ಬಂಜಾರ ಸಮುದಾಯ ವಿಶಿಷ್ಟ ಪರಂಪರೆಯನ್ನು ತನ್ನ ಒಡಲೊಳಗೆ ಹುದುಗಿಸಿಟ್ಟುಕೊಂಡಿದೆ. ಈ ಸಮುದಾಯ ಅಪ್ಪಟ ನಿಸರ್ಗ ಜೀವಿ. ಬುಡಕಟ್ಟು ಹಿನ್ನೆಲೆಯ ಬಂಜಾರರ ಜೀವನ ಕ್ರಮ ಪ್ರಕೃತಿಯೊಂದಿಗೆ ಹಾಸುಹೊಕ್ಕಾಗಿದೆ. ಆಧುನಿಕ ಕಾಲಘಟ್ಟದಲ್ಲೂ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಜತನದಿಂದ ಕಾಪಿಟ್ಟುಕೊಂಡಿರುವ ಇವರು ದೀಪಾವಳಿ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.
‘ದವಾಳಿ’ ಅರ್ಥಾತ್ ದೀಪಾವಳಿಯು ಬಂಜಾರ ಸಂಸ್ಕೃತಿಗೆ ಹಿಡಿದ ಕೈಗನ್ನಡಿ. ಬೆಳಕಿನ ಹಬ್ಬವನ್ನು ‘ಕಾಳಿಮಾಸ್’ ಮತ್ತು ‘ದವಾಳಿ’ ಎಂದು ವರ್ಗೀಕರಿಸಿಕೊಂಡಿರುವ ಇವರು ಈ ಎರಡು ದಿನ ಬೇರೆ ಬೇರೆ ವಿಧಿ ವಿಧಾನಗಳೊಂದಿಗೆ ಹಬ್ಬ ಆಚರಿಸುತ್ತಾರೆ.
ದವಾಳಿಯು ಸಿಹಿ ನೈವೇದ್ಯದ ಪೂಜಾ ವಿಧಿಗಳನ್ನೊಳಗೊಂಡರೆ, ಕಾಳಿಮಾಸ್ ಎಂಬುದು ಕುರಿ ಬಲಿಯ ಪೂಜೆಯಾಗಿ ಆಚರಣೆಯಲ್ಲಿದೆ.
ಕಾಳಿಮಾಸ್ ದಿನ ಮಾತ್ರ ತಯಾರಿಸುವ ‘ಸಳೋಯಿ’ ಈ ಸಮುದಾಯದವರ ಪ್ರಿಯವಾದ ಮಾಂಸಾಹಾರ. ಕುರಿಯ ರಕ್ತ ಹಾಗೂ ಮಾಂಸದಿಂದ ತಯಾರಿಸುವ ಈ ಖಾದ್ಯ ಅತ್ಯಂತ ಸ್ವಾದಿಷ್ಟಕರವಾದುದು. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಹಿಂದೊಮ್ಮೆ ಬಂಜಾರರ ತಾಂಡಾವೊಂದಕ್ಕೆ ಭೇಟಿ ನೀಡಿದ್ದಾಗ ಸಳೋಯಿ ಮತ್ತು ಬಾಟ್ಟಿ (ಅಕ್ಕಿ ರೊಟ್ಟಿ) ಸವಿದು ಖುಷಿಪಟ್ಟಿದ್ದರು.
ತಾಂಡಾದ ಎಲ್ಲಾ ಮನೆಗಳಿಂದ ಇಂತಿಷ್ಟು ‘ವರಾಡ’ (ಚಂದಾ) ಕಲೆಹಾಕಿ ಕುರಿ ಅಥವಾ ಮೇಕೆಯನ್ನು ಖರೀದಿಸಿ ತರುವ ಊರಿನ ಮುಖಂಡರು, ನರಕ ಚತುರ್ದಶಿಯಂದು ಸೂರ್ಯ ನೆತ್ತಿಗೇರುವ ಮುನ್ನವೇ ಅವುಗಳನ್ನು ದೇವರಿಗೆ ಬಲಿ ಕೊಡುತ್ತಾರೆ. ಬಳಿಕ ದೇವಸ್ಥಾನದ ಎದುರೇ ಸೌದೆ ಒಲೆ ಹೂಡಿ ಸಳೋಯಿ ಸಿದ್ಧಪಡಿಸುತ್ತಾರೆ.
ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಚಕ್ಕೆ, ಲವಂಗ ಸೇರಿದಂತೆ ಇತರೆ ಪದಾರ್ಥಗಳಿಂದ ಮಸಾಲೆ ಸಿದ್ಧಪಡಿಸಿಕೊಂಡು ಅದನ್ನು ದೊಡ್ಡ ಪಾತ್ರೆಯೊಂದರಲ್ಲಿ ಚೆನ್ನಾಗಿ ಬೇಯಿಸಿರುವ ಮಾಂಸದ ಜೊತೆ ಬೆರೆಸುತ್ತಾರೆ. ನಂತರ ಅದಕ್ಕೆ ರಾಗಿ ಹಿಟ್ಟು ಹಾಕಿ ಹದವಾಗಿ ಕುದಿಸುತ್ತಾರೆ. ಹಾಗೆ ಸಿದ್ಧವಾಗುವ ಖಾದ್ಯ ಬಾಯಲ್ಲಿ ನೀರೂರಿಸುತ್ತದೆ. ರಾಗಿ ಹಿಟ್ಟು ಹಾಕಿ ತಯಾರಿಸುವುದೇ ಸಳೋಯಿಯ ವಿಶೇಷತೆ.
