ದೀಪಾವಳಿ ಹಬ್ಬದಲ್ಲಿ ದೀಪಗಳಿಗೆ ಎಷ್ಟು ಮಹತ್ವ ಇರುತ್ತದೆಯೋ ಅಷ್ಟೇ ಮಹತ್ವವನ್ನು ಜನರು ತಾವು ಸಿಡಿಸುವ ಪಟಾಕಿಗಳಿಗೆ ನೀಡುತ್ತಾರೆ. ಆದರೆ, ಪಟಾಕಿ ಸಿಡಿಸುವ ಸಂಭ್ರಮವು ಒಬ್ಬರಿಗೆ ಅನಾಹುತವನ್ನು ಉಂಟುಮಾಡಬಾರದು. ದೀಪಗಳನ್ನು ಬೆಳಗಿಸಿ, ಪಟಾಕಿಗಳನ್ನು ಹಚ್ಚುವ ಸಂದರ್ಭದಲ್ಲಿ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದೂ ಅಗತ್ಯ.
ದೀಪಾವಳಿ ಹಬ್ಬದಲ್ಲಿ ದೀಪಗಳನ್ನು ಹೆಣ್ಣುಮಕ್ಕಳು ಬೆಳಗಿದರೆ, ಪಟಾಕಿಗಳ ಅಬ್ಬರಕ್ಕೆ ಯುವಕರು, ಮಕ್ಕಳು ಕಾರಣರಾಗುತ್ತಾರೆ. ಪಟಾಕಿಗಳು ಯಾವ ಸಂದರ್ಭದಲ್ಲಿಯಾದರೂ ಅನಾಹುತ ಸೃಷ್ಟಿಸಬಹುದು. ಅದರಲ್ಲೂ ಪುಟ್ಟ ಮಕ್ಕಳ ವಿಚಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. ಪಟಾಕಿ ಹಚ್ಚುವಾಗ ಮಕ್ಕಳು, ವಯಸ್ಸಾದವರು ಮತ್ತು ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.
‘ಪಟಾಕಿ ಹಚ್ಚುವುದರಿಂದ ಶಬ್ದ ಮಾಲಿನ್ಯದ ಜತೆಗೆ ಪರಿಸರಕ್ಕೂ ಧಕ್ಕೆಯಾಗುತ್ತದೆ. ಆಟಂ ಬಾಂಬ್‌ನಂತಹ ಪಟಾಕಿಗಳು ಜೋರಾಗಿ ಸಿಡಿಯುವುದಲ್ಲದೇ ಹೆಚ್ಚು ಹೊಗೆಯನ್ನು ಬೀರುತ್ತವೆ. ಬಯಲು ಪ್ರದೇಶವಿದ್ದಲ್ಲಿ ಹೊಗೆ ಸುಲಭವಾಗಿ ಮೇಲಕ್ಕೆ ಹೋಗುತ್ತದೆ. ಆದರೆ, ಹೆಚ್ಚು ಜನಸಂದಣಿ ಇರುವ ಪ್ರದೇಶಗಳಲ್ಲಿ ಹೊಗೆ ಅಲ್ಲಿಯೇ ಸುತ್ತಿಕೊಳ್ಳುವುದರಿಂದ ಈಗಾಗಲೇ ಅಸ್ತಮಾ ಕಾಯಿಲೆಯಿಂದ ಬಳಲುವವರಿಗೆ ತೀವ್ರ ಉಸಿರಾಟದ ತೊಂದರೆಯಾಗುತ್ತದೆ. ಮಕ್ಕಳನ್ನೂ ಕೆಮ್ಮು, ಶೀತ ಸಮಸ್ಯೆ ಬಾಧಿಸುತ್ತದೆ. ಕಣ್ಣು, ಕಿವಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಪ್ರತಿ ದೀಪಾವಳಿ ನಂತರದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯ’ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆ ಮಕ್ಕಳ ಸಲಹಾ ತಜ್ಞೆ ಡಾ.ಚೈತ್ರಾಲಿ ರಘೋಜಿ.
