ADVERTISEMENT

ಬೆಳೆವಿಮೆಯಿಂದ ರೈತರಿಗೆ ಮೂರುಕಾಸಿನ ಪ್ರಯೋಜನವಿಲ್ಲ

ಸರ್ಕಾರವೇ ನೇರವಾಗಿ ಕಂತು ಕಟ್ಟಿಸಿಕೊಳ್ಳಲಿ: ಸಿರಿಗೆರೆ ಶ್ರೀ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 12:26 IST
Last Updated 25 ಡಿಸೆಂಬರ್ 2018, 12:26 IST
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   

ದಾವಣಗೆರೆ: ‘ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಗೆ ಅರ್ಥವಿಲ್ಲದಂತಾಗಿದೆ. ಈ ಯೋಜನೆಯಿಂದ ರೈತರಿಗೆ ಮೂರುಕಾಸಿನ ಪ್ರಯೋಜನವೂ ಆಗುತ್ತಿಲ್ಲ’ ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಕ್ಕರಗೊಳ್ಳದಲ್ಲಿ ಶ್ರೀ ಮಹೇಶ್ವರ ದೇವಸ್ಥಾನವನ್ನು ಮಂಗಳವಾರ ಉದ್ಘಾಟಿಸಿದ ಅವರು, ‘ಬೆಳೆವಿಮೆ ಸಮಸ್ಯೆ ಕುರಿತು ಚರ್ಚಿಸಲು ಕೃಷಿ ಸಚಿವರ ಸಮ್ಮುಖದಲ್ಲಿ ಈಚೆಗೆ ಬೆಂಗಳೂರಿನಲ್ಲಿ ನಡೆಸಿದ ಸಭೆಯಲ್ಲಿ ಅಧಿಕಾರಿಗಳು ನೀಡಿದ ಮಾಹಿತಿ ದಿಗಿಲು ಹುಟ್ಟಿಸಿತು. ಚಿತ್ರದುರ್ಗ ಜಿಲ್ಲೆಯಲ್ಲಿ ವಿಮಾ ಕಂಪನಿಗೆ ₹ 112 ಕೋಟಿ ಕಂತು ಪಾವತಿಸಲಾಗಿದ್ದು, ರೈತರಿಗೆ ಕೇವಲ ₹ 22 ಕೋಟಿ ಪರಿಹಾರ ವಿತರಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ವಿಮಾ ಕಂಪನಿಗೆ ₹ 90 ಕೋಟಿ ಜಮಾ ಆಗಿದೆ. ಆದರೆ, ₹ 11 ಕೋಟಿ ಪರಿಹಾರ ಮಾತ್ರ ವಿತರಣೆಯಾಗಿದೆ. ಬಾಕಿ ಹಣ ವಿಮಾ ಕಂಪನಿ ಪಾಲಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಮಾ ಕಂಪನಿಗಳು ಲಾಭಕ್ಕಾಗಿ ಕೆಲಸ ಮಾಡುತ್ತವೆ. ಹೀಗಾಗಿ ಸರ್ಕಾರವೇ ವಿಮೆ ಕಂತು ಕಟ್ಟಿಸಿಕೊಳ್ಳಬೇಕು. ಶೇ 2ರ ಬದಲು ಶೇ 4ರಷ್ಟು ಕಂತಿನ ಹಣವನ್ನು ರೈತರಿಂದ ಕಟ್ಟಿಸಿಕೊಳ್ಳಲಿ. ಸರ್ಕಾರ ಹಣ ಪಾವತಿಸುವ ಮೂಲಕ ವಿಮಾ ಕಂಪನಿಗಳ ಮಹಾಪೋಷಕ ಏಕೆ ಆಗಬೇಕು’ ಎಂದು ಪ್ರಶ್ನಿಸಿದರು.

ADVERTISEMENT

‘ಸರ್ಕಾರಕ್ಕೆ ಲಾಭ–ನಷ್ಟದ ಪ್ರಶ್ನೆ ಇಲ್ಲ. ಹೀಗಾಗಿ ವಿಮಾ ಕಂಪನಿಗಳಿಂದ ಹಣ ಪಾವತಿಸಬಾರದು; ಸರ್ಕಾರವೇ ವಿಮೆಯ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಶಾಸಕರು, ಸಚಿವರು ಪಟ್ಟು ಹಿಡಿಯಬೇಕು’ ಎಂದು ಸಲಹೆ ನೀಡಿದರು.

ಶೇ 75ರಷ್ಟು ಬೆಳೆ ಹಾನಿಯಾಗಿದ್ದರೂ ವಿಮೆ ಪರಿಹಾರ ಹಣ ಏಕೆ ಕಡಿಮೆ ಪಾವತಿಯಾಗಿದೆ ಎಂಬ ಬಗ್ಗೆ ಪರಿಶೀಲಿಸಲು ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಅಧ್ಯಯನ ತಂಡವನ್ನು ಕಳುಹಿಸಿಕೊಡಲು ಕೃಷಿ ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಸರ್ಕಾರ ಯೋಜನೆಯಲ್ಲಿನ ತಪ್ಪನ್ನು ಸರಿಪಡಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.