ADVERTISEMENT

ದಾವಣಗೆರೆ: ಅಡಿಕೆ ತೋಟದತ್ತ ಚಿತ್ತ..ಬರ ತಂದ ಸವಾಲು...

ಜಿಲ್ಲೆಯಲ್ಲಿ ಬರದಿಂದ 3,000 ಹೆಕ್ಟೇರ್‌ ಅಡಿಕೆ ತೋಟ ನಾಶ.. ಟ್ಯಾಂಕರ್‌ ನೀರಿಗೆ ಲಕ್ಷಗಟ್ಟಲೇ ಖರ್ಚು...

ಚಂದ್ರಶೇಖರ ಆರ್‌.
Published 10 ಜೂನ್ 2024, 7:43 IST
Last Updated 10 ಜೂನ್ 2024, 7:43 IST
ಹೊನ್ನಾಳಿ ತಾಲ್ಲೂಕಿನ ನೆರಲಗುಂಡಿ ಗ್ರಾಮದಲ್ಲಿ ಒಣಗಿದ್ದ ಅಡಿಕೆ ತೋಟ 
ಹೊನ್ನಾಳಿ ತಾಲ್ಲೂಕಿನ ನೆರಲಗುಂಡಿ ಗ್ರಾಮದಲ್ಲಿ ಒಣಗಿದ್ದ ಅಡಿಕೆ ತೋಟ    

ದಾವಣಗೆರೆ: ಅಡಿಕೆ ತೋಟ ಉಳಿಸಿಕೊಳ್ಳಲು 10 ಕೊಳವೆಬಾವಿ ಕೊರೆಯಿಸಿದ್ದ ಹೊನ್ನಾಳಿ ತಾಲ್ಲೂಕಿನ ಕೆಂಗಲಹಳ್ಳಿಯ ರೈತ ಷಣ್ಮುಖಪ್ಪ ಅವರಿಗೆ ನೀರು ಸಿಕ್ಕಿದ್ದು 5 ಕೊಳವೆಬಾವಿಗಳಲ್ಲಿ. ಅದೂ ಅಲ್ಪಸ್ವಲ್ಪ. ಅದರಲ್ಲೇ ತೋಟ ಉಳಿಸಿಕೊಳ್ಳಲು ಅವರ ಪರದಾಟ..

ಚನ್ನಗಿರಿ ತಾಲ್ಲೂಕಿನ ಪಾಂಡೋಮಟ್ಟಿಯ ಶಿವಕುಮಾರ್ ತಮ್ಮ ಎರಡೂವರೆ ಎಕರೆ ಅಡಿಕೆ ತೋಟ ಉಳಿಸಿಕೊಳ್ಳಲು ಕೊಳವೆಬಾವಿ ನೀರು ಸಿಗದಿದ್ದಾಗ ಮೊರೆ ಹೋಗಿದ್ದು ಟ್ಯಾಂಕರ್‌ ನೀರಿಗೆ. ಅದಕ್ಕಾಗಿ ಅವರು ಲಕ್ಷಾಂತರ ರೂಪಾಯಿ ವ್ಯಯಿಸಿದ್ದರು.

ತೀವ್ರ ಬರದಿಂದ ಅಡಿಕೆ ತೋಟ ಒಣಗಿದ ಕಾರಣ ಕಂಗಾಲಾದ ದಾವಣಗೆರೆ ತಾಲ್ಲೂಕಿನ ಹೊನ್ನನಾಯ್ಕನಹಳ್ಳಿಯ ರೈತ ಬಸವರಾಜಪ್ಪ ತಮ್ಮ 2 ಎಕರೆ ಅಡಿಕೆ ತೋಟವನ್ನೇ ನಾಶಪಡಿಸಿದರು..

ADVERTISEMENT

ಇವು ಕಳೆದ ವರ್ಷದ ತೀವ್ರ ಬರದಿಂದ ಒಣಗಿದ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ರೈತರು ಪರದಾಡಿದ ಕೆಲ ಉದಾಹರಣೆಗಳಷ್ಟೆ. ಇಂತಹ ಸಾವಿರಾರು ಉದಾಹರಣೆಗಳು ಜಿಲ್ಲೆಯಲ್ಲಿ ಸಿಗುತ್ತವೆ.

ಜಿಲ್ಲೆಯಲ್ಲಿ ಇತ್ತೀಚಿನ ಕೆಲ ವರ್ಷಗಳಲ್ಲಿ ಅಡಿಕೆ ತೋಟ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ‘ಅಡಿಕೆ ನಾಡು’ ಖ್ಯಾತಿಯ ಚನ್ನಗಿರಿ ತಾಲ್ಲೂಕಿಗೆ ಸೀಮಿತವಾಗಿದ್ದ ಅಡಿಕೆ ಬೆಳೆ ಈಗ ‘ಬರದ ನಾಡು’ ಎಂಬ ಖ್ಯಾತಿಯ ಜಗಳೂರಿಗೆ ವಿಸ್ತರಿಸಿದ್ದನ್ನು ಗಮನಿಸಿದರೆ ಜಿಲ್ಲೆಯಲ್ಲಿ ಅಡಿಕೆ ಬೆಳೆಯುವ ಪ್ರದೇಶ ವಿಸ್ತೀರ್ಣರಾಗಿರುವ ಬಗೆ ಅರಿವಾಗುತ್ತದೆ.

