ADVERTISEMENT

ಈರುಳ್ಳಿ ಬೆಲೆ ಇಳಿಮುಖ: ಗ್ರಾಹಕ ನಿರಾಳ, ರೈತ ತಳಮಳ

ದಾವಣಗೆರೆ ಮಾರುಕಟ್ಟೆಗೆ ಬಂದ ಮಹಾರಾಷ್ಟ್ರದ ಗಡ್ಡೆ

ವಿನಾಯಕ ಭಟ್ಟ‌
Published 14 ಜನವರಿ 2020, 19:30 IST
Last Updated 14 ಜನವರಿ 2020, 19:30 IST
ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಎತ್ತಿನ ಗಾಡಿಯ ಮೇಲೆ ಈರುಳ್ಳಿ ಸಾಗಿಸುತ್ತಿರುವುದು.
ದಾವಣಗೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ ಎತ್ತಿನ ಗಾಡಿಯ ಮೇಲೆ ಈರುಳ್ಳಿ ಸಾಗಿಸುತ್ತಿರುವುದು.   

ದಾವಣಗೆರೆ: ಕಳೆದ ವರ್ಷಾಂತ್ಯದಲ್ಲಿ ಒಂದು ಕೆ.ಜಿ. ದೊಡ್ಡ ಗಡ್ಡೆಯ (ಫಸ್ಟ್‌ ಗ್ರೇಡ್‌) ಈರುಳ್ಳಿ ಬೆಲೆ ಸಗಟು ಮಾರುಕಟ್ಟೆಯಲ್ಲೇ ₹ 160ರ ಗಡಿ ದಾಟುವ ಮೂಲಕ ಗ್ರಾಹಕರಿಗೆ ಕಣ್ಣೀರು ತರಿಸಿದ್ದರೆ, ಈ ವರ್ಷವಾದರೂ ಲಾಭ ಸಿಕ್ಕೀತು ಎಂಬ ‘ಹೊಂಬೆಳಕು’ ರೈತರ ಕಣ್ಣಲ್ಲಿ ಪ್ರತಿಫಲಿಸಿತ್ತು.

ಒಂದು ತಿಂಗಳಲ್ಲೇ ಚಿತ್ರಣ ಬದಲಾಗುತ್ತಿದೆ. ದಿನೇ ದಿನೇ ಕುಸಿಯುತ್ತಿರುವ ಈರುಳ್ಳಿಯ ಬೆಲೆ ಗ್ರಾಹಕರಲ್ಲಿ ಹರ್ಷವನ್ನು ಮೂಡಿಸಿದೆ. ಜೊತೆಗೆ ಲಾಭದ ಕನಸು ಹೊತ್ತು ಹಿಂಗಾರು ಹಂಗಾಮಿಗೆ ಈರುಳ್ಳಿ ಬಿತ್ತಿದ ರೈತರ ಮನದಲ್ಲಿ ಆತಂಕದ ಬೀಜ ಮೊಳಕೆಯೊಡೆಯುತ್ತಿದೆ!

ಅಕ್ಟೋಬರ್‌–ನವೆಂಬರ್‌ನಲ್ಲಿ ಮಳೆಗೆ ಸಿಲುಕಿ ಈರುಳ್ಳಿ ಬೆಳೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿ ರೈತರು ಕೈಸುಟ್ಟಿಕೊಂಡಿದ್ದರು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ಆವಕ ಆಗಿದ್ದರಿಂದ ದಾವಣಗೆರೆ ಸಗಟು ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಒಂದು ಕೆ.ಜಿ. ಬೆಲೆ ₹ 160ರ ಗಡಿ ದಾಟುವ ಮೂಲಕ ದಾಖಲೆ ನಿರ್ಮಿಸಿತ್ತು. ನಾಲ್ಕೈದು ದಿನಗಳಲ್ಲೇ ಕೊಳೆತು ಹೋಗುತ್ತಿದ್ದ ಮಧ್ಯಮ ಗಾತ್ರದ ಈರುಳ್ಳಿಗೂ ₹ 100 ಕೊಟ್ಟು ಗ್ರಾಹಕರು ಖರೀದಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿತ್ತು.

ADVERTISEMENT

ಇದೀಗ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌ನಿಂದ ಗುಣಮಟ್ಟದ ಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬರುತ್ತಿರುವುದರಿಂದ ದಿನೇ ದಿನೆಬೆಲೆ ಇಳಿಕೆಯಾಗುತ್ತಿದೆ. ಒಂದು ವಾರದ ಅವಧಿಯಲ್ಲಿ ಒಂದು ಕೆ.ಜಿ.ಗೆ ₹ 20ರಷ್ಟು ಬೆಲೆ ಕಡಿಮೆಯಾಗಿದೆ ಎಂದು ವರ್ತಕರು ಹೇಳುತ್ತಾರೆ.

