ದಾವಣಗೆರೆ: ಹೆಚ್ಚುತ್ತಿರುವ ಭತ್ತ ಕೃಷಿ ವೆಚ್ಚ, ಕೂಲಿಕಾರರ ಕೊರತೆ, ದರ ಕುಸಿತದಿಂದ ಹೈರಾಣಾಗಿರುವ ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ‘ಯಂತ್ರಶ್ರೀ’ ಪದ್ಧತಿ ಅಡಿ ಭತ್ತದ ಯಾಂತ್ರಿಕ ನಾಟಿಗೆ ಮುಂದಾಗಿದ್ದಾರೆ.
ತಾಲ್ಲೂಕಿನ ಕಡ್ಳೆಬಾಳು ಗ್ರಾಮವೊಂದರಲ್ಲಿಯೇ 9ಕ್ಕೂ ಹೆಚ್ಚು ರೈತರು ‘ಯಂತ್ರಶ್ರೀ’ ಪದ್ಧತಿ ಅಡಿ ಭತ್ತದ ನಾಟಿ ಮಾಡುತ್ತಿದ್ದಾರೆ. ಭತ್ತದ ಸಸಿ ಮಡಿ ತಯಾರಿಯಿಂದ ಕೊಯ್ಲಿನವರೆಗೂ ಸಂಸ್ಥೆಯಿಂದಲೇ ಅಗತ್ಯ ಪರಿಕರ ಹಾಗೂ ಯಂತ್ರ ಒದಗಿಸಲಾಗುತ್ತಿದೆ. ಸಂಸ್ಥೆಯ ಕೃಷಿ ಅಧಿಕಾರಿಗಳು ನಿಯಮಿತವಾಗಿ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಬೀಜೋಪಚಾರ: ಒಂದು ಎಕರೆಗೆ ಬೇಕಾಗುವ ಬಿತ್ತನೆ ಬೀಜಕ್ಕೆ 50 ಗ್ರಾಂ ಬೆಲ್ಲ ಅಥವಾ ಸಕ್ಕರೆ ಪಾಕವನ್ನು ಲೇಪಿಸಬೇಕು. 50 ಗ್ರಾಂ ಆಜೋಸ್ಟೈರಿಲಂ, 50 ಗ್ರಾಂ ಪಿಎಸ್‌ಬಿ ಜೈವಿಕ ಜೀವಾಣುಗೊಬ್ಬರ, 50 ಗ್ರಾಂ ಟ್ರೈಕೊಡರ್ಮಾವಿರಿಡೆ ಜೈವಿಕ ಶಿಲೀಂಧ್ರ ನಾಶಕಗಳೊಂದಿಗೆ ಬಿತ್ತನೆ ಬೀಜವನ್ನು ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಿ ಬಿತ್ತನೆಗೆ ಉಪಯೋಗಿಸಬಹುದು ಎಂದು ಧರ್ಮಸ್ಥಳ ಸಂಸ್ಥೆಯ ಕೃಷಿ ಅಧಿಕಾರಿ ಸಿ. ಪ್ರವೀಣ್ ತಿಳಿಸಿದರು.
