ದಾವಣಗೆರೆ: ‘ಪ್ರಸ್ತುತ ದಿನಗಳಲ್ಲಿ ಬಹುತೇಕ ಸಂಘಟನೆಗಳು ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದು, ಜನರ ನೋವಿಗೆ ದನಿಯಾಗುವ ಕೆಲಸ ಮಾಡುತ್ತಿಲ್ಲ. ರಾಜಕೀಯ ಪಕ್ಷದ ತೆಕ್ಕೆಗೆ ಸೇರುವ ಸಂಘಟನೆಗಳು ಬಹುಬೇಗ ಅಂತ್ಯ ಕಾಣುತ್ತವೆ’ ಎಂದು ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್ ಎಚ್ಚರಿಕೆ ನೀಡಿದರು.
ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಗಳು ನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಸ್ಲಂ ಜನರ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ‘ಜನಪರವಾಗಿ ಕೆಲಸ ಮಾಡುವ ಜನರಿಗೆ ದನಿಯಾಗುವ ಸಂಘಟನೆಗಳು ಇಂದು ಇಲ್ಲದಂತಾಗಿದ್ದು, ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ಕೊಳೆಗೇರಿ ನಿವಾಸಿಗಳ ಪರವಾಗಿ ಕೆಲಸ ಮಾಡುತ್ತಿದೆ. ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದರೆ ಜನರ ಪರವಾಗಿ ಕೆಲಸ ಮಾಡಲು ಆಗುವುದಿಲ್ಲ’ ಎಂದು ಹೇಳಿದರು.
ಪ್ರಣಾಳಿಕೆ ಬಿಡುಗಡೆ ಮಾಡಿದ ವಕೀಲ ಬಿ.ಎಂ.ಹನುಮಂತಪ್ಪ ಮಾತನಾಡಿ, ‘ಕೊಳಚೆಯಲ್ಲಿ ಹುಟ್ಟಿ, ಅಲ್ಲೇ ಬೆಳೆದು ಅಲ್ಲಿಯೇ ಸಾಯುವ ನಾವುಗಳು ಚುನಾವಣೆ ವೇಳೆ ತಲೆ ತಗ್ಗಿಸಿ ಮತದಾನ ಮಾಡುವ ಜತೆಗೆ ನಮಗೆ ದೊರೆಯಬೇಕಾದ ಹಕ್ಕುಗಳನ್ನು ತಲೆ ಎತ್ತಿ ಕೇಳುವ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮತ ಹಾಕುವ ವೇಳೆ ಮಾತ್ರ ರಾಜಕೀಯ ಪಕ್ಷಗಳಿಗೆ ಕೊಳೆಗೇರಿ, ದಲಿತ, ಬಡವರು ನೆನಪಾಗುತ್ತಾರೆ. ಸೌಲಭ್ಯ ನೀಡುವಾಗ ಮಾತ್ರ ಅವರು ನೆನಪಾಗುವುದಿಲ್ಲ. ಇದಲ್ಲದೇ ಆಡಳಿತಾರೂಢ ಪಕ್ಷಗಳೂ ಶ್ರೀಮಂತರ ಓಲೈಕೆಗೆ ನಿಂತಿದ್ದು, ಈಗಿರುವ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಲು ಪಣ ತೊಟ್ಟಂತಿದೆ’ ಎಂದು ಕಿಡಿ ಕಾರಿದರು.
ಕಾರ್ಯಕ್ರಮದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ದಾವಣಗೆರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಎಚ್.ರೇಣುಕಾ ಯಲ್ಲಮ್ಮ, ಗೌರವಾಧ್ಯಕ್ಷ ಎಂ.ಶಬ್ಬೀರ್ ಸಾಬ್, ಮಂಜುಳಾ, ಬಾಲಪ್ಪ ಇದ್ದರು.
