ADVERTISEMENT

ದಾವಣಗೆರೆ | ಬೇಸಿಗೆ ಎದುರಿಸಲು ಸಿದ್ದತೆ: ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್

ಜಿಲ್ಲೆಯಲ್ಲಿ 126 ಸಮಸ್ಯಾತ್ಮಕ ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 6:43 IST
Last Updated 23 ಫೆಬ್ರುವರಿ 2024, 6:43 IST
ಡಾ.ಎಂ.ವಿ. ವೆಂಕಟೇಶ್
ಡಾ.ಎಂ.ವಿ. ವೆಂಕಟೇಶ್    

ದಾವಣಗೆರೆ: ಬೇಸಿಗೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದರು.

‘ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಆಗಸ್ಟ್ ತಿಂಗಳಲ್ಲಿ ಶೇ 90ರಷ್ಟು ಮಳೆ ಕೊರತೆ ಇದ್ದು, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ 19 ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ಖಾಸಗಿ ಬೋರ್‍ವೆಲ್ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ತೀವ್ರ ಬಿಸಿಲು ಇರುವುದರಿಂದ ಮುಂದೆ ಸಮಸ್ಯೆಯಾಗಲಿರುವ 126 ಗ್ರಾಮಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು, ಇಲ್ಲಿ ಖಾಸಗಿ ಕೊಳವೆಬಾವಿ ಗುರುತಿಸಿಟ್ಟುಕೊಳ್ಳಲಾಗಿದೆ. ಅವುಗಳು ಲಭ್ಯವಾಗದಲಿದ್ದಲ್ಲಿ ಸಮಸ್ಯೆಯಾದ 24 ಗಂಟೆಯೊಳಗೆ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ನೀರಿನ ಸಮಸ್ಯೆ ಇಲ್ಲ. ಭದ್ರಾ ಜಲಾಶಯದ ಮೂಲಕ ತುಂಗಭದ್ರಾ ನದಿಗೆ ಹಾಗೂ ಕಾಲುವೆಗಳಿಗೆ ನೀರು ಬಿಡಿಸಲಾಗಿದೆ. ಶಾಂತಿಸಾಗರದಿಂದ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದ್ದು, ಕಾಲುವೆ ಮೂಲಕ ಶಾಂತಿಸಾಗರಕ್ಕೆ ನೀರು ಬಿಡಿಸಲಾಗಿದೆ’ ಎಂದರು.

ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಿಸುವ ಉದ್ದೇಶದಿಂದ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್‍ಗಳ ತೆರವಿಗೆ ತಂಡಗಳನ್ನು ರಚಿಸಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲೆಲ್ಲಿ ಕಾನೂನಾತ್ಮಕ ಸಮಸ್ಯೆ ಎದುರಾಗುತ್ತದೆ, ಅಂತಹ ಭಾಗದಲ್ಲಿ 144 ಸೆಕ್ಷನ್ ಜಾರಿಗೊಳಿಸಲು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಕೊಳವೆಬಾವಿ ಕೊರೆಸಲು ಅನುಮತಿ ಬೇಕು:

ಅಂತರ್ಜಲ ಮಟ್ಟ ಕಡಿಮೆಯಾಗಿದ್ದರಿಂದ ಕೊಳವೆಬಾವಿ ಕೊರೆಯಲು ನಿರ್ಬಂಧವಿದ್ದು, ಕೊಳವೆಬಾವಿ ಕೊರೆಯಲು ರಿಗ್ ಮಾಲಿಕರು ನಮೂನೆ-7 ರಲ್ಲಿ ಅನುಮತಿ ಪಡೆಯಬೇಕಾಗಿರುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ‘ಬೇಸಿಗೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದಾದ 18 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದರು.

ಅಂಕಿ ಅಂಶ

‘191 ಕೆರೆಗಳಲ್ಲಿ ನೀರಿಲ್ಲ’
ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ 212 ಕೆರೆಗಳಲ್ಲಿ 191 ಕೆರೆಗಳು ತುಂಬಿಲ್ಲ. ಉಳಿದ 22 ಕೆರೆಗಳು ಶೇ 30ರಷ್ಟು ಮಾತ್ರ ತುಂಬಿವೆ.  ‘ದಾವಣಗೆರೆ ತಾಲ್ಲೂಕಿನ 14 ಹರಿಹರ ತಾಲ್ಲೂಕಿನ 5 ಚನ್ನಗಿರಿ ತಾಲ್ಲೂಕಿನ 86 ಹೊನ್ನಾಳಿ ತಾಲ್ಲೂಕಿನ 5 ನ್ಯಾಮತಿ ತಾಲ್ಲೂಕಿನ 56 ಹಾಗೂ ಜಗಳೂರು ತಾಲ್ಲೂಕಿನ 25 ಕೆರೆಗಳು ತುಂಬಿಲ್ಲ’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.