2017–18ನೇ ಸಾಲಿನಲ್ಲಿ 47,895 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಬೆಳೆ 2023–24ನೇ ಸಾಲಿನಲ್ಲಿ 880,85.57 ಹೆಕ್ಟೇರ್ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದು, 6 ವರ್ಷಗಳಲ್ಲಿ ಅಡಿಕೆ ಬೆಳೆಯುವ ಪ್ರದೇಶ ದುಪ್ಪಟ್ಟಾಗಿದೆ.

ಚನ್ನಗಿರಿ ತಾಲ್ಲೂಕಿನಲ್ಲಿ 2015ರಿಂದ ಸತತ ಮೂರು ವರ್ಷ ಮಳೆ ಕೊರತೆಯಿಂದಾಗಿ ರೈತರು ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ನೀರಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಮತ್ತೆ ಅಂತಹ ಸ್ಥಿತಿ ಬಂದದ್ದು ಈ ವರ್ಷದಲ್ಲಿ. 

ಅಡಿಕೆ ತೋಟದಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂಬ ಆಸೆಯಿಂದ ಬಹುತೇಕ ರೈತರು ಈಗೀಗ ಅಡಿಕೆ ತೋಟ ಮಾಡುವತ್ತ ಚಿತ್ತ ಹರಿಸುತ್ತಿದ್ದಾರೆ. ಆದರೆ, ಅಡಿಕೆ ತೋಟ ಮಾಡುವಲ್ಲಿನ ಸವಾಲುಗಳ ಬಗ್ಗೆ ಮಾತ್ರ ಚಿಂತಿಸುತ್ತಿಲ್ಲ.

ಹಿಂದೆ ಅತಿ ಹೆಚ್ಚು ಭತ್ತ ಬೆಳೆಯುತ್ತಿದ್ದ ಜಿಲ್ಲೆಯಲ್ಲಿ ಈಗ ಭತ್ತ ಬೆಳೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಲಾಭದಾಯಕ ಹಾಗೂ ಶ್ರಮ ಕಡಿಮೆ ಎನ್ನುವ ಕಾರಣಕ್ಕೆ ಎಲ್ಲರೂ ಅಡಿಕೆಯತ್ತ ಮುಖ ಮಾಡಿದ್ದಾರೆ. ಆದರೆ ನೀರಿನ ಸೌಲಭ್ಯ ಇಲ್ಲದಿದ್ದರೆ ಅಡಿಕೆ ತೋಟ ಉಳಿಸಿಕೊಳ್ಳುವ ಸವಾಲಿನ ಬಗ್ಗೆ ಯಾರೂ ಯೋಚಿಸುತ್ತಿಲ್ಲ.

ಎಲೆಚುಕ್ಕೆ ರೋಗ, ಕೊಳೆರೋಗ, ಕೆಂಪುನುಸಿ ಸೇರಿದಂತೆ ಅಡಿಕೆಗೆ ಬರುವ ಹಲವು ರೋಗಗಳನ್ನು ಹೇಗೋ ಹತೋಟಿಗೆ ತರಬಹುದು. ಆದರೆ, ಒಮ್ಮೆ ಬರ ಬಂದರೆ ಮಕ್ಕಳಂತೆ ಸಲುಹಿದ ತೋಟಗಳು ಸಂಪೂರ್ಣ ನಾಶವಾಗುತ್ತವೆ. ಇದಕ್ಕೆ ಈ ವರ್ಷದ ಬರವೇ ಸಾಕ್ಷಿ.

ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಅಡಿಕೆ ಬೆಳೆ ನಾಶವಾದ ಉದಾಹರಣೆಗಳು ಕಣ್ಮುಂದೆಯೇ ಇದೆ. ಮಲೆನಾಡಿನ ಶಿವಮೊಗ್ಗಕ್ಕೆ ಹೊಂದಿಕೊಂಡ ‘ಅಡಿಕೆ ನಾಡು’ ಚನ್ನಗಿರಿಯಲ್ಲಿ ಅಡಿಕೆ ಬೆಳೆಯುವುದಕ್ಕೂ ನೀರಾವರಿ ಸೌಲಭ್ಯವೇ ಇಲ್ಲದ ‘ಬರದ ನಾಡು’ ಜಗಳೂರಿನಲ್ಲಿ ಅಡಿಕೆ ತೋಟ ಮಾಡುವುದಕ್ಕೂ ಅಜಗಜಾಂತರವಿದೆ.

ಚನ್ನಗಿರಿಯಲ್ಲಿ ಸೂಳೆಕೆರೆಯ ನೀರು, ಮಳೆಯ ಆಸರೆ ಇದೆ. ಜಗಳೂರಿಗೆ ಹಾಗಿಲ್ಲ. ಇದು ದಾವಣಗೆರೆ, ಹರಿಹರ, ಹೊನ್ನಾಳಿ, ನ್ಯಾಮತಿಗೂ ಅನ್ವಯಿಸುತ್ತದೆ.

