ADVERTISEMENT

Diwali 2024: ವೈವಿಧ್ಯಗಳ ಸಮ್ಮಿಲನ ಈ ಬೆಳಕಿನ ಹಬ್ಬ...

ಕೆ.ಎಸ್.ವೀರೇಶ್ ಪ್ರಸಾದ್
Published 31 ಅಕ್ಟೋಬರ್ 2024, 7:46 IST
Last Updated 31 ಅಕ್ಟೋಬರ್ 2024, 7:46 IST
ದೀಪಾವಳಿ ಹಬ್ಬದಲ್ಲಿ ಬಾಗಿಲ ಬಳಿ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪಿಸಿ ಜಡೆಯಂತೆ ಹೆಣೆದ ಕವಚಿ ಹುಲ್ಲಿನ ದಿಂಡುಗಳನ್ನು ಇಟ್ಟಿರುವುದು 
ದೀಪಾವಳಿ ಹಬ್ಬದಲ್ಲಿ ಬಾಗಿಲ ಬಳಿ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪಿಸಿ ಜಡೆಯಂತೆ ಹೆಣೆದ ಕವಚಿ ಹುಲ್ಲಿನ ದಿಂಡುಗಳನ್ನು ಇಟ್ಟಿರುವುದು    

ದೀಪಾವಳಿ ಹಬ್ಬವೆಂದರೆ ಆಂತರ್ಯದಲ್ಲಿ ಅನುಭವಾತೀತ ಬೆಳಕಿನ ಪುಳಕ. ಹೇಗೆಲ್ಲಾ ಆಚರಿಸಲಿ, ಸಂಭ್ರಮಿಸಲಿ, ಏನೆಲ್ಲಾ ಸಂಗ್ರಹಿಸಲಿ ಎಂಬ ತುಡಿತ. ಬದುಕು, ಪ್ರಕೃತಿ, ಸಂಸ್ಕೃತಿ, ಸ್ಮರಣೆಗಳ ಸಮಾಗಮ.

ಹೊಸ ಬಟ್ಟೆ ಖರೀದಿ, ಅಡವಿ ಹೂವು ಹಾಗೂ ತಾಜಾ ಧಾನ್ಯದ ತೆನೆಗಳ ಅಲಂಕಾರ, ಮನೆ ಬಾಗಿಲ ದೀಪಗಳ ಸಾಲು, ಪಟಾಕಿ, ಸುರ್ ಸುರ್ ಬತ್ತಿಗಳ ಸದ್ದು, ಹಿರಿಯರ ಸ್ಮರಣೆಗೆ ನಡೆಯುವ ವಿಶೇಷ ಪೂಜೆ, ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪನೆ, ಸಿಹಿ ಅಡುಗೆಗಳ ರಸಗವಳದ ವೈವಿಧ್ಯತೆಯ ಸಂಭ್ರಮ.

ಸುಗ್ಗಿಯ ಕಾಲಕ್ಕೆ ಹಿಗ್ಗುತ್ತಾ ಬರುವ ದೀಪಾವಳಿಗೆ ಖರ್ಚಿಲ್ಲದ ಅಡವಿ ಹೂವು ಮತ್ತು ತೆನೆಗಳೇ ಅಲಂಕಾರ. ತಂಗಡಿಕೆ ಹೂವು, ಅನ್ನೆ ಹೂವು, ಉತ್ತರಾಣಿ, ಬ್ರಹ್ಮದಂಡೆ, ಸಜ್ಜೆ ತೆನೆ, ಅವರೇ ಹೂವು, ತೊಗರಿ ಹೂವು, ಚೆಂಡು ಹೂವುಗಳೇ ಪ್ರಧಾನ ಸಂಗ್ರಹಗಳು. ಗ್ರಾಮೀಣ ಭಾಗದಲ್ಲಿ ಹಬ್ಬದ ಮುನ್ನಾ ದಿನ ಇವುಗಳನ್ನು ಸಂಗ್ರಹಿಸುವುದೇ ಒಂದು ಕೆಲಸ.

ADVERTISEMENT

ಆಧುನಿಕತೆಯ ಪರಿಣಾಮ ಈ ನೈಸರ್ಗಿಕ ಸಸ್ಯ-ಧಾನ್ಯಗಳ ಬಳಕೆ ಕ್ರಮೇಣ ಮರೆಯಾಗುತ್ತಿದೆ.  ದೀಪಾವಳಿಯ ಮತ್ತೊಂದು ವಿಶೇಷ ಕವಚಿ ಹುಲ್ಲು. ಅಲ್ಲಲ್ಲಿ ಬೆಳೆಯುವ ಈ ಹುಲ್ಲನ್ನು ಜಡೆಯಂತೆ ಹೆಣೆದು ಬಾಗಿಲ ಎರಡು ಮಗ್ಗುಲಿಗೆ ಇಡುವುದು ಸಂಪ್ರದಾಯ. ರೈತರು ಈ ಹುಲ್ಲು ಹುಡುಕಿ ತಂದು ಹೆಣೆಯುತ್ತಾರೆ. ಇತ್ತೀಚೆಗೆ ಇದು ಕೂಡ ಹಬ್ಬದ ಸಂದರ್ಭದಲ್ಲಿ ಮಾರಾಟದ ಸರಕಾಗಿದೆ.

ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪನೆಯೂ ದೀಪಾವಳಿಯ ವಿಶೇಷತೆಗಳಲ್ಲೊಂದು. ಸಮೃದ್ಧಿ ಕರುಣಿಸಲೆಂದು ಲಕ್ಷ್ಮಿ ದೇವತೆಗೆ ಸಾಂಪ್ರದಾಯಿಕವಾಗಿ ಪೂಜೆ ಮಾಡುವುದು ವಾಡಿಕೆ. ಪ್ರವೇಶ ಬಾಗಿಲಿನ ಎಡಭಾಗದಲ್ಲಿ ಹಸುವಿನ ಸಗಣಿ ಉಂಡೆಗಳಲ್ಲಿ ಅಡವಿ ಹೂವುಗಳು, ಸಜ್ಜೆ ತೆನೆ ಸಿಕ್ಕಿಸುವ ಮೂಲಕ ಸಿದ್ಧತೆ ನಡೆಸಲಾಗುತ್ತದೆ. ಅವುಗಳ ಜೊತೆ ದೀಪ, ಅದಕ್ಕೊಂದು ಬಿದಿರಿನ ಬುಟ್ಟಿಯನ್ನು ಓರೆಯಾಗಿ ಮುಚ್ಚಿಡಲಾಗುತ್ತದೆ. ವಿಶೇಷ ಪೂಜೆ ಹಾಗೂ ಎಡೆ ಸಲ್ಲಿಕೆ ಮಾಡಲಾಗುತ್ತದೆ. ದೀಪಾವಳಿ ಹಬ್ಬದಲ್ಲಿಯೇ ಈ ಭಾಗದ ಬಹುತೇಕ ಮನೆಗಳಲ್ಲಿ ಹಿರಿಯರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ನೀರು ತುಂಬಿಸಿದ ಕುಂಭಗಳಿಗೆ ಹೊಸ ಬಟ್ಟೆಗಳಿಂದ ಅಲಂಕಾರ ಮಾಡಲಾಗುತ್ತದೆ. ಅವರ ಇಷ್ಟದ ಪದಾರ್ಥಗಳ ನೈವೇದ್ಯ ಮಾಡಲಾಗುತ್ತದೆ. ಮನೆ ಮಂದಿಯೆಲ್ಲಾ ಪ್ರತ್ಯೇಕವಾಗಿ ತೆಂಗಿನ ಕಾಯಿ ಒಡೆದು ಅರ್ಪಿಸುತ್ತಾರೆ.

ಹುಗ್ಗಿ, ಹೋಳಿಗೆ, ಹಪ್ಪಳ, ಸಂಡಿಗೆ, ಕೋಸಂಬರಿ, ಚಿತ್ರಾನ್ನ, ಅನ್ನ-ಸಾರುಗಳ ಭರ್ಜರಿ ಭೋಜನ ಇರುತ್ತದೆ. ದೀಪಾವಳಿ ಹಬ್ಬದಲ್ಲಿಯೇ ಇಲ್ಲಿನ ವ್ಯಾಪಾರಸ್ಥರು ಲಕ್ಷ್ಮಿ ಪೂಜೆಯನ್ನು ವಿಜೃಂಭಣೆಯಿಂದ ನಡೆಸುತ್ತಾರೆ. ವಿದ್ಯುತ್ ದೀಪಾಲಂಕಾರ, ಬಾಳೆ ಕಂದು, ಹೊಸ ಬಟ್ಟೆ, ಒಡವೆ, ವೈಢೂರ್ಯಗಳಿಂದ ಲಕ್ಷ್ಮಿಯ ಮೂರ್ತಿಯನ್ನು ಶೃಂಗರಿಸುತ್ತಾರೆ. ಪೂಜೆಗೆ ಗ್ರಾಮದ ಜನರನ್ನೆಲ್ಲಾ ಆಹ್ವಾನಿಸುವ ಪರಿಪಾಠ  ರೂಢಿಯಲ್ಲಿದೆ. 

ಈ ಭಾಗದಲ್ಲಿ ದೀಪಾವಳಿ ಹಬ್ಬವನ್ನು ಒಂದು ತಿಂಗಳ ಅಂತರದಲ್ಲಿ ಬೇರೆ ಬೇರೆ ವಾರಗಳಲ್ಲಿ ಆಚರಿಸಲಾಗುತ್ತದೆ. ಸುಗ್ಗಿ ಎಂದರೆ ಆರ್ಥಿಕ ಬಲವರ್ಧನೆ. ಹಬ್ಬದ ಖರ್ಚು ನಿಭಾಯಿಸಲು ಮುಂದಿನ ಅಮವಾಸ್ಯೆವರೆಗೆ ನಾಲ್ಕು ವಾರಗಳವರೆಗೆ ಹಬ್ಬದ ಸಂಭ್ರಮ ಮುಂದುವರಿಯುತ್ತದೆ. ಮನೆ ಮುಂದೆ ಆಕಾಶ ಬುಟ್ಟಿ, ದೀಪ ಹಚ್ಚಿಡುವ ಸಂಪ್ರದಾಯ ನಡೆದು ಬಂದಿದೆ.

ಹಬ್ಬದ ಒಂದು ವಾರ ಪೂರ್ವದಲ್ಲಿ ಮಹಿಳೆಯರು ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ದೀಪಾವಳಿಗಾಗಿಯೇ ವಿಶೇಷ ಸಿದ್ಧತೆಗಳು ನಡೆಯುತ್ತವೆ. ಚೆಂಡು ಹೂವುಗಳ ಹಾರಗಳು, ಮಾವು, ಬಾಳೆ ದಿಂಡು ಕಟ್ಟಿ ಶೃಂಗರಿಸುವುದನ್ನು ನೋಡುವುದೇ ಚೆಂದ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.