ADVERTISEMENT

‘ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 28 ಮೇ 2024, 6:15 IST
Last Updated 28 ಮೇ 2024, 6:15 IST
ಮಾಯಕೊಂಡ ಸಮೀಪದ ಆನಗೋಡು ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು
ಮಾಯಕೊಂಡ ಸಮೀಪದ ಆನಗೋಡು ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು   

ಮಾಯಕೊಂಡ: ಜಿಲ್ಲೆಯಲ್ಲಿ ಉತ್ತಮ‌ ಮಳೆಯಾಗುತ್ತಿದೆ. ಕೃಷಿ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ‌ ಕೆ.ಎಸ್. ಬಸವಂತಪ್ಪ ಸೂಚಿಸಿದರು.

ಸಮೀಪದ ಆನಗೋಡು ರೈತ ಸಂಪರ್ಕ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ಅಧಿಕಾರಿಗಳು, ಸಿಬ್ಬಂದಿ ಬಿತ್ತನೆ ಮುಗಿಯುವವರೆಗೂ ರೈತ ಸಂಪರ್ಕ ಕೇಂದ್ರದಲ್ಲಿ ಇರಬೇಕು. ಬಿತ್ತನೆ ಕಾಲದಲ್ಲಿ ರಜೆ ಹಾಕಿಕೊಂಡು ಕುಳಿತರೆ ಹೇಗೆ? ಮತ್ತೆ ಇದು ಮರುಕಳಿಸಬಾರದು ಎಂದು ಗೈರಾಗಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಅಧಿಕಾರಿಗಳು ಕೆಲವೇ ಕಂಪನಿಗಳ ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ತರಿಸಿ ಮಾರಾಟ ಮಾಡುತ್ತಿದ್ದು, ಬೇಡಿಕೆ ಇರುವ ಎನ್‌ಕೆ, ಡಿಕೆಸಿ, ಗಂಗಾ ಕಾವೇರಿ ಸೇರಿದಂತೆ ಎಲ್ಲಾ ಕಂಪನಿಗಳ ಬಿತ್ತನೆ ಬೀಜಗಳನ್ನು ಮಾರಾಟ ಮಾಡುತ್ತಿಲ್ಲ. ಅಧಿಕಾರಿಗಳು ರೈತರ ಕೈಗೆ ಸಿಗುತ್ತಿಲ್ಲ ಎಂದು ರೈತರು ಶಾಸಕರ ಎದುರು ದೂರಿದರು.

ಸಹಾಯಕ ಕೃಷಿ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕರು, ‘ಜಿಲ್ಲೆಯಲ್ಲಿ ಮಳೆ ಆಗುತ್ತಿದ್ದರೂ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿಲ್ಲ ಎಂದರೆ ಹೇಗೆ. ಗೋದಾಮುಗಳಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಈ ಬಗ್ಗೆ ಕೃಷಿ ಸಚಿವರ ಬಳಿ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

‘ಬಿತ್ತನೆ ಸಂಬಂಧ ರೈತರಿಂದ ಯಾವುದೇ ದೂರು ಬಂದರೆ ನೀವೇ ಹೊಣೆಗಾರರಾಗುತ್ತೀರಿ. ಶೀಘ್ರ ಗುಣಮಟ್ಟದ ಬಿತ್ತನೆ ಬೀಜಗಳ ದಾಸ್ತಾನು ಮಾಡಿ ರೈತರಿಗೆ ವಿತರಿಸಬೇಕು‘ ಎಂದು ತಾಕೀತು ಮಾಡಿದರು. 

ಕೃಷಿ ಇಲಾಖೆಯ ರೇಷ್ಮಾ, ರುದ್ರೇಗೌಡ ಆನಗೋಡು ಹಾಗೂ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.