ADVERTISEMENT

ದುಗ್ಗಮ್ಮನ ಜಾತ್ರೆ: ಕುರಿಗಳ ಭರಾಟೆ, ಹಸಿ ಹುಲ್ಲಿಗೆ ಭಾರಿ ಬೇಡಿಕೆ

ನಗರದೆಲ್ಲೆಡೆ ಮಾಂಸದೂಟಕ್ಕೆ ಭರದ ಸಿದ್ಧತೆ, ಇಂದು ಸಾರು ಹಾಕುವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 6:31 IST
Last Updated 17 ಮಾರ್ಚ್ 2024, 6:31 IST
   

ದಾವಣಗೆರೆ: ನಗರದಲ್ಲಿ ನಗರ ದೇವತೆ ದುಗ್ಗಮ್ಮನ ಜಾತ್ರೆ ಸಂಭ್ರಮ. ದುರ್ಗಾಂಬಿಕಾ ದೇವಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಹಳೆ ದಾವಣಗೆರೆ ಭಾಗದಲ್ಲಿ ಜಾತ್ರೆಯ ಕಳೆಕಟ್ಟಿದೆ.

ಜಾತ್ರೆ ಅಂಗವಾಗಿ ಮಾರ್ಚ್‌ 20ರಂದು ನಡೆಯುವ ಮಾಂಸದೂಟಕ್ಕೆ ಎಲ್ಲೆಡೆ ಭರ್ಜರಿ ತಯಾರಿ ನಡೆದಿದೆ. ಹಳೆ ದಾವಣಗೆರೆ, ತಳವಾರ ಕೇರಿ, ಹೊಂಡದ ಸರ್ಕಲ್‌, ಗಾಂಧಿ ನಗರ, ಶಿವಾಜಿನಗರ, ಜಾಲಿನಗರ, ವಿನೋಬ ನಗರ, ದೇವರಾಜ್‌ ಅರಸ್‌ ಬಡಾವಣೆ ಸೇರಿದಂತೆ ಎಲ್ಲೆಡೆ ಮನೆಗಳ ಮುಂದೆ ಕುರಿಗಳ ಸಾಲು ಕಂಡುಬರುತ್ತಿದ್ದು, ಕುರಿಗಳ ಮೇವಿಗೆ ಬೇಡಿಕೆ ಹೆಚ್ಚಿದೆ.

ಹೊಂಡದ ಸರ್ಕಲ್‌, ಹಳೆ ದಾವಣಗೆರೆಯ ಸೇರಿ ಅಲ್ಲಲ್ಲಿ ಕುರಿ ಮೇವಿನ ವ್ಯಾಪಾರ ಜೋರಾಗಿದೆ.

ADVERTISEMENT

ಜಾತ್ರೆಗಾಗಿ ಕುರಿಗಳನ್ನು 15– 20 ದಿನಗಳ ಹಿಂದೆಯೇ ಖರೀದಿಸಿ ತಂದ ಕಾರಣ ಜನರು ಮೇವಿಗಾಗಿ ಹುಲ್ಲು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಬಹುತೇಕ ಬಡಾವಣೆಗಳಲ್ಲಿ ಬೈಕ್‌ನಲ್ಲಿ, ಕೈಯಲ್ಲಿ ಹಸಿರು ಹುಲ್ಲು ಹಿಡಿದು ಹೋಗುವವರೇ ಕಾಣಸಿಗುತ್ತಿದ್ದಾರೆ. ಪಿಂಡಿಗೆ ₹ 10ರಂತೆ ಹುಲ್ಲು ಹಾಗೂ ತೊಗರಿ ಗಿಡ ಮಾರಾಟವಾಗುತ್ತಿದೆ.

ಮಕ್ಕಳು, ಮಹಿಳೆಯರು ಮುಂಜಾನೆಯೇ ಸಮೀಪದ ತೋಟ, ಗದ್ದೆಗಳಿಗೆ ಹೋಗಿ ಬೆಳಿಗ್ಗೆಯೇ ಹುಲ್ಲನ್ನು ಕೊಯ್ದು ತಂದು ಮಾರಾಟ ಮಾಡುತ್ತಿದ್ದಾರೆ. 

ಆವರಗೊಳ್ಳ, ಕೊಂಡಜ್ಜಿ, ಬೇತೂರು ಸೇರಿ ಸುತ್ತಲಿನ ಹಳ್ಳಿಗಳ ಹೊಲಗಳಿಂದ ಹುಲ್ಲು ತರುತ್ತಿದ್ದಾರೆ. 