ಇದರೊಂದಿಗೆ ‘ಸಾರಿ ಚಾವ್ಳೇರ್ ಲಾಪ್ಸಿ’ (ಅಕ್ಕಿ ಮತ್ತು ಬೆಲ್ಲದಿಂದ ಮಾಡುವ ಪಾಯಸ) ಸಿದ್ಧಪಡಿಸಿ ಮಧ್ಯಾಹ್ನದ ವೇಳೆಗೆ ದೇವಸ್ಥಾನದ ಎದುರು ‘ವೀಂತಿ’ (ನೈವೇದ್ಯ) ಮಾಡುತ್ತಾರೆ. ಅದಾದ ನಂತರ ಸಳೋಯಿಯನ್ನು ಊರಿನ ಎಲ್ಲಾ ಮನೆಗಳಿಗೂ ಸಮ ಪ್ರಮಾಣದಲ್ಲಿ ಹಂಚಲಾಗುತ್ತದೆ. ಆ ಮೂಲಕ ಸಮಾನತೆಯ ಸಂದೇಶವನ್ನು ಸಾರಲಾಗುತ್ತದೆ.
ಹಿರಿಯರು, ಕಿರಿಯರು ಎನ್ನದೆ ಎಲ್ಲರೂ ಮನೆಗಳಿಂದ ಟಿಫನ್ ಬಾಕ್ಸ್, ಚಿಕ್ಕ ಪಾತ್ರೆಗಳನ್ನು ಹಿಡಿದು ದೇವಸ್ಥಾನಗಳಿಗೆ ಹೋಗಿ ಸಳೋಯಿ ಹಾಕಿಸಿಕೊಳ್ಳಲು ಸರದಿಗಾಗಿ ಕಾಯುತ್ತಾ ನಿಲ್ಲುತ್ತಾರೆ. ಬಳಿಕ ಅಲ್ಲಿ ಹಂಚುವ ಪಾಯಸ ಮತ್ತು ಸಳೋಯಿ ತಿಂದು ಖುಷಿ ಪಡುತ್ತಾರೆ. ಮನೆಗೆ ಬಂದ ನಂತರ ಸಳೋಯಿಯನ್ನು ಮೃತಪಟ್ಟ ಮನೆಯ ಹಿರಿಯರಿಗೆ ಅರ್ಪಿಸಿ (ನೈವೇದ್ಯ ಮಾಡಿ), ಮನೆ ಮಂದಿಯೆಲ್ಲಾ ಅಕ್ಕಿ ರೊಟ್ಟಿಯೊಂದಿಗೆ ಸವಿಯುತ್ತಾರೆ.
ದವಾಳಿ ಅರ್ಥಾತ್ ಬಲಿಪಾಡ್ಯಮಿ ದಿನ ಅತ್ತೆ ಮತ್ತು ಸೊಸೆಯಂದಿರು ಮಡಿಯಲ್ಲಿ ‘ಘೋಟಿಗಾಟಿ’ (ಅಕ್ಕಿ ಮತ್ತು ಬೆಲ್ಲದ ಮುದ್ದೆ), ‘ಸಾರಿ ಚಾವ್ಳೇರ್ ಲಾಪ್ಸಿ’, ಪಲ್ಯ ಹಾಗೂ ತೊಗರಿ ಬೇಳೆ ಮತ್ತು ಹೆಸರು ಕಾಳು ಹಾಕಿ ಅನ್ನ ತಯಾರಿಸುತ್ತಾರೆ. ಅಕ್ಕಿ ಹಿಟ್ಟನ್ನು ಹಿತಮಿತವಾಗಿ ಬೆಲ್ಲದೊಂದಿಗೆ ಬೆರೆಸಿ ಅದನ್ನು ಚೆನ್ನಾಗಿ ಕುದಿಸಿ, ಹಸುವಿನ ತುಪ್ಪ ಬೆರೆಸಿ ರಾಗಿ ಮುದ್ದೆಯ ರೀತಿ ನಾದುವುದು ‘ಘೋಟಿಗಾಟಿ’ಯ ವಿಶೇಷತೆ.