‘ದೀಪಾವಳಿಯಲ್ಲಿ ಅಪಾಯಕಾರಿಯಲ್ಲದ, ಕಡಿಮೆ ಶಬ್ದ ಹೊರಹೊಮ್ಮಿಸುವ ಹಾಗೂ ಪ್ರಾಣಿ, ಪಕ್ಷಿ, ಸಕಲ ಜೀವಿಗಳ ಜೀವಕ್ಕೆ ತೊಂದರೆ ನೀಡದಂತಹ ಹಸಿರು ಪಟಾಕಿಗಳನ್ನು ಬಳಸುತ್ತೇವೆ. ಆ ಮೂಲಕ ವಿಷ, ಬೆಂಕಿ, ಶಬ್ದಗಳ ವಿಕೃತಿಗೆ ವಿದಾಯ ಹೇಳುತ್ತೇವೆ. ನಿಸರ್ಗದೊಂದಿಗೆ ಸಹಬಾಳ್ವೆ ನಡೆಸುತ್ತೇವೆ. ದೀಪದಿಂದ ದೀಪ ಹಚ್ಚಿ ಮನೆ ಮನ ಬೆಳಗುತ್ತೇವೆ. ಆ ಮೂಲಕ ಪರಿಸರ ಸಮತೋಲನಕ್ಕೆ ನಮ್ಮದೇ ಆದ ಕೊಡುಗೆ ನೀಡುತ್ತೇವೆ ಎಂದು ಮಕ್ಕಳು ಹಾಗೂ ಹಿರಿಯರು ಪ್ರತಿಜ್ಞೆ ಮಾಡಬೇಕು. ಪಟಾಕಿಗಳನ್ನು ಹಚ್ಚಿದ ಬಳಿಕ ಕೈಗಳನ್ನು ಚೆನ್ನಾಗಿ ತೊಳೆದುಕೊಂಡು ಊಟ ಮಾಡಬೇಕು’ ಎಂದು ಸಲಹೆ ನೀಡುತ್ತಾರೆ ಅವರು.
‘ಪಟಾಕಿ ಹಚ್ಚಿದಾಗ ಶಬ್ದಕ್ಕೆ ಬೆದರಿ ಪ್ರಾಣಿ, ಪಕ್ಷಿಗಳು ವಾರ ಕಾಲ ಆಹಾರ ಸೇವಿಸಲು ಕಷ್ಟಪಡುತ್ತವೆ. ಶಬ್ದಕ್ಕೆ ಬೆಚ್ಚಿ ನಾಯಿಗಳು ಓಡುತ್ತವೆ. ಮಕ್ಕಳೂ ಅನಾಹುತಗಳಿಗೆ ತುತ್ತಾಗುತ್ತಾರೆ. ಆದ್ದರಿಂದ ದೀಪಾವಳಿ ಹಬ್ಬವನ್ನು ಸರಳ ಹಾಗೂ ಮಾಲಿನ್ಯರಹಿತವಾಗಿ ಆಚರಿಸಲು ಜನರು ಮುಂದಾಗಬೇಕು’ ಎನ್ನುತ್ತಾರೆ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್.
‘ಸಾಧ್ಯವಾದಷ್ಟು ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ಪರಿಸರಸ್ನೇಹಿ ದೀಪಾವಳಿ ಆಚರಿಸುವುದು ಎಲ್ಲರಿಗೂ ಕ್ಷೇಮ. ಪಟಾಕಿಗಳನ್ನು ಸಿಡಿಸಿದ ನಂತರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ನೀಡಬೇಕು’ ಎಂದು ಅವರು ಮನವಿ ಮಾಡುತ್ತಾರೆ.
*ಪಟಾಕಿ ಹಚ್ಚುವ ಸಂದರ್ಭದಲ್ಲಿ ನಿಮ್ಮ ಬಳಿ ಪ್ರಥಮ ಚಿಕಿತ್ಸಾ ಕಿಟ್ ರೆಡಿ ಇರಲಿ.
* ಕಿಟ್‌ನಲ್ಲಿ ತುರ್ತು ಚಿಕಿತ್ಸೆಗೆ ಅಗತ್ಯ ಔಷಧಗಳು ಕ್ರೀಮ್‌ಗಳು ಬ್ಯಾಂಡೇಜ್‌ಗಳು ಎಲ್ಲವೂ ಇರಲಿ.
