ADVERTISEMENT

ಹೊನ್ನಾಳಿ | ವಿದ್ಯುತ್ ಶುಲ್ಕ ಬಾಕಿ: ಕತ್ತಲಿನಲ್ಲಿ ಖಾಸಗಿ ಬಸ್ ನಿಲ್ದಾಣ

ಎನ್.ಕೆ.ಆಂಜನೇಯ
Published 1 ಜುಲೈ 2024, 6:54 IST
Last Updated 1 ಜುಲೈ 2024, 6:54 IST
ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಭಾನುವಾರ ವಿದ್ಯುತ್ ಇಲ್ಲದೇ ಕತ್ತಲು ಆವರಿಸಿರುವುದು 
ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಲ್ಲಿ ಭಾನುವಾರ ವಿದ್ಯುತ್ ಇಲ್ಲದೇ ಕತ್ತಲು ಆವರಿಸಿರುವುದು    

ಹೊನ್ನಾಳಿ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಎಲ್ಲೆಲ್ಲೂ ಕತ್ತಲು..ಪ್ರಯಾಣಿಕರು ಕತ್ತಲಲ್ಲೇ ಪರದಾಡುವಂತಾಗಿದೆ.

ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೇ ನಿಲ್ದಾಣದಲ್ಲಿ ಕತ್ತಲು ಆವರಿಸಿದೆ. ನಿಲ್ದಾಣ ಸೇರಿದಂತೆ ಬಹುತೇಕ ವಾಣಿಜ್ಯ ಮಳಿಗೆಗಳ ಮಾಲೀಕರು ಕತ್ತಲಲ್ಲಿಯೇ ಅನಿವಾರ್ಯವಾಗಿ ವ್ಯಾಪಾರ ನಡೆಸುವಂತಾಗಿದೆ. 

ಬಾಕಿ ವಿದ್ಯುತ್‌ ಶುಲ್ಕ ಕಟ್ಟದ ಕಾರಣ ಬೆಸ್ಕಾಂ ವಿದ್ಯುತ್‌ ಸ್ಥಗಿತಗೊಳಿಸಿದೆ ಎಂಬ ಮಾತು ಕೇಳಿಬಂದಿದೆ.

ADVERTISEMENT

ನಿಲ್ದಾಣದಲ್ಲಿ ಕತ್ತಲು ಇರುವುದನ್ನು ಗಮನಿಸಿದ ಕೆಲವು ಸರ್ಕಾರಿ ಬಸ್‌ಗಳ ಚಾಲಕರು ನಿಲ್ದಾಣದೊಳಕ್ಕೆ ಬಾರದೇ ಮುಖ್ಯರಸ್ತೆಯಲ್ಲಿಯೇ ಬಸ್‌ ನಿಲುಗಡೆ ಮಾಡಿ ಹೊರಟು ಹೋಗುತ್ತಿದ್ದುದು ಭಾನುವಾರ ಕಂಡುಬಂತು. ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಬಸ್‌ ಇಲ್ಲದೇ ತೊಂದರೆ ಅನುಭವಿಸಿದರು.

ವಿದ್ಯುತ್ ಶುಲ್ಕ ಕಟ್ಟಿಲ್ಲ:

ಪುರಸಭೆ ವಾಣಿಜ್ಯ ಮಳಿಗೆಗಳ ವಿದ್ಯುತ್ ಶುಲ್ಕ ಬಾಕಿ ₹ 84,000 ಇದ್ದು ಅದನ್ನು ಪಾವತಿಸದೇ ಇರುವುದು ವಿದ್ಯುತ್ ಸಂಪರ್ಕ ಕಡಿತಕ್ಕೆ ಕಾರಣ.

ಶುಲ್ಕವನ್ನು ಪ್ರತಿ ತಿಂಗಳು ಮ್ಯಾನ್ಯುಯಲ್‌ ಚೆಕ್ ಬರೆದು ಸಹಿ ಹಾಕಿ ವಿದ್ಯುತ್ ಶುಲ್ಕ ಪಾವತಿಸಲಾಗುತ್ತಿತ್ತು. ಆದರೆ ನೂತನ ಮುಖ್ಯಾಧಿಕಾರಿ ಅಧಿಕಾರಿ ವಹಿಸಿಕೊಂಡಿದ್ದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ಸಿಬ್ಬಂದಿ.