ಕೃಷಿ, ತೋಟಗಾರಿಕೆ ಇಲಾಖೆಯ ಸಲಹೆ, ಮಾರ್ಗದರ್ಶನದ ಹೊರತಾಗಿಯೂ ರೈತರು ಅಡಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಆಯಾ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಬೇಕು ಎಂಬ ಇಲಾಖೆಯ ಸಲಹೆಯ ಹೊರತಾಗಿಯೂ ಅಡಿಕೆ ತೋಟ ಮಾಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ತೀವ್ರ ಬರದಿಂದ ಈ ಬಾರಿ ಅಡಿಕೆ ಬೆಳೆಗಾರರು ಕಂಗಾಲಾಗಿದ್ದರು. ಕಷ್ಟಪಟ್ಟು ತೋಟ ಉಳಿಸಿಕೊಂಡ ಸಮಾಧಾನದ ನಡುವೆಯೇ ಕೆಲ ರೈತರು ಅಡಿಕೆ ತೋಟ ಉಳಿಸಿಕೊಳ್ಳಲಾಗದೇ, ಮಾಡಿದ ಸಾಲ ತೀರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ. 

ಮಕ್ಕಳಂತೆ ಸಲುಹಿದ ಅಡಿಕೆ ಗಿಡಗಳು ಒಣಗಿ ನಾಶವಾಗುವುದನ್ನು ನೋಡಲು ಆಗದ ಹಲವು ರೈತರು ಟ್ಯಾಂಕರ್‌ ನೀರಿಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು. ಕೆಲವರು ಸಾಲ ಮಾಡಿದ್ದರು.

ಜಿಲ್ಲೆಯಲ್ಲಿ ಬರದಿಂದ ಅಂದಾಜು 3000 ಹೆಕ್ಟೇರ್‌ ಪ್ರದೇಶದ ಅಡಿಕೆ ತೋಟಗಳು ನಾಶವಾದವು. ಇದು ಕೇವಲ ಅಂದಾಜು. ಲೆಕ್ಕಕ್ಕೆ ಸಿಗದ ನೂರಾರು ಎಕರೆ ತೋಟಗಳು ಬಿಸಿಲಿಗೆ ಒಣಗಿ ನಾಶವಾದವು. 

ಸದ್ಯ ಮಳೆಯಾಗುತ್ತಿದ್ದರೂ ಬರದಿಂದಾಗಿ ಅಡಿಕೆ ಗಿಡಗಳು ಫಲ ನೀಡುವ ಹೊತ್ತಿಗೆ ಒಣಗಿ ನಾಶವಾಗಿದ್ದನ್ನು ಕಂಡ ಹಲವು ರೈತರು ಇನ್ನೂ ಚೇತರಿಸಿಕೊಂಡಿಲ್ಲ.

ತೋಟ ಉಳಿಸಿಕೊಳ್ಳಲು ಒಂದೇ ವರ್ಷದಲ್ಲಿ 800, 900 ಅಡಿ ಆಳದ ಐದಾರು ಕೊಳವೆಬಾವಿ ಕೊರೆಯಿಸಿದರೂ ನೀರು ಬರದೇ ಹಣ ಖರ್ಚು ಮಾಡಿಕೊಂಡವರ ದೊಡ್ಡ ಪಟ್ಟಿಯೇ ಸಿಗುತ್ತದೆ.

ಟ್ಯಾಂಕರ್ ನೀರಿಗೆ ಲಕ್ಷಾಂತರ ಖರ್ಚು:

ಕೊಳವೆಬಾವಿಯ ನೀರು ಖಾಲಿಯಾದ ಕಾರಣ ಜಿಲ್ಲೆಯಲ್ಲಿ ಟ್ಯಾಂಕರ್‌ ನೀರಿಗೆ ಭಾರಿ ಬೇಡಿಕೆ ಇತ್ತು. ಕೆಲವರು ಟ್ಯಾಂಕರ್ ನೀರು ಪೂರೈಸಿ ತೋಟ ಉಳಿಸಿಕೊಂಡರೆ ಕೆಲ ರೈತರು ಟ್ಯಾಂಕರ್‌ ನೀರಿನಲ್ಲಿ ಒಂದಿಷ್ಟು ಲಾಭ ಗಳಿಸಿದರು.

ದಾವಣಗೆರೆ ತಾಲ್ಲೂಕಿನ ಬಾವಿಹಾಳ್, ನೇರ್ಲಿಗೆ, ಆನಗೋಡು, ಹೊನ್ನನಾಯಕನಹಳ್ಳಿ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಹೋಬಳಿ, ಚನ್ನಗಿರಿ ತಾಲ್ಲೂಕಿನ ಹೊನ್ನೇಬಾಗಿ, ರಾಜಗೊಂಡನಹಳ್ಳಿ, ಪಾಂಡೋಮಟ್ಟಿ, ಮಾವಿನಕಟ್ಟೆ, ಕಾಕನೂರು, ದೇವರಹಳ್ಳಿ, ದಿಗ್ಗೇನಹಳ್ಳಿ, ಲಕ್ಷ್ಮಿಸಾಗರ, ಅಜ್ಜಿಹಳ್ಳಿ, ಕೊಂಡದಹಳ್ಳಿ ಮುಂತಾದ ಗ್ರಾಮಗಳಲ್ಲಿ ಟ್ಯಾಂಕರ್‌ಗಳ ಸದ್ದು ಆಗ ಜೋರಾಗಿತ್ತು. 

ದಾವಣಗೆರೆ ತಾಲ್ಲೂಕಿನ ನೇರ್ಲಿಗೆಯಲ್ಲಿ ಒಣಗಿದ್ದ ಅಡಿಕೆ ತೋಟ 

400 ಲೀಟರ್ ನೀರಿನ ಸಂಗ್ರಹದ ಟ್ಯಾಂಕರ್‌ಗೆ ₹ 1200ರಿಂದ ₹ 1,500 ಹಾಗೂ 12 ಸಾವಿರ ಲೀಟರ್ ನೀರಿನ ಸಾಮರ್ಥ್ಯದ ಡಿಸೇಲ್ ಟ್ಯಾಂಕರ್‌ಗೆ ₹ 7,000ದಿಂದ ₹ 8,000ರಂತೆ ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು.

