ADVERTISEMENT

ಬಸವಾಪಟ್ಟಣ: ‘ರೈತರ’ ನೆರವಿಗೆ ಬಾರದ ‘ರೈತ ಸಂಪರ್ಕ’ ಕೇಂದ್ರ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 5:43 IST
Last Updated 8 ನವೆಂಬರ್ 2024, 5:43 IST
ಬಸವಾಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ
ಬಸವಾಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈತ ಸಂಪರ್ಕ ಕೇಂದ್ರದ ಕಟ್ಟಡ   

ಬಸವಾಪಟ್ಟಣ: ನೂತನವಾಗಿ ನಿರ್ಮಿಸಿರುವ ರೈತ ಸಂಪರ್ಕ ಕೇಂದ್ರದ ಕಾಮಗಾರಿ ಮುಕ್ತಾಯವಾಗಿ ಮೂರು ತಿಂಗಳುಗಳೇ ಕಳೆದಿದ್ದರೂ ಉದ್ಘಾಟನಾ ಮುಹೂರ್ತ ಇನ್ನೂ ಕೂಡಿ ಬಂದಿಲ್ಲ. 

ಹೋಬಳಿ ಕೇಂದ್ರವಾದ ಬಸವಾಪಟ್ಟಣದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡ ಹಳೆಯದಾಗಿದ್ದರಿಂದ ಅದನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಹೀಗಾಗಿ ಕಚೇರಿಯನ್ನು ಇಲ್ಲಿಂದ ಮೂರು ಕಿ.ಮೀ. ದೂರದ ಹರೋಸಾಗರದ ಉಗ್ರಾಣ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಬಸವಾಪಟ್ಟಣದಲ್ಲಿ ಕಚೇರಿ ಇದ್ದಾಗ ನಿಯಮಿತವಾಗಿ ಭೇಟಿ ನೀಡುತ್ತಿದ್ದ ಹಲವು ರೈತರು ಕಚೇರಿಯು ಹರೋಸಾಗರಕ್ಕೆ ಸ್ಥಳಾಂತರಗೊಂಡಿದ್ದರಿಂದ ಅಲ್ಲಿಯವರೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಕಟ್ಟಡದ ಕಾಮಗಾರಿ ಮುಕ್ತಾಯಗೊಳ್ಳಲು ನಾಲ್ಕೈದು ವರ್ಷಗಳೇ ಹಿಡಿದಿದೆ. ಈ ಅವಧಿಯಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ ಸುಲಭವಾಗಿ ದೊರೆಯದೇ ಹೋಯಿತು ಎನ್ನುತ್ತಾರೆ ರೈತರು. 

ಕಾಮಗಾರಿ ಮುಕ್ತಾಯವಾಗಿದ್ದರೂ ಉದ್ಘಾಟನೆ ನೆರವೇರಿಸದೇ, ರೈತರಿಗೆ ಅನುಕೂಲ ಕಲ್ಪಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್‌.ಆರ್‌.ರವಿಕುಮಾರ್‌ ಹೇಳಿದರು.

ADVERTISEMENT

ಈ ವರ್ಷದ ಮುಂಗಾರು ಹಂಗಾಮಿನ ಬಿತ್ತನೆ ಸಮಯಕ್ಕಾದರೂ ಬಸವಾಪಟ್ಟಣದಲ್ಲಿ ಹೊಸ ಕಟ್ಟಡ ಉದ್ಘಾಟನೆಯಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ ಉದ್ಘಾಟನೆ ಮುಂದಕ್ಕೆ ಹೋಗುತ್ತಿದ್ದು, ಈಗ ಫಸಲು ಕಟಾವಿನ ಸಮಯ ಬಂದರೂ ಹೊಸ ಕಟ್ಟಡದ ಆರಂಭವಾಗುವ ಸುಳಿವಿಲ್ಲ. ಎಂದು ರೈತರು ದೂರಿದ್ದಾರೆ. 

‘ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆಗೆ ಬರುವ ವಿವಿಧ ರೋಗಗಳು ಮತ್ತು ಭತ್ತದ ಬೆಳೆಗೆ ಅಗತ್ಯವಾದ ಗೊಬ್ಬರ, ಔಷಧಗಳ ಬಗ್ಗೆ ಮಾಹಿತಿ ದೊರೆಯುತ್ತಿಲ್ಲ. ಕೃಷಿ ಇಲಾಖೆ ಸಹಾಯಧನದ ಮೂಲಕ ನೀಡುವ ಕೃಷಿ ಉಪಕರಣಗಳ ಮಾಹಿತಿ ಇಲ್ಲದೇ ರೈತರು ಪರದಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕಟ್ಟಡ ಉದ್ಘಾಟನೆಗೆ ಮಂದಾಗಬೇಕು’ ಎಂದು ರೈತರಾದ ಎಚ್‌.ಹಾಲಸಿದ್ಧಪ್ಪ, ದಾಗಿನಕಟ್ಟೆಯ ರೈತ ನಾಗರಾಜ್‌, ಗುಡ್ಡದ ಕೊಮಾರನಹಳ್ಳಿಯ ರೈತ ಹಾಲೇಶ ನಾಯ್ಕ ಆಗ್ರಹಿಸಿದ್ದಾರೆ. 

ಬಸವಾಪಟ್ಟಣದ ನೂತನ ರೈತ ಸಂಪರ್ಕ ಕೇಂದ್ರದ ಕಾಂಪೌಂಡ್‌ಗೆ ಗೇಟ್‌ ಅಳವಡಿಕೆ ಕಾರ್ಯ ಬಾಕಿ ಇದೆ. ಅದನ್ನು ಅಳವಡಿಸಲು ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಹೊಸ ಗೇಟ್‌ ಅಳವಡಿಸಿದ ನಂತರ ಕಟ್ಟಡ ಉದ್ಘಾಟನೆಗೊಳ್ಳಲಿದೆ.
-ಅರುಣಕುಮಾರ್‌, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.