ಭೋವಿ ಸಮಾಜ: ದಾವಣಗೆರೆ ಜಿಲ್ಲಾ ಭೋವಿ ಸಮಾಜದಿಂದ ಭೋವಿ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ವಿದ್ಯಾರ್ಥಿನಿಲಯದ ಅಧ್ಯಕ್ಷ ಪಿ.ಶ್ರೀನಿವಾಸ್ ಮಾತನಾಡಿ, ‘ವಿಶ್ವ ಜ್ಞಾನಿ, ಭಾರತದ ಶ್ರೇಷ್ಠ ನಾಯಕ, ಸಂವಿಧಾನದ ಹಿಂದಿನ ದೊಡ್ಡ ಶಕ್ತಿ, ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ’ ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಮಂಜುನಾಥ್., ತಾಲ್ಲೂಕು ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಚೌಡಪ್ಪ, ಜಿ ಪವನ್, ಮುಖಂಡರಾದ ಸೋಮಣ್ಣ ಜಾಡನಕಟ್ಟೆ, ರಾಜಶೇಖರ, ವೆಂಕಟೇಶ ಜಿ. ಶ್ರೀಧರ, ದಶರಥ, ಕೃಷ್ಣಪ್ಪ, ಚಿರಡೋಣಿ ಮಂಜುನಾಥ ಇದ್ದರು.
ಮಜ್ಜಿಗೆ ವಿತರಣೆ: ನಗರದ ಜಯದೇವ ಸರ್ಕಲ್‌ನಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ನಡೆದ ಕಾರ್ಯಕ್ರಮದಲ್ಲಿ ಜನರಿಗೆ 2000 ಮಜ್ಜಿಗೆ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷೆ ಮಾಲಾ ನಾಗರಾಜ್, ಬಿ. ಎಚ್. ಮಂಜುನಾಥ್, ಆನಂದ್ ಇಟ್ಟಿಗುಡಿ, ಫಯಾಜ್ ಖಾನ್, ಬಸವರಾಜ್, ಮಂಜುನಾಥ್, ರಾಕೇಶ, ಅನಿಲ್, ಅಕ್ಬರ್ ಭಾಷಾ, ಸದ್ದಾಮ್ ಹುಸೇನ್, ರಾಘವೇಂದ್ರ ಡಿ.ಜೆ, ಬಸವರಾಜ ಎಲಿಗಾರ್, ಫೈರೋಜ್ ಅಮಾನ್ ನಾಗರಾಜ್ ಇದ್ದರು.
ಕರವೇ: ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದ ಹೊರವಲಯದ ಬಾಡ ಕ್ರಾಸ್‌ನಲ್ಲಿರುವ ಪಂಚಾಕ್ಷರಿ ಗವಾಯಿಗಳ ಅಂಧರ ಶಿಕ್ಷಣ ಸಮಿತಿಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶಿವಮೂರ್ತಿ ಸ್ವಾಮಿ ಮಾತನಾಡಿ, ‘ಭಾರತ ಸದೃಢವಾಗಲು ಅಂಬೇಡ್ಕರ್ ಬರೆದಿರುವ ಸಂವಿಧಾನವೇ ಸಾಕ್ಷಿ. ಇಂದಿನ ಯುವಕರಿಗೆ ಅಂಬೇಡ್ಕರ್ ಸ್ಫೂರ್ತಿ’ ಎಂದರು.
ಪತ್ರಕರ್ತ ಬಕ್ಕೇಶ್ ನಾಗನೂರು, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ, ನಗರ ಪಾಲಿಕೆಯ ಸದಸ್ಯ ಪಾಮೇನಹಳ್ಳಿ ನಾಗರಾಜ್, ಉದ್ಯಮದಾರರ ಘಟಕದ ಉಪಾಧ್ಯಕ್ಷ ಒ. ಮಹೇಶ್ವರಪ್ಪ, ಜಿ.ಎಸ್. ಸಂತೋಷ್, ಎನ್.ಟಿ. ಹನುಮಂತಪ್ಪ, ಡಿ. ಮಲ್ಲಿಕಾರ್ಜುನ್, ಎನ್‌ಬಿಎ ಲೋಕೇಶ್, ಜಿ. ಬಸವರಾಜ್, ಆರ್. ರವಿಕುಮಾರ್, ಬಾಡ ಸೈಫುಲ್ಲಾ, ಸೋಮಯ್ಯ , ಪರಮೇಶ್. ಮಂಜುನಾಥ್, ಮಹೆಬೂಬ್, ಮೋಹನ್, ಸಲೀಂ ಇದ್ದರು.