‘ಒಂದೂವರೆ ಎಕರೆ ತೋಟ ಉಳಿಸಿಕೊಳ್ಳಲು ಹರಸಾಹಸ ಪಟ್ಟಿದ್ದು ಅಷ್ಟಿಷ್ಟಲ್ಲ. ತೋಟ ಉಳಿಸಿಕೊಳ್ಳಲು ಹೊಸದಾಗಿ ಎರಡು ಕೊಳವೆಬಾವಿ ಕೊರೆಯಿಸಿದೆ. ಆದರೆ ನೀರೇ ಬರಲಿಲ್ಲ. ಟ್ಯಾಂಕರ್‌ ನೀರಿಗಾಗಿ ₹ 50,000ಕ್ಕೂ ಹೆಚ್ಚು ಖರ್ಚು ಮಾಡಿದೆ. ಆದರೂ ಪ್ರಯೋಜನವಾಗಲಿಲ್ಲ. ಬೇಸರದಿಂದ ಸದ್ಯ ತೋಟದತ್ತ ಹೋಗಿಲ್ಲ’ ಎಂದು ನೊಂದು ನುಡಿದರು ದಾವಣಗೆರೆ ತಾಲ್ಲೂಕಿನ ಹಳೆಬಾತಿಯ ರೈತ, ವಕೀಲ ಶಿವಕುಮಾರ್ ಎಚ್‌.

ದಾವಣಗೆರೆ ತಾಲ್ಲೂಕಿನ ಹೊನ್ನನಾಯಕನಹಳ್ಳಿಯ ರೈತ ಬಸವರಾಜಪ್ಪ ಒಣಗಿದ್ದ ಅಡಿಕೆ ಗಿಡ ನಾಶಪಡಿಸಿದ್ದರು

‘ಇದ್ದ 4 ಕೊಳವೆಬಾವಿಗಳೂ ಬತ್ತಿದ್ದವು. ನೀರು ಬತ್ತಿದ ಕಾರಣ ಟ್ಯಾಂಕರ್‌ ಮೂಲಕ ನೀರು ಪೂರೈಸಿದ್ದೆ. ತೋಟ ಉಳಿಸಿಕೊಳ್ಳುವುದೇ ಸಾಹಸವಾಗಿತ್ತು. ಸುತ್ತಲಿನ ರೈತರೂ ಇದೇ ಸಂಕಷ್ಟ ಅನುಭವಿಸಿದ್ದರು’ ಎಂದು ಅಡಿಕೆ ಬೆಳೆಯುವ ಸವಾಲನ್ನು ವಿವರಿಸಿದರು ಪಾಂಡೋಮಟ್ಟಿಯ ರೈತ ಜಿ.ಸಿ. ಶಿವಕುಮಾರ್.

‘ಮೊದಲು ಭತ್ತ ಬೆಳೆಯುತ್ತಿದ್ದೆವು. ಅಡಿಕೆ ಲಾಭದಾಯಕ ಎಂದು ಅದರತ್ತ ಹೋದೆವು. ಹೊಂಬಾಳೆ ಬಿಡಲು ಆರಂಭಿಸಿದ್ದ ಒಂದೂವರೆ ಎಕರೆ ಅಡಿಕೆ ತೋಟ ಬರಕ್ಕೆ ಸಂಪೂರ್ಣ ಒಣಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೋಟ ಮಾಡಿದ್ದೆ. ಇದ್ದ ಎರಡು ಕೊಳವೆಬಾವಿಗಳು ಬತ್ತಿ ಹೋದವು. ಹೊಸದಾಗಿ ಕೊರೆಯಿಸಿದ ಕೊಳವೆಬಾವಿಗಳಲ್ಲಿ ನೀರೆ ಸಿಗಲಿಲ್ಲ. ಈ ಕಷ್ಟ ಬೇಡ ಎಂದು ಅಡಿಕೆಯ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದೇನೆ’ ಎಂದು ಅಡಿಕೆ ತೋಟ ಮಾಡುವ ಸಂಕಷ್ಟವನ್ನು ತೆರೆದಿಟ್ಟರು ಹರಿಹರ ತಾಲ್ಲೂಕಿನ ರಂಗಾರಾವ್ ಕ್ಯಾಂಪ್‌ನ ಬಿ.ಜಿ. ವಿಜಯಕುಮಾರ್‌.

ಸಾಸ್ವೆಹಳ್ಳಿ ಭಾಗದಲ್ಲಿ ಟ್ಯಾಂಕರ್‌ ನೀರಿನ ಸದ್ದು

ಕೆಲವರು ಅಡಿಕೆ ತೋಟ ಉಳಿಸಿಕೊಳ್ಳಲಾಗದೇ ಸಂಕಷ್ಟ ಪಟ್ಟು, ಅಡಿಕೆಯ ಸಹವಾಸವೇ ಬೇಡ ಎಂದು ಇತರೆ ಬೆಳೆಗಳತ್ತ ಗಮನಹರಿಸಿರುವುದೂ ಇದೆ. ಲಾಭದ ಆಸೆಯಿಂದ ಅಡಿಕೆ ಬಿಟ್ಟು ಸಮಗ್ರ ಬೆಳೆಗಳತ್ತ ರೈತರು ಚಿತ್ತ ಹರಿಸಬೇಕು ಎಂಬ ಸಲಹೆ ಕೃಷಿ ತಜ್ಞರದ್ದು.

