ADVERTISEMENT

ದಾವಣಗೆರೆ | ಮನೆಗೆ ‘ಇ–ಸ್ವತ್ತು’: ಜನವರಿ ಗಡುವು

ಪಿಡಿಒಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 10:04 IST
Last Updated 5 ನವೆಂಬರ್ 2024, 10:04 IST
   

ದಾವಣಗೆರೆ: ಹಳ್ಳಿಯ ಆಸ್ತಿಗಳನ್ನು ಡಿಜಿಟಲ್‌ ಸ್ವರೂಪಕ್ಕೆ ತರಲು ಜನವರಿ ಅಂತ್ಯಕ್ಕೆ ಪ್ರತಿ ಮನೆಗೆ ‘ಇ–ಸ್ವತ್ತು’ ತಲುಪಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ದಾವಣಗೆರೆ ತಾಲ್ಲೂಕಿನ 42 ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭೂಮಿ, ನಿವೇಶನ, ಮನೆಗಳಿಗೆ ಸಂಬಂಧಿಸಿದ ಆಸ್ತಿ ಕಲಹ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿದೆ. ಈ ಆಸ್ತಿಗಳ ಭೂದಾಖಲೆ ಡಿಜಿಟಲ್‌ ಸ್ವರೂಪ ಪಡೆದರೆ ವ್ಯಾಜ್ಯಗಳನ್ನು ಕೊಂಚ ಕಡಿಮೆ ಮಾಡಲು ಸಾಧ್ಯವಿದೆ. ಇಂತಹ ವ್ಯಾಜ್ಯಗಳಿಗೆ ಸಂಬಂಧಿಸಿದ ದೂರುಗಳು ನನ್ನ ಬಳಿಗೆ ಹೆಚ್ಚಾಗಿ ಬರುತ್ತಿವೆ. ‘ಇ–ಸ್ವತ್ತು’ ವಿತರಣೆಯ ಕಾರ್ಯ ಆದ್ಯತೆಯ ಮೇರೆಗೆ ನಡೆಯಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ಇ–ಸ್ವತ್ತು ವಿತರಣೆಗೆ ₹ 300 ಶುಲ್ಕ ಹಾಗೂ 30 ದಿನಗಳ ಕಾಲಾವಧಿ ಇದೆ. ಸರ್ವರ್‌ ಸಮಸ್ಯೆಯ ನೆಪ ಹೇಳದೆ ಜನರಿಗೆ ಸ್ಪಂದಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ವಿಚಾರ ತಲುಪಿಸಿ ತಿಳಿವಳಿಕೆ ನೀಡಬೇಕು. ‘ಇ–ಸ್ವತ್ತು’ ವಿತರಣೆಗೆ ತೊಡಕಾಗಿರುವ ಪೌತಿಖಾತೆ ಬದಲಾವಣೆಗೆ ಆಂದೋಲನ ನಡೆಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರ ಸುರೇಶ್ ಬಿ.ಇಟ್ನಾಳ್‌ ಪಿಡಿಒಗಳಿಗೆ ಸೂಚಿಸಿದರು.

ಮಹಿಳಾ ಸ್ವಾವಲಂಬನೆಗೆ ಸಲಹೆ:

‘ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33 ಮೀಸಲಾತಿ ನೀಡುವ ವಿಚಾರ ಇನ್ನೂ ಚರ್ಚೆಯ ಹಂತದಲ್ಲಿದೆ. ಆದರೆ, ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಶೇ 50ರಷ್ಟು ಮೀಸಲಾತಿ ಮಹಿಳೆಗೆ ಸಿಕ್ಕಿದೆ. ಈ ಅವಕಾಶ ಹಾಗೂ ಅಧಿಕಾರವನ್ನು ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಸ್ವಾವಲಂಬನೆಗೆ ಒತ್ತು ನೀಡುವ ಅಗತ್ಯವಿದೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಲಹೆ ನೀಡಿದರು.

