ADVERTISEMENT

ಬರಗಾಲ: ಜನ–ಜಾನುವಾರುಗಳಿಗೆ ನೀರು ಪೂರೈಕೆಗೆ ಸೂಚನೆ 

ಹೊನ್ನಾಳಿಯಲ್ಲಿ ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪೊರೆಯಿಂದ ಅಹವಾಲು ಸ್ವೀಕಾರ 

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:27 IST
Last Updated 9 ಮೇ 2024, 15:27 IST
ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪೊರೆ ಅವರು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು
ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕಾಯುಕ್ತ ಎಸ್‍ಪಿ ಎಂ.ಎಸ್. ಕೌಲಾಪೊರೆ ಅವರು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು   

ಹೊನ್ನಾಳಿ: ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿಳಂಬ ಮಾಡದೇ ದೊರಕಿಸಿಕೊಡಲು ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ ಸೂಚಿಸಿದರು. 

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. 

ಅತಿವೃಷ್ಟಿಯಿಂದ ಹಾನಿಗೀಡಾದ ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಯಶೋಧಮ್ಮ ಅನಂದಪ್ಪ ಅವರ ಮನೆ ನಿರ್ಮಾಣಕ್ಕೆ ಮೊದಲ ಕಂತಿನ ಅನುದಾನ ಬಿಡುಗಡೆಯಾಗಿದ್ದು, ಉಳಿದ ಕಂತು ಬಿಡುಗಡೆಗೆ ಅಡ್ಡಿಯಾಗಿದೆ. ಹಣ ಕೇಳಿದರೆ ಕೊಡಲು ಬರುವುದಿಲ್ಲ ಎಂದು ಕಂದಾಯ ಇಲಾಖೆಯಿಂದ ತಡೆಹಿಡಿಯಲಾಗಿದೆ ಎಂಬ ದೂರನ್ನು ಆಧರಿಸಿ ಲೋಕಾಯುಕ್ತರು ಮಾತನಾಡಿದರು.

ADVERTISEMENT

‘ಮನೆ ಇದ್ದ ಜಾಗದಲ್ಲಿಯೇ ಕಟ್ಟಬೇಕಿತ್ತು ಎಂಬ ಕಾರಣವನ್ನು ಅಧಿಕಾರಿಗಳು ಇದೀಗ ನೀಡುತ್ತಿರುವುದು ಸರಿಯಲ್ಲ. ಆರಂಭದಲ್ಲಿಯೇ ಈ ಮಾಹಿತಿ ನೀಡಿದ್ದರೆ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಆದ್ದರಿಂದ ಈ ಬಗ್ಗೆ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ಉಳಿದಿರುವ ಕಂತು ಬಿಡುಗಡೆಗೆ ಪ್ರಯತ್ನ ಮಾಡಬೇಕು’ ಎಂದು ಅವರು ಹೇಳಿದರು. ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು 15 ದಿನ ಕಾಲಾವಕಾಶ ಕೊಡುವುದಾಗಿಯೂ ಹೇಳಿದರು.

ವಿಪರೀತ ಬಿಸಿಲು ಇರುವ ಕಾರಣ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈ ಕಾರಣಕ್ಕೆ ಕೆಲವೊಮ್ಮೆ ಪ್ರಾಣಿಗಳು ಜನವಸತಿ ಪ್ರದೇಶಗಳ ಕಡೆ ನುಗ್ಗುವ ಸಂಭವ ಇರುತ್ತದೆ. ಆದ್ದರಿಂದ ಅದಷ್ಟು ಬೇಗ ಅರಣ್ಯ ಇಲಾಖೆಯವರು ಕಾಡುಗಳಲ್ಲಿ ನೀರಿನ ಹೊಂಡಗಳನ್ನು ನಿರ್ಮಿಸಬೇಕು ಎಂದು ನಿರ್ದೇಶಿಸಿದರು. 

ಪಟ್ಟಣದಲ್ಲಿ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳಲ್ಲಿ ಲೋಪ ಆಗದಂತೆ ಕ್ರಮ ವಹಿಸುವಂತೆ ಪುರಸಭೆ ಮುಖ್ಯಾಧಿಕಾರಿ ಎಚ್. ನಿರಂಜನಿ ಅವರಿಗೆ ಸೂಚನೆ ನೀಡಿದರು. ಆರೋಗ್ಯ ಹಾಗೂ ಪಶುವೈದ್ಯ ಇಲಾಖೆ ಅಧಿಕಾರಿಗಳಿಗೂ ಕೂಡ ಜನ, ಜಾನುವಾರು ಆರೋಗ್ಯ ಸಂರಕ್ಷಣೆಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. 

ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟದ ಬಗ್ಗೆ ಸದಾ ಗಮನಹರಿಸಬೇಕು ಎಂದು ಸಿಡಿಪಿಒ ಜ್ಯೋತಿ ಅವರಿಗೆ ಸೂಚನೆ ನೀಡಿದರು. ಹಲವು ಶಾಲೆಗಳ ನಿರ್ಮಾಣಕ್ಕೆ  ನೂರಾರು ವರ್ಷಗಳ ಹಿಂದೆ ದಾನಿಗಳು ಭೂದಾನ ಮಾಡಿದ್ದು, ಇಂತಹ ಪ್ರಕರಣಗಳಲ್ಲಿ ಕೂಡ ಬಿಇಒ ಮತ್ತು ಕಂದಾಯ ಇಲಾಖೆಗಳು ಸಮಗ್ರ ವರದಿ ಪಡೆದು ದಾಖಲೆ ಪತ್ರಗಳನ್ನು ಸರಿಪಡಿಸಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಲೋಕಾಯುಕ್ತ ಡಿವೈಎಸ್ಪಿ ಎಸ್.ಕೆ. ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಮಧುಸೂಧನ್, ಪ್ರಭು ಬಿ.ಸುರೇನ, ರಾಷ್ಟ್ರಪತಿ, ಉಪವಿಭಾಗಾಧಿಕಾರಿ ವಿ.ಅಭಿಷೇಕ್, ಹೊನ್ನಾಳಿ ತಹಶೀಲ್ದಾರ್ ಪುರಂದರ ಹೆಗಡೆ, ನ್ಯಾಮತಿ ತಹಶೀಲ್ದಾರ್ ಫಿರೋಜ್ ಷಾ, ತಾಲ್ಲೂಕು ಪಂಚಾಯಿತಿ ಇಒ ಸುಮಾ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.