* ಪಟಾಕಿ ಹಚ್ಚುವ ಸಮಯದಲ್ಲಿ ಪುಟ್ಟ ಮಕ್ಕಳನ್ನು ಯಾವುದೇ ಕಾರಣಕ್ಕೂ ರಸ್ತೆಗೆ ಬಿಡಬಾರದು. ಪಾಲಕರು ಜೊತೆಯಲ್ಲಿಯೇ ಇರಬೇಕು
* ಪಟಾಕಿ ಹಚ್ಚುವ ಸಂದರ್ಭದಲ್ಲಿ ಜರಿ ಜರಿ ಬಟ್ಟೆ ತೊಡಬಾರದು. ಇಂತಹ ಬಟ್ಟೆಗೆ ಅಕಸ್ಮಾತ್ ಬೆಂಕಿಯ ಕಿಡಿ ತಾಗಿದಲ್ಲಿ ಬೇಗ ಹೊತ್ತಿಕೊಳ್ಳುತ್ತದೆ. ಅಲ್ಲದೇ ಚರ್ಮಕ್ಕೆ ಅಂಟಿಕೊಳ್ಳುವುದರಿಂದ ಅಪಾಯ ಹೆಚ್ಚು. ಹತ್ತಿಯಿಂದ ತಯಾರಿಸಿದ ಬಟ್ಟೆಗಳನ್ನು ಧರಿಸುವುದು ಸೂಕ್ತ. ಕಾಲಿಗೆ ಚಪ್ಪಲಿ ಅಥವಾ ಶೂ ಹಾಕಿಕೊಳ್ಳಬೇಕು * ಪಟಾಕಿಗಳನ್ನು ಹಚ್ಚಲು ಉದ್ದನೆಯ ಊದುಬತ್ತಿ ಬಳಸಬೇಕು. ಪಾಯಿಂಟ್‌ರಹಿತ ಕನ್ನಡಕವನ್ನು ಧರಿಸಬಹುದು. ರಸ್ತೆಗಳಲ್ಲಿ ಪಟಾಕಿ ಹಚ್ಚುವಾಗ ಜನ ಹಾಗೂ ವಾಹನಗಳ ಸಂಚಾರವನ್ನು ಗಮನದಲ್ಲಿರಿಸಿಕೊಳ್ಳಬೇಕು. ಪಟಾಕಿ ಹಚ್ಚುವವರಿಂದ ಯಾರಿಗೂ ತೊಂದರೆಯಾಗಬಾರದು.
* ಹೂವಿನ ಕುಂಡ ಹಾಗೂ ಕೃಷ್ಣನ ಚಕ್ರಗಳನ್ನು ದೂರದಲ್ಲಿ ನಿಂತು ಹಚ್ಚಬೇಕು. ರಾಕೆಟ್‌ಗಳನ್ನು ಹಾರಿಸಲು ಗಾಜಿನ ಬಾಟಲಿಗಳನ್ನು ಬಳಸುವುದು ಸೂಕ್ತ. ಮೋಜಿಗಾಗಿ ಪಟಾಕಿಗಳ ಮೇಲೆ ಡಬ್ಬವನ್ನು ಇರಿಸಿ ಹೊತ್ತಿಸಬಾರದು. ಪಟಾಕಿ ಸಿಡಿದಾಗ ಯಾವ ದಿಕ್ಕಿಗೆ ಡಬ್ಬ ಹಾರುವುದೋ ತಿಳಿಯುವುದಿಲ್ಲ.
* ಪಟಾಕಿ ಬಾಕ್ಸ್‌ಗಳ ಮೇಲೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ಹಾಗೂ ನ್ಯಾಷನಲ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಎನ್‌ಇಇಆರ್‌ಐ) ಲೋಗೊ ನೋಂದಿತ ಸಂಖ್ಯೆಯೊಂದಿಗೆ ಮುದ್ರಿತವಾಗಿರಬೇಕು
* ಪಟಾಕಿಗಳನ್ನು ಖರೀದಿಸುವ ಮುನ್ನ ಲೇಬಲ್‌ಗಳನ್ನು ಸರಿಯಾಗಿ ಪರಿಶೀಲಿಸಬೇಕು * ಅಧಿಕೃತ ಮಾರಾಟಗಾರರು ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಧಿಕಾರ ನೀಡುವ ಪರವಾನಗಿಯಲ್ಲಿ ನಿಗದಿಪಡಿಸಿರುವ ದಿನಾಂಕ ಹಾಗೂ ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು
