ಚನ್ನಗಿರಿ (ದಾವಣಗೆರೆ): ತಾಲ್ಲೂಕಿನ ಜೋಳದಹಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಅಸ್ವಸ್ಥಗೊಂಡವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.
ಗುರುವಾರ 17 ಮಂದಿ ಅಸ್ವಸ್ಥರಾಗಿದ್ದರು. ಶುಕ್ರವಾರ ಮತ್ತೆ 27 ಜನರ ಆರೋಗ್ಯದಲ್ಲಿ ಏರುಪೇರಾಗಿದೆ. ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಪೈಕಿ 15 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
‘ಗ್ರಾಮದ ಚರಂಡಿಗಳಲ್ಲಿ ಕುಡಿಯುವ ನೀರಿನ ಪೈಪ್‌ಗಳನ್ನು ಅಳವಡಿಸಿರುವುದು ಕಂಡು ಬಂದಿದೆ. ಪೈಪ್‌ಗಳು ಒಡೆದು, ಮಳೆನೀರು ಹಾಗೂ ಕಲುಷಿತ ನೀರು ಅವುಗಳಲ್ಲಿ ಸೇರಿರುವ ಸಾಧ್ಯತೆ ಇದೆ. ಚರಂಡಿಗಳಲ್ಲಿನ ಪೈಪ್‌ಗಳನ್ನು ತೆಗೆದು, ಹೊರ ಭಾಗದಲ್ಲಿ ಹೊಸದಾಗಿ ಪೈಪ್ ಅಳವಡಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ಶನಿವಾರದಿಂದಲೇ ಈ ಕೆಲಸ ಆರಂಭವಾಗಲಿದೆ. ಗ್ರಾಮದಲ್ಲಿನ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆಯೂ ನಿರ್ದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
‘ಅಸ್ವಸ್ಥರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 15 ಜನ ಗುಣಮುಖರಾಗಿದ್ದಾರೆ. ಉಳಿದವರೂ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.