ADVERTISEMENT

ದಾವಣಗೆರೆ: ವಿಸ್ತರಣೆಗೊಂಡ ಉಪ ವಿಜ್ಞಾನ ಕೇಂದ್ರ

ಹವಾಮಾನ ಬದಲಾವಣೆ, ಶಕ್ತಿಯ ಆಕರಗಳ ಗ್ಯಾಲರಿ ನಿರ್ಮಾಣ ಬಹುತೇಕ ಪೂರ್ಣ

ಜಿ.ಬಿ.ನಾಗರಾಜ್
Published 17 ಅಕ್ಟೋಬರ್ 2024, 6:24 IST
Last Updated 17 ಅಕ್ಟೋಬರ್ 2024, 6:24 IST
ದಾವಣಗೆರೆ ತಾಲ್ಲೂಕಿನ ಆನಗೋಡು ಸಮೀಪದ ಹುಳುಪಿನಕಟ್ಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹವಮಾನ ಬದಲಾವಣೆಗೆ ಸಂಬಂಧಿಸಿದ ಗ್ಯಾಲರಿ 
ಪ್ರಜಾವಾಣಿ ಚಿತ್ರ– ಸತೀಶ್‌ ಬಡಿಗೇರ
ದಾವಣಗೆರೆ ತಾಲ್ಲೂಕಿನ ಆನಗೋಡು ಸಮೀಪದ ಹುಳುಪಿನಕಟ್ಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹವಮಾನ ಬದಲಾವಣೆಗೆ ಸಂಬಂಧಿಸಿದ ಗ್ಯಾಲರಿ  ಪ್ರಜಾವಾಣಿ ಚಿತ್ರ– ಸತೀಶ್‌ ಬಡಿಗೇರ   

ದಾವಣಗೆರೆ: ಗಾಳಿ ಬೀಸುತ್ತಿದ್ದಂತೆಯೇ ಯಂತ್ರದ ರೆಕ್ಕೆಗಳು ತಿರುಗಲಾರಂಭಿಸುತ್ತವೆ. ಗಾಳಿಯ ವೇಗಕ್ಕೆ ತಕ್ಕಂತೆ ರೆಕ್ಕೆಗಳ ತಿರುಗಾಟವೂ ಹೆಚ್ಚುತ್ತದೆ. ಯಂತ್ರದಿಂದ ಹೊರಹೊಮ್ಮಿದ ವಿದ್ಯುಚ್ಛಕ್ತಿಯಿಂದ ಬಲ್ಬ್‌ ಬೆಳಕು ಹೊರಸೂಸುತ್ತದೆ. ಗಾಳಿಯ ವೇಗವನ್ನು ನಿಯಂತ್ರಿಸುತ್ತಿದ್ದವರ ಕಣ್ಣಲ್ಲಿ ವಿಜ್ಞಾನದ ಜ್ಯೋತಿ ಕಾಣತೊಡಗುತ್ತದೆ.

ಪವನ ವಿದ್ಯುತ್‌ ಉತ್ಪಾದನೆಯ ಈ ಮಾದರಿ ದಾವಣಗೆರೆ ತಾಲ್ಲೂಕಿನ ಆನಗೋಡು ಸಮೀಪದ ಹುಳುಪಿನಕಟ್ಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವೀಕ್ಷಣೆಗೆ ಸಜ್ಜಾಗಿದೆ. ಜಲವಿದ್ಯುತ್‌, ಸೌರಶಕ್ತಿ, ಸಮುದ್ರದ ಅಲೆಗಳ ಉಬ್ಬರ ಸೇರಿ ಶಕ್ತಿಯ ವಿವಿಧ ಆಕರಗಳಿಂದ ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯ ಕೌತುಕವನ್ನು ಅರಿಯಲು ಇಂತಹ ಹಲವು ವಿಜ್ಞಾನದ ಮಾದರಿಗಳು ಇಲ್ಲಿವೆ.