‘ನಾಸಿಕ್‌, ಸತಾರ, ಸೊಲ್ಲಾಪುರ, ಮಧ್ಯಪ್ರದೇಶ, ಇಂಧೋರ್‌, ಗುಜರಾತ್‌ನಿಂದ ರಾಜ್ಯಕ್ಕೆ ಈರುಳ್ಳಿ ಬರಲು ಆರಂಭಿಸಿದೆ. ದಾವಣಗೆರೆ ಈರುಳ್ಳಿ ಮಾರುಕಟ್ಟೆಗೆ ದಿನಾಲೂ 10ರಿಂದ 12 ಲಾರಿ ಈರುಳ್ಳಿ ಬರುತ್ತಿದೆ. ಭಾನುವಾರ ಪುಣೆಯಿಂದ ತರಿಸಿದ ಒಂದು ಕೆ.ಜಿ. ಈರುಳ್ಳಿಗೆ ₹ 30 ಬಿದ್ದಿತ್ತು. ಸೋಮವಾರ ₹ 25ರಿಂದ ₹ 28ಕ್ಕೆ ಸಿಕ್ಕಿದೆ. ಸಾರಿಗೆ ವೆಚ್ಚ ಸೇರಿಸಿ ದೊಡ್ಡ ಗಾತ್ರದ ಈರುಳ್ಳಿಯನ್ನು ₹ 36ಕ್ಕೆ ಸಗಟು ದರದಲ್ಲಿ ಮಾರಾಟ ಮಾಡಿದ್ದೇನೆ’ ಎಂದು ಈರುಳ್ಳಿ ಮಾರುಕಟ್ಟೆಯ ‘ಅಮೀರ್‌ ಜಾನ್‌ ಆ್ಯಂಡ್‌ ಕೊ’ ಅಂಗಡಿಯ ಮಹಮ್ಮದ್‌ ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಜಿಫ್ಟ್‌ನಿಂದ ಬಂದಿದ್ದ ಈರುಳ್ಳಿ ₹ 60ಕ್ಕೆ ಮಾರಾಟವಾಗುತ್ತಿತ್ತು. ಸೋಮವಾರ ₹ 25ಕ್ಕೆ ಮಾರಾಟವಾಗಿದೆ. ಹುಲವಾಗಲುನಿಂದಲೂ ಈರುಳ್ಳಿ ಬರಲು ಆರಂಭವಾಗಿದೆ. ಇನ್ನೊಂದು ತಿಂಗಳಿಗೆ ರಾಜ್ಯದಲ್ಲಿ ಬೆಳೆದ ಈರುಳ್ಳಿಯೂ ಮಾರುಕಟ್ಟೆಗೆ ಬಂದರೆ ದೊಡ್ಡ ಗಡ್ಡೆಯ ಬೆಲೆ ಒಂದು ಕೆ.ಜಿ.ಗೆ ₹ 20ಕ್ಕೆ ಬಂದರೂ ಆಶ್ಚರ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ದೊಡ್ಡ ಗಾತ್ರದ ಈರುಳ್ಳಿ ₹ 150ರಿಂದ ₹ 160ರವರೆಗೂ ಹೋಗಿತ್ತು. ಬೆಲೆ ಏರಿಕೆಯನ್ನು ನೋಡಿ ಹೆಚ್ಚಿನ ರೈತರು ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಮಹಾರಾಷ್ಟ್ರದಲ್ಲೂ ಉತ್ತಮ ಇಳುವರಿ ಬಂದಿರುವುದರಿಂದ ಆವಕ ಹೆಚ್ಚಾಗಿದೆ. ಪುಣೆಯ ಈರುಳ್ಳಿ ಬೆಲೆಯೂ ₹ 30ಕ್ಕೆ ಬರುವ ಸಾಧ್ಯತೆ ಇದೆ. ಹೀಗಾಗಿ ಹಿಂಗಾರಿಗೆ ಈರುಳ್ಳಿ ಬಿತ್ತನೆ ಮಾಡಿದ ರೈತರಿಗೆ ಹೆಚ್ಚಿನ ಲಾಭ ಸಿಗುವ ಸಾಧ್ಯತೆ ಕಡಿಮೆ’ ಎಂದು ಅವರು ಹೇಳಿದರು.