‘ಒಂದು ವಾರದಿಂದ ಹುಲ್ಲಿನ ವ್ಯಾಪಾರ ಮಾಡುತ್ತಿದ್ದೇನೆ. ಬೆಳಿಗ್ಗೆಯಿಂದ ಸಂಜೆವರೆಗೆ ಇಲ್ಲಿ ಹುಲ್ಲಿನ ರಾಶಿ ಹಾಕುತ್ತಿದ್ದೇವೆ. ದಿನಕ್ಕೆ 50ರಿಂದ 70 ಪಿಂಡಿ ಹುಲ್ಲು ಮಾರಾಟ ಮಾಡುತ್ತೇವೆ. ₹ 500 ರಿಂದ ₹ 700 ವ್ಯಾಪಾರವಾಗುತ್ತಿದೆ’ ಎಂದು ಚೌಡೇಶ್ವರಿನಗರದ  ಕಿರಣ್‌ ಹೇಳಿದರು.

‘ಕೊಂಡಜ್ಜಿ ಕಡೆಯಿಂದ ಹುಲ್ಲು ತರುತ್ತೇವೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಾರಾಟ ಮಾಡುತ್ತೇವೆ. ದಿನಕ್ಕೆ 100ರಿಂದ 150 ಪಿಂಡಿ ಮಾರಾಟವಾಗುತ್ತಿದೆ’ ಎಂದರು ಕೊಂಡಜ್ಜಿಯ ರೇಣುಕಾ.

‘ಜಾತ್ರೆಯ ಬಾಡೂಟದವರೆಗೆ ಕುರಿ ಹುಲ್ಲಿಗೆ ಬೇಡಿಕೆ ಇರುತ್ತದೆ. ಒಂದು ವಾರದಿಂದ ವ್ಯಾಪಾರ ಮಾಡುತ್ತಿದ್ದೇನೆ. ಕುರಿಗಳಿಗೆ ಇವು ಇಷ್ಟದ ಆಹಾರವಾದ ಕಾರಣ ತೊಗರಿ ಗಿಡದ ಪಿಂಡಿಗೆ ಬೇಡಿಕೆ ಇದೆ. ತೊಗರಿ ಹೊಲದವರಿಗೆ ₹ 1,000ದಿಂದ ₹ 2,000 ಕೊಟ್ಟು ಗಿಡ ತರುತ್ತಿದ್ದೇವೆ. ವ್ಯಾಪಾರ ಚೆನ್ನಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಕೊಂಡಜ್ಜಿಯ ಹುಚ್ಚೆಂಗಪ್ಪ.

ದಾವಣಗೆರೆಯ ಹೊಂಡದ ಸರ್ಕಲ್‌ನಲ್ಲಿ ಕುರಿಗಳ ಮೇವಿಗಾಗಿ ಹುಲ್ಲಿನ ವ್ಯಾಪಾರ ನಡೆಯುತ್ತಿರುವುದು
ದಾವಣಗೆರೆಯ ಹೊಂಡದ ಸರ್ಕಲ್‌ನಲ್ಲಿ ಕುರಿಗಳ ಮೇವಿಗಾಗಿ ಹುಲ್ಲಿನ ವ್ಯಾಪಾರ ನಡೆಯುತ್ತಿರುವುದು
ದಾವಣಗೆರೆಯ ಹೊಂಡದ ಸರ್ಕಲ್‌ನಲ್ಲಿ ಕುರಿಗಳ ಮೇವಿಗಾಗಿ ಹುಲ್ಲಿನ ವ್ಯಾಪಾರ ನಡೆಯುತ್ತಿರುವುದು
ದಾವಣಗೆರೆಯ ಹೊಂಡದ ಸರ್ಕಲ್‌ ಬಳಿ ದುಗ್ಗಮ್ಮನ ಜಾತ್ರೆ ಅಂಗವಾಗಿ ಕುರಿಗಳನ್ನು ಕಟ್ಟಿರುವುದು

