ADVERTISEMENT

ಹೊನ್ನಾಳಿ: ಖಾಸಗಿ ಬಸ್‌ ನಿಲ್ದಾಣದಲ್ಲಿಲ್ಲ ಸೌಲಭ್ಯ

ಅವ್ಯವಸ್ಥೆಯ ಆಗರ, ಮಹಿಳೆಯರಿಗಿಲ್ಲ ವಿಶ್ರಾಂತಿ ಕೊಠಡಿ, ಕೂಡಲು ಆಸನವಿಲ್ಲ

ಎನ್.ಕೆ.ಆಂಜನೇಯ
Published 12 ಮಾರ್ಚ್ 2024, 6:24 IST
Last Updated 12 ಮಾರ್ಚ್ 2024, 6:24 IST
ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದ ಮಧ್ಯಭಾಗದಲ್ಲಿ ಬೈಕ್‌ಗಳನ್ನು ನಿಲ್ಲಿಸಿರುವುದು
ಹೊನ್ನಾಳಿ ಖಾಸಗಿ ಬಸ್ ನಿಲ್ದಾಣದ ಮಧ್ಯಭಾಗದಲ್ಲಿ ಬೈಕ್‌ಗಳನ್ನು ನಿಲ್ಲಿಸಿರುವುದು   

ಹೊನ್ನಾಳಿ: ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಸಂಪರ್ಕ ಕೊಂಡಿಯಾಗಿರುವ ಹೊನ್ನಾಳಿಯಲ್ಲಿರುವ ಖಾಸಗಿ ಬಸ್‌ಗಳ  ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ.

ಬಸ್ ನಿಲ್ದಾಣದ ಎಡಭಾಗದಲ್ಲಿ ಟಂಟಂ, ಸರಕು ಸಾಗಣೆ ವಾಹನಗಳು ಹಾಗೂ ಬೈಕ್‌ಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಖಾಸಗಿ ಬಸ್‌ಗಳು ನಿಲ್ದಾಣದೊಳಕ್ಕೆ ಬರುವಾಗ ಮತ್ತು ಹೋಗುವಾಗ ಸಾಕಷ್ಟು ತ್ರಾಸದಾಯಕವಾಗಿದೆ. ಅದೂ ಅಲ್ಲದೆ ಬಸ್ ನಿಲ್ದಾಣ ಪ್ರವೇಶಿಸುವ ದ್ವಾರ ಎತ್ತರದಲ್ಲಿದ್ದು, ನಿಲ್ದಾಣ ತಗ್ಗು ಪ್ರದೇಶದಲ್ಲಿ ಇರುವುದರಿಂದ ಬಸ್‌ಗಳ ಹಿಂದಿನ ಚಕ್ರಗಳು ಇಳಿಯುವಾಗ ರಸ್ತೆಗೆ ತರಚಿಕೊಂಡು ಹೋಗುತ್ತವೆ.

ಸರ್ಕಾರಿ ಬಸ್‌ಗಳೂ ಕೆಲಕಾಲ ಈ ನಿಲ್ದಾಣದೊಳಗೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಪ್ರಯಾಣಿಕರು ಬಸ್‌ಗಳನ್ನು ಹಿಡಿಯಲು ಅಡ್ಡಾದಿಡ್ಡಿ ಓಡಾಡಬೇಕಾಗಿದೆ. ಇದರಿಂದ ಬಸ್ ಚಾಲಕರಿಂದ ಹಿಡಿದು ಸಾರ್ವಜನಿಕರಿಗೂ, ಪ್ರಯಾಣಿಕರಿಗೂ ಕಿರಿಕಿರಿಯುಂಟಾಗುತ್ತಿದೆ.

