ದಾವಣಗೆರೆ: ಬಡ ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮಾದರಿಯಲ್ಲಿ ದಾವಣಗೆರೆ–ಹರಿಹರ ಅಭಿವೃದ್ಧಿ ಪ್ರಾಧಿಕಾರದ (ಧೂಡಾ) ವತಿಯಿಂದ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ಇಲ್ಲಿನ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಂಗಳವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
‘ದಾವಣಗೆರೆ ಮತ್ತು ಹರಿಹರ ಅವಳಿ ನಗರ ಅಭಿವೃದ್ಧಿಯಾಗಬೇಕು. ಹೊಸ ಬಡಾವಣೆ, ನಿವೇಶನ ಹಾಗೂ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಡಾವಣೆಗಳ ಆಧಾರದ ಮೇರೆಗೆ ದರ ನಿಗದಿಪಡಿಸಲಾಗುತ್ತದೆ. ಮುಂದಿನ ಪ್ರಕ್ರಿಯೆ ಶೀಘ್ರ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.
‘ದಾವಣಗೆರೆಯ ಉತ್ತಮ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಬಡಾವಣೆ ನಿರ್ಮಾಣವಾಗಿವೆ. ಪಾರದರ್ಶಕತೆ ಕಾಯ್ದುಕೊಳ್ಳಲು ‘ಇ–ಸ್ವತ್ತು’ ಆನ್‌ಲೈನ್ ಮೂಲಕ ನೀಡಲಾಗುವುದು. ನೆರೆಹೊರೆಯ ಜಿಲ್ಲೆಗಳಿಗೆ ಹೋಲಿಸಿದರೆ ಅತಿ ವೇಗವಾಗಿ ನಗರ ಅಭಿವೃದ್ಧಿ ಹೊಂದುತ್ತಿದೆ’ ಎಂದು ಹೇಳಿದರು.
‘40 ಸಾವಿರ ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ವಿನೋಬನಗರ, ಎಲ್ಲಮ್ಮನಗರ, ಜಾಲಿನಗರ ಸೇರಿದಂತೆ ಹತ್ತಾರು ಬಡಾವಣೆಗಳ ಜನರ ಆಸ್ತಿ ಸಕ್ರಮಗೊಂಡಿದೆ. ತಂದೆ ಶಾಮನೂರು ಶಿವಶಂಕರಪ್ಪ ಹಾಗೂ ನನ್ನ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಸ್ಮರಿಸುತ್ತಿದ್ದಾರೆ. ಜನರಿಗೆ ಅನುಕೂಲ ಮಾಡಿಕೊಡಲು ಬೆಂಗಳೂರು ಮಾದರಿಯನ್ನು ಅನುಸರಿಸಲಾಗುತ್ತಿದೆ’ ಎಂದರು.
‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮೇಯರ್ ಕೆ.ಚಮನ್ ಸಾಬ್, ಉಪಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಧೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ ಇದ್ದರು.
‘ಸ್ಮಾರ್ಟ್ ಸಿಟಿ ತೃಪ್ತಿ ಇಲ್ಲ’
ದಾವಣಗೆರೆ: ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಿಂದ ಹಲವು ಉತ್ತಮ ಕಾಮಗಾರಿಗಳಾಗಿವೆ ಹೊರತು ಸ್ಮಾರ್ಟ್ ಸಿಟಿ ಯೋಜನೆಯಿಂದ ನಗರದಲ್ಲಿ ಹೇಳಿಕೊಳ್ಳುವ ಕೆಲಸಗಳಾಗಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಗ್ಗೆ ತೃಪ್ತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು. ನಗರದ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ಮಳೆ ಬಂದರೆ ಎಂಸಿಸಿ ‘ಬಿ’ ಬ್ಲಾಕ್‌ನಲ್ಲಿ ಮನೆಗಳಿಗೆ ನೀರು ನುಗ್ಗುತ್ತಿತ್ತು. ಈಗ ಈ ಸಮಸ್ಯೆ ಇಲ್ಲ. ಈ ಬಡಾವಣೆ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಹೊಸ ಬಡಾವಣೆಗಳಲ್ಲಿ ಉತ್ತಮ ಗುಣಮಟ್ಟದ ರಸ್ತೆ ಚರಂಡಿ ನಿರ್ಮಾಣ ಮಾಡಬೇಕು’ ಎಂದು ತಾಕೀತು ಮಾಡಿದರು. ‘ನಗರದ ವಿವಿಧ ಬಡಾವಣೆಗಳ ವೃತ್ತಗಳನ್ನು ಯೂರೋಪ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದು. ನಗರದ ಗುಂಡಿ ವೃತ್ತ ಶಿವಪ್ಪಯ್ಯ ವೃತ್ತ ಸೇರಿದಂತೆ ಹಲವು ಬಡಾವಣೆಗಳ ವೃತ್ತಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು. ಮೇಯರ್ ಕೆ.ಚಮನ್ ಸಾಬ್ ಉಪಮೇಯರ್ ಸೋಗಿ ಶಾಂತಕುಮಾರ್ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಆಯುಕ್ತೆ ರೇಣುಕಾ ಪಾಲಿಕೆ ನಾಮನಿರ್ದೇಶನ ಸದಸ್ಯರಾದ ಸುರಭಿ ಶಿವಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.