ಜಗಳೂರು ತಾಲ್ಲೂಕಿನ ಪಾಲನಾಯಕನಕೋಟೆ ಭಾಗದಲ್ಲಿ ರೈತರು ತೋಟಕ್ಕೆ ಟ್ಯಾಂಕರ್‌ ನೀರು ಹಾಯಿಸಿದ್ದರು
ಮಲೇಬೆನ್ನೂರು ಸಮೀಪದ ಕೊಪ್ಪ ಗ್ರಾಮದ ಮರುಳಸಿದ್ದಪ್ಪ ಟ್ಯಾಂಕರ್ ನೀರನ್ನು ಕೃಷಿ ಹೊಂಡಕ್ಕೆ ತುಂಬಿಸಿಕೊಂಡಿದ್ದರು
ಮೂರು ವರ್ಷದ ಗಿಡಗಳು ಚೆನ್ನಾಗಿ ಬೆಳೆದಿದ್ದವು. ಗಿಡಗಳನ್ನು ಕಂಡು ಆಶಾವಾದ ಮೊಳಕೆಯೊಡೆದಿತ್ತು. ಆದರೆ ಬಿಸಿಲ ಬೇಗೆಗೆ ಎಲ್ಲವೂ ಒಣಗಿವೆ. ಸದ್ಯ ಮಳೆಗೆ ಬೆರಳೆಣಿಕೆಯ ಗಿಡಗಳು ಉಳಿದುಕೊಂಡಿವೆ. ತಿ
ಶಿವಕುಮಾರ್ ಎಚ್‌. ರೈತ ಹಳೆಬಾ
ಎರಡು ತಿಂಗಳು ಟ್ಯಾಂಕರ್‌ ನೀರು ಪೂರೈಸಿ ತೋಟ ಉಳಿಸಿಕೊಂಡೆವು. ಇದಕ್ಕಾಗಿ ₹ ಸುಮಾರು 2.50 ಲಕ್ಷ ಖರ್ಚು ಮಾಡಿದ್ದೆ. ಇದೇ ಸ್ಥಿತಿ ಸುತ್ತಲಿನ ರೈತರದ್ದಾಗಿತ್ತು.
ಜಿ.ಸಿ. ಶಿವಕುಮಾರ್ ರೈತ ಪಾಂಡೋಮಟ್ಟಿ
ಎರಡು ತಿಂಗಳು ಟ್ಯಾಂಕರ್‌ ನೀರು ಪೂರೈಸಿ ತೋಟ ಉಳಿಸಿಕೊಂಡೆವು. ಇದಕ್ಕಾಗಿ ₹ ಸುಮಾರು 2.50 ಲಕ್ಷ ಖರ್ಚು ಮಾಡಿದ್ದೆ. ಇದೇ ಸ್ಥಿತಿ ಸುತ್ತಲಿನ ರೈತರದ್ದಾಗಿತ್ತು.
ಜಿ.ಸಿ. ಶಿವಕುಮಾರ್ ರೈತ ಪಾಂಡೋಮಟ್ಟಿ
ಕೊಳವೆಬಾವಿ ವಿಫಲವಾಗಿ ಅಂದಾಜು 3000 ಹೆಕ್ಟೇರ್‌ ಅಡಿಕೆ ತೋಟ ನಾಶವಾಗಿವೆ.
ಜಿ.ಸಿ.ರಾಘವೇಂದ್ರ ಪ್ರಸಾದ್ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ

ಬರದ ಹೊಡೆತ: ಅಡಿಕೆ ತೋಟಗಳ ನಾಶ- ಡಿ. ಶ್ರೀನಿವಾಸ್

ಜಗಳೂರು: ತೀವ್ರ ಬರಗಾಲದ ಪರಿಣಾಮ ಜಗಳೂರು ತಾಲ್ಲೂಕಿನ ಕಸಬಾ ಸೊಕ್ಕೆ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಅಡಿಕೆ ತೋಟಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ತಾಲ್ಲೂಕಿನಲ್ಲಿ ಸುಮಾರು 20000 ಎಕರೆ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ತೋಟಗಳು ನೀರಿಲ್ಲದೇ ಒಣಗುತ್ತಿರುವುದನ್ನು ಕಂಡು ಪ್ರತಿನಿತ್ಯ ಟ್ಯಾಂಕರ್ ನೀರು ಖರೀದಿಸಿ ರೈತರು ತೋಟಗಳಿಗೆ ನೀರು ಹಾಯಿಸಿದ್ದರು. ಬಹುತೇಕ ರೈತರು ಸಾಲ ಮಾಡಿ ಕೊಳವೆಬಾವಿಗಳನ್ನು ಕೊರೆಸಿದ್ದರು. ‘10 ಎಕರೆಯಲ್ಲಿ ಅಡಿಕೆ ರೇಷ್ಮೆ ಮುಂತಾದ ನೀರಾವರಿ ಬೆಳೆ ಬೆಳೆದಿದ್ದೇನೆ. 5 ಕೊಳವೆಬಾವಿಗಳಿದ್ದು ನಾಲ್ಕು ಕೊಳವೆಬಾವಿಗಳು ಒಂದು ತಿಂಗಳಲ್ಲಿ ಬತ್ತಿಹೋಗಿದ್ದವು. ಸಾಲ ಮಾಡಿ ಕೊಳವೆಬಾವಿ ಕೊರೆಸಿ ಅಡಿಕೆ ತೋಟ ಮಾಡಿದ್ದೆ. ಬರದಿಂದ ತೋಟವೂ ಹಾಳಾಯಿತು. ಸಾಲದ ಹೊರೆಯೂ ಹೆಚ್ಚಿತು’ ಎಂದು ದೊಣೆಹಳ್ಳಿಯ ರೈತ ಗಣೇಶ್ ನೋವು ತೋಡಿಕೊಂಡರು. ‘ಎರಡು ಎಕರೆಯಲ್ಲಿ ಅಡಿಕೆ ಬೆಳೆದಿದ್ದೆ. ಎರಡು ವರ್ಷದ ತೋಟ ಸಂಪೂರ್ಣ ಒಣಗಿತು. ಹೊಸದಾಗಿ ಕೊಳವೆಬಾವಿ ಕೊರೆಸಿದೆ. ಟ್ಯಾಂಕರ್‌ ನೀರು ಪೂರೈಸಿದೆ. ಆದರೂ ಪ್ರಯೋಜನವಾಗಲಿಲ್ಲ. ಮೊನ್ನೆ ಮಳೆಗೆ ಕೊಳವೆಬಾವಿಯಲ್ಲಿ ಸ್ವಲ್ಪ ನೀರು ಬಂದಿದೆ. ಮತ್ತೆ ಸಾಲ ಮಾಡಿ ಅಡಿಕೆ ಸಸಿ ನಾಟಿ ಮಾಡಿದ್ದೇನೆ’ ಎಂದು ಭರಮಸಮುದ್ರ ಗ್ರಾಮದ ಸುಮಕ್ಕ ಹೇಳಿದರು. ‘ಜಗಳೂರಿನಂತಹ ಬಯಲುಸೀಮೆ ಪ್ರದೇಶದಲ್ಲಿ ಅಡಿಕೆ ಬೆಳೆ ಸೂಕ್ತವಲ್ಲ. ಖುಷ್ಕಿ ಬೇಸಾಯಕ್ಕೆ ಸೂಕ್ತವಾಗುವ ಮರ ಬೇಸಾಯ ಪದ್ಧತಿ ಅತ್ಯುತ್ತಮ ಪರ್ಯಾಯ. ಅಡಿಕೆ ದಾಳಿಂಬೆ ಬದಲಿಗೆ ಹೆಚ್ಚು ನೀರು ಬೇಡದ ನೇರಳೆ ಹಲಸು ಹುಣಸೆ ಬೇಲ ಸಪೋಟ ಬಾರೇ ಮುಂತಾದ ಅರಣ್ಯ ಕೃಷಿ ಇಲ್ಲಿಗೆ ಸೂಕ್ತ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ತೋಟಯ್ಯ ರೈತರಿಗೆ ಸಲಹೆ ನೀಡುತ್ತಾರೆ. 57 ಕೆರೆ ತುಂಬಿಸುವ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಿದ್ದರೆ ಅಂತರ್ಜಲ ಮಟ್ಟ ಕಾಪಾಡಿಕೊಳ್ಳಬಹುದಾಗಿತ್ತು ಎಂಬುದು ಈ ಭಾಗದ ರೈತರ ಅಭಿಪ್ರಾಯ.

ಚನ್ನಗಿರಿಯ ಅಡಿಕೆ ಬೆಳೆಗಾರರು ಟ್ಯಾಂಕರ್ ನೀರನ್ನು ತೊಟ್ಟಿಗಳಲ್ಲಿ ಸಂಗ್ರಹಿಸಿದ್ದರು

ಟ್ಯಾಂಕರ್ ನೀರಿಗೆ ಲಕ್ಷಾಂತರ  ಖರ್ಚು ಇನಾಯತ್‌ ಉಲ್ಲಾ ಟಿ.