ADVERTISEMENT

ಇದಲ್ಲದೆ ನಿಲ್ದಾಣದಲ್ಲಿ ಕುಡುಕರ ಕಾಟ ಹೆಚ್ಚಾಗಿದೆ. ಪ್ರಯಾಣಿಕರು ಕೂರುವ ಜಾಗದಲ್ಲಿ ಕುಡುಕರು ದಿನವಿಡೀ ಕೂತು ಕಾಲ ಕಳೆಯುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕುಡಿಯುವ ನೀರಿನ ಸೌಲಭ್ಯ ಇಲ್ಲ: ಈ ಬಸ್ ನಿಲ್ದಾಣದೊಳಗೆ ಖಾಸಗಿ ಹಾಗೂ ಸರ್ಕಾರಿ ಸೇರಿ 500ಕ್ಕೂ ಹೆಚ್ಚು ಬಸ್‌ಗಳು ಪ್ರತಿದಿನ ಬಂದು ಹೋಗುತ್ತವೆ. ಹೊರಭಾಗಗಳಿಂದ ಬರುವ ಸಾವಿರಾರು ಪ್ರಯಾಣಿಕರ ಲಗೇಜ್‌ ಇರಿಸಲು ಕೊಠಡಿ ವ್ಯವಸ್ಥೆ ಇಲ್ಲ. ಸುಡು ಬೇಸಿಗೆಯಲ್ಲಿ ದಾಹ ತಣಿಸಿಕೊಳ್ಳಲು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಎರಡು– ಮೂರು ವರ್ಷಗಳ ಹಿಂದೆ ಇದ್ದ ಫಿಲ್ಟರ್ ನೀರಿನ ವ್ಯವಸ್ಥೆ ಕೆಟ್ಟು ಹೋಗಿದೆ. ಅದನ್ನು ಈವರೆಗೂ ದುರಸ್ತಿ ಮಾಡಿಲ್ಲ.

ಅಡಿಕೆ, ಎಲೆ, ಗುಟ್ಕಾ ತಿನ್ನುವ ಕೆಲವರು ಎಲ್ಲೆಂದರಲ್ಲಿ ಉಗಿಯುತ್ತಿದ್ದಾರೆ. ಇಡೀ ಬಸ್ ನಿಲ್ದಾಣ ಅನೈರ್ಮಲ್ಯದಿಂದ ಕೂಡಿದೆ. ಪೌರಕಾರ್ಮಿಕರು ನಿತ್ಯ ಬೆಳಿಗ್ಗೆ ಸ್ವಚ್ಛಗೊಳಿಸುತ್ತಾರೆ. ಅದೂ ರಾಸಾಯನಿಕ ಔಷಧಗಳನ್ನು ಸಿಂಪಡಿಸಿ ಸ್ವಚ್ಛ ಮಾಡುವುದು ಅಪರೂಪ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಪ್ರಯಾಣಿಕರು ಓಡಾಡುವ ಜಾಗಗಳಲ್ಲಿ ಬಳೆ ಮಾರುವವರು, ಹೂವು ಮಾರುವವರು ಜಾಗ ಆಕ್ರಮಿಸಿಕೊಂಡಿದ್ದು, ಬಸ್‌ಗಳಿಗೆ ನಿಂತುಕೊಂಡೇ ಕಾಯಬೇಕಾದ ದುಃಸ್ಥಿತಿ ಪ್ರಯಾಣಿಕರದ್ದಾಗಿದೆ.

ಮಹಿಳಾ ವಿಶ್ರಾಂತಿ ಕೊಠಡಿ ಇಲ್ಲ: ಬಸ್ ನಿಲ್ದಾಣಕ್ಕೆ ಬರುವ ವೃದ್ಧೆಯರು, ಗರ್ಭಿಣಿಯರು, ಬಾಣಂತಿಯರಿಗೆ ಕೆಲಕಾಲ ಕೂತು ವಿಶ್ರಾಂತಿ ಪಡೆಯಲು ಒಂದು ಕೋಣೆ ಇಲ್ಲ. ಹೀಗಾಗಿ, ತಾಯಂದಿರು ಮಗುವಿಗೆ ಹಾಲುಣಿಸಲು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ.

ಬಸ್ ನಿಲ್ದಾಣ ಚಿಕ್ಕದಾಗಿದ್ದು ಅವಶ್ಯಕತೆಗೆ ಅನುಗುಣವಾಗಿ ಸುಸಜ್ಜಿತವಾಗಿ ನಿರ್ಮಿಸಿ ಎಲ್ಲ ಸೌಲಭ್ಯ ಒದಗಿಸಬೇಕೆಂಬುದು ಪ್ರಯಾಣಿಕರ ಮನವಿಯಾಗಿದೆ.

