ADVERTISEMENT

ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ 10 ಜೋಡಿಗಳನ್ನು ಒಂದು ಮಾಡಿದ ನ್ಯಾಯಾಲಯ

ಲೋಕ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ 7362 ವಿವಿಧ ಪ್ರಕರಣಗಳು ಇತ್ಯರ್ಥ, ₹ 10 ಕೋಟಿ ಪರಿಹಾರ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 11:37 IST
Last Updated 13 ಮಾರ್ಚ್ 2022, 11:37 IST
ರಾಜೇಶ್ವರಿ ಎನ್. ಹೆಗಡೆ
ರಾಜೇಶ್ವರಿ ಎನ್. ಹೆಗಡೆ   

ದಾವಣಗೆರೆ: ಈ ಸಂಬಂಧವೇ ಬೇಡ ಎಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ 10 ಜೋಡಿಗಳನ್ನು ಮತ್ತೆ ಒಂದು ಮಾಡುವಲ್ಲಿ ಕೌಟುಂಬಿಕ ನ್ಯಾಯಾಲಯ ಯಶಸ್ವಿಯಾಗಿದೆ. ಒಟ್ಟಿಗೆ ಬದುಕನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅವರೆಲ್ಲ ಲಿಖಿತವಾಗಿ ಒಪ್ಪಿಗೆ ನೀಡಿದ್ದಾರೆ.

ಐಬಿಎಂನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಮಧುಕುಮಾರ್ ಮತ್ತು ಎಂ.ಟೆಕ್‌ ಮಾಡಿ ಎಂಜಿನಿಯರ್‌ ಆಗಿರುವ ದಾವಣಗೆರೆಯ ಭವಾನಿಅವರು 2014ರಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾಗಿ ನಾಲ್ಕೇ ತಿಂಗಳಲ್ಲಿ ವಿರಸ ಮೂಡಿದ್ದರಿಂದ ಭವಾನಿ ಅವರು ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದರು. ಪತಿ ಮೇಲೆ ವಿವಿಧ ಪ್ರಕರಣಗಳನ್ನು ದಾಖಲಿಸಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಏಳು ವರ್ಷಗಳಿಂದ ಈ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಹಿಂದಿನ ಎಲ್ಲ ಘಟನೆಗಳನ್ನು ಮರೆತು ಮತ್ತೆ ಒಟ್ಟಿಗೆ ಹೊಸ ಜೀವನ ನಡೆಸಲು ಮನಸ್ಸು ಮಾಡಿದ್ದರು. ಹಾಗಾಗಿ ಈ ಪ್ರಕರಣ ಲೋಕ ಅದಾಲತ್‌ಗೆ ಬಂದಿತ್ತು. ಎರಡೂ ಕಡೆಯವರನ್ನು ಮಾತನಾಡಿಸಲಾಯಿತು. ಮಧುಕುಮಾರ್‌ ಮೇಲಿದ್ದ ಕ್ರಿಮಿನಲ್‌ ಪ್ರಕರಣ ಸೇರಿ ಎಲ್ಲ 6 ಪ್ರಕರಣಗಳನ್ನು ಹಿಂಪಡೆಯಲಾಯಿತು. ಇದೂಸೇರಿ ಒಟ್ಟು 10 ಜೋಡಿಗಳು ಮತ್ತೆ ಒಂದಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ನ್ಯಾಯಾಧೀಶ ಪ್ರವೀಣ್‌ ನಾಯಕ್‌ ತಿಳಿಸಿದರು.

ADVERTISEMENT

7,362 ಪ್ರಕರಣ ಇತ್ಯರ್ಥ: ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ಬೃಹತ್‌ ಲೋಕ ಅದಾಲತ್‌ನಲ್ಲಿ ಒಟ್ಟು 7,362 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಯಿತು. ₹ 10.78 ಕೋಟಿ ಪರಿಹಾರ ಕೊಡಿಸಲಾಯಿತು.

ಜಿಲ್ಲಾ ನ್ಯಾಯಾಲಯದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ನೇತೃತ್ವದಲ್ಲಿ ಬೃಹತ್ ಲೋಕ ಅದಾಲತ್ ನಡೆಯಿತು.

ಜಿಲ್ಲಾ ನ್ಯಾಯಾಲಯವೂ ಸೇರಿ ಜಿಲ್ಲೆಯಲ್ಲಿರುವ ಎಲ್ಲ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 15,918 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇವುಗಳ ಪೈಕಿ 7,362 ಪ್ರಕರಣಗಳು ಇತ್ಯರ್ಥಗೊಂಡವು.

ರಾಜಿಯಾಗಬಲ್ಲ 331 ಅಪರಾಧ ಪ್ರಕರಣಗಳಲ್ಲಿ 30 ಪ್ರಕರಣಗಳು ಇತ್ಯರ್ಥಗೊಂಡವು. 65 ಚೆಕ್‌ ಅಮಾನ್ಯ ಪ್ರಕರಣಗಳಲ್ಲಿ ₹ 1.29 ಕೋಟಿ ಪರಿಹಾರ ಒದಗಿಸಲಾಯಿತು.ಬ್ಯಾಂಕ್‌ಗೆ ಸಂಬಂಧಿಸಿದ 26 ಪ್ರಕರಣಗಳನ್ನು ಇತ್ಯರ್ಥ ಪಡಿಸಿ ₹ 19.33 ಲಕ್ಷ ಪರಿಹಾರ ಕಲ್ಪಿಸಲಾಯಿತು. ಹಣ ವಸೂಲಾತಿಯ 14 ಪ್ರಕರಣಗಳಲ್ಲಿ ₹ 52 ಲಕ್ಷ ಪರಿಹಾರ ನೀಡಲು ತಿಳಿಸಲಾಯಿತು.

ಮೋಟರ್‌ ವಾಹನ ಕಾಯ್ದೆಯಡಿ 71 ಪ್ರಕರಣಗಳನ್ನು ಬಗೆಹರಿಸಿ, ₹ 3.36 ಕೋಟಿ ಪರಿಹಾರವನ್ನು ಕೊಡಿಸಲಾಯಿತು. ಕಾರ್ಮಿಕರ ಸಮಸ್ಯೆ, ಮರಳು ಅಕ್ರಮ ಸಾಗಾಟ, ಪಾಲುದಾರಿಕೆ ಸಮಸ್ಯೆ, ಸಿವಿಲ್‌ ವ್ಯಾಜ್ಯಗಳು, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಹೀಗೆ ನಾನಾ ತರಹದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.