ಚನ್ನಗಿರಿ: ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಕಾರಣ, ಹಿಂಗಾರು ಹಂಗಾಮಿನ ಬಹುತೇಕ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತಿದ್ದು ಬಂಪರ್ ಇಳುವರಿ ನಿರೀಕ್ಷೆಯಲ್ಲಿ ರೈತರು ಇದ್ದಾರೆ.
ಸಾಮಾನ್ಯವಾಗಿ ಅ. 1ರಿಂದ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ನಡೆದಿತ್ತು. ಅಕ್ಟೋಬರ್‌ನಿಂದ ಈವರೆಗೆ 134 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು, ಈವರೆಗೆ 225 ಮಿ.ಮೀ. ಮಳೆಯಾಗಿದೆ. ರೈತರು ಈ ಹಂಗಾಮಿನಲ್ಲಿ ಅಲಸಂದೆ, ಕಡಲೆ, ಅವರೆ, ಹಿಂಗಾರಿ ಜೋಳ, ರಾಗಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ.
650 ಹೆಕ್ಟೇರ್ ಕಡಲೆ, 1,000 ಹೆಕ್ಟೇರ್ ಅಲಸಂದೆ, 50 ಹೆಕ್ಟೇರ್ ಹಿಂಗಾರಿ ಜೋಳ, 150 ಹೆಕ್ಟೇರ್ ರಾಗಿ, 100 ಹೆಕ್ಟೇರ್ ಅವರೆ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳನ್ನು ಬೆಳದಿದ್ದಾರೆ. ಮಳೆ ಉತ್ತಮವಾಗಿ ಬಿದ್ದ ಕಾರಣದಿಂದಾಗಿ ಎಲ್ಲ ಬೆಳೆಗಳು ಸಮೃದ್ಧವಾಗಿ ಬೆಳೆದು ನಿಂತು ಕಣ್ಮನ ಸೆಳೆಯುವಂತಿವೆ.
ತಾಲ್ಲೂಕಿನ ದೇವರಹಳ್ಳಿ, ಗರಗ, ಗುಳ್ಳೇಹಳ್ಳಿ, ಶೆಟ್ಟಿಹಳ್ಳಿ, ಮಾದಾಪುರ, ನಾರಶೆಟ್ಟಿಹಳ್ಳಿ, ನೀತಿಗೆರೆ, ನುಗ್ಗಿಹಳ್ಳಿ, ಹಿರೇಗಂಗೂರು, ಚಿಕ್ಕಗಂಗೂರು, ಕೊರಟಿಕೆರೆ, ಲಕ್ಷ್ಮೀಸಾಗರ, ಯರಗಟ್ಟಿಹಳ್ಳಿ, ಹೊದಿಗೆರೆ, ಕಾಕನೂರು, ದೊಡ್ಡೇರಿಕಟ್ಟೆ, ಅರಳಿಕಟ್ಟೆ, ಹೊನ್ನೇಮರದಹಳ್ಳಿ, ಬೊಮ್ಮೇನಹಳ್ಳಿ, ಕೊಂಡದಹಳ್ಳಿ, ನಿಂಬಾಪುರ, ಕುಳೇನೂರು, ಶಿವ ಕುಳೇನೂರು, ಚಿಕ್ಕಬೆನ್ನೂರು, ಸಿದ್ದನಮಠ, ದೊಡ್ಡಬ್ಬಿಗೆರೆ, ಚನ್ನಾಪುರ, ಸೋಮಲಾಪುರ, ಹಿರೇಉಡ, ಚಿಕ್ಕೂಡ ಗ್ರಾಮಗಳಲ್ಲಿ ಭರಪೂರ ಫಸಲಿನ ನಿರೀಕ್ಷೆಯಿದೆ.
‘ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಮೆಕ್ಕೆಜೋಳ ಕೊಯ್ಲು ಮಾಡಿ, ಹಿಂಗಾರು ಹಂಗಾಮಿನಲ್ಲಿ 4 ಎಕರೆ ಪ್ರದೇಶದಲ್ಲಿ ಅಲಸಂದೆ ಹಾಗೂ 3 ಎಕರೆಯಲ್ಲಿ ರಾಗಿ ಬಿತ್ತನೆ ಮಾಡಿದ್ದೇನೆ. ಅಕ್ಟೋಬರ್ ತಿಂಗಳಲ್ಲಿ ಉತ್ತಮವಾಗಿ ಹಿಂಗಾರು ಮಳೆಯಾಗಿರುವುದರಿಂದ ಅಲಸಂದೆ ಚೆನ್ನಾಗಿ ಬೆಳೆದಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ’ ಎನ್ನುತ್ತಾರೆ ತಾಲ್ಲೂಕಿನ ಹಿರೇಉಡ ಗೊಲ್ಲರಹಟ್ಟಿ ಗ್ರಾಮದ ರೈತರಾದ ತಿಮ್ಮಣ್ಣ.
ಒಟ್ಟಾರೆ ಮುಂಗಾರು ಹಾಗೂ ಹಿಂಗಾರು ಮಳೆಗಳು ಉತ್ತಮವಾಗಿ ಬಿದ್ದ ಕಾರಣದಿಂದಾಗಿ ಈ ಬಾರಿ ರೈತರ ಬದುಕು ಹಸನಾಗಲು ಸಾಧ್ಯವಾಗಿದೆತಿಮ್ಮಣ್ಣ ಹಿರೇಉಡ ಗೊಲ್ಲರಹಟ್ಟಿ ಗ್ರಾಮದ ರೈತ
ಶೇ 67ರಷ್ಟು ಹೆಚ್ಚುವರಿ ಪ್ರಮಾಣದ ಮಳೆಯಾಗಿದ್ದರೂ ಯಾವುದೇ ರೋಗಗಳ ಕಾಟ ಇಲ್ಲದೇ ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಇದು ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿಸಿದೆಎಸ್.ಎಚ್. ಅರುಣ್ ಕುಮಾರ್ ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.