ್ಲೇ ಕೊಟ್ಟು ಸ್ವೀಕೃತಿ ಚೀಟಿ ಪಡೆದು ಇಡಬೇಕು. ಎಣಿಕೆ ಕಾರ್ಯ ಮುಗಿದ ಬಳಿಕ ವಾಪಸ್ ಹೋಗವಾಗ ಮೊಬೈಲ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದರು.
40 ವಿ.ವಿ. ಪ್ಯಾಟ್‌ಗಳ ಎಣಿಕೆ
ನ್ಯಾಯಾಲಯದ ನಿರ್ದೇಶನದಂತೆ ಎಂಟು ವಿಧಾನಸಭಾ ಕ್ಷೇತ್ರಗಳಿಂದಲೂ ತಲಾ ಐದು ಮತಗಟ್ಟೆಗಳ ವಿ.ವಿ. ಪ್ಯಾಟ್‌ನ ಚೀಟಿಯನ್ನು ಎಣಿಕೆ ಮಾಡಲು ಪ್ರತ್ಯೇಕ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 40 ವಿ.ವಿ. ಪ್ಯಾಟ್‌ಗಳ ಚೀಟಿ ಎಣಿಕೆ ಮಾಡಬೇಕಾಗಿದೆ. ಎಲ್ಲಾ ಕ್ಷೇತ್ರಗಳ ಇವಿಎಂ ಎಣಿಕೆ ಮುಗಿದ ಬಳಿಕ ಅಭ್ಯರ್ಥಿಗಳ ಸಮ್ಮುಖದಲ್ಲಿ ವೀಕ್ಷಕರು ಲಾಟರಿ ಎತ್ತುವ ಮೂಲಕ ಐದು ವಿ.ವಿ. ಪ್ಯಾಟ್‌ಗಳನ್ನು ಆಯ್ಕೆ ಮಾಡಲಿದ್ದಾರೆ. ಇವಿಎಂನಲ್ಲಿ ದಾಖಲಾದ ಮತ ಹಾಗೂ ವಿ.ವಿ. ಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನು ತಾಳೆ ಮಾಡಿ ನೋಡಲಾಗುತ್ತದೆ. ವಿ.ವಿ. ಪ್ಯಾಟ್ ಎಣಿಕೆ ಪ್ರಕ್ರಿಯೆ ಮುಗಿಸಲು ಸುಮಾರು ನಾಲ್ಕು ಗಂಟೆ ಸಮಯ ಬೇಕಾಗಬಹುದು. ಸಂಜೆ 6ರ ಬಳಿಕ ಅಧಿಕೃತವಾಗಿ ವಿಜೇತ ಅಭ್ಯರ್ಥಿ ಘೋಷಣೆ ಆಗಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದರು.
ಪೊಲೀಸ್ ಬಿಗಿ ಬಂದೋಬಸ್ತ್
ಮತ ಎಣಿಕೆ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ತಿಳಿಸಿದರು.
ಮತ ಎಣಿಕೆ ಕೇಂದ್ರದ ಒಳಗೆ ಹೋಗುವ ಏಜೆಂಟರು ಪೆನ್ನು, ಪೇಪರ್ ಹಾಗೂ ಕುಡಿಯುವ ನೀರನ್ನು ಹೊರತುಪಡಿಸಿದರೆ ಉಳಿದ ಯಾವುದೇ ವಸ್ತುವನ್ನೂ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
‘ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸುವ ವೇಳೆ ಎರಡು ಹಂತಗಳಲ್ಲಿ ತಪಾಸಣೆ ನಡೆಸಲಾಗುವುದು. ಆರಂಭದಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿ ತಪಾಸಣೆ ಮಾಡಿದರೆ, ಎರಡನೇ ಹಂತದಲ್ಲಿ ಕೇಂದ್ರ ಅರೆಸೇನಾ ಪಡೆ ಯೋಧರು ತಪಾಸಣೆ ನಡೆಸಲಿದ್ದಾರೆ. ಕೆ.ಎಸ್.ಆರ್.ಪಿ. ಹಾಗೂ ಡಿ.ಎ.ಆರ್ ತುಕಡಿಗಳನ್ನು ಭದ್ರತಾ ಕಾರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಹೋಮ್ ಗಾರ್ಡ್‌ಗಳನ್ನೂ ಬಳಸಿಕೊಳ್ಳುತ್ತಿದ್ದೇವೆ’ ಎಂದು ಚೇತನ್ ಮಾಹಿತಿ ನೀಡಿದರು.
ಅಂಕಿ–ಸಂಖ್ಯೆಗಳು
16,34,860 ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ಮತಗಳು
11,92,162 ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಮತಗಳು
72.94 % ಕ್ಷೇತ್ರದಲ್ಲಿನ ಮತದಾನದ ಪ್ರಮಾಣ
1949 ಕ್ಷೇತ್ರದಲ್ಲಿ ತೆರೆದಿದ್ದ ಮತಗಟ್ಟೆಗಳ ಸಂಖ್ಯೆ
376 ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ
15 ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹಾಕುವ ಮತ ಎಣಿಕೆ ಟೇಬಲ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.