ಸಂತೇಬೆನ್ನೂರು: ರಾಜ್ಯದಲ್ಲಿಯೇ ಬಹುಪಾಲು ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯುವ ಸಂತೇಬೆನ್ನೂರು ಹೋಬಳಿಯ ರೈತರು ಮುಂಗಾರು ಪೂರ್ವ ಸುರಿದ ಹದವಾದ ಮಳೆಯಿಂದ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಮತ್ತೆ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಭರದ ಸಿದ್ಧತೆ ನಡೆಸಿದ್ದಾರೆ.
ಕಳೆದ 8-10 ದಿನಗಳಲ್ಲಿ ಎರಡು-ಮೂರು ಬಾರಿ ವ್ಯಾಪಕವಾಗಿ ಸುರಿದ ಕೃತ್ತಿಕಾ ಮಳೆಯು ರೈತರಲ್ಲಿ ಹರ್ಷ ಮೂಡಿಸಿದೆ. ಈಗಾಗಲೇ ಟ್ರ್ಯಾಕ್ಟರ್ ಮೂಲಕ ಹೊಲ ಉಳುಮೆ ಆರಂಭಿಸಿದ್ದು, ಮೇ 24ರ ನಂತರ ಆರಂಭವಾಗುವ ರೋಹಿಣಿ ಮಳೆಗೆ ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಚಾಲನೆ ಸಿಗಲಿದೆ.
ಮುಂಗಾರು ಪೂರ್ವ ಅವಧಿಯ ಮೊದಲ ಬಿತ್ತನೆಯೇ ಪಾಪ್‌ಕಾರ್ನ್ ಮೆಕ್ಕೆಜೋಳ. ಸಾಮಾನ್ಯ ಮೆಕ್ಕೆಜೋಳಕ್ಕಿಂತ ತುಸು ತೆಳುವಾದ ತೆನೆ ಹೊಂದಿರುವ ಇದನ್ನು ಪೌಷ್ಟಿಕಾಂಶದ ಕಣಜ ಎನ್ನಲಾಗುತ್ತದೆ. ಬ್ರಾಂಡೆಡ್ ತಿನಿಸು ತಯಾರಿಕೆಗೆ ಬಹು ಬೇಡಿಕೆಯ ಧಾನ್ಯ ಎನಿಸಿದೆ.
ಸಂತೇಬೆನ್ನೂರು ಹೋಬಳಿ 1 ಮತ್ತು 2ರಲ್ಲಿ 24,000 ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿ ಇದೆ. ಈ ಪೈಕಿ 13,000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತದೆ. ಕಳೆದ ಬಾರಿ 2,300 ಹೆಕ್ಟೇರ್‌ನಲ್ಲಿ ಪಾಪ್‌ಕಾರ್ನ್ ತಳಿಯ ಮೆಕ್ಕೆಜೋಳವನ್ನು ಬೆಳೆಯಲಾಗಿತ್ತು. ಈ ಬಾರಿ ಬಿತ್ತನೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೃಷಿ ಅಧಿಕಾರಿ ಮೆಹತಾಬ್ ಅಲಿ ಮಾಹಿತಿ ನೀಡಿದ್ದಾರೆ.
‘ಕಳೆದ ವರ್ಷ ಮಳೆ ಕೊರತೆಯಿಂದ ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಬೆಳೆ ನಾಶವಾಗಿತ್ತು. ಗಿಳಿಕಾಟದಿಂದ ಮತ್ತಷ್ಟು ಇಳುವರಿ ನಷ್ಟವಾಗಿತ್ತು. ಕಡಿಮೆ ಇಳುವರಿ ಇದ್ದರೂ ಉತ್ತಮ ಧಾರಣೆ ಲಭಿಸಿತ್ತು. ಪ್ರತಿ ಕ್ವಿಂಟಲ್‌ಗೆ ₹10000ವರೆಗೆ ದರ ಸಿಕ್ಕಿತ್ತು. ಖರ್ಚು ಕಡಿಮೆ ಹಾಗೂ ಉತ್ತಮ ಧಾರಣೆ ಮನಗಂಡು ರೈತರು ಪಾಪ್‌ಕಾರ್ನ್ ಮೆಕ್ಕೆಜೋಳ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ’ ಎಂದು ರೈತ ಹಾಲಸ್ವಾಮಿ ಹೇಳಿದ್ದಾರೆ.
‘ಈ ಬಾರಿ 20 ರಿಂದ 25 ಟನ್ ಬಿತ್ತನೆ ಪಾಪ್‌ಕಾರ್ನ್ ಮೆಕ್ಕೆಜೋಳಕ್ಕೆ ಬೇಡಿಕೆ ಇದೆ. ಲಭ್ಯತೆಗಾಗಿ ಬೇರೆ ಬೇರೆ ಜಿಲ್ಲೆಗಳನ್ನೂ ಸಂಪರ್ಕಿಸಲಾಗುತ್ತಿದೆ’ ಎಂದು ಖರೀದಿದಾರ ಹಮೀದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.