ಹರಿಹರ: ಭತ್ತ ತೆಂಗು ಮತ್ತು ಮೆಕ್ಕೆಜೋಳಕ್ಕೆ ಸೀಮಿತವಾಗಿದ್ದ ತಾಲ್ಲೂಕಿನ ರೈತರು ಕಳೆದ ಒಂದು ದಶಕದಿಂದ ಅಡಿಕೆ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಕಸಬಾ ಹೋಬಳಿಯಲ್ಲಿ 1981 ಹೆಕ್ಟೇರ್ ಮಲೇಬೆನ್ನೂರು ಹೋಬಳಿಯಲ್ಲಿ 3769 ಹೆಕ್ಟೇರ್ ಸೇರಿದಂತೆ ತಾಲ್ಲೂಕಿನಲ್ಲಿ 5750 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತದೆ. ಕಳೆದ ವರ್ಷದ ಬರ ಹಾಗೂ ಬಿಸಿಲು ತಾಲ್ಲೂಕಿನ ಅಡಿಕೆ ಬೆಳೆಗಾರರಿಗೂ ಬಿಸಿ ಮುಟ್ಟಿಸಿತ್ತು. ಆದರೂ ರೈತರು ಅಡಿಕೆಯತ್ತಲೇ ಚಿತ್ತ ನೆಟ್ಟಿದ್ದಾರೆ.  ಕಾಲುವೆ ನದಿ ಪಿಕ್‌ ಅಪ್ ಡ್ಯಾಂ ಕೆರೆ ಕೊಳವೆಬಾವಿಗಳ ಅಳಿದುಳಿದ ನೀರನ್ನು ಆಶ್ರಯಿಸಿ ಫೆಬ್ರುವರಿ ಮಾರ್ಚ್‌ನಲ್ಲಿ ನೀರುಣಿಸಿದ ರೈತರಿಗೆ ನಂತರದ ದಿನಗಳು ಸಂಕಷ್ಟ ತಂದಿದ್ದವು. ಕೊಳವೆಬಾವಿಗಳು ಒಂದರ ನಂತರ ಒಂದು ಒಣಗಿದವು. ನಂತರ ಟ್ಯಾಂಕರ್‌ ನೀರು ಆಶ್ರಯಿಸಬೇಕಾಯಿತು. ತಾಲ್ಲೂಕಿನ 3500 ಅಡಿಗೆ ಬೆಳೆಗಾರರ ಪೈಕಿ 1600 ರೈತರು ಟ್ಯಾಂಕರ್ ನೀರಿಗಾಗಿ ಅಂದಾಜು ₹ 30 ಲಕ್ಷ ವ್ಯಯ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ‘ತಾಲ್ಲೂಕಿನ ಅಡಿಕೆ ಬೆಳೆಗಾರರು ಬಿರುಬಿಸಿಲು ಹಾಗೂ ನೀರಿನ ಅಲಭ್ಯತೆ ಕಾರಣ ಸಂಕಷ್ಟ ಅನುಭವಿಸಿದರು. ಕೆಂಪು ನುಸಿ ಬಾಧೆಯೂ ಕಾಡಿತು. ತಾಲ್ಲೂಕಿನಾದ್ಯಂತ ಅಡಿಕೆ ತೋಟಗಳು ಹಾಳಾಗಿರುವ ಅಂದಾಜಿದೆ’ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶಶಿಧರ ಎಚ್.ಎನ್. ಹೇಳಿದರು. ‘ಹತ್ತು ಎಕರೆ ಅಡಿಕೆ ಗಿಡ ಹೊಂದಿದ್ದು 28 ವರ್ಷಗಳಲ್ಲಿ ಮೊದಲ ಬಾರಿಗೆ ಕೊಳವೆಬಾವಿ ಬತ್ತಿದಾಗ ದಿಕ್ಕು ತೋಚದಾಯಿತು. ನೆರೆಯ ತೋಟಗಳ ಕೊಳವೆಬಾವಿಗಳ ನೀರು ನನಗೆ ಆಸರೆ ನೀಡಿತು. ಅದೂ ಇಲ್ಲದಿದ್ದರೆ ಅಡಿಕೆ ಬೆಳೆ ನಾಶವಾಗುತ್ತಿತ್ತು’ ಎಂದು ಭಾವುಕರಾದರು ತಾಲ್ಲೂಕಿನ ಯಲವಟ್ಟಿ ತಾಂಡಾದ ರೈತ ಮಂಜಾ ನಾಯ್ಕ್.

ಫಲಕ್ಕೆ ಬಂದಿದ್ದ ಗಿಡಗಳು ನಾಶ ಎನ್‌.ಕೆ. ಆಂಜನೇಯ

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನಲ್ಲೂ ಇತ್ತೀಚಿನ ವರ್ಷಗಳಲ್ಲಿ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಈ ವರ್ಷದ ಬರ ಅವರನ್ನು ಕಂಗೆಡಿಸಿತ್ತು. ಗಂಜಿಹಳ್ಳಿ ಮಹೇಶಪ್ಪ ಅವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ತೋಟದಲ್ಲಿ ಸುಮಾರು 300 ಗಿಡಗಳು ಒಣಗಿಹೋಗಿವೆ. ಹೊಸದಾಗಿ ಕೊಳವೆಬಾವಿ ಕೊರೆಸುವ ಪ್ರಯತ್ನ ಮಾಡಿದ್ದರು. ಅಲ್ಲೂ ನೀರು ಸಿಗದಿದ್ದಾಗ ಟ್ಯಾಂಕರ್ ಮೊರೆ ಹೋದ ಅವರಿಗೆ ಶೇ 50ರಷ್ಟು ಅಡಿಕೆ ಗಿಡಗಳನ್ನು ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗಿದೆ. ‘ತೀವ್ರ ಬಿಸಿಲಿಗೆ ಸಸಿಗಳಿಗೆ ನುಸಿರೋಗ ಹೆಚ್ಚಾಗಿ ಕಂಡುಬಂದಿದ್ದು ಸದ್ಯ ಔಷಧ ಸಿಂಪಡಿಸಿ ನಿಯಂತ್ರಣಕ್ಕೆ ತಂದಿದ್ದೇನೆ‘ ಎಂದು ಸಿದ್ದೇಶಪ್ಪ ಕಂಕನಹಳ್ಳಿ ಹೇಳಿದರು. ‘4 ಎಕರೆಯಲ್ಲಿ 16 ವರ್ಷಗಳಿಮದ ಇದ್ದ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವಲ್ಲಿ ಶತಪ್ರಯತ್ನ ಮಾಡಿದ್ದರೂ ಫಲಕ್ಕೆ ಬಂದಿದ್ದ ಸುಮಾರು 500ರಿಂದ 600 ಗಿಡಗಳು ಒಣಗಿ ಹೋಗಿವೆ. ₹ 15 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ’ ಎಂದು ಅವರು ಅಳಲು ತೋಡಿಕೊಂಡರು. ನ್ಯಾಮತಿ ತಾಲ್ಲೂಕಿನ ಗಂಜೀನಹಳ್ಳಿಯ ಸತೀಶ್ ತಮ್ಮ ಮೂರು ವರ್ಷದ ಅಡಿಕೆ ಗಿಡ ಉಳಿಸಿಕೊಳ್ಳುವ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಸೂರಗೊಂಡನಕೊಪ್ಪದ ಗಂಗಾಧರಪ್ಪ 16 ವರ್ಷದ ಅಡಿಕೆ ಗಿಡಗಳನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸಪಟ್ಟಿದ್ದರು. ‘ಅವಳಿ ತಾಲ್ಲೂಕಿನಲ್ಲಿ ಸುಮಾರು 20367 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆಯಲ್ಲಿ 8 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಒಣಗಿ ಹೋಗಿದೆ. ಶೇ 20ರಷ್ಟು ಇಳುವರಿ ಕಡಿಮೆಯಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ತಿಳಿಸಿದರು.