* ಪಟಾಕಿ ಹಚ್ಚುವಾಗ ಗಿಡ–ಮರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಬೇಕು
* 125 ಡೆಸಿಬಲ್‌ಗೂ ಮೇಲ್ಪಟ್ಟು ಶಬ್ದವುಂಟು ಮಾಡುವ ಪಟಾಕಿಗಳನ್ನು ನಿಷೇಧಿಸಿದ್ದು ಎಲ್ಲರೂ ಕಾನೂನು ಪಾಲಿಸಬೇಕು. ಶಾಶ್ವತ ಕಿವುಡುತನ/ಕುರುಡುತನಕ್ಕೆ ಎಡೆಮಾಡಕೊಡದಿರಲು ಸಹಕರಿಸಬೇಕು * ಶಿಕ್ಷಣ ಸಂಸ್ಥೆ ಆಸ್ಪತ್ರೆ ಹಾಗೂ ವೃದ್ಧಾಶ್ರಮಗಳ ಸಮೀಪದಲ್ಲಿ ಪಟಾಕಿಗಳನ್ನು ಸಿಡಿಸಬಾರದು
ಪಟಾಕಿಗಳನ್ನು ಹಚ್ಚುವಾಗ ನಿರ್ಲಕ್ಷ್ಯ ತಾಳಿದರೆ ಕೈಗೆ ಬೆಂಕಿ ತಗುಲಬಹುದು. ಕಣ್ಣುಗಳಿಗೆ ಅಪಾಯ ಎದುರಾಗಬಹುದು. ಬಿರುಸು–ಬಾಣದಂತಹ ಮೇಲಕ್ಕೆ ಎಗರಿ ಬೆಳಕು ಬೀರುವ ಸಿಡಿಮದ್ದು ಅಷ್ಟೇ ಅಪಾಯಕಾರಿ. ಮಕ್ಕಳು– ಹಿರಿಯರೆನ್ನದೇ ಅಪಾಯ ತಂದೊಡ್ಡುವ ಇಂಥವುಗಳ ಬಗ್ಗೆ ಎಚ್ಚರಿಕೆ ಅತ್ಯಗತ್ಯ. ಸೂಚನೆ ನೀಡದೆಯೇ ಪಟಾಕಿ ಅಂಟಿಸುವುದು ಅಷ್ಟೇ ದೌರ್ಜನ್ಯದ ಸಂಗತಿ. ಯಾರಾದರೂ ದಾರಿಹೋಕರು ಹೋಗುವಾಗ ದಿಢೀರ್ ಪಟಾಕಿ ಸಿಡಿದರೆ ಭಾರಿ ಶಬ್ದದಿಂದ ಅವರಿಗೆ ಕಿವುಡುತನ ಬರುವ ಸಾಧ್ಯತೆಗಳೂ ಇರುವುದರಿಂದ ಪಟಾಕಿ ಹಚ್ಚುವ ವಿಷಯವನ್ನು ದಾರಿಹೋಕರಿಗೆ ತಿಳಿಸಬೇಕು. ಅವರು ಗಮನಹರಿಸಿ ಕಿವಿ ಮುಚ್ಚಿಕೊಳ್ಳಲು ಇದರಿಂದ ಸಹಕಾರಿಯಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿಸಲುಗಳು ಹುಲ್ಲಿನ ಬಣವೆಗಳ ಸಮೀಪದಲ್ಲಿ ಪಟಾಕಿಗಳನ್ನು ಹಚ್ಚಬಾರದು ಎಂಬುದು ತಜ್ಞರ ಸಲಹೆ. ಪಟಾಕಿಯಿಂದ ಅಕಸ್ಮಾತ್ ಸುಟ್ಟ ಗಾಯವಾದರೆ ಆ ಜಾಗಕ್ಕೆ ತಕ್ಷಣಕ್ಕೇ ಆದಷ್ಟು ತಣ್ಣನೆಯ ನೀರು ಹಾಕುವ ಮೂಲಕ ಪ್ರಥಮ ಚಿಕಿತ್ಸೆ ನೀಡಬೇಕು. ಬಹುತೇಕರಲ್ಲಿ ಸುಟ್ಟ ಗಾಯಕ್ಕೆ ನೀರು ಹಾಕಿದರೆ ಗುಳ್ಳೆ ಏಳುತ್ತದೆ ಎಂಬ ನಂಬಿಕೆಯಿದೆ. ಅದು ತಪ್ಪು. ಮೊದಲು ನೀರು ಹಾಕಿ ಆಸ್ಪತ್ರೆಗೆ ಕರೆ ತರಬೇಕು ಎಂದು ಹೇಳುತ್ತಾರೆ ಜಿಲ್ಲಾ ಆಸ್ಪತ್ರೆ ಹಿರಿಯ ಶಸ್ತ್ರಚಿಕಿತ್ರಾ ತಜ್ಞ ಡಾ.ಟಿ.ಎಂ.ರವೀಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.