ದಾವಣಗೆರೆ: ಮಳೆ ಕೊರತೆಯಿಂದಾಗಿ ಈ ವರ್ಷ ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಹಾರದ ಬೆಳೆಗಳನ್ನು ಬೆಳೆಯಲಾಗಿಲ್ಲ. ಆದರೆ, ಹೆಚ್ಚು ಮಳೆ ಬೀಳದಿರುವುದು ಮಾವಿನ ಫಸಲಿಗೆ ವರವಾಗಿ ಪರಿಣಮಿಸಿದೆ. ಈ ವರ್ಷ ನಿಗದಿಗಿಂತಲೂ ಮುನ್ನವೇ ಹೂಬಿಡಲು ಸಹಕಾರಿಯಾಗಿದೆ.
ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದ್ದ ಮಾವು, ಈ ಬಾರಿ ಮುಂದಿನ ವರ್ಷದ ಮಾರ್ಚ್‌ನಲ್ಲಿಯೇ ಗ್ರಾಹಕರ ಕೈ ಸೇರುವ ಸಾಧ್ಯತೆ ಇದೆ. ಅಕಾಲಿಕವಾಗಿ ಮಳೆ ಸುರಿಯದಿದ್ದರೆ, ಉತ್ತಮ ಫಸಲು ಸಿಗುವ ನಿರೀಕ್ಷೆಯೂ ಇದೆ.
ರಾಜ್ಯದಲ್ಲಿ 1.60 ಲಕ್ಷ ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ವಾರ್ಷಿಕ ಸರಾಸರಿ 10 ರಿಂದ 14 ಲಕ್ಷ ಮೆಟ್ರಿಕ್ ಟನ್ ಮಾವಿನ ಇಳುವರಿ ಸಿಗುತ್ತದೆ. ಆದರೆ, ಅಧಿಕ ಮಳೆಯಿಂದಾಗಿ ಕಳೆದ ಕೆಲವು ವರ್ಷಗಳಿಂದ 7 ರಿಂದ 8 ಲಕ್ಷ ಟನ್ ಮಾತ್ರವೇ ಇಳುವರಿ ದೊರೆತಿದೆ. ಈ ವರ್ಷ ಹೆಚ್ಚಿನ ಮಳೆಯಾಗಿಲ್ಲವಾದ್ದರಿಂದ 15 ಲಕ್ಷ ಟನ್ ಇಳುವರಿ ಸಿಗಬಹುದೆಂದು ಅಂದಾಜಿಸಲಾಗಿದೆ.
ರಾಜ್ಯದ ಮಟ್ಟಿಗೆ ಕೋಲಾರ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಆ ಜಿಲ್ಲೆಯಲ್ಲಿ ಈ ವರ್ಷ 46,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ರಾಮನಗರ, ಧಾರವಾಡ, ದಾವಣಗೆರೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೂ ಹೆಚ್ಚಾಗಿ ಮಾವು ಬೆಳೆಯಲಾಗುತ್ತಿದೆ.
‘ಸತತವಾಗಿ ಬರವಿದ್ದರಷ್ಟೇ ಮಾವಿನಂತಹ ಬಹುವಾರ್ಷಿಕ ಬೆಳೆಗಳಿಗೆ ಪೆಟ್ಟು ಬೀಳಲಿದೆ. ಹಿಂದಿನ ವರ್ಷ ಉತ್ತಮ ಮಳೆಯಾಗಿತ್ತು. ಈ ವರ್ಷ ಬರಗಾಲವಿದ್ದರೂ ಉತ್ತಮ ಇಳುವರಿ ಕೈಸೇರಲಿದೆ’ ಎಂದು ಕೋಲಾರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
‘ದಾವಣಗೆರೆ ಜಿಲ್ಲೆಯಲ್ಲಿ 1,500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಭಾಗದಲ್ಲೇ 1,200 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದಾರೆ. ಅಲ್ಫಾನ್ಸೋ ತಳಿಯನ್ನೇ ಬೆಳೆಗಾರರು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಜಿಲ್ಲೆಯ ಮಾವಿನ ಹಣ್ಣುಗಳನ್ನು ಪುಣೆ, ದೆಹಲಿಗೆ ರಫ್ತು ಮಾಡಲಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹೇಳಿದರು.
‘ಧಾರವಾಡ ಜಿಲ್ಲೆಯಲ್ಲಿ ಅಂದಾಜು 8,400 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ಅಲ್ಫಾನ್ಸೋ ಪ್ರಮುಖ ತಳಿಯಾಗಿದೆ. ಮಳೆಯಿಂದಾಗಿ ಮಾವಿನ ಮರಗಳು ಹೂ ಬಿಡುವ ಅವಧಿ ವಿಳಂಬವಾಗುತ್ತಿತ್ತು. ಆದರೆ, ಈ ವರ್ಷ ಹೆಚ್ಚಾಗಿ ಮಳೆ ಸುರಿಯದ ಕಾರಣ ಬೇಗನೆ ಹೂವು ಬಿಟ್ಟಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಾಶಿನಾಥ ಭದ್ರಣ್ಣನವರ್ ಮಾಹಿತಿ ನೀಡಿದರು.
‘ಈಚೆಗೆ ಕೆಲ ದಿನಗಳಿಂದ ಮೋಡಕವಿದ ವಾತಾವರಣ ಇದೆ. ಇದರಿಂದ ಹೂವು ಬಿಡುವುದು ಅಲ್ಪ ವಿಳಂಬವಾಗಬಹುದು. ಮುಂದಿನ ಎರಡು ತಿಂಗಳು ಬಿಸಿಲಿನ ವಾತಾವರಣ ಹೆಚ್ಚಾಗಿರಲಿದ್ದು ಮಾವು ಬೆಳೆಗೆ ಅನುಕೂಲವಾಗಿರಲಿದೆ’ ಎಂದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ಬಸವರಾಜಪ್ಪ ನಂಜುಂಡಪ್ಪ ವಿಶ್ವಾಸ ವ್ಯಕ್ತಪಡಿಸಿದರು. ‘ನಮ್ಮ ಭಾಗದ ಮಣ್ಣಿಗೆ ಅಲ್ಫಾನ್ಸೋ ಹಾಗೂ ಬಾದಾಮಿ ತಳಿಗಳೇ ಸೂಕ್ತವಾಗಿದ್ದು ಅವುಗಳನ್ನೇ ಹೆಚ್ಚಾಗಿ ಬೆಳೆಯುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.
ತಾಪಮಾನ ಏರಿಕೆಯ ಕಾರಣಕ್ಕೆ ಮಾವಿನ ಮರಗಳಲ್ಲಿ ಬೇಗನೆ ಹೂ ಬಿಡುತ್ತಿದ್ದು ಮಾರ್ಚ್‌ನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ-ರಾಘವೇಂದ್ರ ಪ್ರಸಾದ್ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ದಾವಣಗೆರೆ
ಜನವರಿ ಅಥವಾ ಫೆಬ್ರುವರಿಯಲ್ಲಿ ಅಕಾಲಿಕವಾಗಿ ಭಾರಿ ಮಳೆ ಸುರಿದರಷ್ಟೇ ಮಾವು ಬೆಳೆಯ ಇಳುವರಿ ಕುಂಠಿತವಾಗಬಹುದು. ಇಲ್ಲದಿದ್ದರೆ ಇಳುವರಿಗೆ ಯಾವುದೇ ಅಪಾಯವಿಲ್ಲ-ಕುಮಾರಸ್ವಾಮಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೋಲಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.