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದೆ. 2015-16ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಈ ಕೇಂದ್ರವು 4 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. 2023ರ ಏ.2ರಂದು ಉದ್ಘಾಟನೆಗೊಂಡ ಈ ಕೇಂದ್ರದಲ್ಲಿ ಈವರೆಗೆ ‘ವಿನೋದ ವಿಜ್ಞಾನ’ ಗ್ಯಾಲರಿ ಮಾತ್ರ ಲಭ್ಯವಿತ್ತು. ಕೇಂದ್ರದ ತಳಮಹಡಿಯಲ್ಲಿ ಬಿರ್ಲಾ ಸೈನ್ಸ್ ಮ್ಯೂಜಿಯಂ ನಿರ್ಮಿಸಿದ 24 ಮಾದರಿಗಳನ್ನು ಕಣ್ತುಂಬಿಕೊಳ್ಳಬಹುದಾಗಿತ್ತು.

ADVERTISEMENT

ಶಕ್ತಿಯ ವಿವಿಧ ಆಕರಗಳು ಹಾಗೂ ಹವಮಾನ ಬದಲಾವಣೆಯ ಗ್ಯಾಲರಿಯು ಕೇಂದ್ರದ ಮೊದಲ ಮಹಡಿಯಲ್ಲಿದೆ. ತಳಮಹಡಿಯ ಗ್ಯಾಲರಿ ವೀಕ್ಷಣೆಗೆ ಮುಕ್ತವಾದ ಬಳಿಕ ಈ ಗ್ಯಾಲರಿಯ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. 8 ತಿಂಗಳಿಂದ ನಡೆಯುತ್ತಿರುವ ನಿರ್ಮಾಣ ಕಾರ್ಯ ಶೇ 90ರಷ್ಟು ಪೂರ್ಣಗೊಂಡಿದೆ. ಚಾಮರಾಜನಗರದ ಗ್ರಾಮ ಬಂಧು ಟ್ರಸ್ಟ್‌ ಈ ಗ್ಯಾಲರಿಯ ನಿರ್ಮಾಣದ ಹೊಣೆ ಹೊತ್ತಿದೆ.

ಬಾಹ್ಯಾಕಾಶದ ಕುರಿತು ಹಾವೇರಿ, ತೋಟಗಾರಿಕೆ ಕುರಿತು ಬಾಗಲಕೋಟೆ ವಿಜ್ಞಾನ ಕೇಂದ್ರಗಳಲ್ಲಿ ಗ್ಯಾಲರಿ ನಿರ್ಮಾಣಗೊಂಡಿವೆ. ದಾವಣಗೆರೆಯಲ್ಲಿ ಹವಮಾನ ಬದಲಾವಣೆ ಮತ್ತು ಶಕ್ತಿಯ ಆಕರಗಳ ಪರಿಕಲ್ಪನೆಯ ಆಧಾರದ ಮೇರೆಗೆ ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ಅಧಿಕೃತವಾಗಿ ಗ್ಯಾಲರಿ ವೀಕ್ಷಣೆಗೆ ಮುಕ್ತವಾಗದಿದ್ದರೂ ಕೇಂದ್ರಕ್ಕೆ ಭೇಟಿ ನೀಡುತ್ತಿರುವ ವಿದ್ಯಾರ್ಥಿಗಳ ಕೌತುಕ ತಣಿಸುವ ಅವಕಾಶವನ್ನು ಸಿಬ್ಬಂದಿ ಮಾಡಿಕೊಡುತ್ತಿದ್ದಾರೆ.

ಹವಮಾನ ಬದಲಾವಣೆಗೆ ಸಂಬಂಧಿಸಿದ ಗ್ಯಾಲರಿ ಹಲವು ಅನುಮಾನಗಳನ್ನು ನಿವಾರಿಸುತ್ತದೆ. ಉಷ್ಣಾಂಶ ಹೆಚ್ಚಿದರೆ ಏನಾಗುತ್ತದೆ? ಸಮುದ್ರದ ಮಟ್ಟ ಹೆಚ್ಚಿದರೆ ಎದುರಾಗುವ ಅಪಾಯ ಏನು? ವಿದ್ಯಾರ್ಥಿಗಳ ಇಂತಹ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿವೆ. ಭೂಮಿ ಸೃಷ್ಟಿಯಿಂದ ಈವರೆಗೆ ಬದಲಾದ ರೀತಿಯನ್ನು ಭಿತ್ತಿಚಿತ್ರಗಳಲ್ಲಿ ಕಟ್ಟಿಕೊಡಲಾಗಿದೆ. ಹವಮಾನ ವೈಪರಿತ್ಯಕ್ಕೆ ಸಂಬಂಧಿಸಿದ ವಿಡಿಯೊಗಳ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.