‘ಡಿಎಸ್‍ಸಿ (ಡಿಜಿಟಲ್ ಸಿಗ್ನೇಚರ್ ಸರ್ಟಿಫೈ) ಕೀ ಆಗಬೇಕಾಗಿದ್ದು. ಅದು ಒಂದು ದಿನದಲ್ಲಿ ಸರಿಯಾಗಲಿದೆ.  ಇದಾದ ನಂತರ ಎಲ್ಲವೂ ಆನ್‍ಲೈನ್ ಮೂಲಕ ಆಪ್‍ಡೇಟ್ ಆಗಬೇಕಾಗಿದೆ. ಈ ಕಾರಣಕ್ಕಾಗಿ ವಿದ್ಯುತ್ ಶುಲ್ಕವನ್ನು ಪಾವತಿಸಲು ಸಾಧ್ಯವಾಗಿಲ್ಲ’ ಎಂದು ಮುಖ್ಯಾಧಿಕಾರಿ ಲೀಲಾವತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

70 ಮಳಿಗೆಗಳಿಂದ ಒಂದೇ ಮೀಟರ್:

ಪುರಸಭೆ ವ್ಯಾಪ್ತಿಯಲ್ಲಿರುವ ಸುಮಾರು 70ಕ್ಕೂ ಹೆಚ್ಚು ಮಳಿಗೆಗಳಿಗೂ ಒಂದೇ ಒಂದು ಮೀಟರ್ ಕಲ್ಪಿಸಲಾಗಿದೆ. ಹೀಗಾಗಿ ಈ ವಿದ್ಯುತ್ ಶುಲ್ಕವನ್ನು ಪುರಸಭೆಯವರೇ ಇಲ್ಲಿಯವರೆಗೂ ಪಾವತಿಸಿಕೊಂಡು ಬರುತ್ತಿದ್ದರು ಎಂದು ಮುಖ್ಯಾಧಿಕಾರಿ ಹೇಳಿದರು.

‘ಉದ್ದಿಮೆದಾರರ ಪರವಾನಗಿ ಶುಲ್ಕ ನಮ್ಮ ಬಳಿಯೇ ಇರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಮಳಿಗೆಗಳಿಗೂ ಪ್ರತ್ಯೇಕವಾಗಿ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲಾಗುವುದು. ನಂತರ ಆಯಾ ಮಳಿಗೆಯ ಬಾಡಿಗೆದಾರರೇ ವಿದ್ಯುತ್ ಶುಲ್ಕ ಪಾವತಿಸುವಂತೆ ವ್ಯವಸ್ಥೆ ಮಾಡಲಾಗುವುದು. ಲಕ್ಷಾಂತರ ರೂಪಾಯಿಗಳ ಬಾಡಿಗೆ ಕೂಡ ಬಾಕಿ ಇದ್ದು, ಅದರ ವಸೂಲಾತಿಗೂ ಕ್ರಮವಹಿಸಲಾಗುವುದು’ ಎಂದು ಲೀಲಾವತಿ ತಿಳಿಸಿದರು.

ಪುರಸಭೆ ಆಡಳಿತ, ಸಿಬ್ಬಂದಿ ಹಾಗೂ ಬಾಡಿಗೆದಾರರ ತಿಕ್ಕಾಟದ ನಡುವೆ ಸಾರ್ವಜನಿಕರಿಗೆ ತೊಂದರೆಯಾಗಿದೆ.  ಶೀಘ್ರ ಇದಕ್ಕೆ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಅಂಗಡಿ ಮಂಜಪ್ಪ ಒತ್ತಾಯಿಸಿದರು.

4ಇಪಿ : ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ಕಂಡು ಬಂದ ದೃಶ್ಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.