ಆವರಗೆರೆಯಲ್ಲಿ ಅಂಬೇಡ್ಕರ್ ಜಯಂತಿ: ಜಾತಿಗಳಿಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿ ಸಮಾಜದ ಕಟ್ಟ ಕಡೆಯ ಸಮಾಜಗಳಿಗೂ ಪ್ರಾತಿನಿಧ್ಯ ನೀಡಿ ಅಂತಹ ಸಮಾಜಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಎಚ್.ಜಿ.ಉಮೇಶ್ ಹೇಳಿದರು.
ಆವರಗೆರೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಅವರು ಮಾತನಾಡಿ, ‘ಸಾಕಷ್ಟು ನೋವಿನಲ್ಲೂ ಭಾರತ ಮಾತೆಯ ಕಾವಲುಗಾರನಾಗಿ ಕೆಲಸ ಮಾಡುತ್ತಾ, ಸಮ ಸಮಾಜ, ಜನರಿಗೆ ಉದ್ಯೋಗ, ಶಿಕ್ಷಣ ಮಾತ್ರವಲ್ಲದೇ ರಾಜಕೀಯದಲ್ಲೂ ಸಮಾನತೆ ಕಲ್ಪಿಸುವಲ್ಲಿ ಶ್ರಮಿಸಿದರು’ ಎಂದು ಸ್ಮರಿಸಿದರು.
ಎನ್.ಸಿದ್ದೇಶ್, ಈಶ್ವರ್, ಮಂಜುನಾಥ್, ರಮೇಶ್, ಸೈಯದ್, ದಾದಾಪೀರ್, ಪರಶುರಾಮ, ಮೋಹನ್, ಆನಂದ, ಹಾಲಮ್ಮ, ಸಿ.ಪಿ.ಮಲ್ಲಿಕಾರ್ಜುನ್ ಇದ್ದರು.
ಜೆಡಿಎಸ್ ಕಾರ್ಮಿಕ ಸಂಘದ ಕಚೇರಿ: ಜೆಡಿಎಸ್ ಕಾರ್ಮಿಕ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಕಾರ್ಮಿಕ ವಿಭಾಗದ ಹಿರಿಯ ಮುಖಂಡ ಎಂ. ರಾಜಾಸಾಬ್ ಮಾತನಾಡಿ, ‘ಅಂಬೇಡ್ಕರ್‌ರವರು ಭಾರತ ದೇಶಕ್ಕೆ ಸಂವಿಧಾನ ಬರೆದು ಇತಿಹಾಸ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್.ಜಯಣ್ಣ, ದಾದಾಪೀರ್, ಮಾಸೂಮ್, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ
ರಮಿಜಾ ಬಿ., ಲೀನಾ, ಹುಸ್ನಾಬಾನು ಇದ್ದರು.
‘ಬಿಜೆಪಿ ಸಂವಿಧಾನ ಬದಲಿಸಿದರೆ ರಕ್ತ ಕ್ರಾಂತಿ’
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ತೆರೆಮರೆಯಲ್ಲಿ ಸಂವಿಧಾನವನ್ನು ಬದಲಿಸಲು ಹುನ್ನಾರ ನಡೆಸುತ್ತಿದೆ. ಒಂದೊಮ್ಮೆ ಸಂವಿದಾನ ಬದಲಿಸಿದರೆ ದೇಶದಲ್ಲಿ ರಕ್ತಕ್ರಾಂತಿ ಆಗಲಿದೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಎಚ್ಚರಿಕೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಇನ್‌ಟೆಕ್ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ವೋಟಿಗಾಗಿ ಸಂವಿಧಾನಕ್ಕೆ ಅಪಚಾರ ಎಸಗಲು ಬಸವರಾಜ ಬೊಮ್ಮಾಯಿ ಸರ್ಕಾರ ಒಳಮೀಸಲಾತಿ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಅವೈಜ್ಞಾನಿಕ. ಈ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೂರು ದಶಕಗಳಿಂದ ಮುಸ್ಲಿಂರಿಗೆ ನೀಡಲಾಗುತ್ತಿದ್ದ ಶೇ 4ರ ಮೀಸಲಾತಿ ರದ್ದು ಪಡಿಸಲು ಕರ್ನಾಟಕ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ತಪ್ಪು ಕಲ್ಪನೆಯನ್ನು ಆಧರಿಸಿದೆ’ ಎಂದರು.