ಹೂವಿನ ವ್ಯಾಪಾರಿಗಳು ಜಾಗ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಬಸ್ ನಿಲ್ದಾಣದ ಬಲಭಾಗದಲ್ಲಿ ಗೂಡಂಗಡಿಗಳು, ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿವೆ. ಕಬಾಬ್, ಮಿರ್ಚಿ, ಬೋಂಡಾ, ಎಗ್‍ರೈಸ್, ಗೋಬಿ ಮಂಚೂರಿ ಮತ್ತಿತರ ತಿಂಡಿಗಾಡಿಗಳು, ಅಂಗಡಿಗಳಿಂದ ಇಡೀ ವಾತಾವರಣ ದುರ್ನಾತ ಬೀರುತ್ತಿದೆ. ಬಸ್ ನಿಲ್ದಾಣದಲ್ಲಿರುವ ಮೂತ್ರಾಲಯದ ತ್ಯಾಜ್ಯ ಚರಂಡಿಯಲ್ಲಿ ಸರಾಗವಾಗಿ ಸಾಗದೇ ನಿಂತಿದ್ದು, ಸಂಪಿಗೆ ರಸ್ತೆ ಗಬ್ಬು ವಾಸನೆಯಿಂದ ಕೂಡಿದೆ.

ಹೊನ್ನಾಳಿ ಪಟ್ಟಣದ ಖಾಸಗಿ ಬಸ್‍ನಿಲ್ದಾಣದ ಮುಂಭಾಗದಲ್ಲಿ ಗೂಡ್ಸ್ ಗಾಡಿಗಳು ಸಾಲಾಗಿ ನಿಂತಿರುವುದು
ಬಸ್ ನಿಲ್ದಾಣದೊಳಗಿರುವ ಚಪ್ಪಲಿ ಅಂಗಡಿ ಮುಂಭಾಗದಲ್ಲಿ ಪೆಟ್ಟಿಗೆಗಳನ್ನು ಇಟ್ಟಿರುವುದು. ಇದರಿಂದ ಶೌಚಾಲಯದ ದಾರಿ ಕಾಣದಾಗಿದೆ
ಬಸ್ ನಿಲ್ದಾಣದ ಯೋಜನೆ ಏನಿದೆಯೋ ಅದನ್ನು ತರುವಂತೆ ಎಂಜಿನಿಯರ್‌ಗೆ ತಿಳಿಸಿದ್ದೇನೆ. ಅದನ್ನು ನೋಡಿ ಜಾಗ ಮೀಸಲಿಡುವ ಕ್ರಮ ವಹಿಸುತ್ತೇವೆ. ಮಹಿಳೆಯರಿಗೆ ವಿಶ್ರಾಂತಿ ಕೊಠಡಿಗೆ ವ್ಯವಸ್ಥೆ ಮಾಡುತ್ತೇವೆ.
-ವಿ.ಅಭಿಷೇಕ್, ಉಪ ವಿಭಾಗಾಧಿಕಾರಿ
ಬಸ್ ನಿಲ್ದಾಣ ಸೇರಿ ಪಟ್ಟಣದ ಪ್ರಮುಖ ಸಮಸ್ಯೆಗಳ ಬಗ್ಗೆ ಶೀಘ್ರ ಪುರಸಭೆ ಸದಸ್ಯರ ಸಭೆ ಕರೆದು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು.
-ಡಿ.ಜಿ. ಶಾಂತನಗೌಡ, ಶಾಸಕ
ಬಸ್ ನಿಲ್ದಾಣ ಕೊಂಪೆಯಂತೆ ಕಾಣುತ್ತದೆ. ಪುರಸಭೆ ಇದ್ದೂ ಇಲ್ಲದಂತಿದೆ. ಇಲ್ಲಿನ ಸಮಸ್ಯೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
-ಪೈಲ್ವಾನ್ ಕುಮಾರ್, ಹೊನ್ನಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.