ADVERTISEMENT

ಸಾಸ್ವೇಹಳ್ಳಿ ಏತ ನೀರಾವರಿ ಪೂರ್ಣಗೊಳಿಸಲು ಗಡುವು: ಚುನಾವಣಾ ಬಹಿಷ್ಕಾರ ಎಚ್ಚರಿಕೆ

ಸಾಸ್ವೇಹಳ್ಳಿ ಏತ ನೀರಾವರಿ ಪೂರ್ಣಗೊಳಿಸಲು 3 ತಿಂಗಳ ಗಡುವು-ಚುನಾವಣಾ ಬಹಿಷ್ಕಾರ- ಖಡ್ಗ ಸಂಸ್ಥೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 14:24 IST
Last Updated 11 ಫೆಬ್ರುವರಿ 2024, 14:24 IST

ದಾವಣಗೆರೆ: ‘ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸದಿದ್ದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುವುದು ಎಂದು ಖಡ್ಗ ಸಂಸ್ಥೆಯ ಬಿ.ಆರ್. ರಘು ಎಚ್ಚರಿಸಿದರು.

‘2017ರ ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭವಾಗಿರುವ ಈ ಯೋಜನೆ 2022ರ ಮಾರ್ಚ್‌ 10ಕ್ಕೆ ಮುಗಿಯಬೇಕಿತ್ತು. ಅವಧಿ ಮುಗಿದ ನಂತರವೂ ಯೋಜನೆ ಮುಗಿದಿಲ್ಲ’ ಎಂದು ದೂರಿದರು.

‘ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ಬಹು ಭಾಗದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಅತೀ ಮಹತ್ವದ ಈ ಯೋಜನೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಆರಂಭದಿಂದ ಇಲ್ಲಿಯವರೆಗೆ ವಿವಿಧ ರಾಜಕೀಯ ಪಕ್ಷಗಳು ಆಡಳಿತ ನಡೆಸಿದ್ದರೂ ಯೋಜನೆಯನ್ನು ಪೂರ್ಣಗೊಳಿಸಲು ವಿಫಲವಾಗಿವೆ’ ಎಂದು ಆರೋಪಿಸಿದರು.

ADVERTISEMENT

‘ಯೋಜನೆ ಆರಂಭವಾದ ವರ್ಷದಿಂದ ಇಲ್ಲಿಯವರೆಗೆ ಮೂರು ಬಾರಿ ಬರಗಾಲ ಬಂದಿದ್ದು, ರೈತರು ಸಂಕಷ್ಟ ಅನುಭವಿಸಿದ್ದಾರೆ. ಮೂರು ಜಿಲ್ಲೆಗಳ ಶಾಸಕರು ಸಚಿವರ ಮೇಲೆ ಒತ್ತಡ ತಂದು ಯೋಜನೆಯನ್ನು ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

ಖಡ್ಗ ಸಂಸ್ಥೆಯ ನಿರ್ದೇಶಕ ಚಂದ್ರಹಾಸ ಲಿಂಗದಹಳ್ಳಿ ಮಾತನಾಡಿ, ‘ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಮೂಲಕ ಚನ್ನಗಿರಿ ತಾಲೂಕಿನ 120, ಹೊನ್ನಾಳಿ ತಾಲೂಕಿನ 4, ಹೊಳಲ್ಕೆರೆಯ 4, ಶಿವಮೊಗ್ಗ ಜಿಲ್ಲೆಯ 12 ಕೆರೆಗಳಿಗೆ ನೀರು ತುಂಬಿಸಲಾಗುವುದು. ಯೋಜನೆ ಪೂರ್ಣಗೊಂಡಲ್ಲಿ ಸಾಕಷ್ಟು ಅನುಕೂಲ ಆಗಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚುವ ಮೂಲಕ ರೈತರಿಗೆ ಪ್ರಯೋಜನವಾಗಲಿದೆ. ಆದರೆ, ಯೋಜನೆ ಜನಪ್ರತಿನಿಗಳ ಇಚ್ಛಾಶಕ್ತಿ ಕೊರತೆಯಿಂದ ಯೋಜನೆ ಈವರೆಗೆ ಮುಗಿದಿಲ್ಲ’ ಎಂದು ಆರೋಪಿಸಿದರು.

‘₹ 460 ಕೋಟಿ ರೂಪಾಯಿ ಪ್ರಾರಂಭಿಕ ಯೋಜನಾ ವೆಚ್ಚ, 360 ಕಿಲೋ ಮೀಟರ್ ವ್ಯಾಪ್ತಿಯ ಯೋಜನೆಯಡಿ ಬಹುತೇಕ ಪೈಪ್‌ಲೈ ನ್ ಕೆಲಸ ಮುಗಿದಿದೆ. ಶೇ 90ರಷ್ಟು ಕಾಮಗಾರಿ ಮುಗಿದಿದೆ ಎಂಬುದು ಅಧಿಕಾರಿಗಳ ಹೇಳಿಕೆ. ಆದರೆ ಇನ್ನೂ ಶೇ. 35ರಿಂದ 40ರಷ್ಟು ಕಾಮಗಾರಿ ಆಗಬೇಕು. ಯೋಜನೆಗಾಗಿ ಭೂಮಿಯನ್ನು ವಶಪಡಿಸಿಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಇದರಿಂದಾಗಿ ರೈತರು ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿರುವುದರಿಂದ ಯೋಜನೆಗೆ ತಡೆಯಾಗಿದೆ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ಹೊನ್ನಾಳಿ ತಾಲ್ಲೂಕಿನ ಹಟ್ಟಿಹಾಳ್ ಜಾಕ್‌ವೆಲ್ ಸಮೀಪ ಗಣಿಗಾರಿಕೆ ನಡೆಯುತ್ತಿದ್ದು, ಯಾವ ವೇಳೆಯಾದರೂ ಹಾನಿಯಾಗಬಹುದು. ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಖಡ್ಗ ಸಂಸ್ಥೆಯ ಸೈಯದ್ ನಯಾಜ್, ಸುನೀಲ್, ಕುಬೇಂದ್ರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.