ಜಿಲ್ಲಾ ಕಾಂಗ್ರೆಸ್ ಇನ್‌ಟೆಕ್ ವಿಭಾಗ ಅಧ್ಯಕ್ಷ ಕೆ.ಎಂ. ಮಂಜುನಾಥ್, ಮುಖಂಡರಾದ ಬಿ.ಎನ್. ವಿನಾಯಕ, ಮಹ್ಮದ್ ಜಿಕ್ರಿಯಾ, ಆಲೂರ್ ಸಿದ್ದೇಶ್, ಬಸವಾಪಟ್ಟಣ ಖಲೀಲ್ ಸಾಬ್, ಕೆ.ಜಿ. ರಹಮತ್ತುಲ್ಲಾ, ಚಿನ್ನಸಮುದ್ರ ಶೇಖರ್ ನಾಯ್ಕ್, ಭಾಸಿತ್‌ಖಾನ್, ಹುಲಿಕಟ್ಟೆ ಚಂದ್ರಪ್ಪ, ಇಟ್ಟಿಗುಡಿ ಮಂಜುನಾಥ್, ಆರ್. ಸೂರ್ಯಪ್ರಕಾಶ್, ಎನ್.ಎಸ್. ವೀರಭದ್ರಪ್ಪ, ಬಿ.ಎಚ್. ಉದಯಕುಮಾರ್, ಡಿ. ಶಿವಕುಮಾರ್, ಮುಬಾಕರ್, ಕೆ. ವಸಂತ್‌ನಾಯ್ಕ್, ಬಸವರಾಜ್, ಹೊನ್ನೂರು ಗೊಲ್ಲರಹಟ್ಟಿ ಲಿಂಗರಾಜ್, ಖಲೀಲ್ ಅಹ್ಮದ್, ಗಣೇಶ್, ವಸಂತ್, ಗಂಗಾಧರ್, ಹಾಜರಿದ್ದರು.
ಭೀಮ್ ಸೇನೆಯಿಂದ ಕ್ಷೀರಾಭಿಷೇಕ
ಅಂಬೇಡ್ಕರ್ ಜಯಂತಿ ಪ್ರಯುಕ್ತ ಕರ್ನಾಟಕ ಭೀಮ್ ಸೇನೆ ವತಿಯಿಂದ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಡೆಯಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಕ್ಷೀರಾಭಿಷೇಕ ನೆರವೇರಿಸಿ, ಬಳಿಕ ತುಳಸಿ ಹಾಗೂ ಪುಷ್ಪಗಳ ಮಾಲಾರ್ಪಣೆ ನೆರವೇರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರವನ್ನ ಹೊತ್ತ ರಥಕ್ಕೆ ಕರ್ನಾಟಕ ಭೀಮ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯ ಪ್ರಕಾಶ್ ಕೆ. ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಜಯದೇವ ವೃತ್ತ, ಗಾಂಧಿ ಸರ್ಕಲ್, ಪಿ.ಬಿ.ರಸ್ತೆ, ಎವಿಕೆ ಕಾಲೇಜು ರಸ್ತೆ, ನಾಯಕರ ಹಾಸ್ಟೆಲ್ ನಲ್ಲಿ ಕೊನೆಗೊಂಡಿತು.
ಕರ್ನಾಟಕ ಭೀಮ್ ಸೇನೆಯ ಮನೋಹರ್, ಮಂಜುಳಾ, ಚೈತ್ರ ಗುರುರಾಜ್, ಕೃಷ್ಣ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.