ಬರ: ಇಳುವರಿಯೂ ಕುಸಿತ ಎಚ್‌.ವಿ. ನಟರಾಜ್‌

ಚನ್ನಗಿರಿ: ತಾಲ್ಲೂಕಿನಲ್ಲಿ 36000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ನಾಡು ಆಗಾಗ ಬರಗಾಲಕ್ಕೆ ತುತ್ತಾಗುವುದು ಮಾಮೂಲು. 2015ರಿಂದ ಸತತ ಮೂರು ವರ್ಷಗಳ ನಂತರ ತಾಲ್ಲೂಕನ್ನು ಈ ವರ್ಷದ ಬರ ಕಂಗೆಡಿಸಿತ್ತು. ಕಳೆದ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದರಿಂದ ಅಡಿಕೆ ಬೆಳೆಗಾರರು ತೋಟಗಳನ್ನು ಉಳಿಸಿಕೊಳ್ಳಲು ಶ್ರಮಪಟ್ಟರು. ಭದ್ರಾ ನಾಲೆ ಹಾಗೂ ಸೂಳೆಕೆರೆಯಿಂದ ಟ್ಯಾಂಕರ್‌ಗಳಲ್ಲಿ ನೀರು ಹಾಯಿಸಿದ್ದರು. ಕಳೆದ ವರ್ಷದ ಬರಕ್ಕೆ 10ರಿಂದ 15 ಎಕರೆ ಪ್ರದೇಶದಲ್ಲಿ ಅಡಿಕೆ ತೋಟ ಒಣಗಿ ಹೋಗಿವೆ. ಅಧಿಕ ತಾಪಮಾನದಿಂದ ಇಳುವರಿಯೂ ಕುಸಿತ ಕಂಡಿತ್ತು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶ್ರೀಕಾಂತ್ ತಿಳಿಸಿದರು. ‘4 ಎಕರೆ ಅಡಿಕೆ ತೋಟವಿದೆ. ಎರಡು ಕೊಳವೆಬಾವಿಗಳಲ್ಲಿ ನೀರಿಲ್ಲದೇ ಫಸಲಿಗೆ ಬಂದ ಅಡಿಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ಗಳ ಮೊರೆ ಹೋದೆವು. ಮೂರು ತಿಂಗಳುಗಳ ಕಾಲ ನಿರಂತರವಾಗಿ ಪ್ರತಿ ದಿನ 2 ಟ್ಯಾಂಕರ್‌ಗಳಲ್ಲಿ ನೀರನ್ನು ತಂದು ತೋಟ ಉಳಿಸಿಕೊಂಡಿದ್ದೇವೆ. ಇದಕ್ಕೆ ₹ 5.50 ಲಕ್ಷ ಖರ್ಚು ಮಾಡಿದ್ದೇವೆ’ ಎಂದು ದಿಗ್ಗೇನಹಳ್ಳಿಯ ಬೆಳೆಗಾರ ಅಜ್ಜಪ್ಪ ಅಡಿಕೆ ಬೆಳೆ ಲಾಭದಾಯಕದ ಜತೆ ಖರ್ಚನ್ನೂ ಬೇಡುತ್ತದೆ ಎಂಬುದನ್ನು ವಿವರಿಸಿದ್ದು ಹೀಗೆ. ‘ಅಧಿಕ ತಾಪಮಾನ ಹಾಗೂ ನೀರಿನ ಕೊರತೆಯಿಂದಾಗಿ 1 ಎಕರೆ ಅಡಿಕೆ ತೋಟದಲ್ಲಿ 9ರಿಂದ 10 ಕ್ವಿಂಟಲ್ ಅಡಿಕೆ ಇಳುವರಿ ಬಂದಿತ್ತು. ಅಡಿಕೆ ಮಾರಾಟ ಮಾಡಿ ಬಂದಿದ್ದ ಹಣವನ್ನು ಮತ್ತೆ ತೋಟಗಳನ್ನು ಉಳಿಸಿಕೊಳ್ಳಲು ಖರ್ಚು ಮಾಡಿದೆ’ ಎಂದು ಹೊನ್ನೇಬಾಗಿಯ ಮಂಜುನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.