Cut-off box - ನಗರದಲ್ಲಿ ಕುರಿಗಳ ಭರಾಟೆ.. ಜಾತ್ರೆ ಅಂಗವಾಗಿ ಎಲ್ಲಿ ನೋಡಿದರೂ ಮನೆಗಳ ಮುಂದೆ ಕುರಿಗಳು ಕಾಣುತ್ತಿವೆ.  ಜನರು ಭಾರಿ ಗಾತ್ರದ ಸಣ್ಣ ಗಾತ್ರದ ಕುರಿಗಳನ್ನು ಈಗಾಗಲೇ ಖರೀದಿಸಿ ತಂದಿದ್ದಾರೆ. ದುಗ್ಗತ್ತಿ ಹಾವೇರಿ ರಾಣೆಬೆನ್ನೂರು ಹಗರಿಬೊಮ್ಮನಹಳ್ಳಿ ಹರಿಹರ ಸೇರಿದಂತೆ ಕುರಿ ಸಂತೆ ನಡೆಯುವ ನಗರಗಳಿಂದ ಕುರಿಗಳನ್ನು ಖರೀದಿಸಿ ತಂದಿದ್ದಾರೆ. ದೂರದೂರಿನ ಬಂಧುಗಳಿಗೆ ಅಕ್ಕಪಕ್ಕದವರಿಗೆ ಹಬ್ಬಕ್ಕೆ ಬರುವಂತೆ ಆಹ್ವಾನ ಹೋಗಿದೆ. ₹ 15000ದಿಂದ ₹ 35000ದವರೆಗಿನ ಕುರಿಗಳು ಕಾಣಸಿಗುತ್ತಿವೆ.  ‘ಸಣ್ಣ ಮರಿ ದೊಡ್ಡ ಮರಿಗೆ ಒಂದೊಂದು ದರ ಇರುತ್ತದೆ. 10 ಕೆ.ಜಿ ತೂಗುವ ಕುರಿಗೆ ₹ 8 ಸಾವಿರದಿಂದ ₹ 9 ಸಾವಿರ 16 ಕೆ.ಜಿಗೆ ₹ 32000 ₹ 35000 ದರ ಹೇಳುತ್ತಾರೆ. ಭಾಳ ನೆಂಟರು ಇದ್ದಾರೆ. ದೊಡ್ಡ ಮರಿಯೇ ಬೇಕು’ ಎಂದು ನಗುತ್ತಲೇ ಹೇಳಿದರು ತಳವಾರಕೇರಿಯ ವೀರೇಶಪ್ಪ. ‘ಎರಡು ಹಲ್ಲಿನ ಕುರಿಗೆ ₹ 25000ದಿಂದ ₹ 30000ದವರೆಗೂ ದರ ಇದೆ. ದುಗ್ಗತ್ತಿಯಿಂದ ₹ 35 ಸಾವಿರ ಕೊಟ್ಟು ಕುರಿ ಖರೀದಿಸಿ ತಂದಿದ್ದೇನೆ. ಜಾತ್ರೆಗೆ ಹಲವರನ್ನು ಆಹ್ವಾನಿಸಿದ್ದೇನೆ’ ಎಂದರು ಅರುಣ್‌ಕುಮಾರ್.  ಸದ್ದು ಮಾಡುತ್ತಿವೆ ರುಬ್ಬುವ ಯಂತ್ರಗಳು: ನಗರದ ಹಲವೆಡೆ ಕಾರದ ಪುಡಿ ಗೋಧಿ ರಾಗಿ ಜೋಳದ ಹಿಟ್ಟು ಮಾಡುವ ರುಬ್ಬುವ ಯಂತ್ರಗಳ ಸದ್ದು ಕೇಳುತ್ತಿದೆ. ಮಸಾಲೆ ಕಾರದ ಪುಡಿಯ ಘಮ ಬಡಿಯುತ್ತಿದೆ.  ಮಾಂಸದ ಊಟಕ್ಕೆ ಕಾರದ ಪುಡಿ ಮಸಾಲೆ ರೊಟ್ಟಿ ಜಪಾತಿ ಅಡುಗೆಗಾಗಿ ಜನರು ಹಿಟ್ಟು ಮಾಡಲು ಗಿರಣಿಗಳತ್ತ ಮುಖ ಮಾಡಿದ್ದಾರೆ. 

Cut-off box - ಇಂದು ಸಾರು ಹಾಕುವ ಕಾರ್ಯಕ್ರಮ ಜಾತ್ರೆ ಅಂಗವಾಗಿ ನಗರ ದೇವತೆ ದುರ್ಗಾಂಬಿಕಾ ದೇವಾಲಯದಲ್ಲಿ ಮಂಟಪ ಸೇರಿ ಹಲವು ಸಿದ್ಧತೆಗಳು ನಡೆಯುತ್ತಿವೆ. ಶನಿವಾರ ದೇವಾಲಯದ ಆವರಣದಲ್ಲಿ ಮಳಿಗೆಗಳನ್ನು ಹಾಕಲು ಸಿದ್ಧತೆ ನಡೆಯುತ್ತಿರುವುದು ಕಂಡುಬಂತು. ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಮಾ. 17ರಂದು ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ ಕಂಕಣಧಾರಣೆ ನಡೆಯಲಿದೆ. ರಾತ್ರಿ ಸಾರು ಹಾಕುವ ಕಾರ್ಯಕ್ರಮ ನಡೆಯಲಿದ್ದು ಜನಸಾಗರ ಹರಿದು ಬರಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.