ADVERTISEMENT

ಖೋಟಾ ನೋಟು ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 4:58 IST
Last Updated 11 ಆಗಸ್ಟ್ 2022, 4:58 IST
ದಾವಣಗೆರೆಯಲ್ಲಿ ಖೋಟಾ ನೋಟು ಚಲಾವಣೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ, ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್‌.ಬಸವರಾಜ್ ಹಾಗೂ ಸಿಬ್ಬಂದಿ ಇದ್ದಾರೆ.
ದಾವಣಗೆರೆಯಲ್ಲಿ ಖೋಟಾ ನೋಟು ಚಲಾವಣೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್‌ಪಿ ಆರ್.ಬಿ. ಬಸರಗಿ, ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್‌.ಬಸವರಾಜ್ ಹಾಗೂ ಸಿಬ್ಬಂದಿ ಇದ್ದಾರೆ.   

ದಾವಣಗೆರೆ: ನಗರದಲ್ಲಿ ಬುಧವಾರ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಡಿಸಿಆರ್‌ಬಿ ಪೊಲೀಸರು, ಬಂಧಿತರಿಂದ ವಿವಿಧ ಮುಖಬೆಲೆಯ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ದಾವಣಗೆರೆಯ ಯಲ್ಲಮ್ಮ ನಗರದ ಅಶೋಕ ಎಸ್. ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಿಲು ಗ್ರಾಮದ ಅರಸನಾಳು ಹಾಲೇಶಿ ಬಂಧಿತರು.

‘ಮರಳು ವ್ಯಾಪಾರದಲ್ಲಿ ತೊಡಗಿರುವ ಆರೋಪಿಗಳು ಯಲ್ಲಮ್ಮನಗರದ ತೆಲಗಿ ಶೇಖರಪ್ಪ ಅವರ ಮನೆಯ ಸಮೀಪ ಕಲರ್ ಜೆರಾಕ್ಸ್ ಮಷಿನ್‌ನಿಂದ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿರುವ ವೇಳೆ ಸಿಕ್ಕಿ ಬಿದ್ದಿದ್ದಾರೆ.

ADVERTISEMENT

₹ 100 ಮುಖಬೆಲೆಯ 26, ₹ 200 ಮುಖಬೆಲೆಯ 133 ಹಾಗೂ ₹ 500 ಮುಖಬೆಲೆಯ 183 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಸಲಿ ನೋಟನ್ನು ಕಲರ್ ಮಷಿನ್‌ನಲ್ಲಿ ಸ್ಕ್ಯಾನ್ ಮಾಡಿ, ಅದೇ ಮಾದರಿಯಲ್ಲಿ ಒಂದೇ ನಂಬರ್‌ ಇರುವ ಖೋಟಾ ನೋಟುಗಳನ್ನು ಕಲರ್ ಪ್ರಿಂಟ್ ಮಾಡಲಾಗಿದೆ. ಅಸಲಿ ನೋಟುಗಳ ಮಧ್ಯೆ ಖೋಟಾ ನೋಟು ಇಟ್ಟು ಚಲಾವಣೆ ಮಾಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ಆರೋಪಿ ಹಾಲೇಶಿ 2019ರಲ್ಲಿ ಚಿಗಟೇರಿ ವ್ಯಾಪ್ತಿಯಲ್ಲಿ ₹ 100 ಮುಖಬೆಲೆಯ 3 ಖೋಟಾ ನೋಟು ಚಲಾವಣೆ ಮಾಡಿದ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ ಎಂದು ಅವರು ವಿವರಿಸಿದರು.

ಡಿಸಿಆರ್‌ಬಿ ಡಿವೈಎಸ್‌ಪಿ ಬಿ.ಎಸ್‌.ಬಸವರಾಜ್, ಸಿಬ್ಬಂದಿ ಕೆ.ಸಿ. ಮಜೀದ್‌, ಕೆ.ಟಿ.ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಎಚ್.ಆರ್. ನಟರಾಜ್, ಈ.ಬಿ. ಅಶೋಕ, ಆರ್.ರಮೇಶ್‌ನಾಯ್ಕ್, ಸಿ.ಎಸ್‌. ಬಾಲರಾಜ್, ಸಿ.ಮಲ್ಲಿಕಾರ್ಜುನ್, ಪ್ರಶಾಂತ್‌ಕುಮಾರ್ ನಿಂಗರಾಜ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.