ಸಸಿ ಮಡಿ ಸಿದ್ಧತೆ: ಭತ್ತದ ಸಸಿ ಮಡಿ ಸಿದ್ಧಪಡಿಸಲು 2 ಅಡಿ ಉದ್ದ, ಒಂದು ಅಡಿ ಅಗಲದ ಪ್ಲಾಸ್ಟಿಕ್ ಟ್ರೇಗಳನ್ನು ಒಂದಕ್ಕೆ ₹ 4ರಂತೆ ಸಂಸ್ಥೆಯಿಂದಲೇ ಒದಗಿಸಲಾಗುತ್ತದೆ. ಜರಡಿ ಮಾಡಿದ ಗದ್ದೆಯ ಫಲವತ್ತಾದ ಮಣ್ಣನ್ನು ಒಂದು ಇಂಚು ದಪ್ಪದಂತೆ ಟ್ರೇಗಳಿಗೆ ತುಂಬಬೇಕು. ಬಿತ್ತನೆ ಬೀಜವನ್ನು ಟ್ರೇಗಳಲ್ಲಿ ತೆಳುವಾಗಿ ಮತ್ತು ಸಮನಾಗಿ ಬಿತ್ತನೆ ಮಾಡಬೇಕು. ಬಿತ್ತಿದ ಬೀಜಗಳ ಮೇಲೆ ಜರಡಿ ಮಾಡಿದ ಮಣ್ಣನ್ನು ತೆಳುವಾಗಿ ಹರಡಬೇಕು. ಟ್ರೇಗಳನ್ನು ಶೆಡ್‌ನೆಟ್ ಅಥವಾ ಒಣಹುಲ್ಲಿನಿಂದ ಮುಚ್ಚಬೇಕು. ಅಗತ್ಯ ನೀರುನ್ನು ಸಿಂಪಡಿಸಬೇಕು. 6ರಿಂದ 8 ದಿನಗಳಲ್ಲಿ ಹೊದಿಕೆ ತೆಗೆದು 15ರಿಂದ 16 ದಿನಗಳ ಅಂತರದಲ್ಲಿ ಗದ್ದೆಯಲ್ಲಿ ಸಸಿ ನಾಟಿ ಮಾಡಬೇಕು. ಒಂದು ಎಕರೆಗೆ 80ರಿಂದ 100 ಟ್ರೇಗಳು ಬೇಕಾಗಲಿದ್ದು, ಈ ಟ್ರೇಗಳನ್ನು ಮೂರು ಹಂಗಾಮಿಗೆ ಭತ್ತದ ಸಸಿ ಸಿದ್ಧಪಡಿಸಲು ಬಳಸಬಹುದು. ನಾಟಿಯಂತ್ರದಲ್ಲಿ ಏಕಕಾಲಕ್ಕೆ ನಾಲ್ಕು ಸಾಲುಗಳು ನಾಟಿ ಮಾಡಬಹುದಾಗಿದ್ದು, ಸಾಲಿನಿಂದ ಸಾಲಿಗೆ 25 ಸೆ.ಮೀ ಅಂತರವಿರುತ್ತದೆ. ಇದರಿಂದ ಬೆಳೆಗೆ ಗಾಳಿ, ಬೆಳಕು ಚೆನ್ನಾಗಿ ಹಾಯುವುದರಿಂದ ಇಳುವರಿ ಚೆನ್ನಾಗಿರುತ್ತದೆ ಎಂದು ಅವರು ವಿವರಿಸಿದರು.
‘ಕೂಲಿಕಾರರ ಕೊರತೆ ಕಾರಣ ನಮ್ಮ 15 ಎಕರೆ ಜಮೀನಿನಲ್ಲಿ ಎರಡೂವರೆ ವರ್ಷಗಳಿಂದ ಯಂತ್ರಶ್ರೀ ಪದ್ಧತಿ ಅಡಿ ಭತ್ತ ಬೆಳೆಯುತ್ತಿದ್ದೇನೆ. ಒಂದು ಎಕರೆ ಗದ್ದೆ ನಾಟಿಗೆ ಸಸಿ ಸಿದ್ಧಪಡಿಸಿಕೊಳ್ಳಲು ಸಾಂಪ್ರದಾಯಿಕ ವಿಧಾನಕ್ಕೆ 30 ಕೆ.ಜಿ. ಬಿತ್ತನೆ ಬೀಜ ಬೇಕು. ಯಂತ್ರಶ್ರೀ ವಿಧಾನಕ್ಕೆ ಕೇವಲ 10 ಕೆ.ಜಿ ಸಾಕು. ಶ್ರೀರಾಂ ಸೋನಾ ಬಿತ್ತನೆ ಬೀಜ ಕೆ.ಜಿ.ಗೆ ₹ 85ರಿಂದ ₹ 90 ಹಾಗೂ ಆರ್‌ಎನ್‌ಆರ್ ಬಿತ್ತನೆ ಬೀಜ ಕೆ.ಜಿ.ಗೆ ₹ 40ರಿಂದ ₹ 45 ದರ ಇದೆ. ಈ ಪದ್ಧತಿಯಡಿಯ ಬಿತ್ತನೆ ಬೀಜ ಖರೀದಿಯಲ್ಲೂ ಉಳಿತಾಯವಾಗುತ್ತದೆ’ ಎಂದು ಕಡ್ಳೆಬಾಳು ಗ್ರಾಮದ ಸುಬ್ರಹ್ಮಣ್ಯ ತಿಳಿಸಿದರು.