‘ಹವಮಾನ ಬದಲಾವಣೆ, ಶಕ್ತಿಯ ಆಕಾರ, ಜೈವಿಕ ಶಕ್ತಿ ಹಾಗೂ ಪರ್ಯಾಯ ಇಂಧನಗಳ ಮಾಹಿತಿಯನ್ನು ವಿಡಿಯೊಗಳ ಮೂಲಕ ಮನವರಿಕೆ ಮಾಡಿಕೊಡುವ ವ್ಯವಸ್ಥೆ ಇದೆ. ಇದಕ್ಕೆ ಅಗತ್ಯವಿರುವ ಕೆಲ ಸಾಫ್ಟವೇರ್‌ ಅಳವಡಿಕೆ ಕಾರ್ಯ ಮಾತ್ರ ಬಾಕಿ ಇದೆ. ದಾವಣಗೆರೆ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಯ ಹಲವು ಭಾಗಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ’ ಎನ್ನುತ್ತಾರೆ ಕೇಂದ್ರದ ಉಸ್ತುವಾರಿ ಪಿ.ಅರುಣ್‌.

ವಿಜ್ಞಾನ ಮತ್ತು ತಂತ್ರಜ್ಷಾನ ಕ್ಷೇತ್ರಕ್ಕೆ ಸಂಬಂಧಿಸಿದ ಆವಿಷ್ಕಾರಗಳು, ಬೆಳವಣಿಗೆ, ವಿಜ್ಞಾನಿಗಳ ಸಾಧನೆ, ಅಧ್ಯಯನ ಪರಿಕರಗಳು ಇಲ್ಲಿ ಲಭ್ಯ ಇವೆ. ಭೌತವಿಜ್ಞಾನ, ಖಗೋಳಕ್ಕೆ ಸಂಬಂಧಿಸಿದ ವೈಜ್ಞಾನಿಕ ಮಾದರಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಗ್ರಾಮಬಂಧು ಟ್ರಸ್ಟ್, ಕೆಸ್ಟೆಪ್ಸ್ ಮತ್ತು ಚೆನ್ನೈ ಆ್ಯಂಕಿಡೈನ್‌ ಸಂಸ್ಥೆ ಈ ಮಾದರಿಗಳನ್ನು ನಿರ್ಮಿಸಿವೆ. ಭಿತ್ತಿ ಚಿತ್ರಗಳು ಸೇರಿ 111 ಮಾದರಿಗಳು ಇಲ್ಲಿವೆ.

ತಳಮಹಡಿ ಹಾಗೂ ಹೊರಾಂಗಣದ ಕೆಲ ಮಾದರಿಗಳು ಹಾಳಾಗಿವೆ. ಇವುಗಳ ದುರಸ್ತಿ, ಮರುನಿರ್ಮಾಣ ಕಾರ್ಯವೂ ಆಗಬೇಕಿದೆ. ವಿಜ್ಞಾನ ಕೇಂದ್ರದಲ್ಲಿ ತಾರಾಲಯ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ಬಹುದಿನಗಳಿಂದ ನನೆಗುದಿಗೆ ಬಿದಿದ್ದ ಈ ಒಂದೂವರೆ ವರ್ಷದಿಂದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ಕೌತುಕವನ್ನು ನಿವಾರಿಸುತ್ತಿದೆ.

ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆನಗೋಡು ಕಿರುಮೃಗಾಲಯ ಹಾಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ವೀಕ್ಷಿಸುತ್ತಾರೆ
ಪಿ.ಅರುಣ್‌, ಉಸ್ತುವಾರಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.