ಹೀಗೆ ತಯಾರಿಸಿದ ಖಾದ್ಯಗಳನ್ನು ಮಣ್ಣಿನ ಒಲೆಯ ಮುಂದಿಟ್ಟು ಮನೆಯ ಹಿರಿಯರಿಗೆಲ್ಲಾ ‘ಧಬುಕಾರ್’ (ಅರ್ಪಣೆ ಮಾಡುವುದು) ನೀಡಲಾಗುತ್ತದೆ. ಮಡಿದ ಎಲ್ಲರ ಹೆಸರು ಹೇಳಿ ಆ ಖಾದ್ಯಗಳನ್ನು ಒಲೆಗೆ ಹಾಕಿ ತುಪ್ಪ ಸುರಿಯಲಾಗುತ್ತದೆ. ಮದುವೆಯ ಮುನ್ನವೇ ಮೃತಪಟ್ಟಿರುವವರಿಗೆ ತೊಗರಿ ಬೇಳೆ ಮತ್ತು ಹೆಸರು ಕಾಳು ಹಾಕಿ ತಯಾರಿಸಿದ ಅನ್ನವನ್ನಷ್ಟೇ ಅರ್ಪಿಸುವುದು ಸಂಪ್ರದಾಯ.
ಧಬುಕಾರ್ ನೀಡಿದ ನಂತರ ಊರಿನವರೆಲ್ಲಾ ದೇವಸ್ಥಾನದ ಬಳಿ ಸೇರುತ್ತಾರೆ. ಅಲ್ಲಿ ಸಾಂಪ್ರದಾಯಿಕ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ಅದೇ ದಿನ ರಾತ್ರಿ ಯುವತಿಯರು ದೀಪ ಹಿಡಿದು ಮನೆಮನೆಗೆ ಹೋಗಿ ಇಡೀ ರಾತ್ರಿ ‘ಮೇರಾ’ ಮಾಡುತ್ತಾರೆ. ಮೇರಾ ಎಂದರೆ ಪ್ರತಿಯೊಬ್ಬರಿಗೂ ಶುಭಾಶಯ ಕೋರುವುದು ಎಂದರ್ಥ. ಹೀಗೆ ಬಂದ ಯುವತಿಯರಿಗೆ ಮನೆಯವರು ಕೈಲಾದಷ್ಟು ಕಾಣಿಕೆ ನೀಡಿ, ದೀಪಕ್ಕೆ ಎಣ್ಣೆ ಹಾಕಿ ಕಳಿಸಿಕೊಡುತ್ತಾರೆ. ಇದರೊಂದಿಗೆ ಹಬ್ಬದ ಸಂಭ್ರಮಕ್ಕೆ ತೆರೆ ಬೀಳಲಿದೆ.
ದವಾಳಿಯು ಯುವತಿಯರ ಹಬ್ಬ. ಇದಕ್ಕಾಗಿ ಅವರು ತಿಂಗಳಿಂದಲೂ ಸಿದ್ಧತೆ ನಡೆಸುತ್ತಾರೆ. ಊರಿನ ಸೇವಾಲಾಲ್ ಮರಿಯಮ್ಮ ದೇವಸ್ಥಾನದ ಎದುರು ಪ್ರತಿ ರಾತ್ರಿ ಸೇರುವ ಯುವತಿಯರು, ಹಿರಿಯರ ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುವುದು ವಾಡಿಕೆ. ಈ ಸಂಪ್ರದಾಯ ಕ್ರಮೇಣ ಮರೆಯಾಗುತ್ತಿದೆ.
ಕಾಳಿಮಾಸ್‌ನ ಮಾರನೇ ದಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಯುವತಿಯರು ಬಿದಿರಿನ ಬುಟ್ಟಿಗಳನ್ನು ಹಿಡಿದು ಕಾಡಿಗೆ ಹೋಗುತ್ತಾರೆ. ಬೆಟ್ಟಗುಡ್ಡಗಳಲ್ಲಿ ಸಿಗುವ ಕೆಲವು ಹೂವುಗಳ ಜೊತೆಗೆ ರಾಗಿ, ಜೋಳದ ತೆನೆ ಅಥವಾ ಇತರೆ ಬೆಳೆಗಳೊಂದಿಗೆ ತಾಂಡಾಕ್ಕೆ ಮರಳುತ್ತಾರೆ. ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ನಂತರ ಪ್ರತಿ ಮನೆಗೂ ತೆರಳಿ ‘ಗೋದಣೊ’ (ಸಗಣಿಯ ಉಂಡೆ) ಮಾಡುತ್ತಾರೆ. ಅವುಗಳನ್ನು ತಾವು ತಂದಿರುವ ಹೂವುಗಳಿಂದ ಅಲಂಕರಿಸಿ ದನದ ಕೊಟ್ಟಿಗೆ, ದೇವರ ಕೋಣೆ, ತಿಪ್ಪೆ, ಕೃಷಿ ಸಲಕರಣೆಗಳು, ಮುಖ್ಯ ಬಾಗಿಲು ಹೀಗೆ ವಿವಿಧೆಡೆ ಇಟ್ಟು ಒಳಿತಾಗಲೆಂದು ಹರಸುತ್ತಾರೆ.
ಯುವತಿಯರು ‘ಗೋದಣೊ’ ಮಾಡಿದ ನಂತರವೇ ಮನೆಗಳಲ್ಲಿ ಹಿರಿಯರಿಗೆ ‘ಧಬುಕಾರ್’ ನೀಡಲಾಗುತ್ತದೆ. ಗೋದಣೊ ಮಾಡದೇ ಧಬುಕಾರ್ ನೀಡುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.