‘ಸಂಸ್ಥೆ ಒದಗಿಸುವ ಯಂತ್ರದ ಮೂಲಕ ನಾಟಿ ಮಾಡಲು ಹೆಚ್ಚು ಕಾರ್ಮಿಕರು ಬೇಕಿಲ್ಲ. ಯಂತ್ರದ ಚಾಲಕ ಮತ್ತು ಸಹಾಯಕನನ್ನು ಸಂಸ್ಥೆಯವರೇ ಕಳುಹಿಸುತ್ತಾರೆ. ಸಸಿ ತಂದುಕೊಡಲು ಎರಡರಿಂದ ಮೂವರು ಕಾರ್ಮಿಕರ ಸಹಾಯದಿಂದ ನಾಟಿ ಮಾಡಬಹುದು. ಎಕರೆ ಗದ್ದೆ ನಾಟಿಗೆ ಸಾಂಪ್ರದಾಯಿಕ ವಿಧಾನದಲ್ಲಿ ₹ 3,000ದಿಂದ ₹ 4,000 ಕೂಲಿ ನೀಡಬೇಕು. ಯಂತ್ರಕ್ಕೆ ಗಂಟೆಗೆ ₹ 1,950 ನೀಡಬೇಕು. ಒಂದು ಗಂಟೆಯಲ್ಲಿ ಎಕರೆ ಗದ್ದೆ ನಾಟಿ ಮಾಡಬಹುದಾದ್ದರಿಂದ ಸಮಯವೂ ಉಳಿಯುತ್ತದೆ. ಕೂಲಿಕಾರರ ಮನೆಗಳಿಗೆ ಪದೇ ಪದೇ ಅಲೆಯುವುದೂ ತಪ್ಪಿದೆ’ ಎಂದು ಗ್ರಾಮದ ನಾರಪ್ಪ ತಿಳಿಸಿದರು.
‘ಮೂರು ವರ್ಷಗಳಿಂದ 30 ಎಕರೆಯಲ್ಲಿ ಯಂತ್ರಶ್ರೀ ಪದ್ಧತಿಯಡಿ ಒತ್ತಡರಹಿತನಾಗಿ ಭತ್ತ ಬೆಳೆಯುತ್ತಿದ್ದೇನೆ. ಮೊದಲ ಸಲ ಈ ವಿಧಾನದಡಿ ನಾಟಿ ಮಾಡಿದವರಲ್ಲಿ ಆತಂಕವಿರುತ್ತದೆ. ನಾಟಿ ಮಾಡಿದ ತಿಂಗಳ ನಂತರ ಗದ್ದೆಯನ್ನು ನೋಡಿದಾಗ ಭತ್ತದ ಸಸಿಗಳು ಛತ್ರಿಯಂತೆ ಹರಡಿಕೊಂಡಿರುವುದನ್ನು ನೋಡಿ ಸಂತಸವಾಗುತ್ತದೆ. ಕಟಾವು ಮಾಡುವ ದಿನ, ಮಿಲ್‌ಗೆ ಭತ್ತವನ್ನು ಮಾರಲು ಒಯ್ಯುವ ದಿನದ ಸಂಭ್ರಮ ಇನ್ನೂ ಹೆಚ್ಚು. ಸಾಂಪ್ರದಾಯಿಕ ವಿಧಾನಕ್ಕಿಂತ 4ರಿಂದ 5 ಚೀಲದಷ್ಟು ಇಳುವರಿಯೂ ಹೆಚ್ಚು. ಕಾಳುಗಳು ಗಟ್ಟಿಯಾಗಿರುವುದರಿಂದ ಹೆಚ್ಚು ರುಚಿಕರ’ ಎಂದು ಗ್ರಾಮದ ಶಿವಕುಮಾರ್ ತಮ್ಮ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.