‘ಮಹಾರಾಷ್ಟ್ರದ ಈರುಳ್ಳಿ ಬರುತ್ತಿರುವುದರಿಂದ ಸಗಟು ಮಾರುಕಟ್ಟೆಯಲ್ಲಿ ದೊಡ್ಡ ಗಡ್ಡೆ ₹ 40ರಿಂದ ₹ 50ರವರೆಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸದ್ಯ ₹ 70ರವರೆಗೆ ಮಾರಾಟವಾಗುತ್ತಿದೆ. ನಾಸಿಕ್‌ ಈರುಳ್ಳಿ ನಗರದ ಮಾರುಕಟ್ಟೆಗೆ ಬರುವಾಗ ಒಂದು ಕೆ.ಜಿ.ಗೆ ₹ 10ರಿಂದ ₹ 15ರವರೆಗೆ ಸಾರಿಗೆ ವೆಚ್ಚ ತಗುಲುತ್ತದೆ. ಹೀಗಾಗಿ ಪುಣೆಯ ಈರುಳ್ಳಿ ₹ 30ಕ್ಕಿಂತ ಕಡಿಮೆ ಬೆಲೆಗೆ ಹೋಗುವ ಸಾಧ್ಯತೆ ಬಹಳ ಕಡಿಮೆ. ಹೀಗಾಗಿ ಬೆಲೆ ಕುಸಿದರೂ ಸ್ಥಳೀಯ ಈರುಳ್ಳಿಗೆ ಇಷ್ಟು ಪ್ರಮಾಣದ ಬೆಲೆ ಸಿಗಬಹುದು’ ಎಂದು ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು ಅಭಿಪ್ರಾಯಪಟ್ಟರು.

ನಾಸಿಕ್‌ ಈರುಳ್ಳಿ ಸಗಟು ಮಾರುಕಟ್ಟೆಯಲ್ಲಿ ₹ 40– ₹ 50ಕ್ಕೆ ಸಿಗುತ್ತಿದ್ದು, ತರಕಾರಿ ಮಾರುಕಟ್ಟೆಯಲ್ಲಿ ನಾವು ₹ 60–₹ 70ಕ್ಕೆಮಾರುತ್ತಿದ್ದೇವೆ. ಕೆಲ ದಿನಗಳಲ್ಲೇ ಇನ್ನೂ ಬೆಲೆ ಇಳಿಯಲಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಚಂದ್ರಪ್ಪ.

ಈರುಳ್ಳಿಗೆ ಒಳ್ಳೆಯ ಬೆಲೆ ಬಂದಾಗ ಬಹುತೇಕ ರೈತರ ಕೈಯಲ್ಲಿ ಬೆಳೆ ಇರಲಿಲ್ಲ. ಇನ್ನೊಂದು ತಿಂಗಳಲ್ಲಿ ಬೆಳೆ ಕೈಗೆ ಬರಲಿದೆ. ಈಗಾಗಲೇ ಬೆಲೆ ಕುಸಿಯುತ್ತಿರುವುದು ಆತಂಕ ಮೂಡಿಸಿದೆ ಎನ್ನುವುದು ನ್ಯಾಮತಿ ತಾಲ್ಲೂಕಿನ ಆರಂಡಿ ಗ್ರಾಮದ ರೈತ ಶಿವರಾಜ್ ಅವರ ಅಳಲು.

1,358 ಹೆಕ್ಟೇರ್‌‌ನಲ್ಲಿಜಿಲ್ಲೆಯಲ್ಲಿ ಹಿಂಗಾರಿಗೆ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗಿದ್ದು,1,313 ಹೆಕ್ಟೇರ್‌ ಪ್ರದೇಶದಲ್ಲಿಹಿಂಗಾರಿಗೆ ಈರುಳ್ಳಿ ಬಿತ್ತನೆ ಮಾಡಲಾಗಿದೆ.

ಈರುಳ್ಳಿ ಮಾರುಕಟ್ಟೆಯಲ್ಲಿನ ಆವಕದ ವಿವರ

ದಿನಾಂಕ – ಆವಕ – ಕನಿಷ್ಠ – ಗರಿಷ್ಠ – ಮಾದರಿ

ಜನವರಿ 13 – 700 – 500 – 5,500 – 3,000

ಜನವರಿ 10 – 175 – 1,000 – 6,500 – 3,750

ಜನವರಿ 09 – 150 – 1,000 – 6,500 – 3,750

ಜನವರಿ 08 – 125 – 1,000 – 6,700 – 3,850

ಜನವರಿ 07 – 350 – 1,000 – 7,000 –4,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.