ADVERTISEMENT

ತುರ್ತು ಪರಿಸ್ಥಿತಿ; ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ: ಅರವಿಂದ ಬೆಲ್ಲದ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:43 IST
Last Updated 25 ಜೂನ್ 2024, 15:43 IST
<div class="paragraphs"><p>ದಾವಣಗೆರೆ –ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾತನಾಡಿದರು </p></div>

ದಾವಣಗೆರೆ –ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾತನಾಡಿದರು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ‘1975ರ ಜೂನ್‌ 25ರಂದು ಕಾಂಗ್ರೆಸ್‌ ನೇತೃತ್ವದ ಸರ್ಕಾರ ದೇಶದಲ್ಲಿ ಹೇರಿದ ತುರ್ತು ಪರಿಸ್ಥಿತಿಯು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲಿನ ದೊಡ್ಡ ಕಪ್ಪು ಚುಕ್ಕೆಯಾಗಿ ಉಳಿದಿದೆ’ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಅಭಿಪ್ರಾಯಪಟ್ಟರು.

ADVERTISEMENT

ನಗರದ ದಾವಣಗೆರೆ –ಹರಿಹರ ಅರ್ಬನ್‌ ಸಹಕಾರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ‘ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು: ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದ ತೇರನ್ನು ಸಾಧ್ಯವಾದರೆ ಮುಂದಕ್ಕೆ ಎಳೆಯಿರಿ. ಆದರೆ, ಹಿಂದಕ್ಕೆ ಮಾತ್ರ ಎಳೆಯಬೇಡಿ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಹೇಳಿದ್ದರು. ಆದರೆ, ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಪಾತಾಳಕ್ಕೆ ತಳ್ಳಿತ್ತು’ ಎಂದು ದೂರಿದರು.

‘ಇತಿಹಾಸದ ತಪ್ಪು ಮರುಕಳಿಸದಂತೆ ಎಚ್ಚರ ವಹಿಸುವುದು ಅವಶ್ಯ. ದೇಶದಲ್ಲಿ ಸಂವಿಧಾನವನ್ನು ಬದಲಾಯಿಸಿದವರು ಯಾರು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೂ, ಸುಳ್ಳು ಹೇಳುವ ಮೂಲಕ ಜನರ ತಲೆಯಲ್ಲಿ ಹುಳ ಬಿಡುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ತುರ್ತು ಪರಿಸ್ಥಿತಿಯ ದಿನಗಳಲ್ಲಿ ದೇಶದಲ್ಲಿ ವಕೀಲರು, ಪತ್ರಕರ್ತರು, ವಿರೋಧ ಪಕ್ಷಗಳ ನಾಯಕರನ್ನು ಬಂಧಿಸಲಾಗಿತ್ತು. ಸಂವಿಧಾನದ 39ನೇ ವಿಧಿಗೆ ತಿದ್ದುಪಡಿ ತಂದು, ಪ್ರಧಾನಿ, ಸಭಾಪತಿ, ಉಪರಾಷ್ಟ್ರಪತಿ ವಿರುದ್ಧ ವಿಚಾರಣೆ ನಡೆಸುವ ಅಧಿಕಾರವನ್ನು ನ್ಯಾಯಾಲಯಗಳಿಂದ ಕಿತ್ತುಕೊಳ್ಳಲಾಗಿತ್ತು. ಅಗತ್ಯವಿದ್ದರೆ, ಸಂಸತ್ತು ನೇಮಿಸುವ ತಂಡದಿಂದಲೇ ವಿಚಾರಣೆಗೆ ಅವಕಾಶ ಕಲ್ಪಿಸಲಾಗಿತ್ತು’ ಎಂದು ಹೇಳಿದರು.

‘ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿತ್ತು. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆಯೂ ನಿಷೇಧ ಹೇರಲಾಗಿತ್ತು. ಮೀಸಾ ಕಾನೂನು ಜಾರಿಗೊಳಿಸಿ 1.1 ಲಕ್ಷ ಜನರನ್ನು ಬಂಧಿಸಲಾಗಿತ್ತು’ ಎಂದು ದೂರಿದರು.

‘ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಸಂವಿಧಾನ ನೆನಪಾಗುತ್ತೆ‌‌. ಅಂಬೇಡ್ಕರ್‌ಗೆ ಅತಿ ಹೆಚ್ಚು ಅಪಮಾನ ಮಾಡಿದ್ದು ಕಾಂಗ್ರೆಸ್. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ’ ಎಂದು ಮಾಜಿ ಸಂಸದ ಮುನಿಸ್ವಾಮಿ ಹೇಳಿದರು.

‘ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಸಂವಿಧಾನವನ್ನು ಉಳಿಸಲು ತುರ್ತು ಪರಿಸ್ಥಿತಿಯ ತಪ್ಪುಗಳನ್ನು ಮುಂದಿನ ಪೀಳಿಗೆಗೆ ತಿಳಿಸಲೇಬೇಕು’ ಎಂದರು.

ವಕೀಲ ವಿವೇಕ್ ರೆಡ್ಡಿ ಮಾತನಾಡಿದರು. ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ರವಿ ನಾರಾಯಣ್‌ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಬಂಧು ಮುರುಗೇಶ್ ಆರಾಧ್ಯ, ಕೃಷ್ಣಕುಮಾರ್ ತ್ಯಾವಣಿಗಿ ಇನ್ನಿತರರು ಭಾಗವಹಿಸಿದ್ದರು.

‘ಬೈಬಲ್‌ ಹಿಡಿದು ಸಂವಿಧಾನ ಎನ್ನುವ ರಾಹುಲ್‌’ 

‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೈಬಲ್‌ ಹಿಡಿದು ಸಂವಿಧಾನ ಎನ್ನುತ್ತಿದ್ದಾರೆ. ಬೈಬಲ್ ಪುಸ್ತಕವನ್ನೇ ಅವರು ಸಂವಿಧಾ‌ನ ಎಂದು ಭಾವಿಸಿದ್ದಾರೆ’ ಎಂದು ಅರವಿಂದ ಬೆಲ್ಲದ್‌ ವ್ಯಂಗ್ಯವಾಡಿದರು.

‘ದೇಶದ ಸ್ಥಿತಿ ನೋಡಿದರೆ ಇನ್ನೂ 100 ವರ್ಷವಾದರೂ ಮೀಸಲಾತಿ ಅಗತ್ಯವಾಗಿದೆ. ಮೀಸಲಾತಿ ಮುಂದುವರಿಸಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿರ್ಣಯ ತೆಗೆದುಕೊ‌ಂಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.