‘ಬೇತೂರು, ಕಲ್ಪನಹಳ್ಳಿ ಮಹಿಳೆಯರು ಉದ್ಯೋಗಕ್ಕೆ ಕೋರಿಕೆ ಸಲ್ಲಿಸಿದ್ದಾರೆ. ಇಂತಹ ಮನವಿ ಗ್ರಾಮೀಣ ಪ್ರದೇಶದಿಂದ ಹೆಚ್ಚಾಗಿವೆ. ಪ್ರತಿ ಗ್ರಾಮದಲ್ಲಿ ಸ್ವಸಹಾಯ ಸಂಘಗಳಿದ್ದು, ಹಣ ಸಂಗ್ರಹಿಸುವ ಕೆಲಸಕ್ಕೆ ಮಾತ್ರ ಸೀಮಿತವಾಗಿವೆ. ಈ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕು. ಕೌಶಲ ತರಬೇತಿ ಕಡೆಗೆ ಗಮನ ಹರಿಸಬೇಕು. ಪದವೀದರರನ್ನು ಒಳಗೊಳ್ಳಬೇಕು’ ಎಂದು ಹೇಳಿದರು.

‘ಗ್ರಾಮೀಣ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತಿದೆ. ರೊಟ್ಟಿ ತಯಾರಿಸುವ ಯಂತ್ರವನ್ನು ಹಲವು ಜನರಿಗೆ ವಿತರಿಸಲಾಗಿದೆ. ಉಪ್ಪಿನಕಾಯಿ, ಪರಿಸರ ಸ್ನೇಹಿ ಕೈಚೀಲ ತಯಾರಿಕೆಯಂತಹ ಉದ್ಯಮಕ್ಕೆ ಪ್ರೋತ್ಸಾಹ ನೀಡಲಾಗಿದೆ. ಇದಕ್ಕೆ ಇನ್ನಷ್ಟು ಉತ್ತೇಜನ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್‌ ಬಿ.ಇಟ್ನಾಳ್‌ ಮಾಹಿತಿ ನೀಡಿದರು.

‘ಒತ್ತಡಕ್ಕೆ ಮಣಿಯಬೇಡಿ’

ನಿಷ್ಠೆ, ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಜನರು ಬಯಸುತ್ತಿದ್ದಾರೆ. ಸ್ಥಳೀಯ ಒತ್ತಡಗಳಿಗೆ ಮಣಿಯದೇ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ ನೀಡಿದರು.

29 ಇಲಾಖೆಗಳು ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಪ್ರತಿ ಇಲಾಖೆಯ ಅಧಿಕಾರಿಗಳೊಂದಿಗೆ ಪಿಡಿಒಗಳು ಸಮನ್ವಯತೆ ಸಾಧಿಸಬೇಕು. ಒಗ್ಗೂಡಿ ಕೆಲಸ ಮಾಡಬೇಕು.
ಸುರೇಶ್‌ ಬಿ.ಇಟ್ನಾಳ್‌, ಸಿಇಒ, ಜಿಲ್ಲಾ ಪಂಚಾಯಿತಿ

‘ಗ್ರಾಮೀಣ ಪ್ರದೇಶದ ಜನರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಾಮಾಡಳಿತ ವ್ಯವಸ್ಥೆ ಸರಿಯಾಗಿದ್ದರೆ ಈ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಲು ಸಾಧ್ಯವಿದೆ. ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗ್ರಾಮೀಣಾಭಿವೃದ್ಧಿಗೆ ಪ್ರಾಮುಖ್ಯ ನೀಡಬೇಕು’ ಎಂದು ಹೇಳಿದರು.

‘ನೀರು, ಶಿಕ್ಷಣ, ಆರೋಗ್ಯಕ್ಕೆ ಒತ್ತು’

ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಿ ಕೆಲಸ ಮಾಡಬೇಕು. ಹಳ್ಳಿ ಜನರ ಜೀವನಮಟ್ಟ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

‘ಮಾಯಕೊಂಡ ಗ್ರಾಮದ ಆಟದ ಮೈದಾನದ ಮಧ್ಯದಲ್ಲಿ ವಿದ್ಯುತ್‌ ಕಂಬವಿದೆ. ಮಕ್ಕಳು ಆಟವಾಡುವಾಗ ಅನಾಹುತ ಸಂಭವಿಸಬಹುದು ಎಂಬುದು ಜನರ ಆತಂಕ. ಇಂತಹ ಸಣ್ಣ ಸಮಸ್ಯೆ ಹೊತ್ತು ಜನರು ಜನಪ್ರತಿನಿಧಿಗಳ ಬಳಿಗೆ ಬರಬಾರದು. ಶಾಲೆಯ ಮಕ್ಕಳ ಹಾಜರಾತಿ, ಶಿಕ್ಷಕರ ಬೋಧನಾ ಕ್ರಮ, ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಯ ವರ್ತನೆ ಎಲ್ಲವನ್ನೂ ಪಿಡಿಒ ಗಮನಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.